ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, August 28, 2009

ಮಾನಸ ಸರೋವರ ಯಾತ್ರೆ -೭

ಸಗಾ... ಇದು ನಮ್ಮ ಚಾರಣದ ೨ನೆ ಪಟ್ಟಣ ....ನೈಲಂನಿಂದ ಸುಮಾರು ೨೦೦ ಕಿಮೀ ದೂರ ...ಇದು ನಾವು ಕಾಣುವ ಕೊನೆಯ ವಸತಿಗೃಹ ....ನೈಲಂನಿಂದ ಬೆಳಿಗ್ಗೆ ೫ ಘಂಟೆಗೆ ಹೊರಟೆವು ...ಪ್ರಯಾಣ ಮಾಡುವಾಗ ದಾರಿ ಮಧ್ಯದಲ್ಲಿ ಪ್ರಕೃತಿಮಾತೆಯ ಫೋಟೋ ತೆಗೆಯುವಾಗ ನಮ್ಮ ಕೈಯಲ್ಲಿ ಕ್ಯಾಮರ ನಡುಗುತ್ತಿತ್ತು..ಚಳಿಯ ತೀವ್ರತೆ ಅಷ್ಟಿತ್ತು.ಆದರೂ ಆ ಚಳಿಯೂ ಒಂದು ರೀತಿಯ ಮಜಾ ಕೊಡುತ್ತಿತ್ತು..೭ ಘಂಟೆಯ ಹೊತ್ತಿಗೆ ನಮ್ಮ ಕಾರು ಒಂದು ವಿಶಾಲವಾದ ಬಯಲಿನಲ್ಲಿ ನಿಂತಿತು.ಬ್ರೆಡ್ ಜ್ಯಾಮ್ ತಿಂದು ಮುಂದೆ ಹೊರಟೆವು.. ನಮ್ಮ ಕಾರಿಗೆ ಹೋಗಲು ನಿಶ್ಚಿತವಾದ ದಾರಿ ಇರಲಿಲ್ಲ.ನಾವು ಹೋಗ ಬೇಕಾದ ಸ್ಥಳವನ್ನು ನಮ್ಮ ಡ್ರೈವರ್ ದಿಕ್ಸೂಚಿ ಮತ್ತು ಮ್ಯಾಪ್ ಸಹಾಯದಿಂದಿಂದ ತಿಳಿದುಕೊಂಡು ಚಾಲನೆ ಮಾಡುತ್ತಿದ್ದ.. ಮಧ್ಯಾಹ್ನ ೨.೩೦ಕ್ಕೆ ಸರಿಯಾಗಿ ಸಗಾ ನಗರವನ್ನು ತಲುಪಿದೆವು ಹೊಟ್ಟೆ ಹಸಿವು..ತಂಡದ ಅಡುಗೆ ನಂತರ ತಯಾರಾಗಬೇಕಷ್ಟೇ.ಎಲ್ಲಿ ನೋಡಿದರೂ ಮಾಂಸದ ಹೋಟೆಲ್.ನಮ್ಮ .ನನಗೆ ಒಂದು ಕಿಮೀ ನಡೆದಾಗ ಒಂದು ಹಣ್ಣಿನ ಅಂಗಡಿ ಕಂಡಿತು....ಅಂಗಡಿಯ ಒಳ ಹೊಕ್ಕೆ....ಒಂದು ಕೆಜಿ ಆಪಲ್ ತೆಗೆದು ಕೊಂಡೆ.. ಬೆಲೆ ಎಷ್ಟು ಎಂದು ಕೇಳಿ...ನಮ್ಮ ೬೦೦ ರೂಪಾಯಿ.. ಅಂದರೆ ಅಲ್ಲಿಯ ಸುಮಾರು ೮೦ ಯುವಾನ್.ಆದರೆ ಏನ್ಮಾಡೋದು.ಹಸಿವು ಬೇರೆ ...ವಿಧಿ ಇಲ್ಲದೆ ತೆಗೆದುಕೊಂಡೆ..ಬರುವಾಗಲೇ ತಿಂದುಕೊಂಡು ಬಂದೆ..ನಮ್ಮ ವಸತಿ ಗೃಹ ತಲುಪುವಾಗ ಖಾಲಿ ಪ್ಲಾಸ್ಟಿಕ್ ಚೀಲ ಮಾತ್ರ ಇತ್ತು.....ಬಂದು ರೂಮಿನಲ್ಲಿ ಬಂದು ಮಲಗಿದೆ.ಚಳಿ ಬೇರೆ ..AC ಚಾಲೂ ಆದರೂ ಚಳಿ ಕಮ್ಮಿ ಆಗಲೇ ಇಲ್ಲ..ಕುರ್ಚಿಯಲ್ಲ್ಲಿ ಕೂತು ಟಿವಿ ನೋಡ್ತಾ ಇದ್ದ ನನಗೆ ನಿದ್ದೆ ಬಂದದ್ದೆ ಗೊತ್ತಾಗಲಿಲ್ಲಾ.. ಅಷ್ಟು ಆಯಾಸ ಆಗಿತ್ತು..ಕಾರಿನ ಪ್ರಯಾಣ. .ಸಂಜೆ ೫ ಘಂಟೆಯ ಸಮಯ..ರೂಮಿನ ಬಾಗಿಲು ತಟ್ಟಿದರು..ನಮ್ಮ ಶೆರ್ಪಗಳು..ಊಟ ತಯಾರಾಗಿದೆ ಎಂದರು..ಸರಿ,ರೂಮಿಗೆ ಊಟ ಬಂತು. ಅನ್ನ ಇಲ್ಲ..ಎರಡು ರೊಟ್ಟಿ.ಪಲ್ಯ.ಟೊಮೇಟೊ ಸೂಪ್ ..ಅಲ್ಲಿಗೆ ಮುಗಿಯಿತು ಊಟ.ಅಷ್ಟೇ ಕೊಡ್ತಾರೆ.ಹಸಿವು ಆಗಿದೆ ಎಂದು ಹೊಟ್ಟೆ ತುಂಬಾ ತಿನ್ನಲು ನಮ್ಮ ಪಾಂಡೆ ಅವರ ಅನುಮತಿ ಇಲ್ಲ..ಇವತ್ತಿನಿಂದ ಇನ್ನು ಊಟದ ಸಮಯ ಹೀಗೆ..ದಿವಸಕ್ಕೆ ಒಂದು ಊಟ.ಬೆಳಿಗ್ಗೆ ಬ್ರೆಡ್ ಜ್ಯಾಮ್.ರಾತ್ರಿ ಊಟ ಇಲ್ಲ. ಸಂಜೆ ಘಂಟೆ ೬.ಆಯಿತು..ಇವತ್ತು ರಾತ್ರಿ ವಾಕಿಂಗ್.ನಾನು ಕೋಟು ,ಜಾಕಿಟ್,ತಲೆಗೆ ಟೊಪ್ಪಿ,ಒಂದು ಟಾರ್ಚ್ ಎಲ್ಲ ತಯಾರು ಮಾಡಿಕೊಂಡು ಸುಮಾರು 3 ಕಿಮೀ ವಿಶಾಲವಾದ ಬಯಲಿನಲ್ಲಿ ಪಾಂಡೆಯವರ ಜೊತೆ ಹೊರಟೆ..ಯಾವ್ದು ಗುಡ್ಡ? ಯಾವ್ದು ದಾರಿ ಒಂದೂ ಗೊತ್ತಾಗಿಲ್ಲ.ಅಂತೂ ಒಂದು ಸಣ್ಣ ತೊರೆ ಬಳಿ ಕರೆದುಕೊಂಡು ಹೋದರು.ಪ್ರಾರಂಭಿಸಿದೆವು..ನಾವು ಒಟ್ಟು ೩೨ ಜನ ಇದ್ದ ಕಾರಣ ಏನೂ ಭಯ ಇರಲಿಲ್ಲ.ಇದರಲ್ಲಿ ನಾವು ನೇರವಾಗಿ ಮೇಲೆ ಹೋಗಬೇಕು.ಎಂದು ಹೇಳಿದರು..ಸರಿ ಹೊರಟಾಯಿತು..ನಾವು ನಮ್ಮ ಶರೀರದ ಎಲ್ಲ ಅಂಗಗಳನ್ನು ಮುಚ್ಚಿಕೊಂಡು ಹೋದ ಕಾರಣ ನಮಗೆ ಚಳಿಯ ತೀವ್ರತೆ ತಿಳಿಯಲಿಲ್ಲ.ಸಮಯ ರಾತ್ರಿ ೮.೩೦...ನಮ್ಮ ಚಾರಣ ಪ್ರಾರಂಭವಾಯಿತು. ಆ ತೊರೆಯಲ್ಲಿ ಇದ್ದ ಸುಮಾರು ೧ ಮೀಟರ್ ಎತ್ತರದ ಬಂಡೆಕಲ್ಲುಗಳನ್ನು ಒಂದೊಂದೇ ಏರಲು ಒಂದು ಕಡೆ ತುಂಬಾ ಎತ್ತರದಿಂದ ನೀರು ಬೀಳುತ್ತಿತ್ತು.ಕ್ಯಾಮರಾದಲ್ಲಿ ಇದನ್ನು ಸೆರೆ ಹಿಡಿಯೋಣ ಎಂದರೆ ನಮ್ಮ ಯಾವ ಕ್ಯಾಮರಾವೂ ಚಳಿಗೆ ಕೆಲಸ ಮಾಡುತ್ತಿರಲಿಲ್ಲ.ತುಂಬಾ ನಿರಾಸೆ ,ಬೇಸರವಾಯಿತು..ಸುಮಾರು ೨ ಕಿಮೀ ದೂರ ನಾವು ತೊರೆಯ ಮಧ್ಯದಲ್ಲಿಯೇ ಸಾಗಿದೆವು.ಒಂದು ಎತ್ತರದ ಪ್ರದೇಶ ಕಂಡಿತು..ಶುಕ್ಲಪಕ್ಷದ ಚಂದ್ರನ ಬೆಳಕಿನಲ್ಲಿ ಸುತ್ತ ಮುತ್ತಲಿನ ಪ್ರದೇಶಗಳು ,ಗುಡ್ಡಗಳು ,ಪರ್ವತಗಳು.ತುಂಬಾ ಸುಂದರವಾಗಿ ಕಂಡಿತು.ಹಿಮದಲ್ಲಿ ತೋಯ್ದ ಎಲ್ಲ ಪ್ರದೇಶಗಳು ಮಿನುಗು ಹುಳುಗಳ ಅಲಂಕಾರ,ಪ್ರಕೃತಿ ಮಾತೆಯು ನೈಸರ್ಗಿಕ ಆಭರಣ ತೊಟ್ಟು ನಮ್ಮ ಎದುರೇ ಬಂದಳೇ? ಎನ್ನಿಸುವಷ್ಟು ಭಾಸವಾಯಿತು..ಈ ಸನ್ನಿವೇಶ ಎಷ್ಟು ಹೇಗೆ ಯಾವ ರೀತಿಯಲ್ಲಿ ವರ್ಣಿಸಿದರೂ ಕಡಿಮೆಯೇ.......ಸುಮಾರು ಒಂದು ಘಂಟೆಯಷ್ಟು ಸಮಯ ಅಲ್ಲೇ ಕಳೆದು ನಾವು ಬಂದ ದಾರಿಯಲ್ಲೇ ಕೆಳಗೆ ಇಳಿಯುತ್ತಾ ಬಂದೆವು..ಕೆಲವು ಜನ ಅಲ್ಲಿಯೇ ಜಾರಿ ಬಿದ್ದರು..ಪ್ರತಿಯೊಬ್ಬರಿಗೂ ಒಬ್ಬೊಬ್ಬ ಶೇರ್ಪಾ (ಅಂಗರಕ್ಷಕ) ಇದ್ದ ಕಾರಣ ದೊಡ್ಡ ಸಮಸ್ಯೆ ಯಾರಿಗೂ ಆಗಲಿಲ್ಲ. ಆದರೆ ಉಸಿರಾಟದ ತೊಂದರೆ.....ಆಮ್ಲಜನಕದ ಕೊರತೆಯಿಂದಾಗಿ ನಮಗೆ ಏದುಸಿರು ಬಿಡಬೇಕಾದ ಪರಿಸ್ಥಿತಿ ಕೆಲವೊಮ್ಮೆ ಬರುತ್ತಿತ್ತು.ಆದರೂ ಏನೂ ತೊಂದರೆ ಆಗಲಿಲ್ಲ.. ನಾವು ಕೆಳಗೆ ಇಳಿದು ವಿಶಾಲವಾದ ಬಯಲಿನಲ್ಲಿ ನಡೆಯುತ್ತಾ ಬಂದು ನಮ್ಮ ರೂಮಿಗೆ ತಲುಪುವಾಗ ಮಧ್ಯರಾತ್ರಿ ೩ ಘಂಟೆ.ಬಂದು ಸ್ವಲ್ಪ ಟೀ ಕುಡಿದು ಮಲಗಿದೆವು.ಈ ಸಮಯದಲ್ಲಿ ನಮ್ಮ ಆಹಾರ ಸಮಯ ಎಲ್ಲಾ ಏರುಪೇರು.ನಮ್ಮ ಶರೀರದ ಕೊಬ್ಬು ಬೊಜ್ಜು ಎಲ್ಲಾ ಅರ್ಧಕ್ಕೇ ಅರ್ಧ ಇಳಿದು ಹೋಗಿತ್ತು. ಮಲಗಿದ ನಾವು ಪ್ರಕೃತಿ ಮಾತೆಯನ್ನು ನಮ್ಮಷ್ಟಕ್ಕೆ ಪರಸ್ಪರ ನಮಗಾದ ಅನುಭವವನ್ನು ಹಂಚಿಕೊಂಡೆವು..ಅನನ್ಯವಾದ ಪ್ರಕೃತಿ ಮಾತೆ ನಮ್ಮ ಕೈ ತಪ್ಪಿ ಹೋದ ಬಗ್ಗೆ ತುಂಬಾ ಬೇಸರವಾಯಿತು. ಆದರೂ ಆಕೆಯ ವೈಭವ ದರ್ಶನ ನಮಗೆ ಆದದ್ದು ನಮ್ಮ ಭಾಗ್ಯ ,ಅದನ್ನು ಕಾಪಾಡಿಕೊಂಡು ಬಂದ ನಮ್ಮ ಅರ್ವಾಚೀನ ಭಾರತ ಪರಂಪರೆಗೆ ನಮನ ಸಲ್ಲಿಸುತ್ತಾ ಹಾಗೆ ನಿದ್ರೆಗೆ ಜಾರಿದೆವು..

Wednesday, August 12, 2009

ಮಾನಸ ಸರೋವರ ಯಾತ್ರೆ -6

ಮುಂಜಾನೆ ೩ ಘಂಟೆಯ ವಾತವರಣ..ನಮಗೆಲ್ಲ ಮಡಿಕೇರಿ ಚಳಿಯೇ ಮೈ ನಡುಗುತ್ತಿರುವಾಗ ಈ ಚಳಿಯನ್ನು ತಡೆಯಲು ಸಾಧ್ಯವೇ?ರೂಮಿನ ಒಳಗಿನಿಂದಲೇ ಕಿಟಕಿ ತೆರೆದು ನೋಡಿದಾಗ ಒಂದೇ ಕ್ಷಣ ನಮ್ಮ ಫ್ರಿಜ್ ನ ಒಳಗೆ ಹೊಕ್ಕಂತಾಯಿತು. ಆಗಲೇ ಇರುವ ಸ್ವೆಟರ್ ಮೇಲಿಂದ ಮತ್ತೊಂದು ಸ್ವೆಟರ್ ಒಂದು ಕೋಟು ಹಾಕಿದೆ.ಆಗ ಏನೋ ಒಂದು ಸ್ವಲ್ಪ ಮೈ ಬಿಸಿ ಆದ ಅನುಭವ.೪.೩೦ ಕ್ಕೆ ಸೂರ್ಯೊದಯವಾಯಿತು. ಹಲ್ಲುಜ್ಜಿ ಆದ ಮೇಲೆ ನಮಗೆಲ್ಲರಿಗೂ ಒಂದು ಲೀಟರ್ ಸ್ಟೀಲಿನ ಬೋಗುಣಿಯಲ್ಲಿ ತುಂಬಾ ಬಿಸಿಯಾದ ಲೈಟ್ ಚಾ ಮತ್ತು ಒಂದು ಬಿಸ್ಕೆಟ್ ಪ್ಯಾಕ್ ಕೊಟ್ಟರು.ಅಷ್ಟರವರೆಗೆ ಅಷ್ಟು ಚಾ ಕುಡಿಯದೆ ಇದ್ದವ ನಾನು ನೀರು ಕುಡಿದಂತೆ ಕುಡಿದೆ.ಶರೀರ ಒಂದು ರೀತಿ ಬಿಸಿ ಆದ ಅನುಭವ..... ನಂತರ ಪಾಂಡೆ ರವರು ನಮ್ಮನ್ನು ವಾಕಿಂಗ್ ಕರೆದುಹೋಗಲು ಕಾಯ್ತಾ ಇದ್ದರು.ಸಮಯ ೫.೧೫ ಅಷ್ಟರವರೆಗೆ ನಿತ್ಯ ಸ್ನಾನದ ನಂತರ ನಮ್ಮ ಕೆಲಸಗಳು ನಡೆಯುತ್ತಿದ್ದು ಇವತ್ತಿನಿಂದ ಎಲ್ಲ ಸರೀ ಹಿಂದೆಮುಂದೆ.ಅಂತೂ ಪಾಂಡೆ ಜೊತೆಗೆ ಹೆಜ್ಜೆ ಹಾಕಿದೆವು.ಈ ವಾಕಿಂಗ್ ಯಾಕೆಂದರೆ ೪ ದಿವಸಗಳ ನಂತರ ಕೈಲಾಸ ಪರ್ವತ ಪ್ರದಕ್ಷಿಣೆ ಇತ್ತು,ಹಾಗಾದ ಕಾರಣ ನಮ್ಮ ಶರೀರವು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ನಮಗೆ ತಯಾರಿಯನ್ನು ಮಾಡ್ತಾ ಇದ್ದರು.ನಮ್ಮ ಊರಿನಲ್ಲಿ ವಾಕ್ ಮಾಡುವ ರೀತಿ ನಾನು ನಡೆದಾಗ ಪಾಂಡೆ ಸಲಹೆ ಕೊಟ್ಟರು.ಅವರ ಸಲಹೆ ಪ್ರಕಾರ ವಾಕ್ ಮಾಡಿದೆ,ಸುಮಾರು ೨ ಕಿಲೋ ಮೀ.ನಡೆದಾಗ ೧೦೦ ಮೀಟರ್ ಎತ್ತರದ ಗುಡ್ಡ ಎದುರಾಯಿತು.ಇದನ್ನು ಚಾರಣ ಮಾಡಬೇಕೆಂದು ಪಾಂಡೆ ಹೇಳಿದರು. ನನಗೆ ಕುಮಾರ ಪರ್ವತ ಚಾರಣ ಮಾಡಿದಷ್ಟು ಕಷ್ಟ ಆಗಲಿಕ್ಕಿಲ್ಲ ಎಂದು ಗುಡ್ಡ ನೋಡುವಾಗ ಅನಿಸಿತು.ಇರಲಿ ಎಂದು ಆಲೋಚಿಸಿ ೨೫ ಮೀಟರ್ ಗುಡ್ಡ ಏರಿದಾಗ ಒಂದೇ ಸಮನೆ ಉಸಿರಾಟ ಮಾಡಲು ಕಷ್ಟ ಆಯಿತು.ಆಗ ಪಾಂಡೆಯವರು ಅಷ್ಟರಲೀ ಆಮ್ಲಜನಕದ ಕೊರತೆ ಇರುವ ಕಾರಣ ಇಲ್ಲಿಯ ವಾಕಿಂಗ್ ಶೈಲಿ ಈ ರೀತಿ ಎಂದು ಹೇಳಿದರು.ಅವರ ಸೂಚನೆ ಪ್ರಕಾರ ನಡೆದಾಗ ಸ್ವಲ್ಪ ಸುಧಾರಿಸಿದೆ.ಒಂದು ಕ್ಷಣ ಜೀವ ಬಂದಂತಾಯಿತು ನನಗೆ,ಕೊರೆಯುವ ಚಳಿಅಲ್ಲಿಯೂದರೂ ನನಗೆ ಬಾಯಾರಿಕೆ ಸಣ್ಣಗೆ ಇಂಗಿತು.ಮತ್ತೆ ಅಲ್ಲಿಂದ ಹೊರಟಾಗ ಕೆಳಗಿನ ಝಾರಿಯ ಸುಂದರ ಫೋಟೋಗಳನ್ನು ಕ್ಲಿಕ್ಕಿಸಿದೆ.ಪ್ರಕೃತಿ ಮಾತೆಯ ಸೌಂದರ್ಯಕ್ಕೆ ನನ್ನ ಆಯಾಸ ಎಲ್ಲಾ ಮಾಯವಾಯಿತು.ಆಗ ಸುಮಾರು ೬ ಕೀ ಮೀ ನಡೆದಾಗಿತ್ತು.ಇನ್ನೊದು ಬದಿಯಿಂದ ವಾಹನ ಹೋಗುವ ಶಬ್ದ ಕೇಳತೊಡಗಿತು. ಮೇಲೇರಲು ಕಷ್ಟವಾದ ನಂಗೆ ಇಳಿಯಲು ಕಷ್ಟವೇನೂ ಆಗಲಿಲ್ಲ. ನಾವೆಲ್ಲಾ ಗ್ರೂಪ್ ಫೋಟೋ ತೆಗೆದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಕೆಳಗೆ ಇಳಿದೆವು.ಇಂದಿನಿಂದ ನಿತ್ಯ ಈ ವಾಕಿಂಗ್ ಇದೇ ರೀತಿಯಾಗಿ ಇರುತ್ತದೆ ದಯವಿಟ್ಟು ನಮ್ಮೊಡನೆ ಸಹಕರಿಸಬೇಕು ಎಂದು ಪಾಂಡೆಯವರು ನಮ್ಮಲ್ಲಿ ವಿನಂತಿಸಿಕೊಂಡರು.ಮಧ್ಯಾಹ್ನ ಸುಮಾರು ೧೨.೩೦ ಎಲ್ಲರೂ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ನಮ್ಮ ಮಂಚದಲ್ಲಿ ಮಲಗಿದೆವು.ಆಯಾಸಕ್ಕೆ ನಿದ್ರೆ ಹಿಡಿದು ಸಂಜೆ ೬ ಘಂಟೆ ಆದದ್ದೇ ತಿಳಿಯಲಿಲ್ಲ. ನಾವು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಪೇಟೆಯಲ್ಲಿ ಅಡ್ಡಾಡಿ ನಮ್ಮ ಊರಿಗೆ ದೂರವಾಣಿ ಕರೆ ಮಾಡಿ ಇಲ್ಲಿನ ಅನುಭವಗಳನ್ನು ತಿಳಿಸಿದೆವು ...
ರಾತ್ರಿ ೮.ಘಂಟೆ..... ಬಂದು ಊಟದ ಶಾಸ್ತ್ರ ಮಾಡಿದೆವು.ಊಟಕ್ಕೆ ಟೊಮೇಟೊ ಸೂಪ್ ಎರಡು ರೊಟ್ಟಿ ದಾಲ್ ಬೇಯಿಸಿದ ಜೋಳ ಇಷ್ಟು ಬಗೆಯ ಪದಾರ್ಥ ಗಳು ಇದ್ದವು ಅನ್ನ ಒಂದು ಬಿಟ್ಟು. ನಮ್ಮ ಊರಿನ ಗಂಜಿ ಊಟ ಅಂದರೆ ಆಗ ಅಷ್ಟು ಬೆಲೆ ಇದೆ ಎಂದು ಆಗ ಗೊತ್ತಾಯಿತು.ಏನೇ ಆಗಲಿ ಇದ್ದದನ್ನು ತಿಂದಾಯಿತು. .
ಆದರೂ ಪ್ರಕೃತಿಯನ್ನು ನೋಡಿದ ನಮಗೆ ಊಟ ಮಾಡುವಾಗ ಒಂದು ಸಂತೃಪ್ತಿ ಭಾವನೆ ತುಂಬಿ ಬಂದಿತ್ತು.
ಅಹಾ ದೇವರು ಎಲ್ಲಿ ಆಡಗಿದ್ದಾನೆಂದು ಎಷ್ಟು ಚೆನ್ನಾಗಿ ಪ್ರಕೃತಿಯನ್ನು ನೋಡಿ ತಿಳಿಯಬೇಕು. ನಾಸ್ತಿಕನಾಗಲಿ, ಆಸ್ತೀಕನಾಗಲಿ ದೇವರಿದ್ದಾನೆಂದು ಒಪ್ಪಲೇಬೇಕು. ಹೇಗೆ ಅಂದರೆ ಪರಮಾತ್ಮನು ನಮ್ಮ ಈ ದೇಹದಲ್ಲಿಯೇ ಆಡಗಿದ್ದಾನೆ. ಅತ ನಮ್ಮ ಹೃದಯಕಮಲದಿ ನೆಲಿಸಿದ್ದಾನಾ? ತಲೆಯ ಬಹು ಮುಖ್ಯ ಅಂಗ ಮೆದುಳಿನಲ್ಲೋ ಇಲ್ಲಾ ಎರಡು ಹುಬ್ಬಿನ ನಡುವೆಯೋ?? ಹಾಂ..... ಈ ಹುಚ್ಚು ತರ್ಕ ಸಾಕಿನ್ನು. ಆ ಕಣ್ಣಿಗೆ ಕಾಣದ ದೇವರು ಹೊಟ್ಟೆಯೊಳಗೆ ಅಡಗಿದ್ದಾನೆ. ಅವನು ಸಂತೃಪ್ತನಾದರೆ ಮಾತ್ರ ನಾವು ಸಂತೃಪ್ತರು. ಇರುಳಿನಲ್ಲಾಗಲಿ, ಹಗಲಿನಲ್ಲಾಗಲಿ ಶಯನೋತ್ಸವದ ಸಮಯ ಹೊರತುಪಡಿಸಿ, ಅತನನ್ನು ಮರೆಯಲು ಸಾದ್ಯವೇ? ನಾನಾವಿಧದ ವೇಷಗಳು, ಕಡುಕ್ರೂರಿ ಒಡೆಯನಲ್ಲಿ ಮೈಮುರಿವ ದುಡಿತ ಎಲ್ಲವೂ ಹೊಟ್ಟೆಯೊಳಗಿನ ದೇವರ ಕೃಪೆಯಲ್ಲವೆ???

ನೀವೇನು ಹೇಳ್ತೀರಾ?

Friday, August 7, 2009

ಮಾನಸ ಸರೋವರ ಯಾತ್ರೆ-5

ಆಹ್,, ಅಬ್ಬಾ,, ಚಳಿ,,,ಎಂದು ಬದಿ ತಿರುಗಿಸುವಾಗ " ಹಲೋ ಗಣೇಶ್ "ಎಂದು ಎರಡು ಸಲ ನನ್ನ ಹೆಸರು ಕರೆಯುವುದು ಕೇಳಿತು." I am dinesh pandey ......open the door.." ಎಂಬ ಧ್ವನಿ ..ನಾನು ಗಡಿಬಿಡಿಯಿಂದ ಎದ್ದು ನೋಡುವಾಗ ಘಂಟೆ ನಮ್ಮ ಭಾರತದ ಟೈಮ್ ಪ್ರಕಾರ ಬೆಳಗ್ಗೆ ೨.30 ಆಗಿತ್ತು."ಯಾಕೆ?"ಎಂದು ಪಾಂಡೆಯವರಲ್ಲಿ ಕೇಳಿದೆ. ಏನು ಇಲ್ಲ ಈಗ ಹೊರಡಿ ಬೇಗ..ನಾನು ಬೇಗ ನನ್ನ ಬ್ಯಾಗ್ ತುಂಬಿ ಪಾಂಡೆ ಜೊತೆ ಹೊರಟೆ."ತುತೋಯಿ " ಎಂದು ಒಬ್ಬ ಟೆಬೆಟ್ ವ್ಯಕ್ತಿಯನ್ನು ಕರೆದು ನನ್ನ ಬ್ಯಾಗನ್ನು ಆ ವ್ಯಕ್ತಿ ಕೈಯಲ್ಲಿ ಕೊಡಲು ಹೇಳಿದರು..ನಾನು ಒಂದು ಸಲ ಕಣ್ಣು ಉಜ್ಜಿ ಆ ವ್ಯಕ್ತಿಯನ್ನು ನೋಡಿದೆ..ಹಾಯ್,ಎಂದು ಹೇಳಿದ.ಹಾಯ್ ಅಂದೆ.ಏನೊಂದೂ ಗೊತ್ತಾಗದೆ ಅವನೊಂದಿಗೆ ಹೊರಟೆ.ನನ್ನನ್ನು ಕರೆದುಕೊಂಡು ಸುಮಾರು ೧ಕಿಮಿ ದೂರ ಹೋದಾಗ ಅಲ್ಲಿ ಒಂದು ಕಾರನ್ನು ತೋರಿಸಿ ಇಲ್ಲಿ ಕೂತುಕೊಳ್ಳಿ ಎಂದು ಕೈ ಸನ್ನೆ ಮಾಡಿದ,ನಾನು ಅವನು ಹೇಳಿದಂತೆ ಮಾಡಿದೆ..ಕಾರಿನಲ್ಲಿ ಒಟ್ಟು ನಾಲ್ಕು ಜನ ಪ್ರಯಾಣ ಮಾಡಬಹುದಾದಷ್ಟು ಸ್ಥಳಾವಕಾಶ ಇತ್ತು.ನಾನು,ಕೇಶವ ಪ್ರಸಾದ್,ನಂದ ಕಿಶೋರ್,ಮಹೇಶ್ ಇಷ್ಟು ಜನ ನಾವು ಕಾರಿನ ಬಳಿ ಸೇರಿದೆವು. ನಮ್ಮ ಡ್ರೈವರ್ " ತುತೋಯಿ " ಎಂದು ಗೊತ್ತಾಯಿತು.ಯಾಕೆ ಇಷ್ಟು ಬೇಗ? ಎಂದು ನಾವು ನಾಲ್ಕೂ ಜನ ಪ್ರಶ್ನೆ ಮಾಡಿಕೊಂಡೆವು ..... ಯಾರಿಗೂ ಗೊತ್ತಿಲ್ಲ.ಸುಮಾರು ೨೦ ಕಾರುಗಳು ಸಾಲಾಗಿ ನಿಂತಿದ್ದವು.ಮುಂಜಾನೆಯ ಮಂಜು ಚಳಿಯಲ್ಲಿ ನಡುಗುತ್ತಾ ಅಲ್ಲೇ ಹಲ್ಲುಜ್ಜಿದ ಶಾಸ್ತ್ರ ಮಾಡಿ ಕಾರಿನಲ್ಲಿ ಕುಳಿತೆವು.ಕಾರಿಗೆ ನಮ್ಮ ಊರಿನಲ್ಲಿ ಇರುವ ಜೀಪಿನ ಹಾಗೆಯೇ ಫೋರ್ವ್ಹೀಲ್ ಸೌಲಭ್ಯ ಇತ್ತು. " ತುತೋಯಿ "ನಮ್ಮ ಕಾರಿನ ಬಗ್ಗೆ ಮಾಹಿತಿ ತಿಳಿದು ಕೊಂಡೆವು.ನಮಗೆ ಬರುವ ಎಲ್ಲಾ ಭಾಷೆಯನ್ನೂ ಅವನಲ್ಲಿ ಪ್ರಯೋಗಿಸಲಾಯಿತು. ಏನೂ ಪ್ರಯೋಜನ ಆಗಲಿಲ್ಲ. ಅವನಿಗೆ ಟೆಬೆಟ್ ಭಾಷೆ ಮಾತ್ರ ಬರುತ್ತಿತ್ತು.ಕೊನೆಗೆ ಉಳಿದದ್ದು ನಮ್ಮ ಮೋಕ ಭಾಷೆ ಮಾತ್ರ.ಅವನು ಕಾರಿನ ಬಗ್ಗೆ ವಿವರಿಸಿದ.ಇದು ಪೆಟ್ರೋಲ್ ಕಾರ್.ಲೆಫ್ಟ್ ಹ್ಯಾಂಡ್ ಡ್ರೈವ್.ಇನ್ನೂ ಹೇಳಿದ.ನಮಗೆ ಅರ್ಥವಾಗದಿದ್ದರೂ ಅವನ ಸನ್ನೆಯ ಮೋಲಕ ಅರ್ಥ ಮಾಡಿಕೊಂಡೆವು.ನಮ್ಮನ್ನು ಎಲ್ಲರನ್ನೂ ಅಳಗಪ್ಪನ್ ಚೆಟ್ಟಿಯಾರ್ ಎಲ್ಲರೂ ಬಂದಿದ್ದೀರಾ?ಎಂದು ವಿಚಾರಿಸಿಕೊಂಡರು. ಕಾರು ಸ್ಟಾರ್ಟ್ ಆಯಿತು.ಸಮಯ ಬೆಳಿಗ್ಗೆ ೩.೪೫ ...
ಮುಂದೆ ೧ ಕಿಮೀ ಹೋದಾಗ ಎದುರಿನಿಂದ ಒಂದು ವಾಹನ ಬಂತು.ನಮ್ಮ ಕಾರಿಗೆ ಆಗ ಸುಮಾರು ನನಗೆ ಅನಿಸುವಷ್ಟು ಸನಿಹದಲ್ಲಿ ಸೈಡ್ ಕೊಟ್ಟಿತು. ಕಾರಣ ನಮ್ಮ ಕಾರು ಡ್ರೈವ್.ನಮ್ಮ ಆಗ ಡ್ರೈವರ್ ಹೇಳಿದ್ದು ನೆನಪಾಯಿತು.ನಿಮ್ಮ ಇಂಡಿಯಾದಲ್ಲಿ ಮಾತ್ರ ರೈಟ್ ಹ್ಯಾಂಡ್ ಡ್ರೈವ್, ಎಂದು ಹೇಳಿದ.ನಮ್ಮಲ್ಲಿ ಯಾಕೆ ಹೀಗೆ ಎಂದು ನಾವು ನಾವು ಪ್ರಶ್ನೆ ಮಾಡಿಕೊಂಡೆವು.. ನಮ್ಮಲ್ಲಿನ ಧಾರ್ಮಿಕತೆ ಆಗ ಅರ್ಥ ಆಯಿತು.ಎಲ್ಲ ಪ್ರದಕ್ಷಿಣೆ. ದೇವಾಲಯ,ನಮಸ್ಕಾರ,ಅಭಿವಾದನೆ ಇತ್ಯಾದಿ...
ಆಗ ನಮ್ಮ ಕಾರು ಸುಮಾರು ೧೨ ಕಿಲೋ ಮೀಟರ್ ಕ್ರಮಿಸಿತ್ತು.ಸುಮಾರು ೪.೪೫ ರ ಸಮಯ.ಬೆಳಕು ಸರಿಯಾಗಿ ಹರಿದಿರಲಿಲ್ಲ. ನಮ್ಮ ಹಿಂದೆ ಮುಂದೆ ಕಾರುಗಳು ನಿಂತಿದ್ದವು.ಯಾಕೆ ಅಂತ ಗೊತ್ತೇ ಆಗಿಲ್ಲ ,ನಮ್ಮ ಒಟ್ಟಿಗೆ ಇದ್ದವರ ಹತ್ತಿರ ಕೇಳೋಣವೆಂದರೆ ಅವರು ನಿದ್ರೆಯಲ್ಲಿದ್ದರು,ಡ್ರೈವರ್ ಹತ್ತಿರ ನನಗೆ ಭಾಷೆಯ ಸಮಸ್ಯೆ..ಆದರೂ ಕೈ ಸನ್ನೆ ಮಾಡಿದ.ನನಗೆ ಅರ್ಥವಾಗಲಿಲ್ಲ.ನಮ್ಮ ಮುಂದಿನ ಕಾರು ಮತ್ತು ನಮ್ಮ ಕಾರಿಗೆ ಸುಮಾರು ೨೦ ಮೀಟರ್ ಅಂತರ ಇತ್ತು ..ನಿಧಾನವಾಗಿ ಮುಂದೆ ಸಾಗಿತು.ಒಂದು ಕ್ಷಣ ತೊಟ್ಟಿಲಿನಲ್ಲಿ ತೂಗಿದ ಅನುಭವ ಆಯಿತು.ಮುಂದೆ ಹೋದಾಗ ಡ್ರೈವರ್ ಕಾರಿನಿಂದ ಕೆಳಗೆ ಇಳಿಯಲು ಹೇಳಿದನು.ನಾನು ಮತ್ತು ಡ್ರೈವರ್ ಇಬ್ಬರೇ ಇಳಿದು ಹಿಂದೆ ನಡೆದೆವು.ಒಂದು ಕ್ಷಣ ಡ್ರೈವರ್ ತೋರಿಸಿದ ಆ ದೃಶ್ಯ ನನಗೆ ಆ ಕೊರೆಯುವ ಚಳಿಯಲ್ಲೂ ಬೆವರು ಹರಿಯುವಂತೆ ಆಯಿತು..ಅಲ್ಲಿ ಸುಮಾರು ೩೦೦ ಫೀಟ್ ಆಳದಲ್ಲಿ ನೀರು ಧುಮುಕುತ್ತಿತ್ತು. ಮಂಜು ಕವಿದ ಕಾರಣ ಆಳ ಸರಿಯಾಗಿ ಕಾಣಿಸುತ್ತಿರಲಿಲ್ಲ.ಘಾಟ್ ಪ್ರದೇಶ .....ಬಲಬದಿಯಿಂದ ಗೋಡೆ.ಎಡ ಬದಿ ಆಳವಾದ ಪ್ರದೇಶ.ಮಾರ್ಗದ ಎರಡೂ ಬದಿ (ಮಾರ್ಗದ ಹಿಂದೆ ಮುಂದೆ.) ಸಿಮೆಂಟ್ ನ ಕಂಬಗಳು ಇದ್ದವು.ಮಾರ್ಗ ಮಧ್ಯದಲ್ಲಿ ಸುಮಾರು ೧೫ ಮೀಟರ್ ಅಗಲಕ್ಕೆ ಒಂದು ಆಳವಾದ ನದಿ ಹರಿಯುತ್ತಿತ್ತು.ಬಲಬದಿಯ ಗೋಡೆಯಿಂದ ಎಡಗಡೆ ಇರುವ ಕಂಬಗಳಿಗೆ ಕಬ್ಬಿಣದ ಬಲೆಯನ್ನು ವೃತ್ತಾಕಾರವಾಗಿ ಕಟ್ಟಲಾಗಿತ್ತು. ಅಡಿಭಾಗ ಏನೂ ಇರಲಿಲ್ಲ.ಅಲ್ಲಿ ದಾರಿಯ ಅಗಲ ಕೇವಲ ೫ ಮೀಟರ್ ಇರಬಹುದು ಅಷ್ಟೇ.ಈ ಕಬ್ಬಿಣದ ಬಲೆಯ ಒಳಗೆ ನಮ್ಮ ಕಾರು ಬಂದಿದೆ ಎಂದಾಗಲೇ ನನಗೆ ಬೆವರುವದು ಕೈ, ಕಾಲು ನಡುಗಲು ಪ್ರಾರಂಭ ಆಯಿತು.ಒಂದೊಂದೇ ಕಾರು ಇದರಲ್ಲಿ ದಾಟಲು ಅವಕಾಶ.ಈ ದೃಶ್ಯವನ್ನು ವರ್ಣಿಸಲು ಅಸಾಧ್ಯ.ಕಾರುಗಳು ಇದರಲ್ಲಿ ದಾಟುವಾಗ ಇದರ ಮೇಲ್ಭಾಗದಲ್ಲಿ ಕಟ್ಟಿದ ಕಬ್ಬಿಣದ ಬಲೆಯು "ಕಿರ್ಕ್ ಕಿರ್ಕ್"ಶಬ್ದ ಮಾಡುವಾಗ ಈಗ ಮುರಿದು ಬೀಳುತ್ತದೆ ಎಂಬಷ್ಟು ಹೆದರಿಕೆ ಆಯಿತು.ಆಗಲೇ ನಮ್ಮ ಡ್ರೈವರ್ ಗೆ "ಶಹಭಾಸ್" ಎಂದು ಹೇಳಿ ಅವನ ಬೆನ್ನು ತಟ್ಟಿದೆ.ಈ ಘಟನೆ ನಡೆದಾಗಲೂ ನಮ್ಮ ಕಾರಿನಲ್ಲಿ ಇದ್ದವರಿಗೆ ಗೊತ್ತೇ ಆಗಲಿಲ್ಲ.ಅಂತೂ ಅಲ್ಲಿಂದ ನಾವು ಹೊರಟೆವು.ಈಗ ಅರ್ಥ ಆಯಿತು.ಈಗ ನಮ್ಮನ್ನು ೨.೩೦ಕ್ಕೆ ಎಬ್ಬಿಸಿ ಕರೆದುಕೊಂಡು ಬಂದುದರ ಅರಿವಾಯಿತು....ಅಷ್ಟು ಭಯಾನಕವಾದ ಪ್ರದೇಶ ಮತ್ತು ಕಡಿದಾದ ರಸ್ತೆ ಕಂಡಾಗ ಎಂಥವರೂ ಹೆದರುವುದು ಖಂಡಿತ..ಹೀಗೆ ಮೇಲ್ಭಾಗ ಹೋಗುತ್ತಿರುವಾಗ ಒಂದು ಕಡೆ ನಾವು ಹೋಗುವ ದಾರಿಗೆ ಮಂಜುಗಡ್ಡೆ ಬಿದ್ದು ಇತ್ತು.ಅದನ್ನು ಸರಿಸಿ ಮುಂದೆ ೧೦೦ ಮೀಟರ್ ಪ್ರಯಾಣ ಮಾಡುವಾಗಲೇ ನಮ್ಮ ಕಾರಿನ ಮೇಲ್ಭಾಗಕ್ಕೆ ಬಂಡೆಗಲ್ಲು ಬಿದ್ದಂತೆ ಶಬ್ದ ಆಯಿತು.ನೋಡುವಾಗ ಮಂಜುಗಡ್ಡೆ ....ಹೀಗೆ ಸುಮಾರು ೧೫ ಕಿಲೋ ಮೀಟರ್ ಕಡಿದಾದ ರಸ್ತೆಯಲ್ಲಿ ಪ್ರಯಾಣ ಮಾಡಿದಾಗ "ನ್ಯಾಲಾಂ"ಎಂಬ ಸಣ್ಣ ಹಳ್ಳಿ ಬಂತು.ಅಲ್ಲಿ ಒಂದು ಸಾಮಾನ್ಯ ರೀತಿಯ ಒಂದು ವಸತಿ ಗೃಹವನ್ನು ನಮಗಾಗಿ ಏರ್ಪಾಡು ಮಾಡಿದ್ದರು.ಅಲ್ಲಿಗೆ ತಲುಪುವಾಗ ಸಮಯ ಬೆಳಿಗ್ಗೆ ೮.೦೦ ಘಂಟೆ ...ಬೆಳಗ್ಗಿನ ಉಪಾಹಾರಕ್ಕೆ ಬ್ರೆಡ್ ಜ್ಯಾಂ ಇನ್ನು ನಾವು ಇಲ್ಲಿ ೨ ದಿವಸ ಇರಬೇಕಾಗುತ್ತದೆ ಎಂದು ಪಾಂಡೆಯವರು ತಿಳಿಸಿದರು..ಮಧ್ಯಾಹ್ನ ವರೆಗೆ ವಿಶ್ರಾಂತಿ ಮಾಡಿ ಸಂಜೆ ಸ್ವಲ್ಪ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ನಮ್ಮ ಕರ್ನಾಟಕದ ೧೦ ಮಂಡಿಯ ತಂಡ ಹರಟೆ ಹೊಡೆದೆವು.ಸಂಜೆ ೬.೦೦ ಘಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದೆವು.ಮರುದಿನದ ದಿನಚರಿಯ ಬಗ್ಗೆ ಪಾಂಡೆ ಮಾಹಿತಿ ನೀಡಿದರು.ಈ ಭಯಾನಕವಾದ ಪ್ರಕೃತಿ ಸೌಂದರ್ಯವನ್ನು ನಾವೆಲ್ಲ ಪರಸ್ಪರ ಹಂಚಿಕೊಂಡೆವು,ಇದರ ಛಾಯಾಚಿತ್ರ ಮಾತ್ರ ತೆಗೆಯಲು ಚೀನಾ ಮಿಲಿಟರಿ ಪಡೆಯವರ ಅವಕಾಶ ಇರಲಿಲ್ಲ.ಅವರು ನಮ್ಮೊಂದಿಗೆ ಈ ಪ್ರದೇಶ ವರೆಗೆ ಸಾಂಬ ಗಡಿಯಿಂದ ಬಂದಿದ್ದರು.ಪ್ರತಿಯೊಬ್ಬರ ವೀಸಾ ಪಾಸ್ಪೋರ್ಟ್ ಮಾಹಿತಿಯನ್ನು ಪಡೆದು ತಲಾ ಒಬ್ಬೊಬ್ಬರಿಗೆ ರೂ,೨೫,೦೦೦ (ಇಪ್ಪತ್ತೈದು ಸಾವಿರ ರೂ.ಗಳು.)ಪ್ರವೇಶ ಶುಲ್ಕವನ್ನು ವಿಧಿಸಿದರು.ನಾವು ಈ ಶುಲ್ಕದ ಮಾಹಿತಿಯನ್ನು ಚೀನಾ ಅಧಿಕಾರಿಗಳ ಬಳಿಯಿಂದ ತಿಳಿದುಕೊಂಡೆವು."ಇದು ಇನ್ನು ನೀವು ಈ ದೇಶದಿಂದ ಹೋಗುವ ವರೆಗೆ ನಮ್ಮ ಜವಾಬ್ದಾರಿ ...ನಿಮ್ಮ ಪ್ರಯಾಣದ ಮಾಹಿತಿಯನ್ನು ನಾವು ಪಡೆಯುತ್ತಾ ಇರುತ್ತೇವೆ.ಮತ್ತು ಚೀನಾ ಮಿಲಿಟರೀ ಪಡೆಯಿಂದ ೧೦ ಯೋಧರನ್ನು ನಿಮ್ಮ ಆರೋಗ್ಯ ವಿಚಾರಣೆ ಗಾಗಿ ನೀವಿರುವ ಸ್ಥಳವನ್ನು ತಿಳಿದುಕೊಂಡು ಪ್ರತೀದಿನ ಕಳುಹಿಸುತ್ತೇವೆ "ಎಂದರು.ರಾತ್ರಿ ೯.೦೦ ಘಂಟೆ....ಹಸಿವು...ಅಂದಿನಿಂದ ಪ್ರಾರಂಭ ...ನಮ್ಮ ಅನ್ನ ಸಾರು ಮಜ್ಜಿಗೆ ಇಲ್ಲ..ಕೇವಲ ಟೊಮೇಟೊ ಸೂಪ್.ಬ್ರೆಡ್ ಜ್ಯಾಂ.ಅದನ್ನು ಅಲ್ಪ ಸ್ವಲ್ಪ ಹೊಟ್ಟೆಗೆ ಹಾಕಿ ಮಲಗಿದೆವು.ಆಗ ಅಲ್ಲಿಯ ಉಷ್ಣಾಂಶ -೮ ಡಿಗ್ರೀ ....... ನಮ್ಮ ಭಾರತದ ಸಮಯಕ್ಕೂ ಇಲ್ಲಿನ ಸಮಯಕ್ಕೂ ಎರಡೂವರೆ ಘಂಟೆ ವ್ಯತ್ಯಾಸ.