ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Monday, July 27, 2009

ಮಾನಸ ಸರೋವರ ಯಾತ್ರೆ -4


ಪ್ರಕೃತಿ ಮಾತೆಯ ಒಡಲ ಸಿರಿ ನೇಪಾಳದಲ್ಲಿ ಒಂದು ದಿನ ಕಳೆದ ನಾನು ಮಾನಸ ಸರೋವರಕ್ಕೆ ಹೊರಡಲು ಸಿದ್ಧನಾದೆ. ಹಾಗೆ ೨೭-೦೬-೨೦೦೯ ರಂದು ಬೆಳಿಗ್ಗೆ 6 ಘಂಟೆಗೆ ಚುಮು ಚುಮು ಛಳಿಗೆ ನೇಪಾಳದಿಂದ ಹೊರಟೆವು.ನಮ್ಮನ್ನು ಕರೆದುಕೊಂಡು ಹೋಗಲು ಚೆಟ್ಟಿಯಾರ್ ಅವರು ಸಾಮ್ರಾಟ್ ಟ್ರಾವೆಲ್ಸ್ ಗೆ ಜವಾಬ್ದಾರಿ ನೀಡಿದ್ದರು. ದಿನೇಶ್ ಪಾಂಡೆ ಎಂಬವರು ನಮಗೆ ಗೈಡ್ ಆಗಿ ಇದ್ದರು.ಸುಮಾರು ೪೦ ಜನರ ನಮ್ಮ ತಂಡ ೨ ಬಸ್ಸಿನಲ್ಲಿ ಹೊರಟೆವು.ಬಸ್ಸಿನಲ್ಲಿ ನಮ್ಮದೇ ಆದ ೧೦ ಜನರ ಕರ್ನಾಟಕದ ತಂಡ ಬಸ್ಸಿನ ಹಿಂಬದಿ ಆಸನದಲ್ಲಿ ಕೂತು ನಮ್ಮ ಊರು ಮತ್ತು ಈ ಪ್ರಕೃತಿಯ ಹೋಲಿಕೆಯನ್ನು ಚರ್ಚೆ ಮಾಡುತ್ತಿದ್ದೆವು.ನಮ್ಮ ಊರಿನಲ್ಲಿ ಅಡಿಕೆ ಕೃಷಿ ಇದ್ದಂತೆ ಇಲ್ಲಿ ಜೋಳದ ಕೃಷಿ ಉತ್ತಮವಾಗಿ ಬೆಳೆಯುತ್ತದೆ.ಒಂದು ಬದಿಯಲ್ಲಿ ಕೆಲವು ಜನ ನಿದ್ರೆ ತೂಗುತ್ತಿದ್ದರೆ ಇನ್ನೊಂದು ಬದಿಯ ಕಿಟಕಿಯಲ್ಲಿ ನಾನು ನನ್ನ ಕ್ಯಾಮರಾದಲ್ಲಿ ಇಲ್ಲಿನ ಪ್ರಕೃತಿಯ ಸುಂದರ ತಾಣವನ್ನು ಚಿತ್ರೀಕರಿಸುತ್ತಿದ್ದೆ.ಹೀಗೆ ಮುಂದೆ ಹೋಗುತ್ತಿದ್ದಾಗ ಗಂಡಕೀ ನದಿಯ ತಟ ಎದುರಾಯಿತು.ಊರಿನಿದ ಹೋಗುವಾಗ ನನ್ನ ಕೆಲವು ಹಿರಿಯರು ಈ ನದಿಯಲ್ಲಿ ಶಾಲಿಗ್ರಾಮ ದೊರೆಯುತ್ತದೆ ಎಂದು ಹೇಳಿದ್ದರು.ಹಾಗೆ ಪಾಂದೆಯವರಲ್ಲಿ ನಾನು ಈ ವಿಷಯ ಕೇಳಿದಾಗ ಅದನ್ನು ತೆಗೆದುಕೊಳ್ಳಲು ಅನುಮತಿಯಿಲ್ಲ ಎಂದು ಹೇಳಿದರು.ಇದು ಹರಿಯುವ ಮೂಲ ಸ್ಥಳದಲ್ಲಿ ಜಲಪಾತ ಇದೆ. ಭೋರ್ಗರೆಯುವ ಈ ಜಲಪಾತ ಸುಮಾರು ೨೦೦ ಮೀಟರ್ ಎತ್ತರದಿಂದ ಧುಮುಕುತ್ತಿತ್ತು.ಈ ಧುಮುಕುವ ಸ್ಥಳದಲ್ಲಿ ಶಾಲಿಗ್ರಾಮವಿದೆಯನ್ತೆ. ನಮ್ಮನ್ನು ಯಾಕೆ ಈ ಸ್ಥಳಕ್ಕೆ ಹೋಗಲು ಅನುಮತಿ ಕೊಟ್ಟಿಲ್ಲ ಎಂದು ಪಾಂದೆಯವರಲ್ಲಿ ಕೇಳಿದೆ. ಆಗ ಈ ಹಿಂದೆ ಬಂದ ಕೆಟ್ಟ ಚಾರಣಿಗರ ಪುರಾಣವನ್ನೇ ಚಾಚೂ ತಪ್ಪದೆ ಹೇಳಿದರು. ಇಲ್ಲಿನ ಪ್ರಕೃತಿಮಾತೆಯ ಉಳಿವಿಗಾಗಿ ನಾವೆಲ್ಲ ಅಳಿಲ ಸೇವೆ ಮಾಡೋಣ ಎಂದು ನನ್ನನ್ನು ಸಮಧಾನಿಸಿದರು. ನಾನು ಒಲ್ಲದ ಮನಸ್ಸಿನಿಂದ ಪಾಂಡೆಯವರ ಒತ್ತಾಯಕ್ಕೆ ಮಣಿದು ಪ್ರಕೃತಿ ಮಾತೆಯ ಸವಿಯನ್ನು ಆಸ್ವಾದಿಸುತ್ತಾ ಮುಂದೆ ಬಸ್ಸಿಗೆ ಏರಿ ಪ್ರಯಾಣ ಮುಂದುವರಿಸಿದೆ.ಅಲ್ಲಿಂದ ಮುಂದೆ ಒಂದು ಕಡೆ ವಿಶಾಲವಾದ ಬಯಲಿನಲ್ಲಿ ನಮ್ಮ ಟ್ರಾವೆಲ್ಸ್ ನವರು ಅಡಿಗೆ ಮಾಡಿ ಪ್ರಕೃತಿ ಮಾತೆಯನ್ನು ಆಸ್ವಾದಿಸುತ್ತಾ ನಾವೆಲ್ಲ ಜೋಳದ ರೊಟ್ಟಿ ದಾಲ್ ಸವಿದೆವು.ಅಲ್ಲಿಯೇ ಸ್ವಲ್ಪ ನಿದ್ರಾ ದೇವಿಗೆ ಶರಣಾಗುವ ಹೊತ್ತಿಗೆ ಪಾಂಡೆಯವರ ಕರೆ ಬಂತು.ಇನ್ನೂ ಪ್ರಯಾಣ ೨೦೦ ಕಿಮೀ ಇದೆ.ಬೇಗ ತಯಾರಾಗಿ ಎಂದು.ನಾವು ಮುಂದಕ್ಕೆ ಪ್ರಯಾಣ ಬೆಳೆಸಿದೆವು.ದಾರಿ ಮಧ್ಯದಲ್ಲಿ ಚೀನಾ ಗಡಿಯಲ್ಲಿ ತುಂಬಾ ರೀತಿಯಲ್ಲಿ ದೈಹಿಕ ಪರೀಕ್ಷೆ ಇದೆ.ಆದರಿಂದ ತಾವೆಲ್ಲ ನಿಧಾನವಾಗಿ ಸಹಕರಿಸ ಬೇಕೆಂದು ಪಾಂಡೆಯವರು ನಮ್ಮಲ್ಲಿ ಬಿನ್ನವಿಸಿಕೊಂಡರು. ನಾವು ನಮ್ಮ ಪಾಸ್ಪೋರ್ಟ್ ಇತ್ಯಾದಿ ದಾಖಲೆ ಗಳನ್ನು ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಂಡೆವು. ಈ ಮಧ್ಯದಲ್ಲಿ ಬಸ್ಸು ಏರುಪೇರಾದ ರಸ್ತೆ {ಘಾಟ್} ಗಳಲ್ಲಿ ನಮ್ಮನ್ನು ಕರೆದು ಕೊಂಡು ಹೋಗುತ್ತಾ ಇತ್ತು .ಘಾಟ್ ಗಳಲ್ಲಿ ಒಂದೊಂದೇ ತಿರುವು ಏರುತ್ತಾ ಹೋದಂತೆ ನಮಗೆ ಕೆಳಗೆ ನೋಡಿದಾಗ ಮೈ ಜುಂ ಆಯಿತು .ನಮ್ಮ ಊರಿನಂತೆ ರಸ್ತೆಗಳು ಇಲ್ಲಿ ಅಗಲ ಇಲ್ಲ. ರಸ್ತೆ ಬಿಟ್ಟು ಕೇವಲ ಅರ್ಧ ಅಡಿ ದೂರದಲ್ಲಿ ಕಣ್ಣು ಎತ್ತದಷ್ಟು ಆಳ ನಾವು ನೋಡಿದಾಗ ಎಂಥವರಿಗೂ ಮೈ ಜುಂ ಎನ್ನಬಹುದು.ಹೀಗೆ ಹೋಗುತ್ತಿರುವಾಗ ಒಂದು ತಿರುವು ಬಂದಾಗ ನಮ್ಮ ಬಸ್ಸಿನ ಚಾಲಕ ತುಂಬಾ ವೇಗವಾಗಿ ಬಸ್ಸನ್ನು ಚಲಾಯಿಸಿದನು.ಆಗ ನಾನು ಮತ್ತು ನನ್ನೊಡನೆ ಕಿಟಕಿಯಲ್ಲಿ ಘಾಟಿಯ ಆಳವನ್ನು ನೋಡುತ್ತಿದ್ದ ಕೇಶವಣ್ಣ ಏಕ ಕಾಲಕ್ಕೆ ಹೆದರಿ ಬೊಬ್ಬೆ ಹಾಕಿದೆವು.ನಮ್ಮ ಬೊಬ್ಬೆಗೆ ಮಹಿಳಾ ಪ್ರಯಾಣಿಕರು ನಮ್ಮಿಂದ ದೊಡ್ಡ ಸ್ವರದಲ್ಲಿ ಹೆದರಿ ಬೊಬ್ಬೆ ಹಾಕಿದರು.ಈ ಬೊಬ್ಬೆಯನ್ನು ಕೇಳಿ ಚಾಲಕನು ಒಂದು ಕ್ಷಣ ಬಸ್ ನಿಲ್ಲಿಸಿ ಏನೆಂದು ಕೇಳಿದನು.ಕೋಯೀ ಪ್ರಾಬ್ಲೆಂ ನಹೀ ಎಂದು ಹೇಳಿದಾಗ ಚಾಲಕನು ಅಷ್ಟೇಯ? ಎಂದು ಹೇಳಿದನು.ಈ ಚಾಲನೆಯನ್ನು ನಾವು ಗಮನಿಸಿದಾಗ ಅವನ ಧೈರ್ಯಕ್ಕೆ ಮೆಚ್ಚಿದೆ. .
ಹೀಗೆ ಮುಂದೆ ಹೋಗುತ್ತಿದ್ದಂತೆ ಸಾಂಬಾ ಗಡಿ ಎದುರಾಯಿತು.ಈ ಸಾಂಬ ಎಂಬ ಸ್ಥಳ ಟಿಬೆಟ್ ಮತ್ತು ಚೀನಾ ದೇಶದ ಗಡಿಪ್ರದೆಶವಾಗಿದೆ.ನೇಪಾಳ ದೇಶದ ಗಡಿ ದಾಟಿದ ಕೂಡಲೇ ಕೇವಲ ೧೦ಕಿಮೇ ದೂರ ಮಾತ್ರ ಟಿಬೆಟ್ ದೇಶದಲ್ಲಿ ನಾವು ಪ್ರಯಾಣ ಮಾಡಿದ್ದೆವು.ಈ ಟಿಬೆಟ್ ದೇಶವು ಚೀನಾದ ಹಿಡಿತದಲ್ಲಿದೆ. ಇಲ್ಲಿನ ಮಹಾ ಯುದ್ಧದ ಪ್ರಭಾವ ಜನ ಜೀವನದ ಮೇಲೆ ತುಂಬಾ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದೆ. ನಮ್ಮ ಬ್ಯಾಗನ್ನು ಹೊರಲು ಚಿಕ್ಕ ಮಕ್ಕಳು ಪುಡಿಗಾಸಿಗಾಗಿ ಜಗಳಾಡುತ್ತಿರುವುದನ್ನು ಕಂಡಾಗ ನನಗೆ ಅಯ್ಯೋ ಎನಿಸಿತು. ಅವರ ಬಡತನದ ಸ್ಥಿತಿ ಹೇಗಿತ್ತೆಂದರೆ ಚಾರಣಿಗರು ತಿಂದು ಉಳಿದು ಬಿಸಾಡಿದ ತಿಂಡಿಯ ಪ್ಯಾಕೆಟ್ ಗಾಗಿ ಜಗಳವಾಡುವುದನ್ನು ಕಂಡಾಗ ಎಂಥವರಿಗೂ ಅಯ್ಯೋ ಎನಿಸ ಬಹುದು. ನನಗೆ ಆಗ ಇದ್ದ ಹಸಿವು ತಾನಗಿಯೇ ಅಡಗಿತು. ಆಗ ನಾನು ಬಸ್ನಿಂದ ನನ್ನ ಬ್ಯಾಗನ್ನು ಇಳಿಸಲು ಮುಂದಾದಾಗ ಅಂಕಲ್ ಜೀ ಎಂದು ಒಬ್ಬಳು ಸುಮಾರು ಆರು ವರ್ಷದ ಹುಡುಗಿ ನನ್ನ ಬ್ಯಾಗನ್ನು ಎತ್ತಿ ಕೂಲಿ ಮಾಡಲಾ ಎಂದು ಕೇಳಿದಳು.ಅವಳ ಆ ಸ್ವರದಿಂದ ನಾನು ಒಂದು ಕ್ಷಣ ಮುಖ ನೋಡಿದೆ. ಆಗ ಅವಳು ಖಾನಾ ಎಂದು ಕೇಳಿದಳು.ನಾನು ನಿಜವಾಗಿ ಕರಗಿ ಹೋಗಿದ್ದೆ ನಮ್ಮ ಊರಿನ ಭಿಕ್ಷುಕರಿಂದ ತುಂಬಾ ಭಿನ್ನ ರೀತಿಯಲ್ಲಿ ಕಂಡಿತು.ಇಲ್ಲಿ ೧ ರೂ ಗಿಂತ ಹೆಚ್ಚು ಹಾಕದವ ಹಿಂದೂ ಮುಂದು ಆಲೋಚನೆ ಮಾಡದೆ ನಮ್ಮ ಭಾರತದ ೧೦೦ ರೂ ಗಳ ನೋಟನ್ನು ಅವಳ ಕೈಗೆ ಕೊಟ್ಟು ಅವಳ ಕೆನ್ನೆ ಮುಟ್ಟಿ ತಲೆ ನೇವರಿಸಿದಾಗ ನನಗೆ ಅರಿವಿಲ್ಲದೇ ನನ್ನ ಕಣ್ಣಿಂದ ಎರಡು ಹನಿ ಕಣ್ಣೀರು ಬಂದದನ್ನು ಅವಳು ಗಮನಿಸಿದಳು.ಈ ರೂಪಾಯಿ ಕೊಡುವುದನ್ನು ದೂರದಿಂದ ಅವಳ ತಾಯಿ ಗಮನಿಸುತ್ತಿದ್ದಳು. ಇವಳ ತಾಯಿ ನನ್ನಲ್ಲಿದ್ದ ೫೦ಕೇಜೀ ಬ್ಯಾಗನ್ನು ಹೊರಲು ಓಡಿ ಬಂದಳು. ಆಗ ನಾನು ಪರವಾಗಿಲ್ಲ ಎಂದು ಹೇಳಿ ಬ್ಯಾಗನ್ನು ತಲೆಗೆ ಏರಿಸಿ ಮುಂದೆ ನಡೆಯುತ್ತಿದ್ದಾಗ ಪಾಂಡೆಯವರು ಹೇಳಿದರು.ನಮ್ಮ ಟ್ರಾವೆಲ್ಸ್ ನಿಂದ ಅವಳಿಗೆ ಪಗಾರ ಕೊಡುತ್ತೇವೆ.ಬ್ಯಾಗ್ ಕೊಡಿ ಎಂದರು.ನಾನು ಕೊಟ್ಟ ೧೦೦ ರೂ ಗಳ ನೋಟನ್ನು ಆ ಹುಡುಗಿ ಅವಳ ತಾಯಿಯ ಹತ್ತಿರ ಕೊಟ್ಟಳು.ಧನ್ಯವಾದ ಎಂದು ನನಗೆ ಆ ತಾಯಿ ಎರಡೂ ಕೈ ಮುಗಿದಾಗ ನನಗೆ ಏನು ಹೇಳಬೇಕೆಂದು ತೋಚದೆ ಮೂಕನಾಗಿ ನಿಂತೆ.ಅಂದರೆ ಅವರಲ್ಲಿರುವ ಕೃತಜ್ಞಾತಾ ಭಾವ ನನ್ನನ್ನು ನಾಚಿಸಿತು. ಹೀಗೆ ಅವಳು ನನ್ನ ಬ್ಯಾಗ್ ಹೊತ್ತುಕೊಂಡು ಸುಮಾರು ೧ ಕಿಮೀ ದೂರದ ಸಾಂಬಾ ಗಡಿಗೆ ಕರೆದು ಕೊಂಡು ಹೋದಳು.ಅಲ್ಲಿ ನನ್ನ ಬ್ಯಾಗನ್ನು ಇಳಿಸಿದಾಗ ನಾನು ಅವಳಿಗೆ ಹಣ ಕೊಡಲು ಮುಂದಾದಾಗ ನನ್ನ ಕೈ ಯನ್ನು ಹಿಡಿದು ನೀವು ಕೊಟ್ಟದ್ದು ಧಾರಳವಾಯಿತು ಎಂದು ಕೈ ಭಾಷೆ ಮಾಡಿದಳು.ಹೋಗಿ ಬನ್ನಿ ಎಂದು ತಾಯಿ ಮಗಳು ಟಾ ಟಾ ಮಾಡಿ ಹೊರಟೇ ಬಿಟ್ಟರು. ನಾನು ಅವರು ಹೋಗುವುದನ್ನೇ ನೋಡುತ್ತಾ ನಿಂತಿರುವಾಗ ಪಾಂಡೆಯವರು ನನ್ನ ಭುಜಕ್ಕೆ ಕೈ ಇತ್ತು ನೀವು ೧೬ನೆ ವ್ಯಕ್ತಿ ಯಾಗಿ ಇಲ್ಲಿರಬೇಕು ಎಂದು ಈ ಕ್ಯೂ ನಲ್ಲಿ ನಿಲ್ಲಿ ಎಂದು ಚೀನಾದ ವೀಸಾಕ್ಕೆ ಅರ್ಜಿ ಫಾರಂ ತುಂಬಿ ನನ್ನ ಕೈ ಯಲ್ಲಿ ಕೊಟ್ಟರು.ನಾನು ಆ ತಾಯಿಗೆ ಕಣ್ಣಿಗೆ ಕಾಣುವಷ್ಟು ದೂರದಿಂದ ಟಾ ಟಾ ಮಾಡಿ ದೈಹಿಕ ಪರೀಕ್ಷೆಗೆ ತಯಾರಾದೆ.ಘಂಟೆ ಸಂಜೆ ೬.00 ನನ್ನ ಸರದಿ ಬಂತು.ದೈಹಿಕ ಪರೀಕ್ಷೆ ಈ ಎನ್ ಟೀ ,ಬೀಪೀ ಎಲ್ಲ ನಡೆಸಿದರು.ಎಲ್ಲ ರೀತಿಯಲ್ಲಿ ಆರೋಗ್ಯ ಸರಿಯಾಗಿದೆ ಎಂದು ಪ್ರವಾಸೀ ವೀಸಾ ,ಪಾಸ್ಪೋರಿಟಿಗೆ ಟೆಬೆಟ್ ಡಿಪಾರ್ಚರ್ ಸೀಲು ಹಾಕಯಾದರೂ ಮತ್ತೆ ಕೆಲವು ಪರೀಕ್ಷೆ ಗಳನ್ನು ನಡೆಸಿ ಸುಮಾರು ರಾತ್ರಿ ೮.೩೦ಕ್ಕೆ ನಮ್ಮನ್ನು ಚೀನಾ ದೇಶದ ಪಟ್ಟಣಕ್ಕೆ ಹೋಗಲು ಅನುಮತಿ ಕೊಟ್ಟರು. ನಾವು ಅಲ್ಲೇ ಒಂದು ವಸತಿ ಗೃಹದಲ್ಲಿ ಊತ್ತ ವಿಶ್ರಾಂತಿ ಪಡೆದೆವು.ರಾತ್ರಿ ಮಲಗುವಾಗ ತಾಯಿ ಮಗಳ ದಯನೀಯ ಸ್ಥಿತಿ ಮತ್ತೆ ನೆನಪಾಯಿತು ..............

Friday, July 24, 2009

ಮಾನಸ ಸರೋವರ ಯಾತ್ರೆ-3

ತಾ-೨೬-೦೬-೦೯ ರಂದು ಬೆಳಿಗ್ಗೆ ೫ ಘಂಟೆಗೆ ಎದ್ದು ನಿತ್ಯ ವಿಧಿಗಳನ್ನು ಮುಗಿಸಿ ಉಪಾಹಾರವನ್ನೂ ಮಾಡಿಕೊಂಡು ನೇಪಾಲದ ಪ್ರಸಿದ್ದ ದೇವಸ್ಥಾನವಾದ ಪಶುಪತಿನಾಥ ದೇವಳಕ್ಕೆ ನಾವು ಹೋದೆವು.ಅಲ್ಲಿ ಶತರುದ್ರ ಹೇಳುವ ಭಾಗ್ಯ ನನಗೆ ದೊರೆಯಿತು. ಅಲ್ಲಿ ಹೋದೊಡನೆ ನಮ್ಮ ಊರಿನವರೇ ಆದ ಉಪ್ಪಳದ ಶ್ರೀಕಾಂತ ಕಾರಂತರು(ಅಲ್ಲಿನ ಅರ್ಚಕರಲ್ಲಿ ಒಬ್ಬರು) ಪರಿಚಯವಾದರು. ಇಲ್ಲಿ ನನಗೆ ಬೇಸರವಾದದ್ದು ಏನೆಂದರೆ ಇಲ್ಲಿನ ಶಿಲ್ಪಾ ಕಲೆಗಳ ಫೋಟೋ ತೆಗೆಯಲು ಕಡ್ಡಾಯವಾಗಿ ನಿರ್ಬಂಧ ಹೇಳಿದ್ದರು.ಪಶುಪತಿನಾಥ ದೇವಳವು ಪೂರ್ಣವಾಗಿ ಮರ (ಕಾಷ್ಠ) ದಿಂದ ನಿರ್ಮಾಣವಾಗಿದೆ.ನೇಪಾಳದಲ್ಲಿನ ಬೀರೆಂದ್ರಪಾಲ್ ರಾಜಮನೆತನದವರು ಈ ದೇವಳವನ್ನು ನವೀಕರಣ ಮಾಡಿದ್ದಾರೆ. ಕಾಷ್ಟದಿಂದ ನಿರ್ಮಾಣವಾದ ದೇವಳ ಮುಂದೆ ಕಾಷ್ಠ ಮಂಟಪ ,ಕಾಥ್ಮನ್ದು ಆಯಿತು ಎಂದು ಅರ್ಚಕರು ಹೇಳಿದರು.ಪಶುಪತಿನಾಥ ದೇವಸ್ಥಾನ ಇರುವುದು ಬಹಳ ಅಪರೂಪ.ಈ ದೇವಳದ ಮುಂದೆ ಬ್ರಿಹತ್ ಆಕಾರದ ಗೋವಿನ ವಿಗ್ರಹ ಇದೆ. ಅಲ್ಲಿಯೂ ಗೋವುಗಳು ಸ್ವಚಂದವಾಗಿ ವಿಹರಿಸುವಾಗ ಕಣ್ಣಮುಂದೆ ನಮ್ಮ ರಾಮಚಂದ್ರಾಪುರ ಮಠದಲ್ಲಿ ಗುರುಗಳ ಕಾಮದುಘಾ ಯೋಜನೆ ನೆನಪಾಯಿತು.ಪಶುಪತಿನಾಥನ ವಿಗ್ರಹದಲ್ಲಿ ಪಂಚ ಮುಖಗಳು ಇವೆ. ಗರ್ಭ ಗುಡಿಗೆ ಚತುರ್ದ್ವಾರ ಇದೆ. ಆಳೆತ್ತರ ಶಿವನ ಲಿಂಗರೂಪ ಹತ್ತಿರದಿಂದ ನೋಡಿದೆ.ಪಾರ್ವತಿ ಪೂಜೆಯನ್ನು ಲಿಂಗದ ಮೇಲ್ಭಾಗದಲ್ಲಿ ಶ್ರೀ ಚಕ್ರ ಮಂಡಲವನ್ನು ಚಂದನದಲ್ಲಿ ಬರೆದು ಪೂಜೆ ಮಾಡುತ್ತಾರಂತೆ. ನಾನು ೧೦೧ ರೂ ರಶೀದಿ ತೆತ್ತು ರುದ್ರಾಭಿಷೇಕ ಸಂಕಲ್ಪ ಮಾಡಿಸಿ ರುದ್ರ ಪಾರಾಯಣ ಮಾಡಿದೆವು. ಅಭಿಷೇಕ ಮುಗಿದ ನಂತರ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡಿ ಪಶುಪಥಿನಾಥನಿಗೆ ಅಲಂಕರಿಸಿದ ರುದ್ರಾಕ್ಷಿಯನ್ನು ನನ್ನ ಕೊರಳಿಗೆ ಹಾಕಿದರು. ಆಗ ಒಂದು ಕ್ಷಣ ನನಿಗೆ ಭಾವೊದ್ವೇಗವಾಗಿ ಮಾತೇ ಹೊರಡಲಿಲ್ಲ. ಕೊನೆಗೆ ನಾನ ಬಾಯಿಂದ ಬಂದ ಶ್ಲೋಕ "ಯಾನಿ ಕಾನಿಚ ಪಾಪಾನಿ "ಎಂಬ ಶ್ಲೋಕ. ಜನ್ಮ ಜನ್ಮಾಂತರದಲ್ಲಿ ಇರುವ ಪಾಪಗಳು ಶಿವನ ಕಂಠದಲ್ಲಿ ಇರುವ ವಿಷದಂತೆ ರುದ್ರಾಭಿಷೇಕದ ಮೂಲಕ ಶಿವನು ಸ್ವೀಕಾರ ಮಾಡಲಿ ಎಂದು ಪ್ರಾರ್ಥಿಸಿದೆ. ಪ್ರಸಾದ ಸ್ವೀಕರಿಸಿದೆ,ತುಂಬಾ ಕೃತಾರ್ಥ ಭಾವನೆ ತುಂಬಿ ಬಂತು.
ಇಲ್ಲಿಂದ ಸುಮಾರು ೧೦ ಕಿ.ಮೀ.ದೂರದಲ್ಲಿರುವ ಗುಹ್ಯೇಶ್ವರೀ ಎಂಬ ದೇವಳಕ್ಕೆ ನಮ್ಮನ್ನು ಕರೆದುಕೊಂಡು ಹೋದರು. ಇದು ಶಕ್ತಿ ಪೀಠ.ನಮ್ಮ ಹತ್ತಿರದ ಕೊಲ್ಲೂರಿನಂತೆ. ಶ್ರೀಚಕ್ರದ ಮೇಲ್ಭಾಗದಲ್ಲಿ ಇರುವ ಬಿಂದುವಿಗೆ ಗುಹ್ಯೇಶ್ವರೀ ಎಂದು ಕರೆಯುತ್ತಾರೆ.ಇಲ್ಲಿ ಕಲ್ಲಿನಿಂದ ನಿರ್ಮಿಸಿದ ಶ್ರೀ ಚಕ್ರವನ್ನು ಪೂಜೆ ಮಾಡುತ್ತಾರೆ. ತುಂಬಾ ಸಾನಿಧ್ಯದ ತಾಣ ಎಂದನಿಸಿತು.ಅಲ್ಲಿನ ಪುರೋಹಿತರ ಮೂಲಕ ಅರ್ಚನೆ ಮಾಡಿಸಿದೆ. ಇಲ್ಲಿ ನೇಪಾಳಿಗರು ಸರತಿ ಸಾಲಿನಲ್ಲಿ ಬಂದು ವಿವಾಹ ಮಾಡಿಕೊಳ್ಳುತ್ತಿದ್ದರು.ಅಷ್ಟೂ ವಿವಾಹಕ್ಕೆ ಪ್ರಸಿದ್ಧ ಸ್ಥಳ ಎಂದು ಇವರ ನಂಬಿಕೆ. ಅಲ್ಲಿ ಅವರ ವಿವಾಹ ವಿಧಿಗಳನ್ನು ಕೂತು ಗಮನಿಸಿದೆ. ಅಷ್ಟರಲ್ಲಿ ಹೊಟ್ಟೆ ಹಸಿಯುವುದೇಕೆ ಎಂದು ಸಮಯ ನೋಡಿದಾಗ ಘಂಟೆ ಮಧ್ಯಾನ್ಹ ೨ ಘಂಟೆ ಆದದ್ದೇ ತಿಳಿಯಲಿಲ್ಲ ...
ಕೂಡಲೇ ನಮ್ಮನ್ನು ನಾವುಳಿದ ಹೋಟೆಲಿಗೆ ಕರೆದುಕೊಂಡು ಹೋಗಿ ರುಚಿಯಾದ ಊಟ ಬಡಿಸಿದರು.ನಂತರ ವಿಶ್ರಾಂತಿ ತೆಗೆದುಕೊಂಡು ೭.೩೦ಕ್ಕೆ ನಾವು ಮುಂದೆ ಹೋಗುವ ಪ್ರಯಾಣದ ಬಗ್ಗೆ ಮಾಹಿತಿಯನ್ನು ಸಾಮ್ರಾಟ್ ಟ್ರಾವೆಲ್ಸ್ ನವರು ನೀಡಿದರು.ಪ್ರಯಾಣಕ್ಕೆ ಬೇಕಾದ ತಯಾರಿಯನ್ನು ಮಾಡಿ ಬ್ಯಾಗಿಗೆ ತುಂಬಿ ಪ್ರತಿಯೊಬ್ಬರಿಗೂ ಒಬ್ಬೊಬ್ಬ ಶೇರ್ಪಾ (ಸಹಾಯಕ)ನನ್ನು ಗೊತ್ತು ಮಾಡಿ ಊಟ ಮಾಡಿ ೧೦.೩೦ಕ್ಕೆ ಮಲಗಿದೆವು.

Tuesday, July 21, 2009

ಮಾನಸ ಸರೋವರ ಯಾತ್ರೆ -2

ತಾ. ೨೪-೨೬-೨೦೦೯ರನ್ದು ಬೆಳಿಗ್ಗೆ ೩.೦೦ ಘಂಟೆಗೆ ಎದ್ದು ನಿತ್ಯ ವಿಧಿಗಳನ್ನು ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಹೊರಟೆವು.ಮೊದಲೇ ತಿಳಿಸಿದಂತೆ ನನ್ನ ಕೈ ಚೀಲದಲ್ಲಿ ೫.ಕೆಜಿ ದೊಡ್ಡ ಬ್ಯಾಗ್ನಲ್ಲಿ ೨೫ ಕೆಜಿ ಗೆ ಸರಿಯಾಗುವನ್ತೆ ಪ್ಯಾಕ್ ಮಾಡಿದ್ದೆ. ಅಲ್ಲಿ ನನ್ನ ದೈಹಿಕ ಪರೀಕ್ಷೆ ಮತ್ತು ಅಲ್ಲಿಯ ನಿಯಮ ಪ್ರಕಾರ ಏನೇನು ಪರೀಕ್ಷೆ ಮಾಡಬೇಕೋ ಅದೆಲ್ಲ ಮಾಡಿದರು.ಚೆನ್ನೈನಿಂದ ವಿಮಾನ ಡೆಲ್ಲಿ ಗೆ ಬೆಳಗ್ಗೆ ೬.3೦ಕ್ಕೆ ಹೊರಟಿತು. ವಿಮಾನದಲ್ಲಿ ಹೋಗುವಾಗ ನನ್ನ ಕ್ಯಾಮರಾವನ್ನು ಅಧಿಕಾರಿಗಳ ಕಣ್ಣು ತಪ್ಪಿಸಿ ಪ್ರಕೃತಿ ಮಾತೆಯನ್ನು ಸೆರೆ ಹಿಡಿಯುತ್ತಿದ್ದೆ.ಮಧ್ಯ ಮಧ್ಯದಲ್ಲಿ ಗಗನ ಸಖಿಯರು ಉಪಚಾರ ಮಾಡುತ್ತಿದ್ದರು. ಅಂತೂ ೯.೩೦ಕ್ಕೆ ನಮ್ಮ ಜೆಟ್ಕಿಂಗ್ ವಿಮಾನ ಡೆಲ್ಲಿ ತಲುಪಿತು.ಅಲ್ಲಿ ಹೊರದೇಶಕ್ಕೆ ಹೋಗುವ ಕಾರಣ imigration ಪರೀಕ್ಷೆ ನಡೆಸಿದರು.ಪಾಸ್ಪೋರ್ಟ್ ವಿಚಾರಿಸಿ ನನಗೆ ಪ್ರವಾಸೀ ವೀಸಾ ಕೊಟ್ಟು ಅದರಲ್ಲಿ ಸೀಲು ಹಾಕಿದರು.ನಂತರ ಕಾಟ್ಮಂಡು ವಿಗೆ ೧೨.೩೦ಕ್ಕೆ ಇನ್ನೊಂದು ವಿಮಾನದಲ್ಲಿ ಹೊರಟೆವು.ವಿಮಾನ ಆಗಸಕ್ಕೆ ಏರಿದ ೧ ಘಂಟೆಯಲ್ಲಿ ನಮ್ಮ ಭಾರತದ ತುತ್ತ ತುದಿ ಜಮ್ಮು ಕಾಶ್ಮೀರ ಕಾಣಿಸಿತು.ಭಾರತ ಮಾತೆ ಅಲ್ಲಿ ಮೋಡಗಳನ್ನು ಮಲ್ಲಿಗೆ ಹೂವಿನಂನ್ತೆ ಸಿಂಗರಿಸಿ ನವವಧುವಿನಂತೆ ಕಾಣುತ್ತಿದ್ದಳು.ಅದನ್ನೂ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.ಭಾರತ ಮಾತೆಯ ಪುತ್ರನಾಗಿ ಜನಿಸಿದ್ದಕ್ಕೆ ಸಾರ್ಥಕವಾಯ್ತು ಎಂದು ಅನಿಸಿತು.ಇಂಥ ಮಾತೆಯನ್ನು ಪಡೆದ ನಾವೆಷ್ಟು ಪುಣ್ಯವಂತರು?ಎಂಬ ಉದ್ಗಾರ ನನಗರಿವಿಲ್ಲದೆ ಹೊರಬಂದಿತು.ಈ ರೀತಿ ಕನಸು ಕಾಣುತ್ತಿದ್ದಾಗ ಕಾಥ್ಮಂದು ಬಂದೆ ಬಿಟ್ಟಿತು.ವಿಮಾನದಿಂದ ಕೆಳಗೆ ಇಳಿದ ಕೂಡಲೇ ಚಳಿ ನನ್ನನ್ನು ಆವರಿಸಿತು ..ಆಗ ಅಲ್ಲಿಯ ಉಷ್ಣತೆ ಕೇವಲ ೪".ಅಲ್ಲಿ ಅಳಗಪ್ಪನ್ ಚೆಟ್ಟಿಯಾರ್ ಮೊದಲೇ ವ್ಯವಸ್ಥೆ ಮಾಡಿದಂತೆ ನಮ್ಮನ್ನು ಸಾಮ್ರಾಟ್ ಟ್ರಾವೆಲ್ಸ್ ನವರು ನಮ್ಮನ್ನು ಹಾರಾರ್ಪಣೆ ಮಾಡಿ ಸ್ವಾಗತ ಮಾಡಿದರು.ಅಲ್ಲಿಂದ ವೈಶಾಲಿ ವಸತಿ ಗೃಹಕ್ಕೆ ನಮ್ಮನು ಕರೆದು ಕೊಂಡು ಹೋದರು.ಆಗ ಸಮಯ ಸಂಜೆ ೪.೦೦ ಘಂಟೆ.ಬೆಳ್ಳಗೆ ೫ ಘಂಟೆಗೆ ಹೊಟ್ಟೆಗೆ ಒಂದಿಷ್ಟು ಸಜ್ಜಿಗೆ ಬಿದ್ದವನ ಸ್ತಿತಿ ಈ ಹೊತ್ತಿಗೆ ಹೇಗಿರಬೇಡ ಹೇಳಿ?ಅಂತೂ ಅಲ್ಲಿ ಊಟ ಮಾಡಿ ವಿಶ್ರಾಂತಿ ಮಾಡಿದೆ.ರಾತ್ರಿ ಊಟ ಮಧ್ಯಾಹ್ನ ಊಟ ಎಲ್ಲಾ ಒಂದೇ ಆಯ್ತ್ಹ್ಗು.ನಿದ್ರಾ ದೇವಿಯ ವಶವಾದದ್ದು ತಿಳಿಯಲೇ ಇಲ್ಲ.ನಾನು ಮಾತ್ರ ಅಲ್ಲ. ಈ ಸ್ಥಿತಿ ಯಲ್ಲಿ ನೀವೂ ಹೀಗಾಗಬಹುದು ಅಲ್ಲವೇ?

ಮಾನಸ ಸರೋವರ ಯಾತ್ರೆ- ೧















ಜೀವನದಲ್ಲಿ ದೇವ ಋಣ, ಪಿತೃ ಋಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ನನ್ನ ಹಿರಿಯರು ಹೇಳುತ್ತಿದ್ದರು.ಹಾಗಾಗಿ ಈ ಎರಡೂ ಋಣಗಳನ್ನು ಏಕ ಕಾಲಕ್ಕೆ ಸಲ್ಲಿಸುವ ಭಾಗ್ಯ ನನಗೆ ಒದಗಿ ಬಂತು.ಅದು ೨೩-೦೬-೨೦೦೯ ರಂದು.ಅಳಗಪ್ಪನ್ ಚೆಟ್ಟಿಯಾರ್ ಟಿವಿಎಸ್ ಕಂಪನಿಯ ಚೆನ್ನೈ ವಿಭಾಗದ ಮುಖ್ಯಸ್ಥ,ಇವರ ಆಮಂತ್ರಣದ ಮೇರೆಗೆ ಕೈಲಾಸ ದಲ್ಲಿ ರುದ್ರ ಹವನಕ್ಕೆ ನಾನು ಹೊರಟೆ.ಇದರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನಾನು ಜೂನ್ ೨೩ರನ್ದು weastcoast ರೈಲಿನಲ್ಲಿ ಚೆನ್ನೈಗೆ ಹೊರಟೆ.ಮರುದಿನ ಸಂಜೆ ೪ ಘಂಟೆಗೆ ಚೆನ್ನೈ ತಲುಪಿದೆ.ಆ ದಿವಸ ರಾತ್ರಿ ಚೆನ್ನೈನಲ್ಲಿ ರಾಜ ರಾಜೇಶ್ವರಿ ವಸತಿ ಗೃಹದಲ್ಲಿ ನಮಗೆ ಏರ್ಪಾಡು ಮಾಡಿದ್ದರು.ನಾವು ಒಟ್ಟು ೩೦ ಜನ ಕರ್ನಾಟಕ ಮತ್ತು ತಮಿಳುನಾಡಿನ ವರು ಆ ದಿವಸ ಅಲ್ಲಿ ಸೇರಿ ಪ್ರಯಾಣದ ಬಗ್ಗೆ ಮಾಹಿತಿ ಪಡೆದೆವು .. ಯಾತ್ರೆಯ ಸರ್ವ ವಿಘ್ನ ನಿವಾರಣೆಗೊಸ್ಕರ ಗಣಪತಿ ಪೂಜೆ ಮಾಡಿದೆವು.ಪ್ರಯಾಣ ತಯಾರಿ ಎಲ್ಲ ನಡೆಸಿ ರಾತ್ರಿ ೧೦.೩೦ಕ್ಕೆ ಊಟ ಮಾಡಿ ಮಲಗಿದೆವು.
                ನನ್ನ ಕೈಲಾಸ ಮಾನಸ ಸರೋವರ ಯಾತ್ರೆಯ ಸ್ಥೂಲ ಪರಿಚಯವನ್ನು ತಿಳಿಸುತ್ತೇನೆ.ನನ್ನ ಅನುಭವವನ್ನು ಇನ್ನು ಮುಂದಿನ ಸಂಚಿಕೆಗಳಲ್ಲಿ ವೀಕ್ಷಿಸಿ.
ಮಾನಸ ಸರೋವರ ಯಾತ್ರೆ:-


ಎಲ್ಲಿದೆ? ಮಾನಸ ಸರೋವರ ಭಾರತ – ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ. ಮಾನಸ ಸರೋವರ ವಿಶೇಷ. ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ 150 ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು. ಹೇಗೆ ಹೋಗಬೇಕು? ಯಾವಾಗ? ಪ್ರತಿ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ಕೊನೆಯ ವಾರದವರೆಗೆ (ಹಿಮ ಕಡಿಮೆ ಇರುವ ತಿಂಗಳುಗಳನ್ನು ಪರಿಗಣಿಸಿ) ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು. ಇದು ನಾವಿ ಇಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತದ ವಿದೇಶಾಂಗ ಮಂತ್ರಾಲಯ “ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್” (ಐ. ಟಿ. ಬಿ. ಪಿ) ನೇತೃತ್ವದಲ್ಲಿ ಈ ಯಾತ್ರೆಯನ್ನು ನೆರವೇರಿಸುತ್ತದೆ. ಹೋಗಲು ಬಯಸುವವರು ಈ ಐ. ಟಿ. ಬಿ. ಪಿ ಪರೀಕ್ಷೆ ಎದುರಿಸಬೇಕು. ಇದು ಯಾತ್ರಾಕಾಂಕ್ಷಿಗಳ ದೈಹಿಕ, ಮಾನಸಿಕ ದೃಢತೆ ಹಾಗೂ ಸಾಮರ್ಥ್ಯ ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ 40 ದಿನಗಳು. ಇದಕ್ಕಾಗಿ ೪೦ ಸದಸ್ಯರ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದಲ್ಲಿ ಯಾತ್ರಾರ್ಥಿಗಳಲ್ಲದೆ ಭದ್ರತಾ ಸಿಬ್ಬಂದಿ, ನುರಿತ ವೈದ್ಯರೂ ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎಂಬ ವಿವರವನ್ನು ಯಾತ್ರಾರ್ಥಿಗಳಿಗೆ ಕನಿಷ್ಠ ಆರು ತಿಂಗಳು ಮೊದಲೇ ತಿಳಿಸಲಾಗುತ್ತದೆ. ಯಾತ್ರೆಯ ಸಿದ್ಧತೆ. :- ಮಾನಸ ಸರೋವರದ ಯಾತ್ರೆ ಉಳಿದ ತೀರ್ಥಯಾತ್ರೆಗಳಷ್ಟು ಸುಲಭವಾದದ್ದಲ್ಲ. ಇದಕ್ಕೆ ದಿನಕ್ಕೆ ಕನಿಷ್ಠ ೧೦ ಕಿ. ಮೀ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮಂಕಿಕ್ಯಾಪ್, ಸ್ವೆಟರ‍್, ಉಣ್ಣೆಯ ಕೈಕವಚ, ಥರ್ಮಲ್ ಬಟ್ಟೆಗಳು, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಸಣ್ಣ ಕತ್ತರಿ, ಚಾಕು, ಚಾರಣಕ್ಕೆ ಹೊಂದುವಂಥ ಬೂಟುಗಳು, ಹಿಮಪಾತವಾದರೆ ತಡೆಯಬಲ್ಲ ವಾಟರ್ ಪ್ರೂಫ್ ಬೂಟುಗಳು, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ಧೂಳಿನಿಂದ ರಕ್ಷಿಸಬಲ್ಲ ಮುಖವಾಡ ಇವೆಲ್ಲ ಬೇಕೇಬೇಕು. ಅದು ನುರಿತರಿಂದ ಪರಿಶೀಲಿಸಲ್ಪಡುವುದು ಅನಿವಾರ್ಯ. ಇದರ ಜೊತೆಗೆ ಗ್ಲೂಕೋಸ್, ಚಾಕೊಲೇಟ್, ನೀರಿನ ಬಾಟಲಿಗಳು, ಪೋರ‍್ಟಬಲ್ ಆಕ್ಸಿಜೆನ್ ಸಿಲಿಂಡರ‍್ಗಳು, ಆಮ್ಲಜನಕ ಪರಿಮಾಣ ಹಾಗೂ ನಾಡಿ ಮಿಡಿತವನ್ನು ಏಕಕಾಲದಲ್ಲಿ ನೋಡಬಲ್ಲ ಪಲ್ಸ್ ಆಕ್ಸಿಮೀಟರ್ ಅವಶ್ಯವಾಗಿ ಬೇಕು. ಯಾತ್ರೆಯ ವಿಧಾನ. :- ವಿಮಾನ, ರೈಲು, ಬಸ್ ಹೀಗೆ ಯಾವ ಮಾರ್ಗದಿಂದಲಾದರೂ ನೇಪಾಳದ ರಾಜಧಾನಿಯಾದ ಕಠ್ಮಂಡು ತಲುಪಬಹುದು. ಅಲ್ಲಿಂದಲೇ ಯಾತ್ರೆ ಆರಂಭ. ಅಲ್ಲಿಂದ ಅಧಿಕೃತ ಬಸ್ ಮೂಲಕ ಸಾಂಬ ಗಡಿಗೆ ಪ್ರಯಾಣ. ಇದು ಚೀನಾದ ಗಡಿ. ಇಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ನಂತರ ಮಾನಸ ಸರೋವರ ಯಾತ್ರೆಗೆ ಅನುಮತಿ ಇದೆ. ಇಲ್ಲಿಂದ  ನೈಲಂ ಎಂಬ ಸ್ಥಳಕ್ಕೆ ಪ್ರಯಾಣ . ಇದು ಅತಿ ದುರ್ಗಮವಾದ ಹಾದಿ. ಭೂಕುಸಿತ, ಹಿಮಪಾತ ಇಲ್ಲಿ ಸರ್ವೇಸಾಮಾನ್ಯ. ಯಾತ್ರಿಗಳು ಈ ಸವಾಲನ್ನು ಎದುರಿಸಿಕೊಂಡೇ ಸಾಗಬೇಕು. ನಂತರ ಸಗಾ,ಅಲ್ಲಿಂದ ಡಾರ್ಚಿನ್ ಎಂಬ ಪಟ್ಟಣಗಳು ಸಿಗುತ್ತವೆ.  ನಂತರ ಮಾನಸ ಸರೋವರ ಸಿಗುತ್ತದೆ. ಎರಡು ಸಾವಿರ ಅಡಿ ಹತ್ತಿದರೆ ’ಅನ್ನಪೂರ್ಣೇಶ್ವರಿ’ ಪರ್ವತದ ಸಾಲು ಸಿಗುತ್ತದೆ. ಇಲ್ಲಿಂದ ಮುಂದೆ ಚಾರಣಕ್ಕೆ ’ಯಾಕ್’ ಪ್ರಾಣಿಗಳ ಅಥವಾ ಟಿಬೆಟಿಯನ್ ಗೈಡುಗಳ ಸಹಾಯ ಬೇಕೇಬೇಕು. ಸುಮಾರು ನಾಲ್ಕು ಕಿ.ಮೀ. ನಡೆದರೆ ’ಗುಂಜಿ’ ಸಿಗುತ್ತದೆ. ಇಲ್ಲಿ ಕಿರುಕೈಲಾಸ ಪರ್ವತ ಕಾಣಿಸುವುದು. ಈ ಸ್ಥಳದಲ್ಲಿ ಐ. ಟಿ. ಬಿ. ಪಿ ವೈದ್ಯರ ತಪಾಸಣೆ ಕಡ್ಡಾಯ. ಇದರಲ್ಲಿ ತೇರ್ಗಡೆಯಾದರೆ ಮಾತ್ರ ಮುಂದಿನ ಯಾತ್ರೆ, ಇಲ್ಲದಿದ್ದರೆ ಮಾನಸ ಸರೋವರ ಯಾತ್ರೆ ಇಲ್ಲಿಯೇ ಮೊಟಕುಗೊಳ್ಳುತ್ತದೆ. ಗುಂಜಿಯಿಂದ ’ಕಾಲಾಪಾನಿ’ವರೆಗೆ ೧೦ ಕಿ.ಮೀ. ಹಿಮಪರ್ವತದ ಹಾದಿ. ಮಂಜು ಮುಸುಕಿದ ಪರ್ವತದ ನಡುವಿನ ಈ ಪ್ರಯಾಣಕ್ಕೆ ಆಮ್ಲಜನಕದ ಸಿಲಿಂಡರುಗಳು ಅವಶ್ಯವಾಗಿ ಬೇಕು. ಮಧ್ಯದಲ್ಲಿ ವೈದ್ಯರ ಚಿಕಿತ್ಸೆ ಅವಶ್ಯವಾಗಬಹುದು. ಅದಕ್ಕೆ ವ್ಯವಸ್ಥೆ ಇರುತ್ತದೆ. ಉತ್ತರಾಂಚಲದ ಮಂಡಲ್ ವಿಕಾಸ್ ನಿಗಮ್ ಇಲ್ಲಿ ಅನೇಕ ಚಿಕಿತ್ಸಾ ಶಿಬಿರಗಳನ್ನು, ಆಹಾರ ವ್ಯವಸ್ಥೆ ನಿರ್ವಹಣಾ ತಾಣಗಳನ್ನು ನಿರ್ಮಿಸಿದೆ. ದಾರಿಯಲ್ಲಿನ ಕೆಲವು ಗುಹೆಗಳಿಗೆ ’ವ್ಯಾಸಗುಹೆ’ ಎಂಬ ಹೆಸರಿದೆ. ಪುರಾಣದ ವ್ಯಾಸರು ಇಲ್ಲಿದ್ದರು ಎಂಬ ನಂಬಿಕೆ ಇದೆ. ಇಲ್ಲಿ ಕಾಳಿ ದೇವಾಲಯವೂ ಇದೆ. ಹೀಗೆ ೧೨,೦೦೦ ಅಡಿ ಹತ್ತಿದಾಗ ನಾಭಿದಂಗ್ ಪರ್ವತ ಶ್ರೇಣಿಗೆ ಯಾತ್ರಿಗಳು ತಲುಪುವರು. ಇಲ್ಲಿ ಮಂಜುಗಡ್ಡೆಗಳಿಂದ ಉಂಟಾದ ’ಓಂ’ ಎಂಬ ಸ್ವರೂಪ ಸ್ಪಷ್ಟವಾಗಿ ಕಾಣುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಗಣಪತಿ-ಆಂಜನೇಯ ಮತ್ತು ಸಾಕ್ಷಾತ್ ಪರಶಿವನನ್ನೇ ಮಂಜುಗಡ್ಡೆಯ ಆಕೃತಿ ಮೂಲಕ ದರ್ಶನ ಮಾಡಿದ ಭಕ್ತಾದಿಗಳಿದ್ದಾರೆ. ನಾಭಿದಂಗಿನ ’ಹೋರೆ’ ಎಂಬ ಶಿಬಿರದಲ್ಲಿ ಯಾತ್ರಿಗಳು ತಂಗಬೇಕು. ಮಂದಾರ ಪರ್ವತ ಮತ್ತು ಕೈಲಾಸ ಪರ್ವತದ ನಡುವಿನ ಈ ಜಾಗದಲ್ಲಿ ಮಾನಸ ಸರೋವರದ ದಾರಿ ಸಿಗುತ್ತದೆ. ಮೊದಲು ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದನೆಂದು ನಂಬಲಾದ ’ರಾಕ್ಷಸ ಸರೋವರ’ ಸಿಗುವುದು. ಮಾನಸ ಸರೋವರ ಪ್ರವೇಶ.:- ಇಲ್ಲಿ ಅಧಿಕಾರಿಗಳು ಮಾನಸ ಸರೋವರ ಪ್ರವೇಶಕ್ಕೆ ಪ್ರಾಕೃತಿಕ ಅನುಕೂಲ ಹೇಗಿದೆ ಎಂಬುದನ್ನು ಪರಿಶೀಲಿಸಿ ಯಾತ್ರಿಗಳನ್ನು ಬಿಡುತ್ತಾರೆ. ಕೆಲವೊಮ್ಮೆ ೩-೪ ದಿನಗಳ ಕಾಲ ಯಾತ್ರಿಗಳು ಇಲ್ಲಿ ತಂಗಬೇಕಾಗುತ್ತದೆ. ಇಷ್ಟೆಲ್ಲಾ ಸಾಹಸದ ನಂತರ ಮಾನಸ ಸರೋವರದ ದರ್ಶನ. ಅದರ ದರ್ಶನ ಈ ಎಲ್ಲಾ ಶ್ರಮವನ್ನು ಮರೆಸಬಲ್ಲಷ್ಟು ರಮ್ಯವಾಗಿದೆ. ’ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ. ಇಲ್ಲಿಂದ ಮುಂದೆ ’ತಾಲ್ಜೆನ್’ ಎಂಬ ಜಾಗದಲ್ಲಿ ರಾತ್ರಿ ವಿರಮಿಸಿದ ನಂತರ ’ಕೈಲಾಸ ಪ್ರದಕ್ಷಿಣೆ’ ಆರಂಭವಾಗುತ್ತದೆ. ದಕ್ಷಿಣಾಮೂರ್ತಿ ಇಂದ ಆರಂಭವಾಗುವ ಇದು ಪಶ್ಚಿಮಕ್ಕೆ, ಉತ್ತರಕ್ಕೆ ತಿರುಗಿ ಕೊನೆಗೆ ’ತಾಲ್ಜೆನ್’ ಅಲ್ಲೇ ಕೊನೆಯಾಗುತ್ತದೆ. ಇದರಲ್ಲಿ ೨೦,೦೦೦ ಅಡಿಯವರೆಗೂ ಹತ್ತಬೇಕು. ಗಟ್ಟಿಗರೇ ಇದನ್ನು ಸಾಧಿಸಬಲ್ಲರು. ಜೀವಹಾನಿಯ ಸಂಭವವೂ ಇರುವುದರಿಂದ ದೃಢ ನಿರ್ಧಾರ ಪರಿಶೀಲಿಸಿದ ನಂತರವೇ ಈ ಪರಿಕ್ರಮಕ್ಕೆ ಅವಕಾಶ. ನಂತರ, ಮಾನಸ ಸರೋವರವನ್ನು ಇದೇ ಮಾರ್ಗದಲ್ಲೇ ಇಳಿಯಬೇಕು. ಇಳಿಯುವಾಗ ’ಗೌರಿಕುಂಡ’ದ ದರ್ಶನ ಮಾಡುತ್ತಾರೆ. ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ. ಸಹಾಯ.:- ಭಾರತ ಸರ್ಕಾರದ ವೆದೇಶಾಂಗ ಸಚಿವಾಲಯ, ಕುಮಾನ್ ಮಂಡಲ್ ವಿಕಾಸ್ ನಿಗಮ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯಾತ್ರೆಗೆ ನೆರವಾಗುತ್ತದೆ. ಸಹಾಯ ವೆಚ್ಚ ರೂ. ೪೫,೦೦೦/- ಇಂದ ರೂ. ೫೦,೦೦೦/-. ಇದಲ್ಲದೆ ಕುದುರೆ, ಸೇವಕ, ಯಾಕ್, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಒದಗಿಸುತ್ತದೆ.