ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Saturday, September 26, 2009

ಮಾನಸ ಸರೋವರ ಯಾತ್ರೆ -11












ನಾನು ಮಾನಸದಲ್ಲಿ ಎರಡನೇದಿನ......... ...ಈ ದಿವಸ ನಮ್ಮದು ಮಾನಸ ಸರೋವರದ ಪ್ರದಕ್ಷಿಣೆ.ಒಟ್ಟು ಅಂದಾಜು ದೂರ ೫೬ ಕಿಲೋ ಮೀಟರ್ ಇರಬಹುದು.ನಾವು ಮಾನಸ ಸರೋವರದ "ಜೈದೀ" ಎನ್ನುವ ಕಡೆಯಿಂದ ಕಾಲು ನಡಿಗೆಯ ಪರಿಕ್ರಮಣೆ ಪ್ರಾರಂಭ ಮಾಡಿದೆವು.ಅಲ್ಲಿಂದ ಹೊರಟರೆ ಪ್ರದಕ್ಷಿನಾಕಾರವಾಗಿ ಚೊಂಗೊಪಾ,ಲಾಂಗ್ಪೂನಾ, ಧೂಗೋಲ್ವೋಗೊಂಪಾ, ಸೇರಾಲುಂಗ್,ಧ್ರೊಗೋಗಾಂಪಾ,ಗೊಸೋಲ್ ಗೊಂಪಾ ಇಷ್ಟು ಸ್ಥಳಗಳು ಸಿಗುತ್ತವೆ.ಇದನ್ನು ಪೂರ್ತಿಯಾಗಿ ಸುತ್ತಿಬಂದಾಗ ಮಾನಸ ಪ್ರದಕ್ಷಿಣೆಯಾಗುತ್ತದೆ. ಕೆಲವರು ಮಾನಸ ಸರೋವರದ ಪಶ್ಚಿಮ ದಿಕ್ಕಿನಲ್ಲಿರುವ ಗೊಸೋಲ್ ನಿಂದ ಪ್ರದಕ್ಷಿಣೆ ಪ್ರಾರಂಭಿಸುತ್ತಾರೆ .ಗೊಂಪಾ ಅಂದರೆ ಇಲ್ಲಿನ ಚೈನೀ ಭಾಷೆ ... ಒಂದು ಎತ್ತರವಾದ ಪ್ರದೇಶ ಅಥವಾ ಒಂದು ಗುಡ್ಡದ ತುದಿಯನ್ನು "ಗೊಂಪಾ " ಎಂದು ಇಲ್ಲಿನವರು ಹೇಳುತ್ತಾರೆ ..ಮಾನಸ ಸರೋವರದ ತಟದಲ್ಲಿಯೇ ನಡೆಯುತ್ತಿರುವಾಗ ಸಿಗುವ ಒಂದೊಂದು ಗುಡ್ಡೆಯ ಹೆಸರು. ಅದರಲ್ಲಿ ಒಂದೊಂದು ಗೊಂಪಾ ಮೇಲೆ ಹತ್ತಿ ನೋಡಲು ಸುಮಾರು ೧ ರಿಂದ ೨ ಕಿಲೋಮೀಟರ್ ಗಳಷ್ಟು ಏರಬೇಕಾಗುತ್ತದೆ..ನಾವು ಚೊಂಗೊಪಾದಿಂದ ಪರಿಕ್ರಮಣೆ ಪ್ರಾರಂಭ ಮಾಡಿದೆವು.ಈ ಗೋಮ್ಪಾದಿಂದ ಕೆಳಗೆ ಎರಡು ಕಿಲೋ ಮೀಟರುಗಳಷ್ಟು ಬಂದಾಗ ಒಂದು ಬಿಸಿನೀರಿನ ಕೊಳ ಸಿಗುತ್ತದೆ.ನಾನು ಅಲ್ಲಿ ಬಿಸಿನೀರಿನ ಸ್ನಾನ ಮಾಡಿದೆ.ಎಷ್ಟೋ ದಿವಸದಿಂದ ಬಿಸಿನೀರು ಕಾಣದೆ ಇವತ್ತು ಆತುರದಿಂದ ಸ್ನಾನ ಮಾಡಿದೆ .. ಮೈಯೆಲ್ಲಾ ಬೆಚ್ಚಗಾಯಿತು.. ಆಗ ಸುಮಾರು ೫ ಕಿಲೋಮೀಟರುಗಳಷ್ಟು ನಡೆದಾಯಿತು.ಒಂದೆಡೆ ನಮ್ಮನ್ನೇ ಹಾರಿಸುವಷ್ಟು ವೇಗವಾಗಿ ಬೀಸುವ ಗಾಳಿ.ಮತ್ತೊಂದೆಡೆ ಹಿಮಾಲಯದ ಸುಂದರ ಪರ್ವತಗಳು ಕ್ಷಣ ಕ್ಷಣಕ್ಕೆ ಮಂಜು ಕರಗಿದಾಗ ಕಾಣುವ ಒಂದೊಂದು ವರ್ಣ ನಮ್ಮ ಆಯಾಸವನ್ನೇ ಕಡಿಮೆ ಮಾಡಿತು..ಸುಮಾರು ೧೦ ಕಿಲೋಮೀಟರುಗಳಷ್ಟು ಬಂದೆವು. ಲಾಂಗ್ಪೂನಾ ಗೊಂಪಾ ತಲುಪಿದೆವು. ಇಲ್ಲಿನ ಗುಡ್ಡದ ತುದಿಯಿಂದ ಕೈಲಾಸ ಪರ್ವತ ಕಾಣುತ್ತದೆ ..ಇಲ್ಲಿ ಒಂದು ಗುಡಿಯಿದೆ.ಶೆರ್ಪಾಗಳು ನಮ್ಮನ್ನು ಕರೆದುಕೊಂಡು ಹೋದರು..ಆ ವಿಗ್ರಹದ ಬಗ್ಗೆ ಪಾಂಡೆ ವಿವರಣೆ ನೀಡಿದರು..ಇದು ಶಾಕ್ಯಮುನಿಯ ವಿಗ್ರಹ .ಇಲ್ಲಿಂದ ಸುಮಾರು ೧೦ ಕಿಮೀ ಹೋದರೆ ಸೆರಲುಂಗ್ ಗೊಂಪಾ ಸಿಗುತ್ತದೆ .ಇಲ್ಲಿ ಬೌದ್ಧ ಮಹಾತ್ಮರುಗಳ ಸ್ತೂಪವೊಂದನ್ನು ನಿರ್ಮಿಸಲಾಗಿದೆ..ಇಲ್ಲಿಂದ ಮಾನಸ ಸರೋವರ ಮತ್ತು ಹಿಮಾಲಯ ಪರ್ವತಗಳು ತುಂಬಾ ಸುಂದರವಾಗಿ ಕಾಣುತ್ತವೆ.ದಾರಿಯಲ್ಲಿ ನಡೆಯುವಾಗ ಅನೇಕ ಸಣ್ಣ ಸಣ್ಣ ಕೊಳಗಳು ಸಿಗುತ್ತವೆ.ಈ ಗೊಂಪಾ ಮಾನಸ ಸರೋವರದಿಂದ ಸುಮಾರು ೭೦೦ ಅಡಿಗಳಷ್ಟು ಎತ್ತರದಲ್ಲಿರಬಹುದು.ಇಲ್ಲಿ ನಾವು ತಲುಪುವಾಗ ಮಧ್ಯಾಹ್ನ ೩ ಘಂಟೆ..ಕೈಯಲ್ಲಿದ್ದ ಬ್ರೆಡ್ ಬಾಯಿಗೆ ಹೋಯಿತು..ಮಾನಸ ಸರೋವರದ ನೀರನ್ನು ದಣಿವಾರುವಷ್ಟು ಕುಡಿದಾಯಿತು ..ಅಷ್ಟೊತ್ತು ಇಲ್ಲದ ಕಾಲು ನೋವು ಆಗ ಪ್ರಾರಂಭವಾಯಿತು...ಆವಾಗ ನಮಗೆ ಸುಮಾರು ೨೦ ಕಿಮೀ ನಡೆದಾಗಿತ್ತು. ಇನ್ನು ಸುಮಾರು ೧೦ ಕಿಮೀ ನಡೆಯಬೇಕಾಗುತ್ತದೆ ಎಂದು ಪಾಂಡೆಹೇಳಿದರು..
ಸುಮಾರು ೫ ಕಿಮೀ ದೂರ ಕ್ರಮಿಸಿದಾಗ ಧೂಗೊಲ್ವೋ ಗೊಂಪಾ ತಲುಪಿದೆವು.ಸಂಜೆ ೬.೩೦ ಗೊಂಪಾ ತಲುಪವಾಗಲೇ ಸೂರ್ಯ ಅಸ್ತಮಿಸಿದ್ದ.ಸುಮಾರು ನಾಲ್ಕೈದು ಕಿಮೀಗಳಷ್ಟು ದೂರ ಟಾರ್ಚ್ ಬೆಳಕಿನಲ್ಲಿಯೇ ನಡೆದೆವು ..ಅಷ್ಟರಲ್ಲಿ ಒಂದು ಜಲಧಾರೆಯ ಶಬ್ದ ಕೇಳಿಸಿತು.... ಹಿಮಾಲಯದಿಂದ ಹರಿದು ಬರುತ್ತಿದೆ..ಧೂಗೊಲ್ವೋ ಅಂದರೆ ಚೈನೀ ಭಾಷೆಯಲ್ಲಿ 'ಪವಿತ್ರವಾದ ಶಿರಸ್ನಾನದ ದ್ವಾರ'ಎಂದು ಭಾವಾರ್ಥ..ಮೈನಸ್ ಡಿಗ್ರೀ ಚಳಿ.ಸ್ನಾನ ಮಾಡುವದು ಬಿಟ್ಟು ಕೈ ಕಾಲು ತೊಳೆಯಲೂ ಸಾಧ್ಯವಾಗದ ಸ್ಥಿತಿ ನನ್ನದು..ಇದು ಈ ಪರಿಕ್ರಮದಲ್ಲಿ ಅತ್ಯಂತ ಮುಖ್ಯವಾದ ಗೊಂಪಾ..ರಾತ್ರಿ ೧೦.೩೦ ...ಬ್ಯಾಗಿನಿಂದ ಒಂದು ಆಪಲ್ ಹಣ್ಣು ತಿಂದೆ ..ಬೆನ್ನಲ್ಲಿ ಕಟ್ಟಿದ ಸ್ಲೀಪಿಂಗ್ ಬ್ಯಾಗ್ ಬಿಚ್ಚಿದೆ. ಪ್ರಕೃತಿಯ ಮಾತೆಯ ಮಡಿಲಿನಲ್ಲಿಯೇ ಮಲಗಿದೆ.ಎಂಥಹ ಅನುಭವ ಅದು ..ಒಂದೆಡೆ ಮಾನಸದ ಚಳಿ ಗಾಳಿ.ಮತ್ತೊಂದೆಡೆ ಜಲಧಾರೆಯ ನಿನಾದ. ಅಲ್ಲಿ ಬೆಚ್ಚಗೆ ನಿದ್ರಾದೇವಿಯ ಆಗಮನ...

Sunday, September 20, 2009

ಮಾನಸ ಸರೋವರ ಯಾತ್ರೆ - ೧೦

















ಮಾನಸ ಸರೋವರ ! ಇದೊಂದು ವಿಶೇಷವಾದ ಸರೋವರ .....

ಒಮ್ಮೆ ಕೈಲಾಸ ಪರ್ವತ ಸ್ಥಾವರದಲ್ಲಿ ವಿಹರಿಸುತ್ತಿದ್ದ ಚತುರ್ಮುಖ ಬ್ರಹ್ಮನಿಗೆ ಈ ಪ್ರದೆಶದಲ್ಲಿ ಒಂದು ಸರೋವರವಿದ್ದರೆ ಚೆನ್ನಗಿರುತ್ತದೆ ಎಂದನಿಸಿತ್ತಂತೆ! ತಕ್ಷಣವೇ ಏರ್ಪಟ್ಟಿದ್ದು ಈ ಮಾನಸ ಸರೋವರ ! ಬ್ರಹ್ಮನ ಮನಸ್ಸಿನ ಶಕ್ತಿಯಿಂದುಂಟಾದ ಈ ಸರೋವರಕ್ಕೆ ’ಮಾನಸ’ ಎಂಬ ಹೆಸರಾಯಿತು. ಇದರಲ್ಲಿ ರಾಜ ಹಂಸಗಳು ವಿಹರಿಸುತ್ತಿವೆಯೆಂದೂ, ದೇವತೆಗಳು ಈ ಸರೋವರ ದಲ್ಲಿ ಸ್ನಾನ ಮಾಡುತ್ತಾರೆಂದೂ, ದೇವಕನ್ಯೆಯರು - ದೇವಲೋಕವಾಸಿಗಳೂ ಈ ಬ್ರಹ್ಮಸೃಷ್ಠಿ ಸರಸ್ಸಿಗೆ ಬರುತ್ತಾರೆಂದೂ ನಂಬಿಕೆ. ಅನ್ತಹ ದಿವ್ಯವಾದ ಸರೊವರದ ದರ್ಶನ ಪ್ರತಿಯೊಬ್ಬ ಹಿಂದುವಿಗೂ, ಪ್ರತಿಯೊಬ್ಬ ಸನಾತನಿಗೂ ಅತ್ಯಂತ ಪುಣ್ಯಪ್ರದವಾಗಿದೆ. ಇಲ್ಲಿಯ ದರ್ಶನ, ತೀರ್ಥ ಸ್ನಾನ, ಅನುಷ್ಠಾನ ಜನ್ಮ ಜನ್ಮಾಂತರದ ಕರ್ಮಗಳನ್ನು ತೊಡೆದು ಹಾಕಲು ಕಾರಣವಾಗುತ್ತದೆ. ಬ್ರಹ್ಮಸಂಕಲ್ಪ ಮಾನಸ ಸರೋವರಸ್ನಾನ ಕರ್ಮರಾಹಿತ್ಯಕ್ಕೂ ದಿವ್ಯ ಆತ್ಮಜ್ನಾನಕ್ಕೂ ಮಾರ್ಗ! ಈ ಸರೊವರ ಒಂದು ಶಕ್ತಿ ಪೀಠ. ಇದರಲ್ಲಿ ಸ್ನಾನ ಮಾಡುವುದು ಪಾಪಹಾರಕ, ಮೋಕ್ಷದಾಯಕ! ಅದು ಪ್ರಶಾಂತತೆಯ ನಿಲಯ. ಜಪ ಧ್ಯಾನಾದಿಗಳು ಇಲ್ಲಿ ಚೆನ್ನಾಗಿ ಸಿದ್ಧಿಸುತ್ತದೆಯಂತೆ. ಆತ್ಮಾನುಸಂಧಾನದ ದೃಷ್ಠಿಕೋನದಿಂದ ನೋಡಿದರೆ ಸ್ವರ್ಗದಲ್ಲಿನ ಒಂದು ಭಾಗವನ್ನು ಭೂಮಿಯ ಮೇಲೆ ತಂದು ಇಡಲಾಗಿದೆ ಎಂದು ನಮಗೆ ಭಾಸವಾಗುತ್ತದೆ. ಈ ಸರೋವರದ ದರ್ಶನ, ಸ್ನಾನ ಅನೇಕ ತೀರ್ಥಗಳಲ್ಲಿ ಪವಿತ್ರವಾಗಿದೆ. ಸಾಧು ಸಂತರಿಗೆ ಇದು ಸಿದ್ಧಿಯ ತಾಣವಾಗಿದೆ. ಈ ಸರೊವರಕ್ಕೆ ಪ್ರದಕ್ಷಿಣೆ ಬರುವುದು ಬಹಳ ವಿಶೇಷವಾದುದು.

ಈ ದಿವಸದಿಂದ ಅಲಗಪ್ಪನ್ ಚೆಟ್ಟಿಯಾರ್ ಅವರ ವೈದಿಕ ಕಾರ್ಯಕ್ರಮ ,ರುದ್ರ ಪಾರಯಣ ,ರುದ್ರ ಹವನ ಪ್ರಾರಂಭವಾಗುತ್ತದೆ. ಅದಕ್ಕಾಗಿ ಬೆಳಗ್ಗೆ ೩.೩೦ಕ್ಕೆ ಎದ್ದು ತೀರ್ಥ ಸ್ನಾನ ಮಾಡಲು ಹೊರಟೆವು. ಕೊರೆಯುವ ಚಳಿ ಬೇರೆ! ನಡೆಯುವಾಗ ಕಲ್ಲುಗಳು ಸೂಜಿಯಂತೆ ಚುಚ್ಚುತ್ತಿದ್ದವು. ಆದರೂ ಹಠದಿಂದ ಕಾಲು ಎಳೆದುಕೊಂಡು ಸುಮಾರು ೧ ಕಿಲೋಮೀಟರ್ ಗಳಷ್ಟು ಹೋದಾಗ ಸರೊವರದ ಬಳಿ ತಲುಪಿದೆವು. ಮೈಯನ್ನೇ ಎತ್ತಿಕೊಂಡು ಹೊಗುವಂತ ಚಳಿ ಗಾಳಿ. ಇನ್ನೂ ಸೂರೊದಯವಾಗಲು ಅರ್ಧಗಂಟೆಯಷ್ಟು ಸಮಯ ಬಾಕಿಯಿದೆ. ಈಗ ಸ್ನಾನ. ಅನಿವಾರ್ಯವಾಗಿ ನಾನು ಅಂಗಿ ತೆಗೆಯಬೇಕಾದ ಸಂದರ್ಭ. ಹಿಂದೆಂದೂ ಅನುಭವಿಸದ ಚಳಿ. ಸರೋವರದ ಬಳಿ ಬೀಸುವ ಗಾಳಿ,, ನೀರಿನ ತೆರೆ ಓಂಕಾರವನ್ನೇ ಉಚ್ಚರಿಸಿದಂತೆ ಭಾಸವಾಯಿತು. ನನ್ನ ಜೀವನವೆಲ್ಲಾ ಸಿನೆಮಾ ರೀಲುಗಳಂತೆ ಕಾಣಿಸುತ್ತದೆ. ನನ್ನ ಹುಟ್ಟು, ಬಾಲ್ಯ, ನಾನು ಮಾಡಿದ ತಪ್ಪುಗಳು, ನಾನು ಅನುಭವಿಸಿದ ತಪ್ಪುಗಳು ನೆನಪಾದವು. ತೀರ್ಥಸ್ನಾನದ ಸಂಕಲ್ಪವನ್ನು ಮಾಡಿದೆವು. ನನ್ನಲ್ಲಿ ಯಾವ ಸಂಕಲ್ಪವೂ ಇರಲಿಲ್ಲ. ಶಬ್ದಗಳೆಲ್ಲವೂ ಸ್ತಬ್ದವಾಯಿತು. ಉತ್ತರಭಾಗಕ್ಕೆ ಮುಖಮಾಡಿದಾಗ ಕೈಲಾಸಪರ್ವತ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಎದೆಗೆ ಕೈ ಮುಚ್ಚಿಕೊಂಡು ಸರೋವರದ ಬಳಿ ಬಂದೆ. ಬಂದ ತೆರೆ ನನ್ನ ಪಾದ ಪ್ರಕ್ಷಾಳನೆ ಮಾಡಿತು. ಶರೀರವೇ ನಡುಗಿದ ಅನುಭವ. ಕೈ ಮುಗಿದು ಪ್ರಾರ್ಥನೆ ಮಾಡಿದೆ. ಅಲ್ಲಿ ಮನದಾಳದಲ್ಲಿ ನಾಚಿಕೆಪಟ್ಟುಕೊಳ್ಳದೆ, ನಾನು ಮಾಡಿದ ತಪ್ಪುಗಳನ್ನೆಲ್ಲಾ ಒಂದು ಕ್ಷಣ ಸ್ಮರಣೆ ಮಾಡಿದೆ. ಮಾಡಿದ ತಪ್ಪುಗಳಿಗೆ ಮನಸಾರೆ ಪಶ್ಚಾತ್ತಾಪ ಪಟ್ಟುಕೊಂಡರೆ ಆ ಪಾಪದಿಂದ ವಿಮುಕ್ತರಾಗುತ್ತೇವೆಂದು ನನ್ನ ಹಿರಿಯರು ಹೇಳಿದ ನೆನಪಾಯಿತು. ನನ್ನ ತಮ್ಮ ಎಳ್ಯಡ್ಕ ಮಹೇಶನೂ ನನಗೆ ಸೂಚನೆಯನ್ನು ಕೊಟ್ಟಿದ್ದ, ’ಅಲ್ಲಿ ಸ್ನಾನ ಮಾಡುವಾಗ ಪಿತೃಗಳ ಸ್ಮರಣೆ ಮಾಡು’ ಎಂದು. ನನ್ನ ಎಲ್ಲಾ ಪಿತ್ರೃಗಳನ್ನು ಸ್ಮರಣೆ ಮಾಡಿದೆ. ಅಂತೆಯೇ, ನನಗಿರುವ ವ್ಯಾಮೋಹಗಳು, ಆವೇಶಗಳು, ಕೋರಿಕೆಗಳು, ನನ್ನಿಂದಾದ ತಪ್ಪುಗಳು ಎಲ್ಲವನ್ನೂ ಏಕಧಾರೆಯಾಗಿ ಹೇಳಿ ಮುಗಿಸಿ ನನ್ನನ್ನು ನಾನೇ ಖಾಲಿ ಮಾಡಿಕೊಂಡೆ! ಇನ್ನು ಹೇಳಿಕೊಳ್ಳಲಾಗಲೀ, ಅಂದುಕೊಳ್ಳುವುದಕ್ಕಾಗಲೀ, ದು:ಖ ಪಡುವುದಕ್ಕಾಗಲೀ, ನನ್ನೊಳಗೆ ಯಾವ ಭಾವನೆಯೂ ಇಲ್ಲವೆನ್ನುವ ಸ್ಥಿತಿ ಅರ್ಥವಾಗುತ್ತಿದೆ. ಮಾನಸದ ನೀರಿಗೆ ಬಲಗಾಲನ್ನು ಇಟ್ಟೆ. ಕ್ಷಣ ಮಾತ್ರದಲ್ಲಿ ನೀರಿಗೆ ಹಾರಿದೆ. ಜೀವನದ ಅತ್ಯಂತ ಪುಣ್ಯಘಟ್ಟದಲ್ಲಿದ್ದೆ. ಆತ್ಮಸಂತೃಪ್ತನಾಗುತ್ತಿದ್ದೆ. ಏಳು ಸಲ ಮುಳುಗಿ ಏಳಬೇಕೆಂದು ಆಸೆ ಇತ್ತು. ಆಗಲಿಲ್ಲ. ಐದು ಸಲ ಮುಳುಗಿದೆ. ಶ್ವಾಸ ನಿಂತು ಹೊದ ಅನುಭವ ಆಯಿತು. ಜಗತ್ತೆಲ್ಲವೂ ಆನಂದ ನಿಮೀಲಿತವಾಗುತ್ತಿತ್ತು.
ನನ್ನ ಅನುಭವಕ್ಕೆ ನಾನು ಬರುವಾಗ ಶೆರ್ಪಾಗಳು ನನ್ನನ್ನು ಮಾನಸದ ತಟದ ಹೊಯಿಗೆಯ ಮೆಲೆ ಮಲಗಿಸಿ ಇಡೀ ದೇಹವನ್ನು ಉಜ್ಜುತ್ತಿದ್ದರು. ಕೊರೆಯುವ ಚಳಿಯಲ್ಲೂ ಭೌತಿಕ ಶರೀರ ಸ್ವಲ್ಪವೇ ಬಿಸಿ ಆದ ಅನುಭವ!
ಸುಮಾರು ಬೆಳಿಗ್ಗೆ ೮.೩೦ ರ ಸಮಯ.ಮಾನಸದ ತಟದಲ್ಲಿ ನಾವೆಲ್ಲರೂ ತರ್ಪಣಗಳನ್ನೂ ಮಾಡಿದೆವು.ಅಲ್ಲಿಯೇ ಒಂದೆಡೆ ಬಿಸಿಲಿಗೆ ಮೈಯೊಡ್ಡಿ ಮರಳಿನಲ್ಲಿ ಕುಳಿತೆವು... ನಮ್ಮ ಆಚಾರ್ಯರಾದ ಕೇಶವ ದೀಕ್ಷಿತರು ತಮಿಳಿನಲ್ಲಿ ಮಾನಸದ ಐತಿಹ್ಯವನ್ನು ತಿಳಿಸಿದರು ...



ಈ ಮಾನಸದ ಹಿರಿಮೆ ಎಷ್ಟು ಹೇಳಿದರೂ ಇನ್ನೂ ಮಿಕ್ಕಿರುತ್ತದೆ.ಇಲ್ಲಿ ಮಾಡುವ ಸ್ನಾನ,ಅನುಶ್ಥಾನ, ಮಾನಸ ಪರಿಕ್ರಮಣೆ,ದೊಡ್ಡ ಸಾಧನೆಯಾಗಿ ಪರಿಣಮಿಸಿ ಸತ್ಫಲಗಳನ್ನು ಕೊಡುತ್ತವೆ. ಈ ಸರೋವರ ಒಂದು ಶಕ್ತಿಪೀಠ! ದಕ್ಷ ಯಜ್ಞ ಸಮಯದಲ್ಲಿ ತನ್ನ ತಂದೆ ಮಾಡಿದ ಅವಮಾನವನ್ನು ಸಹಿಸಲಾರದೆ ಪಾರ್ವತೀದೇವಿ ಪ್ರಾಣತ್ಯಾಗ ಮಾಡುತ್ತಾಳೆ.ಆಕೆಯ ವಿಯೋಗವನ್ನು ತಡೆಯಲಾರದೆ ಪರಮಶಿವನು ಆಕೆಯ ಕಳಬೇರವನ್ನು ತನ್ನ ಬಳಿ ಇಟ್ಟುಕೊಂಡು ಮೋಹದಿಂದ ವಿಲಪಿಸುತ್ತಿರುತ್ತಾನೆ. ಆ ಕಾರಣವಾಗಿ ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಉಂಟಾದಾಗ ಮಹಾವಿಷ್ಣುವು ಪರಮಶಿವನನ್ನು ಯಥಾಸ್ಥಿತಿಗೆ ತರಲು ಒಂದು ಉಪಾಯ ಹೂಡಿ ಆ ಕಳಬೇರವನ್ನು ಮಾಯವಾಗುವಂತೆ ಮಾಡಲು,ತನ್ನ ಸುದರ್ಶನ ಚಕ್ರದಿಂದ ಅದನ್ನು ತುಂಡು ತುಂಡಾಗುವಂತೆ ಮಾಡುತ್ತಾನೆ.ಸುದರ್ಶನ ಚಕ್ರದ ಶಕ್ತಿಯಿಂದ ಛಿದ್ರವಾದ ಪಾರ್ವತೀದೇವಿಯ ಕಳಬೇರದ ಭಾಗಗಳು ಒಂದೊಂದೂ ಒಂದೊಂದು ಕಡೆ ಬೀಳುತ್ತವೆ.ಹಾಗೆ ಈ ಕಳಬೇರದ ಭಾಗಗಳು ಬಿದ್ದ ಪ್ರದೇಶಗಳೆಲ್ಲವೂ ಶಕ್ತಿಪೀಠಗಳಾಗಿ ಪರಿಣಮಿಸಿವೆ..ಹೀಗೆ ಪ್ರಸಿದ್ಧಿಗೆ ಬಂದ ೫೧ ಶಕ್ತಿಪೀಠಗಳಲ್ಲಿ ಮಾನಸ ಸರೋವರವೂ ಒಂದು ..ಇಲ್ಲಿ ಸತೀದೇವಿಯ ಬಲಗೈ ಬಿತ್ತಂತೆ. ಈ ಪೀಠಕ್ಕೆ ಆಗ ದೇವೀ ಸಾನಿಧ್ಯ ಐಕ್ಯವಾಯಿತು. ಇಲ್ಲಿ ನೆಲಿಸಿರುವ ಶಕ್ತಿಸ್ವರೂಪದ ಹೆಸರು "ದಾಕ್ಷಾಯಣಿ"..ಪ್ರತಿಯೊಂದು ಶಕ್ತಿಪೀಠದಲ್ಲಿಯೂ ಶಕ್ತಿಸೇವೆ ಮಾಡುವ ಭೈರವ ಇರುತ್ತಾನೆ. ಇಲ್ಲಿರುವ ಭೈರವನ ಹೆಸರು "ಹರ"..ಇಲ್ಲಿ ನಿರ್ದಿಷ್ಟವಾದ ಪೀಠ ಎಂದು ಯಾವದೂ ಕಾಣಿಸುವುದಿಲ್ಲ.ಮಾನಸ ಸರೋವರವೇ ಒಂದು ಶಕ್ತಿಪೀಠ.ಅಂತೆಯೇ ಇಲ್ಲಿಗೆ ಬಂದವರಿಗೆ ವಿಶ್ವ ಶಕ್ತಿ (ಕಾಸ್ಮಿಕ್ ಎನರ್ಜಿ) ಯ ಅನುಭವವಾಗುತ್ತದೆ. ಇಲ್ಲಿ ಅನಂತವಾದ ಆಧ್ಯಾತ್ಮಿಕ ತರಂಗಗಳು ಅನುಭವಕ್ಕೆ ಬರುತ್ತವೆ.ಅದನ್ನು ವಿವರಿಸಲು ಅಸಾಧ್ಯ... ಅನುಭವಜನ್ಯ... ಸತ್ಯ. ಒಟ್ಟಿನಲ್ಲಿ ಹೇಳುವುದಾದರೆ ಈ ಪ್ರದೇಶದಲ್ಲಿ ಸಂಚರಿಸಿದವರಿಗೆ ಔನ್ನತ್ಯ,ಉತ್ತಮತೆ ಎರಡೂ ಲಭಿಸುತ್ತವೆ ಎಂದು ನಾನು ಹೇಳಬಲ್ಲೆ. ಪ್ರತೀ ದಿನವೂ ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಸೂಕ್ಷ್ಮ ಶರೀರದಲ್ಲಿ ಬಂದು ಸ್ನಾನ ಮಾಡಿ ಹೋಗುತ್ತಾರೆ ಎಂದು ಅರ್ವಾಚೀನ ಪರಂಪರೆಯ ನಂಬಿಕೆ.ಅಂತಹ ಪರಂಪರೆ ನಮ್ಮಲ್ಲಿ ಈಗಲೂ ಅನೂಚಾನವಾಗಿ ಆಚರಣೆ ಇರುವುದರಿಂದ ಈ ನೀರಿನಲ್ಲಿ ಸ್ನಾನ ಮಾಡಿದವರಿಗೆ ದಿವ್ಯತೆ ಲಭಿಸುತ್ತದೆ.ಇಂತಹ ದಿವ್ಯವಾದ ಮಾನಸಿಕ ತೃಪ್ತಿ ನನಗೆ ಈ ವರೆಗೆ ಲಭಿಸಿಲ್ಲ ..ಖಂಡಿತಾ ಸಚ್ಚಿದಾಂದ ಸ್ಥಿತಿಯನ್ನು ಅನುಭವಿಸಬಹುದು ಎಂದು ನಾನು ಹೇಳಬಲ್ಲೆ.ಇದನ್ನು ಅನುಭವಿಸಿದವರಿಗೆ ಇದಕ್ಕಿಂತಲೂ ಮಿಗಿಲಾದ ಸ್ವರ್ಗ ಭೂಮಿಯ ಮೇಲೆ ಇಲ್ಲ ಎಂದನಿಸಬಹುದು. ಈ ಮಾನಸ ಸರೋವರ ಯಾತ್ರೆ ನೆಹರೂರವರಿಗೆ ತೀರದ ಬಯಕೆಯಾಗಿಯೇ ಉಳಿದು ಹೋಯಿತಂತೆ ..ಅವರ ಸರ್ಕಾರದ ಕಾಲದಲ್ಲಿ ನಮ್ಮ ಭಾರತ ಮಾತೆಯಿಂದ ಬೇರ್ಪಡಿಸಿದ ಆ ಮನುಷ್ಯನಿಗೆ ಹೇಗೆ ಈ ಯೋಗ ಲಭ್ಯವಾಗಬಹುದು?





Friday, September 11, 2009

ಮಾನಸ ಸರೋವರ ಯಾತ್ರೆ -೯


ಕನಸುಗಳನ್ನು ಬೆನ್ನಟ್ಟಿ ಹೋಗುವುದೇ ಜೀವನ…ಈ ರೀತಿ ಆಸೆಯಿಂದ ಅರಸಿಹೋದ ಕನಸೊಂದು ನನಸಾದಾಗ..ನನಸಾದ ಆ ಕ್ಷಣದ ನೆನಪು ಉಳಿಯುವುದು ಚಿರಕಾಲ.ಆ ದಿನ ೦೨-೦೭-೨೦೦೯ ಗುರುವಾರ. ನನ್ನ ಜೀವನದಲ್ಲಿ ಹಲವು ತಿರುವುಗಳಿಗೆ, ಸಂತೋಷಗಳಿಗೆ ಸಾಕ್ಷಿಯಾದ ದಿನ.ನಾನು ಎಂದೋ ಕಂಡ ಕನಸು ಬಯಸದೇ ಒದಗಿ ಬಂದ ದಿನ ... ಇಂದು ಮಾನಸ ಸರೋವರದ ದರ್ಶನ. ಬೆಳಿಗ್ಗೆ ೮.೦೦ ಘಂಟೆ. ಇಂದಿನ ಪ್ರಯಾಣವನ್ನು ನೆನೆಸಿಕೊಂಡು ತುಂಬಾ ಕಾತುರವಿದ್ದ ದಿನ.ನಿನ್ನೆ ಮಧ್ಯರಾತ್ರಿ ವರೆಗೆ ಇದ್ದ ಆಯಾಸ ಇಂದು ಕೊಂಚವೂ ಗೊತ್ತಾಗುತ್ತಿರಲಿಲ್ಲ. ಇದಕ್ಕೆ ಕಾರಣ ನನ್ನ ಮಾನಸಿಕ ಸ್ಥಿತಿ ಇರಬಹುದುದು.ಏನೇ ಇರಲಿ.ಬೆಳಿಗ್ಗಿನ ತಿಂಡಿ ಆಗಿ (ಎಂದಿನಂತೆಯೇ ಬ್ರೆಡ್ ಜ್ಯಾಮ್) ಕಾರಿನಲ್ಲಿ ಮಾನಸ ಸರೋವರಕ್ಕೆ ಪ್ರಯಾಣ.ಪರ್ಯಂಗ್ ನಿಂದ ಮಾನಸಕ್ಕೆ ಸುಮಾರು ೧೫೦ ಕಿಲೋ ಮೀಟರ್ ದೂರ ಅಂದಾಜು ೭ ಘಂಟೆಯ ಪ್ರಯಾಣ.ನಮ್ಮ ಪ್ರಯಾಣದ ದಿವಸಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಪ್ರಯಾಣ.ಬೆಳಿಗ್ಗೆ ೧೦.೩೦ ಕ್ಕೆ ಹೊರಟೆವು...
ಸುಮಾರು ಮಧಾಹ್ನ ೧.೩೦ಕ್ಕೆ ಕೈಯಲ್ಲಿದ್ದ ಒಂದೊಂದು ಆಪಲ್ ತಿಂದು ಊಟದ ಶಾಸ್ತ್ರ ಮುಗಿಸಿದೆವು.ಸಂಜೆ ೪.೦೦ ಘಂಟೆಗೆ ಡಾರ್ಚಿನ್ ಎಂಬ ಸಣ್ಣ ಹಳ್ಳಿಯನ್ನು ಸೇರಿದೆವು..ಇಲ್ಲಿ ಫೋನ್ ಸಂಪರ್ಕ ಇದೆ ಇನ್ನು ಮುಂದಕ್ಕೆ ಇಲ್ಲ ಎಂದು ಪಾಂಡೆ ತಿಳಿಸಿದರು.ಇಲ್ಲಿಂದ ಮಾನಸ ಸರೋವರ ೨೦ ಕಿಮೀ ದೂರದಲ್ಲಿದೆ. ನಾನು ಈ ದಿನ ನಮ್ಮ ಮನೆಗೆ ಮತ್ತು ನನ್ನ ತಮ್ಮ ಎಲ್ಯದ್ಕ ಮಹೇಶನಿಗೆ ಫೋನ್ ಮಾಡಿ ಪ್ರಯಾಣದ ಮುಂದಿನ ವಿವರಗಳನ್ನು ತಿಳಿಸಿದೆ ಮತ್ತೆ ನಮಗೆ ಫೋನ್ ಸಂಪರ್ಕ ಆಗಬೇಕಾದರೆ ೨೦ ದಿನಗಳ ನಂತರವೇ.
ನಮ್ಮ ಭಾರತೀಯ ಕಾಲಮಾನ ಪ್ರಕಾರ ಸಂಜೆ ಸುಮಾರು ೬ ಘಂಟೆ . ಸೂರ್ಯಾಸ್ತದ ಸಮಯ ..ಇಲ್ಲಿನ ಸಮಯ ೯.೩೦ ಆಗಿತ್ತು.. ನಾನು ಮಾನಸ ಸರೋವರದ ತಟದಲ್ಲಿ .... ಸಮುದ್ರದ ಬದಿಗೆ ಬಂದ ಅನುಭವ.ಮೈ ಕೊರೆಯುವ ಚಳಿ ಆಗಸದಲ್ಲಿ ಮೋಡ.ಒಂದೆಡೆ ಸೂರ್ಯಾಸ್ತ. ನಾನು ಆ ಕ್ಷಣ ವಾಸ್ತವ ಲೋಕವನ್ನೇ ಮರೆತಿದ್ದೆ.. ಪೂರ್ವ ಭಾಗದಲ್ಲಿ ಮೋಡಗಳು ಹಿಮಾಲಯವನ್ನು ಮುತ್ತಿಕ್ಕುತ್ತಾ ಇದೆ.ಪಶ್ಚಿಮದಲ್ಲಿ ಸೂರ್ಯನು ಅಸ್ತಮಿಸುವ ಸಮಯ.. ಒಂದೇ ಎರಡೇ.ನಾನು ಎಲ್ಲದಕ್ಕೂ ಬೆರಗಾಗಿ ನಿಂತಲ್ಲಿಯೇ ಒಂದು ಸುತ್ತು ತಿರುಗಿದೆ ..ಎಂಥಹ ಪ್ರಾಕೃತಿಕ ವರ್ಣನೆ ???ಅದ್ಭುತ ...ನಾನು ನಾನೆಂಬುದು ಇನ್ನು ಇಲ್ಲ ಎಂಬಂತೆ ಭಾಸವಾಯಿತು.ಎಲ್ಲವೂ ನಿನ್ನೊಳಗೆ ...ಕವಿಗಳ ಲೇಖನಿಯು ತಾನಾಗಿಯೇ ಬರೆಯಬಹುದು ಈ ಸಮಯದಲ್ಲಿ ...
ಈಗಲೋ ಆಗಲೋ ಹನಿಯಾಗುವಂತೆ ಆ ಮೋಡ ನೆಲ ನೋಡುತ್ತಿದೆ.. ಮಾನಸ ಸರೋವರಕ್ಕೆ ಹೋಗಿಬ೦ದವರಿಗೆಲ್ಲಾ ಗೊತ್ತು, ಈ ಪ್ರಯಾಣ ಎಷ್ಟು ಕಷ್ಟಕರವಾದದ್ದು ಅ೦ತ. ಆದರೂ, ಸರೋವರ ನೋಡಿದಾಗ ಎಲ್ಲಾ ಮರೆತುಹೋಯಿತು.ನನ್ನ ದೊಡ್ಡದೊಂದು ಆಸೆ ನೆರವೇರಿತು. ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ.. ಮಾನಸ ಸರೋವರ, ಕೈಲಾಸ ಪರ್ವತಗಳು ಇಲ್ಲಿಂದ ಏಕಕಾಲದಲ್ಲಿ ಕಾಣಿಸುತ್ತವೆ. ಮಾನಸ ಸರೋವರ ವೀಕ್ಷಕರಿಗೆ ಈ ಹಂತದಲ್ಲಿ ಶಿವದರ್ಶನದ ಅಪೂರ್ವಾನುಭವ. ಆಗ ಮಾನಸ ಸರೋವರ ವೀಕ್ಷಿಸಿದ ಧನ್ಯತೆ ಸಿಗುವುದು...ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.. ಅಷ್ಟರಲ್ಲಿ ನೋಡುನೋಡುತ್ತಿದ್ದಂತೆಯೇ ಕತ್ತಲಾಯಿತು. ಮಂಜು ಮುಸುಕಿದ್ದ ರಾತ್ರಿ ಕುರುಡಾಗಿತ್ತು. ಕೆಲವೇ ಅಡಿಗಳ ದೂರದಲ್ಲಿರುವ ವಸ್ತುಗಳೂ ಕಾಣುತ್ತಿರಲಿಲ್ಲ. ..
ನಾವು ಬರುವಾಗ ಸಮಯ ತುಂಬಾ ಮೀರಿದ್ದರಿಂದ ಇಷ್ಟೇ ನೋಡಲಾಯಿತು.. ನಾವು ಇಲ್ಲಿ ರುದ್ರ ಪಾರಾಯಣದ ನಿಮಿತ್ತ ೪ ದಿವಸಗಳ ಕಾಲ ತಂಗಲಿದ್ದೇವೆ. ಆದರಿಂದ ನಿಧಾನವಾಗಿ ಮಾನಸದ ವರ್ಣನೆಯನ್ನು ಸವಿಯೋಣವೆಂದು ನಮಗಾಗಿ ಡಾರ್ಚಿನ್ ನಲ್ಲಿ ಕಾದಿರಿಸಿದ ವಸತಿಗೃಹಕ್ಕೆ ಕಾರಿನಲ್ಲಿ ಹೊರಟೆ. ಕೊರೆಯುವ ಆ ಚಳಿಯಲ್ಲಿ ಸವಿ ಪಯಣದ ಆಯಾಸವನ್ನು ಪರಿಹರಿಸಿ ಗಾಢ ನಿದ್ದೆಗೆ ನಾಂದಿ ಹಾಡಿತು.

Thursday, September 3, 2009

ಮಾನಸ ಸರೋವರ ಯಾತ್ರೆ -೮ .


ನನ್ನ ಕನಸಿನ ಪಯಣ......ನಾನು 'ಕ೦ಡದ್ದು' ತಾವಾಗೇ ಮೂಡಿದ 'ಕನಸು'ಗಳನ್ನು! ನಾನಾಗೇ ಕ೦ಡುಕೊ೦ಡ ಕನಸುಗಳೊ೦ದಿಗೆ ನಿದ್ದೆಗೆ ಜಾರುವ ನಾನು ಕೆಲವೊಮ್ಮೆ ತಾವಾಗೇ ಮೂಡುವ, 'ನನ್ನ'ನ್ನೇ ಗೌಣವಾಗಿಸಿ ತನ್ನದೇ ರೀತಿಯಲ್ಲಿ ನಿರ್ದೇಶಿತವಾಗುತ್ತಿರುವ 'ಕನಸು'ಗಳನ್ನು ಹೊತ್ತು ಮೇಲೇಳುತ್ತೇನೆ... ನಿನ್ನೆ ನಾ ಕಂಡ ಪ್ರಕೃತಿ ಮಾತೆಯ ಸೌಂದರ್ಯ.. ಮನಸ್ಸು ಮಾತ್ರ ಅಲ್ಲೇ ಇದೆ....ನಾನು ಹಾಸಿಗೆಯಲ್ಲಿ.. ಮುಂಜಾನೆಯಲ್ಲಿ ಬೆಳಕನ್ನು ಚೆಲ್ಲಿ ಬಂದ ಸೂರ್ಯ ನಮಗಾಗಿ ಬೆಚ್ಚನೆಯ ಕಿರಣ ಕಣ್ಗಳಿಗೆ ಸೋಕಿ ತಂತು ಖುಷಿಯ ಹಿತವಾಗಿ ಮೋಡವೆಲ್ಲ ಸರಿದು ಕಿರುನಗೆಯ ಬೀರಿದವು ...ಸಮಯ ಬೆಳಿಗ್ಗೆ ೮.೦೦ ಘಂಟೆ.ಮುಂದಿನ ಪಯಣ ಪರ್ಯಂಗ್ ಎಂಬ ನಗರಕ್ಕೆ.ನಾವಿರುವ "ಸಗಾ " ಎಂಬ ನಗರದಿಂದ ೩೫೦ ಕಿಲೋಮೀಟರ್ ದೂರ. ಬೆಳಗ್ಗಿನ ಊಟ ಉಪಾಹಾರ ೧೦ ಘಂಟೆಗೆ ಮುಗಿಸಿಕೊಂಡು ನಾವು ಹೊರಟೆವು..ಹೊರಡುವಾಗ ನಾ ಕಂಡ ಪ್ರಕ್ರತಿಯ ತಾಣಕ್ಕೆ ನಮಿಸುತ್ತಾ ಇನ್ನೊಮ್ಮೆ ನಮ್ಮ ಸಂಪರ್ಕ ಯಾವಾಗಲೋ ಎಂದು ಬೇಸರದ ಮನಸ್ಸಿನಿಂದ ಹೊರಟೆ.. . .. ಬೋಳುಗುಡ್ಡೆ ಎತ್ತಲೂ ಕಾಣುತ್ತಿದ್ದವು.ಅದುವರೆಗೆ ಕಾಣುತ್ತಿದ್ದ ಸಣ್ಣ ಸಣ್ಣ ಜಲಾಶಯಗಳು ಪ್ರಕೃತಿ ಸೌಂದರ್ಯಗಳು ಯಾವದೂ ಕಾಣಸಿಗಲಿಲ್ಲ.ಮರುಭೂಮಿಯಂತೆ ಕಂಡು ಬರುತ್ತಿತ್ತು..ದಾರಿ ಮಧ್ಯೆ ಕೆಲವು ಕಡೆ ಮರಳಿನಿಂದ ನಮ್ಮ ಕಾರಿನ ಟಯರು ಹೂತು ಹೋಗುತ್ತಿತ್ತು.ನಂತರ ಡ್ರೈವರ್ ಫೋರ್ವ್ಹೀಲ್ ಹಾಕಿ ಎಬ್ಬಿಸಿ ಕಾರನ್ನು ಚಾಲನೆ ಮಾಡುತ್ತಿದ್ದ.ಆಗ ನಾವು ಅವನಿಗೆ "ಭೇಷ್ " ಎಂದು ಬೆನ್ನು ತಟ್ಟುತ್ತಿದ್ದಾಗ ಅವನಿಗೆ ಖುಷಿಯಾಗುತ್ತಿತ್ತು..ಏಕೆಂದರೆ ನಮಗೆ ಟಿಬೆಟ್ ಭಾಷೆ ಬರುತ್ತಿರಲಿಲ್ಲ.ಕೇವಲ ಕೈ ಸನ್ನೆ ಮಾತ್ರ ನಮ್ಮ ಮತ್ತು ಅವನ ನಡುವಿನ ಭಾಷೆಯಾಗಿತ್ತು.. ಈ ಪ್ರಯಾಣ ಮಾತ್ರ ನಮಗೆ ತುಂಬಾ ಬೋರ್ ಹಿಡಿಸಿತ್ತು.ಕಾರಣ ಪ್ರಯಾಣದ ದೂರ ನಾವು ಈ ವರೆಗೆ ಒಂದೊಂದು ದಿನ ಕ್ರಮಿಸಿದ್ದರಿಂದ ಹೆಚ್ಚಿತ್ತು.. ಆದರೂ ನಾವು ಪರಸ್ಪರ ಜೋಕ್ ಮಾಡಿಕೊಂಡು ಕಾಲ ಕಳೆದೆವು.ಕೆಲವು ಕಡೆ ದಾರಿ ಹೇಗಿತ್ತೆಂದರೆ ಕಲ್ಲುಗುಡ್ಡಗಳ ಮೇಲೆ ಕಾರು ಹೋಗುತ್ತಿದ್ದಾಗ ನಮ್ಮ ಸೊಂಟಕ್ಕೆ ಒಂದೊಂದು ಬದಿಯಿಂದಲೂ ಹೊಡೆದ ಹಾಗೆ ಆಗುತ್ತಿತ್ತು.ಆಗ ನಮ್ಮ ಊರಿನ ಡಾಮರು ರಸ್ತೆ ನೆನಪಾಯಿತು. ಅಂಥಹ ರಸ್ತೆಯಲ್ಲಿ ಕಾರು ಚಾಲನೆ ಮಾಡುವುದು ಸಾಹಸವೇ ಸರಿ.. ಸುಮಾರು ಮಧ್ಯಾಹ್ನ ೨.೩೦ ರ ಸಮಯ. ದಾರಿ ಮಧ್ಯೆ ಕಾರನ್ನು ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಕ್ಕೊಂಡೆವು ...ಕೈಯಲ್ಲಿದ್ದ ಒಂದೊಂದು ಆಪಲ್ ಹಣ್ಣನ್ನು ತಿಂದೆವು.. ಸುಮಾರು ಒಂದು ಘಂಟೆಯಷ್ಟು ಸಮಯ ಅಲ್ಲೇ ಹರಟೆ ಹೊಡೆದೆವು.ಎಲ್ಲಾ ೩೨ ಮಂದಿ ಚಾರಣಿಗರು ಮತ್ತು ಚೆಟ್ಟಿಯಾರ್ ಮನೆ ಮಂದಿ ಕೂತು ನಮ್ಮ ಊರಿನ ಬಗ್ಗೆ ಪರಸ್ಪರ ಚರ್ಚೆ ಮಾಡಿದೆವು.ಇಷ್ಟರವರೆಗೆ ನಮಗೆ ಕೂತು ಮಾತಾಡಲೂ ಸಮಯವಿರಲಿಲ್ಲ ...ಯಾಕೆಂದರೆ ಪ್ರಕೃತಿ ಮಾತೆಯು ನಮ್ಮನ್ನು ಅಷ್ಟು ಬ್ಯುಸ್ಸಿ ಇರುವಂತೆ ಮಾಡಿದ್ದಳು..ಬಹುಶ;ಈಗ ನೀವೆಲ್ಲ ಮಾತಾಡಿ ..ಮತ್ತೆ ನನ್ನ ವರ್ಣನೆಯನ್ನ ತೋರಿಸುವೆ ಎಂಬಂತೆ ಎಲ್ಲಾ ಸೌಂದರ್ಯಗಳನ್ನು ತನ್ನೊಡಲಿಗೆ ಸೆಳೆದುಕೊಂದಿದ್ದಳು.. ಯಾಕೆಂದರೆ ಇಂದಿಗೂ ಇರುವ ವರ್ಣನೆಯನ್ನು ನಿನ್ನೆಯೇ ತೋರಿಸಿ ಇಂದಿಗೆ ಏನೂ ಇಲ್ಲವೆಂಬಂತೆ ನಿರಾಸೆ ಹುಟ್ಟಿಸಿದ್ದಳು..ನಾವೆಲ್ಲಾ ಪ್ರಯಾಣ ಮುಂದುವರಿಸಿದೆವು.ಪ್ರಯಾಣ ಮಾಡುವಾಗ ನಿದ್ದೆ ತೂಗುತ್ತಿದ್ದರೂ ಕಡಿದಾದ ದಾರಿಯಿಂದಾಗಿ ನಿದ್ರಾ ದೇವಿ ನಮ್ಮ ಬಳಿ ಬರಲು ಹೆದರುತ್ತಿದ್ದಳು.ಈ ಮಧ್ಯೆ ನಮ್ಮಸಹ ಚಾರಣಿಗರಾದ ನಂದಕಿಶೋರ ಅವರಿಗೆ ಈ ಕಡು ದಾರಿಯ ಮೇಲೆ ಪ್ರಯಾಣ ಮಾಡಿ ವಾಂತಿ, ಸುಸ್ತು ಎಲ್ಲಾ ಆಯಿತು..ನಮ್ಮಲ್ಲಿ ಇರುವ ಲಿಂಬೆ ಹುಳಿ ನೀಡಿದಾಗ ವಾಂತಿ ಕಡಿಮೆ ಆಯಿತು.ಸಮಯ ರಾತ್ರಿ ೮ .೩೦ ಒಂದು ಕಡೆ ವಿಶಾಲವಾದ ಸ್ಥಳದಲ್ಲಿ ಕಾರು ನಿಲ್ಲಿಸಿ ಎಲ್ಲರೂ ಸೇರಿ ದೇವೀ ಕವಚವನ್ನು ಪಠಣ ಮಾಡಿದೆವು . ಇಲ್ಲಿ ನಮ್ಮ ಭಾರತದ ಸಮಯ ಪ್ರಕಾರ ಸಂಜೆ.೬.೩೦.. ಸೂರ್ಯಾಸ್ತದ ಸಮಯ.. ಎತ್ತ ನೋಡಿದರೂ ಮರುಭೂಮಿಯಂತೆ ಕಾಣುವ ಗುಡ್ಡಗಳು.ಸೂರ್ಯನ ಅಸ್ತಮಾನವನ್ನು ನೋಡೋಣವೆಂದರೆ ಎಲ್ಲಿಯೂ ಕಾಣದಂತೆ ಮೋಡಗಳು ಮತ್ತು ಗುಡ್ಡಗಳು..ಅಲ್ಲಿ ಲಿಂಬೆಹುಳಿ ಜ್ಯೂಸ್ ಮಾಡಿ ಕುಡಿದಾಗ ಶರೀರದ ಆಯಾಸ ಕಡಿಮೆ ಆಯಿತು. ಅಲ್ಲಿಂದ ಹೊರಟು ಪರ್ಯಂಗ್ ತಲುಪುವಾಗ ರಾತ್ರಿ ೧೧.೩೦ ...ನಂತರ ವಿಶಾಲವಾದ ಬಯಲಿನಲ್ಲಿ ನಮ್ಮ ನಮ್ಮ ಗ್ರೂಪಿಗೆ ಸಾಮ್ರಾಟ್ ಟ್ರಾವೆಲ್ಸ್ ನವರು ನಮಗೆ ಪ್ರತ್ಯೇಕ ಡೇರೆ ಹಾಕಿ ಕೊಟ್ಟರು.ಅಲ್ಲಿ ಕ್ಯಾಂಡಲ್ ಬೆಳಕಿನಲ್ಲಿ ನಾವು ತಂದ ಬ್ರೆಡ್ ಜ್ಯಾಮ್ ತಿಂದು ನೀರು ಕುಡಿದು ನಮ್ಮ ಬ್ಯಾಗನ್ನೇ ತಲೆದಿಂಬು ಮಾಡಿಕೊಂಡು ಮಲಗಿದೆವು.ಸಮಯ ರಾತ್ರಿ ೧.೩೦ ನಿದ್ರೆ ಬರುತ್ತಿರಲಿಲ್ಲ...ನಮ್ಮ ಟೆಂಟ್ ಹಾರಿ ಹೋಗುವ ಹಾಗೆ ಗಾಳಿ ಬೀಸುತ್ತಿತ್ತು. ಮೈ ನಡುಗುವ ಚಳಿ.... ,.ಬಿಸಿರಕ್ತದ ಹುಮ್ಮಸ್ಸಿನಲ್ಲಿ ಹೊರಟ ನಾವು ದಾರಿಯಲ್ಲಿ ಪಟ್ಟ ಪಾಡುಗಳೆಷ್ಟೋ ! ನಾವು ಯಾವ ಬಟ್ಟೆಗಳನ್ನೇ ಧರಿಸಿದರೂ ಆ ಚಳಿ ನಮ್ಮ ಪ್ರತಿಯೊಂದು ಅಂಗವನ್ನೂ ಗಡಗಡನೆ ನಡುಗಿಸಿಬಿಡುತ್ತಿತ್ತು. ಸಣ್ಣಗೆ ಮಳೆ ಬೀಳಲು ಪ್ರಾರಂಭವಾಯಿತು. ಹೊರಗಡೆ ನಾಯಿ ಬೊಗಳುತ್ತಿತ್ತು,ಯಾಕ್ ಗಳು ಪರಸ್ಪರ ಜಗಳವಾದುತ್ತಿದ್ದವು. ಅಂತೂ ಇಂತೂ ಮುಂಜಾನೆ ೪ ಘಂಟೆಯವರೆಗೆ ನಮಗೆ ಯಾರಿಗೂ ನಿದ್ರೆ ಬರಲಿಲ್ಲ.. ಉಸಿರಾಡಿದರೆ ಆವಿ ಬರುವಷ್ಟು, ಕೈ ಕಾಲುಗಳು ಮರಗಟ್ಟಿ ಥರಗುಟ್ಟುವಂತಾ ಚಳಿಯಿತ್ತು... ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೋಲಕ ಮನಸ್ಸನ್ನು ಬೆಚ್ಚಗಾಗಿಸಲು .... ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು....ಶಬ್ದಗಳು ಹಾಗೆಯೇ ಕೊಂಚ ಕಡಿಮೆ ಆಯಿತು. ನಿಧಾನವಾಗಿ ಕಣ್ಣು ಮುಚ್ಚಿದೆ .. .ಮತ್ತೆ ಎಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ .. ಸಾಲುಗಟ್ಟಿ ಕುಳಿತಿವೆ ಕನಸುಗಳು ಮನದ ಬಾಲ್ಕನಿಯಲ್ಲಿ ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ ಇರುಳಿನ ತುಂಬ ಇಣುಕುತ್ತಿವೆ…