ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, October 30, 2009

ಮಾನಸ ಸರೋವರ ಯಾತ್ರೆ -೧೭
ಎಲ್ಲವೂ ಮಂಜುಗಡ್ಡೆಯಾಗಿಬಿಡುವ ಇಲ್ಲಿನ ಅನುಭವವೇ ವಿಭಿನ್ನ. ಎರಡೇ ದಿನಗಳಲ್ಲಿ ನಮ್ಮ 'ಸ್ಲೀಪಿಂಗ್ ಬ್ಯಾಗ್'ಗಳೆಲ್ಲಾ ಮಂಜುಗಡ್ಡೆಯಿಂದ ಆವೃತವಾಗಿಬಿಟ್ಟವು... ನಮ್ಮ ಚಾರಣ ಮುಂದುವರಿದಂತೆಲ್ಲಾ ಈ ಮನಮೋಹಕ ಪ್ರದೇಶದ ಭೀಕರತೆ ಅರಿವಾಗುತ್ತಾ ಹೋಯಿತು. ಹಿಮಗಾಳಿಯಲ್ಲಿ ಸೆಟೆದುಕೊಳ್ಳುವ ಕಾಲುಗಳನ್ನು ಮುಂದೆ ಇಡಲೂ ಸಾಧ್ಯವಾಗುವುದಿಲ್ಲ. ಅದರಲ್ಲೂ ಎರಡು ಹಿಮಗಡ್ಡೆಗಳು ಸಂಧಿಸುವ ತಾಣ ದಾಟಬೇಕಾದ ಸಂದರ್ಭದಲ್ಲಂತೂ ಹೃದಯ ಬಾಯಿಗೆ ಬಂದಂತಾಗುತ್ತದೆ! ಆ ತಾಣದಲ್ಲಿ ಕೆಳಗೆ ದೂರದಲ್ಲೆಲ್ಲೋ ನೀರು ಹರಿದ ಸದ್ದು ಕೇಳುತ್ತದೆ. ಆದರೆ ಏನೂ ಕಾಣುವುದಿಲ್ಲ. ಅಂತಹ ತಾಣವನ್ನು ಬಹು ಎಚ್ಚರಿಕೆಯಿಂದ ದಾಟುವ ಬಗ್ಗೆ ನಮಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. ಅಲ್ಲಿ ಆಕಸ್ಮಿಕವಾಗಿ ಹಿಮದ ಮೇಲ್ಮೈ ಕುಸಿದು ನಾವೇನಾದರೂ ಕೆಳಗೆ ಜಾರಿದರೆ ಮೈನಸ್ 200 ಡಿಗ್ರಿಯ ಉಷ್ಣಾಂಶದಲ್ಲಿ ಹಿಮಗಡ್ಡೆಯಾಗಬೇಕಾಗುತ್ತದೆ! ಅಂದ ಹಾಗೆ, ಟಿಎಸ್‌ಐ ಛಾಯಾಗ್ರಾಹಕ ಭಾಸ್ಕರ್ ಅವರಿಗಂತೂ ಅಲ್ಲಿನ ಸುಂದರ ತಾಣಗಳ ಮಹತ್ವ ತುಂಬಾ ಚೆನ್ನಾಗಿಯೇ ಅರಿವಾಯಿತು. ಈ ಕ್ಯಾಂಪ್‌ಗೆ ಸಾಗುವ ಚಾರಣಿಗರ ಲಗೇಜ್ 20 ಕೆ.ಜಿ.ಯದು. ಅದರ ಜೊತೆಗೆ ಭಾಸ್ಕರ್ ಅವರ ಕ್ಯಾಮರಾ ಲಗೇಜ್ 12 ಕೆ.ಜಿ. ಇವನ್ನೆಲ್ಲಾ ಹೊತ್ತು ಫೋಟೊ ಕ್ಲಿಕ್ಕಿಸುವುದು ಹೇಗೆ? ಆಗ ನೆರವಾದವರೇ ತ್ಸೆಂಗೆ ಎಂಬ ಒಬ್ಬ ಶೇರ್ಪಾ . ಭಾಸ್ಕರ್ ಲಗೇಜ್ ಅವರು ಹೊತ್ತಿದ್ದರಿಂದಲೇ ಇಷ್ಟೆಲ್ಲಾ ಚಿತ್ರಗಳನ್ನು ತೆಗೆಯಲು ಸಾಧ್ಯವಾಗಿದ್ದು.... ಚಾರಣದಲ್ಲಿ ನಮ್ಮ ಜೊತೆ ಹೆಜ್ಜೆ ಹಾಕಿದ ಭಾಸ್ಕರ್ , "ಆಗಸದಿಂದ ನೋಡಿದರೆ ಈ ಪ್ರದೇಶವೆಲ್ಲಾ ಸ್ವರ್ಗದಂತೆ ಭಾಸವಾಗುತ್ತದೆ. ಇಲ್ಲಿಗೆ ವಿಮಾನದಲ್ಲಿ ಬರುವುದಂತೂ ಸುಂದರ ಅನುಭವ. ಆದರೆ ಈ ನೆಲದ ಮೇಲೆ ನಡೆಯುವುದು ಮಾತ್ರ ಮಹಾಸಂಕಟ" ಎಂದು ಬಿಟ್ಟರು. ಅವರ ಗಾಯಗೊಂಡ ಮೊಣಕಾಲಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ಬೀಸುವ ಚಳಿಗಾಳಿ ಅವರ ನೋವನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ಇಂತಹ ಪ್ರದೇಶದಲ್ಲಿ ಅದರಲ್ಲೂ, ಮೊಣಕಾಲಿಗೆ ಗಾಯವಾದ ಸಂದರ್ಭದಲ್ಲಿ 'ಪ್ರಕೃತಿ ಕರೆ'ಗಳನ್ನು ಹೇಗೆ ತೀರಿಸಿಕೊಳ್ಳುತ್ತಾರೆ ಎಂಬ ಕುತೂಹಲ ನನಗೆ ಕಾಡಿತು.... ಈ ಹಿಮ ಪ್ರದೇಶದಲ್ಲಿ 'ಮಲ ವಿಸರ್ಜನೆ' ಮಾಡುವುದು ಅತ್ಯಂತ ತ್ರಾಸದಾಯಕ. ಎರಡು ಸೀಮೆಎಣ್ಣೆ ಡಬ್ಬದ ಮೇಲೆ ಮರದ ಹಲಗೆಯೊಂದನ್ನು ಇಟ್ಟು ಅದರ ಮೇಲೆ ಕೂರಬೇಕು. ಇಲ್ಲಿನ ಶೇರ್ಪಾ ಒಬ್ಬನ ಅನುಭವವನ್ನು ಕೇಳಿ: ಅವರು ಹೀಗೆ ಕುಳಿತಿದ್ದಾಗ ಸಮತೋಲನ ಕಾಯ್ದುಕೊಳ್ಳಲು ಪಕ್ಕದಲ್ಲಿ ಒಂದು ಕೋಲನ್ನು ನೆಲಕ್ಕೆ ಊರಿ ಹಿಡಿದುಕೊಂಡರು, ಅಷ್ಟೇ. ಕೂಡಲೇ ಮಂಜುಗಡ್ಡೆಯಂತಾಗಿದ್ದ ಆ ಕಂಬಕ್ಕೆ ಅವರ ಅಂಗೈ ಅಂಟಿಕೊಂಡುಬಿಟ್ಟಿತು. ಬಿಡಿಸಿಕೊಳ್ಳಲು ಜೋರಾಗಿ ಕೈ ಎಳೆದರೆ ಅಂಗೈ ಚರ್ಮವೇ ಹರಿದುಹೋಗುತ್ತದೆ. ಆ ಪ್ರದೇಶದ ಅನುಭವ ಚೆನ್ನಾಗಿದ್ದ ಆ ಶೇರ್ಪಾ ಹಾಗೆ ಜೋರಾಗಿ ಕೈ ಎಳೆಯದೆ, ಬಿಸಿ ನೀರು ತರಿಸಿ ಅದನ್ನು ಕಂಬಕ್ಕೆ ಅಂಗೈ ಮೇಲೆ ಹಾಯಿಸಿ ನಿಧಾನವಾಗಿ ಕೈಬಿಡಿಸಿಕೊಂಡರು. ಹಿಮದ ನೆಲೆಯಲ್ಲಿ ಇಂತಹ ಅನುಭವಗಳು ಅದೆಷ್ಟೋ.!!!!!!!!
ಇಲ್ಲಿನ ರುದ್ರ ರಮಣೀಯ ಪ್ರಾಕೃತಿಕ ಸೌಂದರ್ಯ ನನ್ನ ಮನದಾಳದಿಂದ ಮರೆಯಾಗದು" ನನ್ನ ಮಟ್ಟಿಗೆ ಇಲ್ಲಿ ತೆಗೆದ ಚಿತ್ರಗಳೇ ಎಲ್ಲಾ ಕಥೆಯನ್ನೂ ಹೇಳುತ್ತವೆ. ನಾನು ಕೇವಲ ಭಾವನೆಗಳನ್ನು ನಿರೂಪಿಸುತ್ತೇನೆ ಅಷ್ಟೇ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಕೈಲಾಸ ಪರ್ವತದಷ್ಟು ಉತ್ತಮ ಪ್ರದೇಶ ಬೇರಿಲ್ಲ ಎಂಬುದು ನನ್ನ ಭಾವನೆ. ಆ ಕಾರಣದಿಂದ ಹಾಗೂ ಪ್ರಾಕೃತಿಕ ರೌದ್ರತೆಯಿಂದ ಇದೊಂದು ಸ್ವರ್ಗ ಎನ್ನಬಹುದು. ಆದರೆ ಹಿಮಗಾಳಿಯನ್ನೆದುರಿಸುತ್ತಾ ಟೆಂಟ್‌ಗಳಲ್ಲಿ ವಾಸಿಸುವ ನಮ್ಮ ಪಾಲಿಗಂತೂ ಈ ಸಮಯ ಸ್ವರ್ಗದ ಸಾಕ್ಷಾತ್ಕಾರ...ಎಂಬುದು ನನ್ನ ಅನಿಸಿಕೆ.
ಆಗಸದಲ್ಲಿ ಮಂಜಿನ ನಡುವೆಯೂ ಮೋಡ ಹಾಕಿಕೊಳ್ಳುತ್ತಿತ್ತು ಎನ್ನಿಸುತ್ತದೆ. ಇದ್ದ ಅಲ್ಪ-ಸ್ವಲ್ಪ ಬೆಳಕೂ ಕಡಿಮೆಯಾಗುತ್ತಾ ಬರುತ್ತಿತ್ತು. ಸಮಯವೇನೋ ಸಂಜೆ ನಾಲ್ಕು ಘಂಟೆ ಸಮೀಪಿಸುತ್ತಿತ್ತಷ್ಟೇ. ಆದರೆ ಅಲ್ಲಿ ಸಂಜೆ ಆರು ಘಂಟೆಯ ನಂತರ ಚಾರಣ ಮಾಡುವುದು ಅಸಾಧ್ಯ ಎಂದು ನಮಗೆ ಚೆನ್ನಾಗಿ ಗೊತ್ತಿತ್ತು.. "ನಾಲ್ಕು ಘಂಟೆಯ ಚಾರಣ, ಸಣ್ಣದು" ಎಂದುಕೊಂಡು ಪಾಂಡೆ ಅವರು ಕರೆದುಕೊಂಡು ಹೊರಟ ಚಾರಣದಲ್ಲಿ ಎಂತೆಂಥ ಅನುಭವಗಳು! ಆರೇಳು ಘಂಟೆಯ ಅನುಭವ ಅಷ್ಟೇ. ಆದರೂ, ಆಗ ಸಂಜೆ ಘಂಟೆ ಎಷ್ಟೋ ಹೊತ್ತಾದಂತೆ ಇತ್ತು. . ಆದರೆ ಈ ಉತ್ಕೃಷ್ಟ ಅನುಭವವನ್ನು ನಾವು ಜೀವನದಲ್ಲಿ ಖಂಡಿತಾ ಮರೆಯುವುದಿಲ್ಲ ಎಂದು ಮಾತ್ರ ಖಚಿತವಾಗಿ ಹೇಳಬಲ್ಲೆ. ಕೇವಲ ಐದು ಕಿಲೋಮೀಟರುಗಳ ಚಾರಣದ ನಂತರ ಒಂದು ಟೆಂಟನ್ನು ಸಿದ್ಧಪಡಿಸಿಕೊಂಡು ಅದರಲ್ಲಿ ವಿಶ್ರಾಂತಿ ಪಡೆಯುವ ಪ್ರಯತ್ನ ಮಾಡಿದೆವು.

Sunday, October 25, 2009

ಮಾನಸ ಸರೋವರ ಯಾತ್ರೆ-೧೬


ಕೇವಲ ೨ ಘಂಟೆಯ ನಿದ್ರೆಯಿಂದ ಎಚ್ಚರಗೊಂಡಾಗ ಸಮಯ ಬೆಳಿಗ್ಗೆ ೭ ಘಂಟೆ.ಬ್ರೆಷ್ ಮಾಡಿ ನೀರು ಕುಡಿದೆ,ಎರಡು ಬ್ರೆಡ್ ತಿಂದೆ.ಶಾರೀರಿಕವಾಗಿ ನಾನು ಬಳಲಿ ಹೋಗಿದ್ದೆ.ಕಾಲು ಮುಂದಿಡಲು ಶರೀರದ ಎಲ್ಲಾ ಅಂಗಗಳ ಶಕ್ತಿಯನ್ನು ಒಟ್ಟು ಗೂಡಿಸಬೇಕಾದಷ್ಟು ಕಷ್ಟದ ಪರಿಸ್ಥಿತಿ.ಈ ಅನುಭವ ನಾವು ಎಂದೂ ಕೇಳಿರಲಿಲ್ಲ ಮತ್ತು ಸ್ವತ: ಅನುಭವಿಸಿರಲಿಲ್ಲ.. ಸಂದರ್ಭೋಚಿತವಾಗಿ ಕೇಳಿ, ಓದಿದ ಅನುಭವವೂ ಇಲ್ಲ.ಈ ತರಹದ ಸಾಹಸ ಮಾಡುತ್ತಿರುವದು ಇದೇ ಮೊದಲ ಅನುಭವ.ನಮ್ಮೆಲ್ಲರಿಗೂ ಈ ಜಾಗವನ್ನು ಬಿಟ್ಟು ಹೇಗೋ ಜೀವವನ್ನು ಉಳಿಸಿಕೊಂಡು ಮುಂದೆ ಯಾವಾಗಲೋ ಒಂದು ದಿನ ಇನ್ನಷ್ಟು ವ್ಯವಸ್ಥೆಗಳೊಂದಿಗೆ ಸಿದ್ಧ ಮಾಡಿಕೊಂಡು ಬಂದರಾಯಿತು ಎಂಬಷ್ಟು ಮನಸ್ಥಿತಿ ನಮಗಾಯಿತು.ಈ ರೀತಿ ನಮ್ಮ ಪ್ರತಿಯೊಬ್ಬ ಯಾತ್ರಿಕನೂ ನಾನು ನೆನೆಸಿದಂತೆ ಹೇಳಿದಾಗ ನನಗೂ ಯಾತ್ರೆ (ಪರಿಕ್ರಮ)ಮಾಡುವದಕ್ಕೆ ಮನಸ್ಸು ಹಿಂಜರಿಯಿತು.ಈ ಪರಿಸ್ಥಿತಿ ಮರೆಯಾಗದ ಅನುಭವ.ಎಲ್ಲಾ ನನ್ನ ಮನಸ್ಸಿನ ಒಳಗೆ ಸಂಭಾಷಣೆ ಮಾತ್ರ.!
ಬಾಯಿಬಿಟ್ಟು ಮಾತಾಡಲೂ ಶಕ್ತಿಯಿಲ್ಲ.ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಎದ್ದು ಹತ್ತು ಹೆಜ್ಜೆ ಹಾಕೋಣವೆಂದರೆ ಆಗಲಿಲ್ಲ.ಕಾಲುಗಳಲ್ಲಿ ಶಕ್ತಿ ಉಡುಗಿಹೋಗಿ ಹೆಜ್ಜೆ ಇಟ್ಟರೆ ಕುಡಿದವನಂತೆ ತೂರಾಡುವ ಪರಿಸ್ಥಿತಿ ನನ್ನದು. ಆಗ ಪಾಂಡೆಯವರು ಬಂದು ಒಂದು ಮೀಟಿಂಗ್ ಮಾಡೋಣ ಎಂದು ಹೇಳಿದರು.ನಾವೆಲ್ಲಾ ನಮ್ಮ ಡೇರೆಯಲ್ಲಿ ಕಾಲು ನೀಡಿ ಕುಳಿತೆವು.ನಾವೆಲ್ಲಾ ಇನ್ನು ಮುಂದೆ ಬಹಳ ಎಚ್ಚರಿಕೆಯ ಚಾರಣ ಮಾಡಬೇಕಾಗಿದೆ.ಅದಕ್ಕಾಗಿ ಎಚ್ಚರಿಕೆಯ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳೋಣ ಎಂದು ಹೇಳಿದರು.ಇದನ್ನು ನೀವು ತಪ್ಪದೆ ಅನುಸರಿಸಬೇಕು ಎಂದರು.ಅದನ್ನು ಒಂದೊಂದಾಗಿ ವಿವರಿಸಿದರು. 


೧. ಈ ಬೆಟ್ಟಗಳಲ್ಲಿ ನಡೆಯುತ್ತಿರುವಾಗ ಯಾವಗಲೂ ನಾವು ಬೆಟ್ಟದ ಅಂಚಿನಲ್ಲಿಯೇ ನಡೆಯುತ್ತಿರಬೇಕು.ಹಿಂದಿನಿಂದ ಕುದುರೆ ,ಯಾಕ್ ಏನಾದರೂ ಬಂದರೆ ನಾವು ಬೆಟ್ಟದ ಅಂಚಿಗೇ ಇದ್ದು ಅವುಗಳಿಗೆ ದಾರಿ ಬಿಡಬೇಕು. 
೨. ಈ ಚಾರಣದಲ್ಲಿ ಖಾಲೀ ಹೊಟ್ಟೆಯಲ್ಲಿ ನಡೆಯಬಾರದು.ಅದರಿಂದ ಹಸಿವು ಹೆಚ್ಚಿ ನಿಶ್ಶಕ್ತಿಯಿಂದ ತಲೆಸುತ್ತಿ ಬೀಳುವ ಅಪಾಯವಿದೆ. 
೩. ತಿನ್ನುವ ಪದಾರ್ಥಗಳು ,ಕುಡಿಯುವ ನೀರು,ಔಷಧಗಳು,ರೈನ್ ಕೋಟು,ಕ್ಯಾಮರಾ,ಮೊದಲಾದವುಗಳು ಬೇಗ ಕೈಗೆಟಕುವಂತೆ ಚೀಲದಲ್ಲಿಟ್ಟು ಅದನ್ನು ಹೆಗಲಿಗೆ ಹಾಕಿಕೊಂಡಿರಬೇಕು. 
೪. ಒಬ್ಬೊಬ್ಬರೇ ಹೋಗಕೂಡದು.ಗುಂಪು ಗುಂಪುಗಳಾಗಿ ನಡೆಯುತ್ತಿರಬೇಕು.ದಣಿವು ತೋರದಿರಲು ಮತ್ತು ಭಕ್ತಿಭಾವ ಸ್ಥಿರಗೊಳಿಸುವದಕ್ಕೂ ಬಗೆ ಬಗೆಯ ದೈವ ನಿನಾದಗಳನ್ನು ಮಾಡುತ್ತಿರುವದು ಸೂಕ್ತ. 
೫. ಚಾರಣದಲ್ಲಿ ಆಯಾಸ, ಆಲಸ್ಯಗಳು ಉಂಟಾಗುತ್ತವೆ,ತುಂಬಾ ಎತ್ತರವಾದ ಪ್ರದೇಶಗಳಲ್ಲಿ ಆಮ್ಲಜನಕ ಕಡಿಮೆಯಾಗಿರುತ್ತದೆಯಾಗಿರುವುದರಿಂದ ತಲೆಸುತ್ತುವಿಕೆ,ಉಸಿರಾಟದ ತೊಂದರೆ.ಸಹನೆ, ಸಮಾಧಾನಗಳು ಕಡಿಮೆಯಾಗುವಿಕೆ ಇತ್ಯಾದಿ ಕಂಡುಬರುವುದು ಸಹಜ.ಅದಕ್ಕಾಗಿ ಜಾಗ್ರತೆ ವಹಿಸಬೇಕು.ಮುಂದಿರುವ ದಾರಿ,ಎತ್ತರವಾದ ಪರ್ವತಗಳು ಇವುಗಳನ್ನು ನೋಡಿ,'ಅಯ್ಯೋ ! ಇಷ್ಟು ದೂರವೇ?ಅಷ್ಟೊಂದು ಎತ್ತರ ಹತ್ತಬೇಕೆ?" ಎಂದುಕೊಂಡರೆ,ಪುಕ್ಕಲುತನ ಏರ್ಪಟ್ಟು ಹೆಜ್ಜೆ ಮುಂದಿಡಲು ಸಾಧ್ಯವಾಗುವುದಿಲ್ಲ.ಹಾಗಾಗಿ ಹೀಗೆ ಹೆಚ್ಚಾಗಿ ಊಹಿಸಿಕೊಳ್ಳಬಾರದು.
೬. ಯಾವಾಗಲಾದರೂ ದಾರಿ ತಿಳಿಯದೆ ಹೋದರೆ, ಮನುಷ್ಯರು ಇರುವುದಿಲ್ಲವಾದ್ದರಿಂದ ಕುದುರೆ ಲದ್ದಿಗಳನ್ನು ನೋಡಿಕೊಳ್ಳುತ್ತಾ ಸಾಗಬೇಕು.
೭. ಸಾಧ್ಯವಾದಷ್ಟೂ ಕಡಿಮೆ ಆಹಾರ ತಿನ್ನಬೇಕು.೨ ಅಥವಾ ೩ ಘಂಟೆಗೊಂದು ಸಲ ತಿನ್ನುವುದು ಉತ್ತಮ.ಹೆಚ್ಚು ನೀರು ಕುಡಿಯುವುದು ಒಳ್ಳೆಯದು.ಕನಿಷ್ಠ ಪಕ್ಷ ದಿನಕ್ಕೆ ೪ ಲೀಟರ್ ನೀರು ಕುಡಿಯುವುದು ಒಳ್ಳೆಯದು.
ಹೀಗೆ ಎಚ್ಚರಿಕೆ ವಹಿಸುತ್ತಾ ಮುಂದೆ ಸಾಗಬೇಕು...


ವಾತಾವರಣ ಬೇಗ ಬೇಗ ಬದಲಾಗುತ್ತಿರುತ್ತದೆ.ಆಗಲೇ ಬಿಸಿಲು ಬರುತ್ತದೆ. ಕೂಡಲೇ ಮಳೆ ಬರುತ್ತದೆ.ಇವುಗಳ ವ್ಯತ್ಯಾಸ ನಮಗೆ ತಿಳಿಯುವುದಿಲ್ಲ. ಈ ಪ್ರಕೃತಿಯನ್ನು ನೋಡುವಾಗ ಒಂದು ಶ್ಲೋಕ ನೆನಪಾಯಿತು.


ಅಶ್ವಪ್ಲುತಂ ವಾಸವಗರ್ಜಿತಂ ಚ
ಸ್ತ್ರೀಣಾ೦ ಚ ಚಿತ್ತಂ ಪುರೀಶಂಚ ಭಾಗ್ಯಂ !  
ಅವರ್ಷನಂಚಾಪ್ಯತಿ ವರ್ಷನಂ ಚ  
ದೇವೋ ನ ಜಾನಾತಿ ಕುತೋ ಮನುಷ್ಯ:?  
ಕಾಳಿದಾಸನ ರಚನೆಯಾಗಿರುವ ಈ ಶ್ಲೋಕದ ತಾತ್ಪರ್ಯವೇನೆಂದರೆ ,ಕುದುರೆ ನೆಗೆತ,ಮೇಘದ ಘರ್ಜನೆ,ಸ್ತ್ರೀಯ ಮನಸ್ಸು, ಗಂಡಸರ ಭಾಗ್ಯ, ಮಳೆ ಬರುವುದು / ಬರದಿರುವುದು, ಇವುಗಳನ್ನು ತಿಳಿದುಕೊಳ್ಳುವುದು ದೇವತೆಯರಿಗೇ ಅಸಾಧ್ಯವೆಂದರೆ, ಇನ್ನು ಮನುಷ್ಯರ  ಪಾಡೇನು? ಹೀಗೇ ಚಿಂತಿಸುತ್ತಾ ಕುಳಿತಿರುವಾಗ ಸೂರ್ಯ ನೆತ್ತಿಯಮೇಲೆ ಕಾಣಿಸುತ್ತಿದ್ದ. ರೈನ್ ಕೋಟು ಆಮ್ಲಜನಕದ ಸಿಲಿಂಡರನ್ನು ನಮ್ಮ ಹೆಗಲಿಗೆ ಏರಿಸಿಕೊಂಡು ನಮ್ಮ ನಮ್ಮ ಶೇರ್ಪಾ,ಯಾಕ್,ಕುದುರೆಗಳೊಂದಿಗೆ ನಮ್ಮನ್ನು ಪ್ರತ್ಯೇಕ ಪ್ರತ್ಯೇಕವಾದ ಗುಂಪುಗಳನ್ನು ಪಾಂಡೆಯವರು ಮಾಡಿ ನಮಗೆ ಮತ್ತೊಮ್ಮೆ ಎಚ್ಚರಿಕೆಯನ್ನು ಕೊಟ್ಟರು.
ನಿಧಾನಕ್ಕೆ ಚಾರಣವನ್ನು ಪ್ರಾರಂಭಿಸಿದೆವು...

Thursday, October 15, 2009

ಮಾನಸ ಸರೋವರ ಯಾತ್ರೆ-೧೫ಪುರಾಣ ಮತ್ತು ಪುರಾಣೋತ್ತರ ಕಾಲದಲ್ಲಿ ಕೈಲಾಸ ಪರ್ವತದ ಮಹಿಮೆಯನ್ನು ಬಣ್ಣಿಸಲಾಗಿದ್ದು. ಹಿಂದೂಗಳ ಪಾಲಿಗೆ ಕೈಲಾಸ ಪರ್ವತ ಲಯ ಕರ್ತೃ ಶಿವನ ವಾಸಸ್ಥಾನ. ಕೈಲಾಸ ಪರ್ವತದಲ್ಲಿ ಬೆಳಕು ಮತ್ತು ಶಬ್ಧಗಳ ಸಂಗಮದಿಂದ ಓಂಕಾರ ನಾದ ಹೊರ ಹೊಮ್ಮುತ್ತದೆ. ಶಿವನು ನಾದೋಪಾಸಕನಾದ ಕಾರಣ ಓಂಕಾರದ ವ್ಯುತ್ಪತ್ತಿ ಇಲ್ಲಿಯೆ ಆಗಿದೆ ಎಂದು ಧರ್ಮ ಗ್ರಂಥಗಳು ಪ್ರತಿಪಾದಿಸುತ್ತವೆ. ಹಿಂದೂಗಳ ಪಾಲಿಗೆ " ಓಂ" ಪವಿತ್ರ ಶಬ್ಧ. ಮಾನಸ ಸರೋವರ ಭಾರತೀಯರ ಆದ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಕೈಲಾಸ ಪರ್ವತದಲ್ಲಿ ಕಲ್ಪವೃಕ್ಷ ಇದೆ ಎಂಬ ನಂಬಿಕೆ ಇದೆ. ಸ್ವರ್ಗಲೋಕದ ಶ್ರೀಮಂತ ದೇವತೆ ಕುಬೇರನ ನಗರ ಇದೆ ಎಂಬ ನಂಬಿಕೆ ಇದ್ದು, ಪರ್ವತದ ನಾಲ್ಕು ದಿಕ್ಕುಗಳು ಹವಳ ಮುತ್ತು ಚಿನ್ನಗಳನ್ನು ಪ್ರತಿನಿಧಿಸುತ್ತವೆ ಎಂಬ ಪ್ರತೀತಿ ಇದೆ. ಬೌದ್ಧ ಧರ್ಮಿಯರಿಗೂ ಕೈಲಾಸ ಪರ್ವತ ಪವಿತ್ರ ಯಾತ್ರಾಸ್ಥಳವಾಗಿದ್ದು, ಇಲ್ಲಿ ಉಗ್ರ ಸ್ವರೂಪಿ ಬುದ್ಧ ವಾಸವಾಗಿದ್ದಾನೆ ಎಂಬ ನಂಬಿಕೆ ಅವರಲ್ಲಿ ಇದೆ. ಜೈನ ಧರ್ಮದ ಮೊದಲ ತಿರ್ಥಂಕರ ಕೈಲಾಸ ಪರ್ವತದಲ್ಲಿ ನಿರ್ವಾಣ ಹೊಂದಿದನು ಎಂಬುದು ಅವರ ವಾದ. ಒಟ್ಟಿನಲ್ಲಿ ಏನೆ ಇರಲಿ ಇದು ಎಲ್ಲಾ ಧರ್ಮಿಯರಿಗೂ ಪವಿತ್ರ ಸ್ಥಳವಾಗಿದೆ.
ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ, ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ, ಬೌದ್ಧ, ಜೈನ ಮತ್ತು ಬಾನ್ ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ. ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ ಪರ್ವತವನ್ನು ಏರಲು ಯಾರಿಗೂ ಅನುಮತಿ ದೊರೆಯುವುದಿಲ್ಲ. ಹೀಗಾಗಿ ಜಗತ್ತಿನ ಪ್ರಮುಖ ಶಿಖರಗಳ ಪೈಕಿ ಕೈಲಾಸಪರ್ವತವೊಂದು ಮಾತ್ರ ಆರೋಹಿಸಲ್ಪಡದೇ ಉಳಿದಿದೆ. ಶಿಖರವು ಸಮುದ್ರಮಟ್ಟದಿಂದ ೨೧,೭೭೮ ಅಡಿಗಳಷ್ಟು ಎತ್ತರದಲ್ಲಿದೆಯೆಂದು ಅಂದಾಜು ಮಾಡಲಾಗಿದೆ.. ಕೈಲಾಸ ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ಸ್ಫಟಿಕ ಎಂಬ ಅರ್ಥವು ಇದೆ. ಟಿಬೆಟನ್ ಭಾಷೆಯಲ್ಲಿ ಈ ಪರ್ವತದ ಹೆಸರು ಗಾಂಗ್ಸ್ ರಿನ್-ಪೋ-ಚೆ. ಇದರ ಅರ್ಥವು "ಹಿಮದ ರತ್ನ" ವೆಂದಾಗುವುದು. ಇನ್ನೊದು ಸ್ಥಳೀಯ ಹೆಸರು ಟಿಸೆ. ಜೈನ ಪರಂಪರೆಯಲ್ಲಿ ಕೈಲಾಸಪರ್ವತವನ್ನು ಅಷ್ಟಪಾದ ಎಂದು ಉಲ್ಲೇಖಿಸಲಾಗಿದೆ.
ಹಿಂದೂಧರ್ಮದ ಪ್ರಕಾರ ಪರಶಿವನು ಕೈಲಾಸಪರ್ವತದ ಶಿಖರದ ಮೇಲೆ ಹಿಮವಂತನ ಪುತ್ರಿ ಪಾರ್ವತಿಯೊಂದಿಗೆ ನೆಲೆಸಿರುವನು. ಶಿವನು ಇಲ್ಲಿ ಸದಾ ಧ್ಯಾನಮಗ್ನನಾಗಿರುತ್ತನೆ. ಅಲ್ಲದೇ ಧನಾಧಿಪತಿ ಕುಬೇರನ ನೆಲೆಯು ಸಹ ಕೈಲಾಸಪರ್ವತದ ಸನಿಹದಲ್ಲಿಯೇ ಎಂದು ಹೇಳಲಾಗುತ್ತದೆ. ಹಿಂದೂಧರ್ಮದ ಅನೇಕ ಶಾಖೆಗಳು ಕೈಲಾಸಪರ್ವತವನ್ನು ಸ್ವರ್ಗ, ಆತ್ಮದ ಅಂತಿಮ ನೆಲೆ ಮತ್ತು ವಿಶ್ವದ ಪರಮೋನ್ನತ ಅಧ್ಯಾತ್ಮಿಕ ಕೇಂದ್ರವೆಂದು ಪರಿಗಣಿಸುತ್ತವೆ. ವಿಷ್ಣುಪುರಾಣದ ಪ್ರಕಾರ ಕೈಲಾಸಪರ್ವತವು ಜಗತ್ತಿನ ಕೇಂದ್ರ ಮತ್ತು ಅದರ ನಾಲ್ಕು ಮುಖಗಳು ಸ್ಪಟಿಕ, ಪದ್ಮರಾಗ, ಸ್ವರ್ಣ ಮತ್ತು ನೀಲವೈಢೂರ್ಯದಿಂದ ಮಾಡಲ್ಪಟ್ಟಿವೆ. ಕೈಲಾಸಪರ್ವತವು ಜಗತ್ತಿನ ಆಧಾರಸ್ಥಂಭ. ಅದರ ಎತ್ತರ ೮೪೦೦೦ ಯೋಜನಗಳಷ್ಟು. ಅದು ವಿಶ್ವಮಂಡಲದ ಕೇಂದ್ರವಾಗಿದ್ದು ಪದ್ಮಾಕೃತಿಯಲ್ಲಿ ಹಬ್ಬಿರುವ ಆರು ಪರ್ವತಶ್ರೇಣಿಗಳ ಕೇಂದ್ರಸ್ಥಾನದಲ್ಲಿದೆ. ಕೈಲಾಸಪರ್ವತದಿಂದ ಹೊರಹರಿಯುವ ನಾಲ್ಕು ನದಿಗಳು ನಾಲ್ಕೂ ದಿಕ್ಕಿನಲ್ಲಿ ಪ್ರವಹಿಸಿ ಜಗತ್ತನ್ನು ನಾಲ್ಕು ಪ್ರದೇಶಗಳನ್ನಾಗಿ ವಿಭಜಿಸಿವೆ. ಜಗತ್ತಿನ ಅತ್ಯಂತ ದೊಡ್ಡ ಮತ್ತು ಅತಿ ಪ್ರಮುಖ ಶಿಲೆಯಲ್ಲಿ ಕೊರೆದು ಮಾಡಿರುವ ದೇವಾಲಯವೆಂದರೆ ಎಲ್ಲೋರಾದ ಕೈಲಾಸ ದೇಗುಲ. ಇದಕ್ಕೆ ಕೈಲಾಸಪರ್ವತವೇ ಸ್ಫೂರ್ತಿ. ಈ ದೇವಸ್ಥಾನದ ಅನೇಕ ಶಿಲ್ಪಗಳು ಶಿವಪಾರ್ವತಿಯರಿಗೆ ಸಂಬಂಧಿಸಿದ ಘಟನಾವಳಿಗಳನ್ನು ತೋರಿಸುತ್ತವೆ. ಇವುಗಳ ಪೈಕಿ ರಾವಣನು ಕೈಲಾಸಪರ್ವತವನ್ನು ಬುಡಸಮೇತ ಕೀಳಲು ನಡೆಸಿದ ಪ್ರಯತ್ನವೂ ಒಂದು.
ಬೌದ್ಧ ಧರ್ಮದಲ್ಲಿ ಕೈಲಾಸಪರ್ವತವನ್ನು ಚಿತ್ರಿಸಿರುವ ಟಿಬೆಟ್ ನ ತಾಂತ್ರಿಕ ಬೌದ್ಧರು ಕೈಲಾಸಪರ್ವತವು ಪರಮೋನ್ನತ ಆತ್ಮಾನಂದವನ್ನು ಪ್ರತಿನಿಧಿಸುವ ಡೆಮ್ ಚೋಕ್ ಬುದ್ಧನ ( ಡೆಮ್ ಚೋಗ್ ಮತ್ತು ಚಕ್ರಸಂವರ ಎಂಬ ಇತರ ಹೆಸರುಗಳು ಈತನಿಗೆ) ನೆಲೆಯೆಂದು ನಂಬುತ್ತಾರೆ. ತಾಂತ್ರಿಕ ಬೌದ್ಧಧರ್ಮದ ಮುಂದಾಳಾಗಿದ್ದ ಮಿಲರೇಪನು ಬಾನ್ ಧರ್ಮದ ನಾಯಕನಾಗಿದ್ದ ನಾರೋ-ಬೊಂಚುಂಗ್ ನಿಗೆ ಸವಾಲೆಸೆಯಲು ಟಿಬೆಟ್ ಗೆ ಆಗಮಿಸಿದನು. ಈರ್ವರ ಮಧ್ಯೆ ಮಾಯಮಂತ್ರಗಳ ತೀವ್ರ ಕದನ ನಡೆದು ಯಾರೂ ಜಯ ಸಾಧಿಸಲಾಗಲಿಲ್ಲ. ಕೊನೆಗೆ ಇಬ್ಬರಲ್ಲಿ ಯಾರು ಕೈಲಾಸಪರ್ವತದ ಶಿಖರವನ್ನು ಹೆಚ್ಚು ವೇಗವಾಗಿ ತಲುಪುವರೋ ಅವರೇ ವಿಜಯಿಯಾಗುವರೆಂದು ತೀರ್ಮಾನಿಸಲಾಯಿತು. ನಾರೋ-ಬೊಂಚುಂಗ್ ಮಾಯಾಪಾತ್ರೆಯೊಂದರ ಮೇಲೆ ಕುಳಿತು ಶಿಖರದತ್ತ ಧಾವಿಸತೊಡಗಿದರೆ ಮಿಲರೇಪನು ಮೌನವಾಗಿ ಕುಳಿತು ಧ್ಯಾನಮಗ್ನನಾದನು. ಆದರೆ ನಾರೋ-ಬೊಂಚುಂಗ್ ಇನ್ನೇನು ಶಿಖರವನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಮಿಲರೇಪನು ಎದ್ದು ಸೂರ್ಯಕಿರಣಗಳ ಮೇಲೇರಿ ಶಿಖರವನ್ನು ಮೊದಲು ತಲುಪಿ ಸ್ಫರ್ದೆಯಲ್ಲಿ ವಿಜಯಿಯಾದನು. ಈತನಿಂದ ಟಿಬೆಟ್ ಗೆ ತಾಂತ್ರಿಕ ಬೌದ್ಧ ಧರ್ಮವು ಆಗಮಿಸಿತೆಂದು ನಂಬಿಕೆ. ( ಸೂಚನೆ : ಟಿಬೆಟ್ ಗೆ ತಾಂತ್ರಿಕ ಬೌದ್ಧಧರ್ಮವನ್ನು ತಂದವನು ಮಲಿರೇಪನೋ ಅಥವಾ ಪದ್ಮಸಂಭವನೋ ಎಂಬ ಬಗ್ಗೆ ಸಾಕಷ್ಟು ಗೊಂದಲವಿರುವುದು.)
ಕೈಲಾಸಪರ್ವತವನ್ನು ಅಷ್ಟಪಾದವೆಂದು ಕರೆಯುವ ಜೈನರು ತಮ್ಮ ಧರ್ಮದ ಮೂಲಪುರುಷ ಋಷಭದೇವನು ಈ ಸ್ಥಳದಲ್ಲಿ ನಿರ್ವಾಣ ಹೊಂದಿದನೆಂದು ನಂಬುವರು...
ಸಹಸ್ರಾರು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಆಸ್ತಿಕರು ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳುವರು. ಹಲವು ಧರ್ಮದ ಶ್ರದ್ಧಾಳುಗಳು ಕೈಲಾಸಪರ್ವತಕ್ಕೆ ಕಾಲ್ನಡಿಗೆಯಲ್ಲಿ ಸುತ್ತುಬರುವುದು ಒಂದು ಪಾವನ ಕಾಯಕವೆಂದು ಭಾವಿಸುತ್ತಾರೆ. ಹಿಂದೂಗಳು ಮತ್ತು ಬೌದ್ಧರು ಪರ್ವತಕ್ಕೆ ಪ್ರದಕ್ಷಿಣವಾಗಿ ಸುತ್ತು ಬಂದರೆ ಜೈನರು ಮತ್ತು ಬಾನ್ ಧರ್ಮೀಯರು ಕೈಲಾಸಪರ್ವತಕ್ಕೆ ಅಪ್ರದಕ್ಷಿಣವಾಗಿ ಸುತ್ತು ಬರುತ್ತಾರೆ. ಪರ್ವತವನ್ನು ಒಂದು ಬಾರಿ ಸುತ್ತಿಬರಬೇಕಾದರೆ 162 ಕಿ.ಮೀ. ಗಳಷ್ಟು ಉದ್ದದ ದಾರಿಯನ್ನು ಕ್ರಮಿಸಬೇಕಾಗುವುದು.
ಕೆಲವು ಯಾತ್ರಿಕರು ಕೈಲಾಸಪರ್ವತವನ್ನು ಒಂದೇ ದಿನದಲ್ಲಿ ಸುತ್ತಿಬರಬೇಕೆಂದು ನಂಬುವರು. ಆದರೆ ಒರಟು ಮೇಲ್ಮೈ, ಉನ್ನತಪ್ರದೇಶದಲ್ಲುಂಟಾಗುವ ಅಸ್ವಾಸ್ಥ್ಯ ಮತ್ತು ಪ್ರತಿಕೂಲ ವಾತಾವರಣಗಳಿಂದಾಗಿ ಇದು ಕಠಿಣಸಾಧ್ಯ ಮತ್ತು ಕೆಲವೇ ಕೆಲವರು ಮಾತ್ರ ಇದನ್ನು ಸಾಧಿಸುವರು. ಕೆಲವು ಭಕ್ತರು ಇಡೀ ಪರ್ವತಕ್ಕೆ ಅಂಗಪ್ರದಕ್ಷಿಣೆಯನ್ನು ಸಹ ಮಾಡುವರು. ಈ ಕ್ರಮದಲ್ಲಿ ಪ್ರತಿ ಹೆಜ್ಜೆಗೊಮ್ಮೆ ಭಕ್ತರು ಪರ್ವತಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಆ ಸ್ಥಾನವನ್ನು ಬೆರಳಿನಿಂದ ಗುರುತಿಸಿ ನಂತರ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿ ಮುಂದೆ ಕೈಗಳು ಮತ್ತು ಮಂಡಿಯ ಮೇಲೆ ಮೊದಲು ಗುರುತಿಸಿದ್ದ ಸ್ಥಾನಕ್ಕೆ ತೆವಳುವರು. ಈ ಪ್ರಕಾರದ ಅಂಗಪ್ರದಕ್ಷಿಣೆಯ ಮೂಲಕ ಕೈಲಾಸಪರ್ವತವನ್ನು ಒಂದು ಬಾರಿ ಸುತ್ತಿಬರಲು ಕನಿಷ್ಟ ನಾಲ್ಕು ದಿನಗಳು ತಗಲುತ್ತವೆಯಲ್ಲದೆ ಅತಿ ತೀವ್ರವಾದ ದೈಹಿಕ ದಂಡನೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕೈಲಾಸಪರ್ವತವು ಟಿಬೆಟ್ ನ ಹಿಮಾಲಯದಲ್ಲಿ ಅತಿ ದುರ್ಗಮ ಪ್ರಾಂತ್ಯದಲ್ಲಿ ಮತ್ತು ಪ್ರತಿಕೂಲ ಪರಿಸರದಲ್ಲಿದೆ. ಈಚೆಗೆ ಯಾತ್ರಿಕರಿಗೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ಕೈಲಾಸಪರ್ವತವನ್ನು ಪೂಜಿಸುವ ಎಲ್ಲ ಧರ್ಮಗಳ ಪ್ರಕಾರ ಪರ್ವತಕ್ಕೆ ಕಾಲು ಸೋಕಿಸುವುದು ಅತಿ ಘೋರ ಪಾಪದ ಕಾರ್ಯ. ಇದನ್ನು ಮೀರಿ ಪರ್ವತವನ್ನು ಏರಲು ಹೊರಟವರು ಪ್ರಾಣಕಳೆದುಕೊಂಡರೆಂದು ಜನರ ಹೇಳಿಕೆ. ೧೯೫೦ರಲ್ಲಿ ಚೀನೀಯರಿಂದ ಟಿಬೆಟ್ ನ ಆಕ್ರಮಣ ಮತ್ತು ಭಾರತ-ಚೀನಾಗಳ ನಡುವೆ ಸಂಭವಿಸಿದ ಘರ್ಷಣೆಗಳಿಂದಾಗಿ ೧೯೫೯ ರಿಂದ ೧೯೮೦ ರ ವರೆಗೆ ಕೈಲಾಸಪರ್ವತದ ಯಾತ್ರೆ ನಿಂತುಹೋಗಿತ್ತು. ೧೯೮೦ರ ನಂತರ ಪ್ರತಿವರ್ಷ ಭಾರತದಿಂದ ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳಲು ನಿಗದಿತ ಸಂಖ್ಯೆಯ ಯಾತ್ರಿಕರಿಗೆ ಪರವಾನಿಗಿ ನೀಡಲಾಗುತ್ತಿದೆ. ಈ ಯಾತ್ರೆಯು ಭಾರತ ಮತ್ತು ಚೀನಾ ಸರಕಾರಗಳ ಮಾರ್ಗದರ್ಶನ ಮತ್ತು ನಿರ್ದೇಶನದಡಿ ನಡೆಯುವುದು. ಭಾರತೀಯರು ಸಾಮಾನ್ಯವಾಗಿ ಉತ್ತರಾಖಂಡದ ಕುಮಾವ್ ಹಿಮಾಲಯವನ್ನು ಕಾಲ್ನಡಿಗೆಯಲ್ಲಿ ದಾಟಿ ಕೈಲಾಸಪರ್ವತವನ್ನು ತಲುಪುವರು. ಈ ಪಾದಯಾತ್ರೆಯು ಅತಿ ದೀರ್ಘದಾರಿಯದು ಮತ್ತು ಅಪಾಯಕಾರಿ ಕೂಡ. ಬೇರೆ ಮಾರ್ಗಗಳೆಂದರೆ ಕಾಠ್ಮಂಡುವಿನಿಂದ ಅಥವಾ ಲ್ಹಾಸಾದಿಂದ ರಸ್ತೆಯ ಮೇಲಿನ ಪಯಣ. ಕಾಠ್ಮಂಡು ಮತ್ತು ಲ್ಹಾಸಾಗಳನ್ನು ಭಾರತದಿಂದ ವಿಮಾನಯಾನದ ಮೂಲಕ ತಲುಪಬಹುದು. ಪವಿತ್ರ ಕೈಲಾಸಪರ್ವತದ ಪ್ರದಕ್ಷಿಣೆಯನ್ನು ಕಾಲ್ನಡಿಗೆಯಿಂದ ಅಥವಾ ಕುದುರೆಯ ಮೇಲೆ ಕುಳಿತು ಮಾಡಬಹುದು. ಕಾಲ್ನಡಿಗೆಯು ೧೫೦೦೦ ಅಡಿ ಎತ್ತರದಲ್ಲಿ ಆರಂಭವಾಗಿ ಮುಂದೆ ೧೯೦೦೦ ಅಡಿ ಎತ್ತರದಲ್ಲಿ ಡೋಲ್ಮಾ ಪಾಸ್ ಅನ್ನು ದಾಟಬೇಕಾಗುವುದು. ಇದು ಒಟ್ಟು ನಾಲ್ಕು ದಿನಗಳ ಹಾದಿ......

Wednesday, October 14, 2009

ಮಾನಸ ಸರೋವರ ಯಾತ್ರೆ -೧೪ಮನಸ್ಸಲ್ಲಿ ಆ ಸೂರ್ಯ ದೇವನಿಗೆ ನೂರಾರು ಪ್ರಶ್ನೆಗಳ ಸುರಿಮಳೆ ಹಾಕುತ್ತಿದ್ದೆ….. ನುಡಿಯಲು ಒಂದು ಮಾತು ಸಹಾ ಹೊರಬರಲಿಲ್ಲ..ಬರಿ ಮೌನ ಎಲ್ಲೆಲ್ಲು ಮೌನ ಅಷ್ಟೇ ….!! ಇಂದು ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಾನಸದ ತಟಕ್ಕೆ ಬಂದೆ.. ನಮ್ಮೊಡನೆ ಆಚಾರ್ಯರಾದ ಕೇಶವ ದೀಕ್ಷಿತರೂ ಇದ್ದರು. ಅಂದು ಹುಣ್ಣಿಮೆ, ನಾವೆಲ್ಲರೂ ಮಾನಸದ ತಟದಲ್ಲಿ ಆಚಾರ್ಯಯರ ನಿರ್ದೇಶಾನುಸಾರ ತರ್ಪಣಗಳನ್ನು ನೀಡಿದೆವು.ಪ್ರತಿಯೊಬ್ಬರೂ ಮಾನಸದ ಜಲವನ್ನು ಮತ್ತು ಅಲ್ಲಿಂದಲೇ ಒಂದು ಕಲ್ಲನ್ನು ನಾವು ನಾವು ತಂದಿದ್ದ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ತುಂಬಿಕೊಂಡು ಅಲ್ಲೇ ಹತ್ತಿರವಿರುವ ಒಂದು ಮಂಟಪಕ್ಕೆ ಬಂದು ಶ್ರೀಯುತ ಅಳಗಪ್ಪನ್ ಚೆಟ್ಟಿಯಾರ್ ಅವರ ಸಂಕಲ್ಪದಂತೆ ಶತ ರುದ್ರಾಭಿಷೇಕ ಮತ್ತು ರುದ್ರ ಹವನವನ್ನು ನಾವು ಮಾಡಿದೆವು. ಕೈಲಾಸನಾಥನ ಸಂಕಲ್ಪವನ್ನು ಮಾನಸ ಸರೋವರದಿಂದ ತಂದಿದ್ದ ಕಲ್ಲಿಗೆ ಪೂಜೆಯನ್ನು ಮಾಡಿದೆವು.ತದನಂತರ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯಂತೆ ಪೂಜೆಯ ನಂತರ ಮಾನಸಕ್ಕೆ ಅಭಿಷೇಕ ಜಲವನ್ನು ಸಮರ್ಪಿಸಿದೆವು.ಅಲ್ಲಿ ಚೆಟ್ಟಿಯಾರ್ ಅವರು ನಮ್ಮನ್ನು ಬಿಟ್ಟು ಏಕಾಂತವಾಗಿ ಪ್ರಾರ್ಥನೆಯನ್ನು ಮಾಡಿದರು. ನನಗೆ ಬಹಳ ಆಶ್ಚರ್ಯ! ಇಂತಹ ಶ್ರೀಮಂತ ವ್ಯಕ್ತಿ ಆಧ್ಯಾತ್ಮಿಕ ವಿಷಯದಲ್ಲೋ ಇದ್ದಾರೆ ಎಂದು ನಂಬಿಕೆ ಬಂದದ್ದೇ ಆ ಕ್ಷಣ,! ಕೇವಲ ಒಂದು ದಿವಸದ ತನ್ನ ವೈಯುಕ್ತಿಕ ಕಾರ್ಯಕ್ರಮಕ್ಕೋಸ್ಕರ ನಮ್ಮನ್ನು ಇಂತಹ ದಿವ್ಯ ತಾಣಕ್ಕೆ ಕರೆದುಕೊಂಡು ಬಂದು ನಮಗೂ ಆ ದಿವ್ಯ ದರ್ಶನ ಮಾಡಿಸಿದ ಆ ಪುಣ್ಯಾತ್ಮ ಅಳಗಪ್ಪನ್!! ಇವತ್ತು ರಾತ್ರಿಯಿಂದ ಕೈಲಾಸ ಪರ್ವತದ ಪ್ರದಕ್ಷಿಣೆ ಪ್ರಾರಂಭ , ಅದಕ್ಕಾಗಿ ಬೇಕಾದ ಆಹಾರ ಸಾಮಾಗ್ರಿಗಳನ್ನು ನಮ್ಮ ಬ್ಯಾಗಿನಲ್ಲಿ ತುಂಬಿಸಿ ತಯಾರಾದೆವು.ಅಲ್ಲಿಯ ಕಾಲಮಾನ ಪ್ರಕಾರ ಸಂಜೆ ೫.೩೦ ರ.. ನಾವೆಲ್ಲಾ ಆ ಹುಣ್ಣಿಮೆ ಚಂದ್ರನನ್ನು ನೋಡಲು ಮಾನಸದ ತಟಕ್ಕೆ ಬಂದೆವು.
ಪ್ರತಿದಿನ ಸೂರ್ಯ ಬಾನಿನಿಂದ ಜಾರಿ ಮುಳುಗು ಹಾಕುವ ಸಮಯ, ಬೆಳಕನ್ನು ಕತ್ತಲು ನುಂಗಿ ಹಾಕುವ ಸಮಯ. ಬಾನಿನಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ನನ್ನ ಕಲ್ಪನೆಗಳು, ಪ್ರಶ್ನೆಗಳು ಚುಕ್ಕಿಗಳಾಗಿ ಮನಸ್ಸನ್ನು ಆವರಿಸಿ ಬಿಟ್ಟಿರುತ್ತದೆ. ಚಂದಿರನ ಆ ಮಂದವಾದ ಬೆಳ್ಳಿ ಬೆಳಕು ನನ್ನನ್ನು ನಿಧಾನವಾಗಿ ಅವನತ್ತ ಸೆಳೆಯುತ್ತದೆ. ನನಗೆ ನಾನೇ ತಿಳಿಯದಂತೆ ಚಂದಿರನ ಜೊತೆ ನನ್ನ ಮನಸು ಹರಟ ತೊಡಗುತ್ತದೆ.ಅಲ್ಲಿ ನನ್ನ ಮುಂದಿರುವ ದಿನಗಳು ಮೆಲ್ಲಮೆಲ್ಲನೆ ರೂಪ ಪಡೆಯುತ್ತದೆ. ಬೆಳದಿಂಗಳ ಲೋಕ ಕವನಗಳಾಗಿ ಮಾನಸದ ತುಂಬೆಲ್ಲಾ ಓಡಾಡುತ್ತದೆ. ಬರೆಯಲು ಕುಳಿತರೆ ಬಲೆ ಇಲ್ಲದೆ ಮೀನನ್ನು ಹಿಡಿಯಲು ಹೊರಟಂತೆ, ನುಣುಚಿ ಹೋಗಿ ನನ್ನನ್ನು ಆಟವಾಡಿಸುತ್ತದೆ. ಸುಸ್ತಾಗಿ ಛೆ! ಅಂದುಕೊಂಡು ಕೃತಕ ಬೆಳಕಿನಡಿಗೆ ಪುಸ್ತಕಗಳಿಗಾಗಿ, ಹರಟೆ ಹೊಡೆಯಲು ಹೊಟ್ಟೆ ತುಂಬಿಸಲು ಹೋಗಿ ಬಿಡುತ್ತೇನೆ.ಸಂಜೆ ಬಾನಿನಲ್ಲಿ ನಕ್ಷತ್ರಗಳು ಸದ್ದಿಲ್ಲದೆ ನನ್ನ ಮನಸಿನಲ್ಲಿ ಕುಳಿತಿರುತ್ತದೆ. ಮತ್ತೆ ಚಂದಿರನ ಜೊತೆ ಮಾತಿಗೆ ಕುಳಿತರೆ ಹೊತ್ತು ಹೋದ್ದದ್ದು ತಿಳಿಯುವುದಿಲ್ಲ. ಬೆಳಕು ಹರಿಯುವ ವರೆಗೂ ನಿದ್ದೆ ಹತ್ತುವುದೇ ಇಲ್ಲ. ಮತ್ತೆ ಸಂಜೆಗಾಗಿ ಮನಸು ಕಾಯುತ್ತಿರುತ್ತದೆ ... ಆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಅದೇ ಖುಷಿ ನೀಡುವ ಚಳಿ ಗಾಳಿ.. ನನ್ನೊಳಗೆ ಇದೀಗ ಕಲ್ಪನೆಗಳಿಲ್ಲ,ಯಾವ ಭಾವಗಳೂ ಇಲ್ಲ. ಸೂರ್ಯನ ಅಸ್ತವಾಯಿತು.ಎಂದೋ ಬದುಕಿನಲ್ಲಿ ನಾನು ನಿರೀಕ್ಷೆ ಮಾಡಿದ ಸುಂದರ ಸಮಯ...ಈ ದಿವಸ ನನ್ನ ಕಣ್ಣ ಮುಂದೆ.. ಅದೂ ಎಂದಿನಂತೆಯೇ ಬೆಳಗು. ಗಡಗುಡುವ ಗುಡುಗಿಲ್ಲ. ಭಾವನಾತ್ಮಕ ಬೆಡಗಿನ ಬೆಳಗು. ಚುಮು ಚುಮು ಚಳಿ. ಮನ ತುಂಬಿದ ಸಿಂಗಾರ. ಮೈ ತುಂಬ ಬಂಗಾರ. ಬನದ ಹೂಗಳೆಲ್ಲ ಮುಡಿಯನೇರಿ ನಗುತ್ತಲಿವೆ. ನಾ ನಕ್ಕಿದ್ದನ್ನೇ ಸೆರೆಹಿಡಿಯುತ್ತಿದ್ದ ಕ್ಯಾಮೆರಾ. ಕೈ ತೋರಿ, ಕೈ ಹಿಡಿದು ಮನವನಾವರಿಸಿಕೊಂಡು ನನ್ನೊಳಗೇ ಬೆಳೆದ ಸುಧಿಯೆಂಬ ಚಂದಮಾಮನು ಅಂದು ನನ್ನ ಕೈಹಿಡಿದು ಬಾಳನ್ನು ಬೆಳದಿಂಗಳಾಗಿಸಿದ... ಅಂಥ ಬೆಳದಿಂಗಳದು. ಇನ್ನೇನು ಬೇಕಿತ್ತು ಈ ಬದುಕಿಗೆ? ಉತ್ತರದಲ್ಲಿ ಕೈಲಾಸನಾಥನು ಆ ಬೆಳದಿಂಗಳ ಬೆಳಕಿನಲ್ಲಿ ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾನೆ.. ಪಾಂಡೆಯವರು ನಮ್ಮನ್ನು ಕರೆದರು. ಹೋಗಬೇಕೆಂದುಕೊಂಡೆ. ಹೇಗೆ ಹೋಗಲಿ! ಚಂದಮಾಮನು ತನ್ನ ಮೊಗ್ಗನ್ನು ನನ್ನ ಮಡಿಲೊಳಗಿಟ್ಟು ಬೆಳದಿಂಗಳ ಅರಳಿಸುವ ಭಾರವ ನನ್ನೆದೆಯೊಳಗೆ ಬಿತ್ತಿ ನಡೆದಿದ್ದ...ಹೀಗೆ ಭಾವನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಸಮಯ ರಾತ್ರಿ ಘಂಟೆ ೮.೦೦ ಆದದ್ದೇ ತಿಳಿಯಲಿಲ್ಲ.
ನಾವು ರಾತ್ರಿ ೮.೩೦ಕ್ಕೆ ಊಟದ ಶಾಸ್ತ್ರ ಮುಗಿಸಿದೆವು. ಎಲ್ಲರೂ ಬ್ಯಾಗನ್ನು ನಮ್ಮ ನಮ್ಮ ಶೆರ್ಪಗಳ ಜೊತೆ ನೀಡಿ ನಮಗಾಗಿ ಕಾದಿರಿಸಿದ್ದ ಯಾಕ್ ಮತ್ತು ಕುದುರೆಗಳ ಜೊತೆ ಬೆಳದಿಂಗಳಲ್ಲಿ ಹೆಜ್ಜೆ ಹಾಕಿದೆವು.ಸುಮಾರು ೩೫ ಮಂದಿ ಈ ಚಾರಣದಲ್ಲಿ ಇದ್ದೆವು. ಮಾತು, ನೋಟ, ಸ್ಪರ್ಶಗಳು ಕಂಗಾಲಾಗಿ ನಿಂತ ನಂತರದ ಮೌನಶ್ರೇಣಿಯ ಚಾರಣ ಪಯಣ ನಮ್ಮದಿತ್ತು. ಅಲ್ಲಿ ಗದ್ದಲವಿರಲಿಲ್ಲ, . ಪ್ರಕೃತಿಯ ಚೆಲುವು ಬಗೆಬಗೆಯ ರೂಪಿನಲ್ಲಿ ಮೈದಳೆದ ಆ ಹಾದಿಯಲ್ಲಿ ನಮ್ಮ ಚಾರಣ
ಅಶಕ್ತರಾದವರು ದಾರ್ಚಿನ್ ನ ನಮ್ಮ ವಸತಿಗೃಹದಲ್ಲಿಯೇ ತಂಗಿದರು.ಸುಮಾರು ರಾತ್ರಿ ೧೦.ಘಂಟೆಯ ಸಮಯ ..
ಸಮತಟ್ಟಾದ ನೆಲವಾಗಿದ್ದರೆ ಏನೂ ತೊಂದರೆ ಇಲ್ಲ, ಆದರೆ ಚಾರಣ ಮಾಡುವುದು ಇದೆಯಲ್ಲಾ ಅದರಂತಹ ನರಕಯಾತನೆ ಇನ್ನೊಂದಿಲ್ಲ. ಮೊದಲ ಎರಡು ಕಿಲೋಮೀಟರ್ ಏನೂ ಅನ್ನಿಸಲಿಲ್ಲ, ಏಕೆಂದರೆ ಅದು ಪೂರ್ತಿಯಾಗಿ ಏರಿಕೆ ಇರಲಿಲ್ಲ. ಅಲ್ಲಲ್ಲಿ ಸಮತಟ್ಟಾದ ಭೂಮಿಯೂ ಇತ್ತು. ರಾತ್ರಿ ಹನ್ನೊಂದು ಗಂಟೆಗೆ ಹತ್ತಲು ಶುರುಮಾಡಿದ ಯಾತ್ರೆ ಮಾತ್ರ ಮರೆಯಲಾಗುವುದಿಲ್ಲ. ಒಂದು ಮೀಟರ್ ಮೇಲೆ ಹೋಗಲು ಸುಮಾರು ನಾಲ್ಕು ಮೀಟರ್‌ನಷ್ಟು ನೆಡೆಯಬೇಕಿತ್ತು. ಜಿಗ್-ಜಾಗ್ ಮಾದರಿಯಲ್ಲಿ ನಾವು ನೆಡೆಯುತ್ತಿದ್ದೆವು. ನೇರವಾಗಿ ನೇಡೆಯುವುದು ಅಸಾಧ್ಯವಾಗಿತ್ತು, ನಾವು ಹೆಜ್ಜೆ ಇಟ್ಟರೆ ಕಾಲುಗಳು ಹಾಗೆ ಕೆಳಕ್ಕೆ ಬರುತ್ತಿದ್ದವು, ಪರ್ವತದ ಆ ಮಣ್ಣು ನಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ. ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಪರ್ವತವನ್ನು ಹತ್ತಲು ಬಂದಿದ್ದಕ್ಕೆ ನಮ್ಮನ್ನು ನಾವೆ ಶಪಿಸಿಕೊಳ್ಳುತ್ತಾ ನೆಡೆಯುತ್ತಿದೆವು. ಸುಮಾರು ನಾಲ್ಕು ತಾಸುಗಳ ನಂತರ ಒಂದು ಗುಹೆ ಸಿಕ್ಕಿತು. ಅಲ್ಲಿ ಕೇವಲ ಹತ್ತುನಿಮಿಷ ಕುಳಿತುಕೊಳ್ಳಲು ಅವಕಾಶ. ಮಲಗಿಕೊಂಡರೆ ಆಮ್ಲಜನಕ ಕಡಿಮೆಯಾಗಿ ನಮಗೆ ಗೊತ್ತಾಗದೆ ನಮ್ಮ ಪ್ರಾಣ ಹಾರಿಹೋಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರಿಂದ ಯಾರೂ ಮಲಗಲು ಹೋಗಲಿಲ್ಲ. ಅಲ್ಪ ವಿರಾಮದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು.
ಎಲ್ಲರ ಕಾಲು ಪದ ಹೇಳುತ್ತಿದ್ದವು, ಯಾರಿಗೂ ಪರ್ವತ ಏರುವ ಆಸಕ್ತಿ ಇಲ್ಲದಾಗಿತ್ತು. ಆದರೂ ಇಷ್ಟು ಕಷ್ಟ ಪಟ್ಟಿರುವ ನಾವು ಇನ್ನು ಸ್ವಲ್ಪ ದೂರ ಎನ್ನುವ ಪಾಂಡೆಯವರ ಮಾತು ಎಲ್ಲರನ್ನು ಹತ್ತಲು ಪ್ರೋತ್ಸಾಹಿಸುತ್ತಿತ್ತು. ಅಲ್ಲಲ್ಲಿ ಕೆಲವರು ವಾಂತಿ ಮಾಡಿಕೊಳ್ಳುವುದು, ಕೈ ಕಾಲು ಹಿಚುಕಿಕೊಳ್ಳುವುದು, ಅಳುವ ಮುಖ ಮಾಡಿ ಕುಳಿತುಕೊಂಡಿರುವುದು ಸಾಮಾನ್ಯದೃಶ್ಯವಾಗಿತ್ತು. ಯಾರಿಗೂ ಇನ್ನೊಬ್ಬರ ಮೇಲೆ ಕರುಣೆ ಅನ್ನುವುದು ಬರುತ್ತಿರಲಿಲ್ಲ. ನಿಂತಲ್ಲೆ ಕೈ ಎತ್ತಿ, ಇಲ್ಲೆ ಇದೆ ಬನ್ನಿ ಎಂದು ನಮ್ಮ ಶೇರ್ಪಾ ಪ್ರತಿ 10 ನಿಮಿಷಕ್ಕೆ ಒಮ್ಮೆ ಹೇಳುತ್ತಿದ್ದ. ನಾವು ಎಲ್ಲಿದ್ದೇವೆ? ಇನ್ನು ಎಷ್ಟು ದೂರ ಇದೆ? ಎನ್ನುವುದು ತಿಳಿದಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ತೇಪೆ ಕಾಣಿಸುತ್ತಿತ್ತು. ಮೊದಲು ಮಂಜನ್ನು ನೈಸರ್ಗಿಕವಾಗಿ ನಾನು ನೋಡಿರಲಿಲ್ಲ. ಯಾವಾಗ ಮಂಜು ಸಿಗುತ್ತದೊ ಅದರ ಮೇಲೆ ಹತ್ತು ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಆಟವಾಡುತ್ತೇನೆ, ಅದರ ಮೇಲೆ ಮಲಗಿ ಉರುಳಾಡುತ್ತೇನೆ ಎಂದು ಏನೇನೊ ಊಹೆಗಳನ್ನು ಮಾಡಿಕೊಂಡಿದ್ದೆ. ಬೆಳಗಿನ ಜಾವ ಸುಮಾರು ೩.೦೦ ಗಂಟೆಯ ಸಮಯ, ಹತ್ತುವಾಗ ಒಂದು ಕಡೆ ಹತ್ತಿಯನ್ನು ಹಾಸಿದ ಹಾಗೆ ಕಾಣಿಸುತ್ತಿತ್ತು. ನನ್ನ ಹಿಂದೆ ಬರುತ್ತಿದ್ದವನು ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಅಲ್ಲಿ ಐಸ್ ಬಿದ್ದೆದೆ ಅಂದ, ನನಗೆ ಸರಿಯಾಗಿ ಕೇಳಿಸಲಿಲ್ಲ. ನಾನು ಹತ್ತಿರ ಹೋದಮೇಲೆ ತಿಳಿಯಿತು ಅದು ಮಂಜುಗಡ್ಡೆಯ ಹಾಸಿಗೆ ಎಂದು. ಹಿಂದೆ ತಿರುಗಿ ನಿಧಾನವಾಗಿ ಹೇಳಿದೆ ನೋಡು ಇಲ್ಲಿ ಮಂಜು ಬಿದ್ದಿದೆ, ನಿನಗೆ ಆಸೆ ಇದ್ದರೆ ಮುಟ್ಟಿ ನೋಡು, ನನಗಂತೂ ಅದರನ್ನು ಮುಟ್ಟುವ ಆಸಕ್ತಿಯೂ ಇಲ್ಲ, ಕೂತರೆ ಏಳುವ ಶಕ್ತಿಯೂ ಇಲ್ಲ ಎಂದು ಹೇಳಿ ನನ್ನ ಆಮೆ ವೇಗದ ಪ್ರಯಾಣವನ್ನು ಮುಂದುವರೆಸಿದೆ. ನಮ್ಮ ಜೊತೆಗಾರರು ಬಹಳ ಜನ ಹಿಂದುಳಿದ ಕಾರಣ ನಾನು ಬೇರೊಬ್ಬ ಗೈಡನ್ನು ಹಿಂಬಾಲಿಸಿ ಹೊರಟೆ. ಒಬ್ಬಳು ಚೈನಿ ಹುಡುಗಿಯನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆಲ್ಲಿ ಆ ಹುಡುಗಿ ಕುಳಿತಿಕೊಳ್ಳುತ್ತಾಳೊ ಅಲ್ಲೆ ನಾನು ಕೂಡ ಸುಧಾರಿಸಿಕೊಳ್ಳುತ್ತಿದ್ದೆ. ಕೆಲವು ಕಡೆ ಅವಳು ವಾಂತಿಮಾಡಿಕೊಂಡಳು. ಆದರೂ ಅವಳು ತನ್ನ ಪ್ರಯಾಣವನ್ನು ನಿಲ್ಲಿಸದೆ ಮುಂದುವರೆಸುತ್ತಿದ್ದಳು. ಈ ರೀತಿಯ ಪರ್ವತ ಹತ್ತುವಾಗ ಸುಧಾರಿಸಿಕೊಳ್ಳಲು ಕೂತರೆ ಇನ್ನೂ ಜಾಸ್ತಿ ಸುಸ್ತಾಗುತ್ತದೆ. ಆಮ್ಲಜನಕ ಕಡಿಮೆ, ಚಳಿ ಜಾಸ್ತಿ ಇದೆ, ಕೊರೆಯುವ ಚಳಿಯಲ್ಲೂ ಕೈ ಕಾಲು ಉರಿಯುತ್ತಿತ್ತು. ಹಾಗಾಗಿ ಸುಧಾರಿಸಿಕೊಳ್ಳದೆ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು.

ಸುಮಾರು ಬೆಳಗ್ಗೆ ೪.೩೦ ರ ಹೊತ್ತಿಗೆ ನಾವು ದಕ್ಷಿಣಪಥ ಎನ್ನುವ ಭಾಗಕ್ಕೆ ಅಂದರೆ ಕೈಲಾಸ ಪರ್ವತದ ದಕ್ಷಿಣ ಭಾಗಕ್ಕೆ ತಲುಪಿದೆವು.ಅಲ್ಲಿ ನಮ್ಮಿಂದ ಮುಂಚೆ ನಮ್ಮ ಯಾಕ್ ಮತ್ತು ಕುದುರೆಗಳು ತಲುಪಿದ್ದವು..ಶೇರ್ಪಾಗಳು ನಮಗಾಗಿ ಡೇರೆಯನ್ನು ಸಿದ್ದಪಡಿಸಿದ್ದರು. ಅಲ್ಲಿ ನಾವು ಹೋಗಿ ಬ್ಯಾಗನ್ನು ನಮ್ಮ ತಲೆಯಡಿಗೆ ಇಟ್ಟು ಮಲಗಿದೆವು.. ಮನಸ್ಸು ಹಳೆಯ ನೆನಪುಗಳ ಹಾದಿ ಹಿಡಿಯಿತು. ಬಾಲ್ಯಕ್ಕೋಡಿತು..ಮನೆಯ ನೆನಪಾಯಿತು.. ಆಯಾಸದಿಂದ ದೇಹವಿಡೀ ಬಳಲಿದ ಕಾರಣ ನಿದ್ದೆ ಬಂದದ್ದೆ ತಿಳಿಯಲಿಲ್ಲ .........

Thursday, October 8, 2009

ಮಾನಸ ಸರೋವರ ಯಾತ್ರೆ-೧೩


ಈ ಸಂಚಿಕೆಯಲ್ಲಿ ನನಗೆ ದೊರೆತ ಮಾಹಿತಿ ಪ್ರಕಾರ ಮಾನಸ ಸರೋವರವನ್ನು ವಿವರಿಸುತ್ತಿದ್ದೇನೆ.
ಅಂದು ಬೆಳಿಗ್ಗೆ ಐದಕ್ಕೆ ಸರಿಯಾಗಿ! ಆನಂದದಿಂದ ಸುಂದರ ಸವಿಗನಸುಗಳ ರಥವನ್ನೇರಿ ಸಾಗುತ್ತಿರುವ ಸಮಯದಲ್ಲಿ… ಇನ್ನೂ ಬೆಚ್ಚಗೆ ಹೊದ್ದು ಮಲಗೋಣ ಎಂದೆನಿಸುವ ಕ್ಷಣದಲ್ಲಿ ಈ ಪಾಂಡೆಯ ಕರೆಗೆ ಓಗೊಟ್ಟು ತಾಳಲಾರದೆ ಬಂಧಿಸಿದ ಕಣ್ಣುಗಳ ತೆರೆದು ಕೈಲಾಸ ಪರ್ವತಕ್ಕೆ ನಮಸ್ಕರಿಸಿ ಮುಖಕ್ಕೆ ನೀರೆರೆಚಿದರೆ ಅಬ್ಬಾ!!! ಮೈ ಕೊರೆಯುವ ತಣ್ಣನೆಯ ನೀರು ಸಹಾ ಒಂದು ಕ್ಷಣ ನನ್ನ ಆಜನ್ಮ ಶತ್ರುವೇನೋ ಎಂದೆನಿಸಿ ಬಿಡುವ ಹಾಗೆ ಮಾಡುತ್ತದೆ. ಇವೆಲ್ಲ ಮುಗಿಸಿ ನಮ್ಮ ರೂಮಿನ ಹೊರಗೆ ಬಂದು ನೋಡಿದಾಗ ಅಲ್ಲಿ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು ಮುಂಜಾನೆಯ ಸೂರ್ಯನ ಬಿಸಿಲಿನಲ್ಲಿ ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗೆ ನಿಲ್ಲುತ್ತವೆ. ಅವುಗಳು ಎಷ್ಟೇ ಏನೇ ಮಾಡಿದರೂ ನಾನು ಮೊದಲು ತೆಗೆದುಕೊಳ್ಳುವುದು ನನ್ನ ಪ್ರೀತಿಯ ಚಹಾ ...
ಆ ದಿನದ ದಿನಚರಿಯಲ್ಲಿ ಏನೇ ಕೆಲಸಗಳಿದ್ದರೂ ಚಹಾ ಕುಡಿಯದೆ ಬೇರೆ ಕೆಲಸಗಳಿಗೆ ಮುನ್ನುಡಿಯಿಡಲು ಸಾಧ್ಯವೇ ಇಲ್ಲ ಎಂಬುವಷ್ಟು ನನಗೆ ಚಹಾ ಮೋಡಿ ಮಾಡಿ ಬಿಟ್ಟಿದೆ. ಆ ಚಹದೊಳಗೆ ನನ್ನ ದೃಷ್ಟಿ ಬೆರೆಸಿದರೆ ಸಾಕು ಅದರಲ್ಲಿ ನೂರೆಂಟು ಕಣ್ಣುಗಳು ರೂಪಗೊಂಡು ಕಕ್ಕಾಬಿಕ್ಕಿಯಾಗಿ ನನ್ನೆಡೆಗೆ ನೋಡಲು ಶುರುವಾಗುತ್ತದೆ, ನಾನು ಅದನ್ನು ನೋಡನೋಡುತ್ತಿದ್ದಂತೆಯೇ ಆ ಕಣ್ಣುಗಳು ಮಾಯವಾಗುತ್ತಿರುತ್ತದೆ.

ಬೆಳಿಗ್ಗೆ ಎದ್ದು ನನ್ನ ನಿತ್ಯ ವಿಧಿಗಳನ್ನು ಮುಗಿಸಿ ಮಾನಸದ ಸೌಂದರ್ಯ ಆಸ್ವಾದಿಸಲು ತಟಕ್ಕೆ ಬಂದೆ.
ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ.
ಪ್ರತಿವರ್ಷ ಸಹಸ್ರಾರು ಯಾತ್ರಾರ್ಥಿಗಳು ಶಿವತಾಣವಾದ ಕೈಲಾಸ ಪರ್ವತವನ್ನೇರುತ್ತಾರೆ. ಇವರಲ್ಲಿ ಬಹುಪಾಲು ಮಾನಸ ಸರೋವರ ವೀಕ್ಷಕರೇ ಇರುತ್ತಾರೆ. ಹಿಮಾಚ್ಛಾದಿತ , ಅಚ್ಛಬಿಳಿಪಿನ ಶ್ವೇತಾಂಬರದ ಹಿನ್ನೆಲೆ, ಬೆಳ್ಳಿ ಬೆಟ್ಟವೇ ಕರಗಿ ಜಲರಾಶಿಯಾದಂತೆ ತೋರುವ ಮಾನಸ ಸರೋವರ ನಿಸರ್ಗರಮಣೀಯ ತಾಣ. ಮಾನಸ ಸರೋವರ ಪರಿಕ್ರಮದಲ್ಲಿ ಭಕ್ತಿ ಭಾವದಂತೆಯೇ, ನಿಸರ್ಗಸೌಂದರ್ಯ ವೀಕ್ಷಣೆಯ ವಿಶೇಷಾನುಭವ ಒಂದೆಡೆಯಾದರೆ, ಭಯ ಹುಟ್ಟಿಸುವ ಪ್ರಪಾತಗಳು, ಹಿಮರಾಶಿಗಳ ರುದ್ರಭಯಂಕರ ನೋಟಗಳೂ ಎದೆ ನಡುಗಿಸುತ್ತವೆ. ಆದರೂ ಶಿವಕೃಪೆಗೆ ಪಾತ್ರರಾಗಲು, ಅಭೌಮ ಪ್ರಕೃತಿ ಸೌಂದರ್ಯ ವೀಕ್ಷಿಸಲು ಹೇರಳ ಅವಕಾಶವಿರುವುದರಿಂದ ಯಾತ್ರಾರ್ಥಿಗಳು ಜೀವನಕಾಲದ ಸಾಧನೆಯಾಗಿ ಹಿಮರಾಶಿಗಳ ನೆರಳಲ್ಲಿ ಭಕ್ತಿಯ ನೆಲೆಯರಸಿ ಸಾಗುವುದು ಪ್ರತೀ ವರ್ಷದ ಪ್ರವಾಸಿ ಹಂಗಾಮಿನಲ್ಲಿ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ.

ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳೆರಡು ಒಂದಕ್ಕೊಂದು ಹೊಂದಿಕೊಂಡೇ ಇವೆ. ಸ್ಪಟಿಕದಷ್ಟೆ ಶುಭ್ರವಾಗಿರುವ ಮಾನಸ ಸರೋವರ ಹಿಂದೂಗಳ ಪಾಲಿಗೆ ಜೀವನದಲ್ಲಿ ಒಮ್ಮೆಯಾದರೂ ಮಿಂದು ಪಾವನರಾಗಬೇಕೆಂದು ಬಯಸುವ ಸ್ಥಳ.
ಮಹಾರಾಜ ಮಾಂಧಾತನು ಇಲ್ಲಿ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡ ಕಾರಣ ಈ ಸರೋವರಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿರುವ ಹೇಳಿಕೆಗಳು ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿವೆ.
ಬೌದ್ಧ ಧರ್ಮದ ಪ್ರಕಾರ ಸರೋವರದ ಮಧ್ಯದಲ್ಲಿ ಒಂದು ದಿವ್ಯ ಔಷಧಿಯ ಮರವಿದೆ ಎಂದೂ, ಆ ಮರದ ಹಣ್ಣುಗಳನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆಗೆ ಬಳಸಿದರೆ ಗುಣವಾಗುತ್ತಾರೆ ಎಂಬ ನಂಬಿಕೆ ಇದೆ.
ಸಮುದ್ರ ಮಟ್ಟದಿಂದ ಸುಮಾರು 22,028 ಅಡಿ ಎತ್ತರದಲ್ಲಿ ಇರುವುದರಿಂದ ಆಮ್ಲಜನಕದ ಕೊರತೆಯ ಕಾರಣ ಉಸಿರಾಟ, ತಲೆ ಸುತ್ತುವುದು, ನಿಶ್ಯಕ್ತಿ ಕಾಡುವ ಸಾಧ್ಯತೆ ಇದೆ. ಅಲ್ಲದೆ ಸಮುದ್ರದಿಂದ ಎತ್ತರ ಪ್ರದೇಶಕ್ಕೆ ತೆರಳಿದ ಸಮಯದಲ್ಲಿ ವಾತಾವರಣಕ್ಕೆ ದೇಹ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳು ಚೀನಾದ ವ್ಯಾಪ್ತಿಯಲ್ಲಿ ಇರುವುದರಿಂದ ಕೈಲಾಸ ಪರ್ವತ ದರ್ಶನಕ್ಕೆ ಭಾರತೀಯ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯವು ಪ್ರತಿ ವರ್ಷ ಪ್ರವಾಸವನ್ನು ಆಯೋಜಿಸುತ್ತದೆ. ಸುಮಾರು 28 ದಿನಗಳ ಚಾರಣವಾಗಿರುವುದರಿಂದ ದೈಹಿಕವಾಗಿ ಸಮರ್ಥರಾಗಿರುವವರು ಮಾತ್ರ ಕೈಲಾಸ ದರ್ಶನ ಮಾಡಬಹುದು. ವಿಮಾನ ಮೂಲಕ ಪ್ರಯಾಣ ಮಾಡುವುದಾದರೆ ಕಠ್ಮಂಡುವರೆಗೆ ಮಾತ್ರ ಸಾಧ್ಯ, ಅಲ್ಲಿಂದ ಸರೋವರದ ವರೆಗೆ ರಸ್ತೆ ಮೂಲಕ ಪಯಣಿಸಬೇಕು...

Sunday, October 4, 2009

ಮಾನಸ ಸರೋವರ ಯಾತ್ರೆ -೧೨ಮಾನಸ ಸರೋವರದಲ್ಲಿ ಸ್ನಾನಮಾಡಿ, ಪ್ರದಕ್ಷಿಣೆ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತೆಂದು ಒ0ದು ನ0ಬಿಕೆ. ಕೇವಲ ಈ ಜನ್ಮದ ಪಾಪಗಳನ್ನು ತೊಳೆಯಬೇಕಾದರೆ ಒಂದು ಸಾರಿ ಪರಿಕ್ರಮ ಮಾಡಿದರೆ ಸಾಕು. ನಮಗೆ ಮಾತ್ರವಲ್ಲ, ಜೈನರಿಗೆ, ಬೌದ್ಧರಿಗೆ, ಟಿಬೆಟಿಯನರಿಗೆ ಪರಿಕ್ರಮದಲ್ಲಿ ತಮ್ಮದೇ ಆದ ನ0ಬಿಕೆಗಳಿವೆ. ವಿಶೇಷವಾದ ಅನುಭವ; ಹುಳು, ಹುಪ್ಪಟೆಗಳ ಕಾಟವಿಲ್ಲ. ಮಾನಸದ ಪರಿಕ್ರಮ ಮುಗಿಯುವ ದಿನ . 22 ಕಿಲೋಮೀಟರ್‌ ಹಾದಿಯನ್ನು ಪೂರ್ತಿ ಕಾಲ್ನಡಿಗೆಯಲ್ಲೇ ನಡೆದರಾಯಿತು . ಏರಿಳಿತಗಳೇನೇ ಇದ್ದರೂ ಈ ನಡಿಗೆ ನಮಗೆ ಉಲ್ಲಾಸ, ತೄಪ್ತಿಗಳನ್ನು ನೀಡಿತು. . .ಯಾತ್ರೆಯಲ್ಲಿ ಹಸಿವು ಕಡಿಮೆ. ಆದರೆ ಕುಡಿದ ನೀರಿನ ಲೆಕ್ಕ ಯಾರು ಇಟ್ಟಿದ್ದಾರೊ? ಎಷ್ಟು ಲೀಟರ್‌ ಆದವೊ?
ನನ್ನ ಪ್ರಥಮ ಅನುಭವ ...ಇದುವರೆಗೂ ಪ್ರಕೃತಿಯ ಮಡಿಲಲ್ಲಿ ನಿದ್ರಿಸಿರಲಿಲ್ಲ....ಮುಂಜಾನೆಯ ಮಂಜಿನೆಡೆಯಲ್ಲಿಯೇ ಸೂರ್ಯನ ಬೆಳಕು ನಮಗೆ ಬಂಗಾರ ವರ್ಣದ ನೀರ ಹನಿಗಳ ಸಿಂಚನವಾಯಿತು..ಬೆಳಗ್ಗಿನ ನಿತ್ಯವಿಧಿಗಳನ್ನು ಮುಗಿಸಿ ಹೊರಟೆವು..
ಮುಂಜಾನೆ ಮೈ ಆ ಬೆಟ್ಟಗಳನ್ನು ಅರ್ಧದಷ್ಟು ಮರೆಮಾಚಿರುವ ಮುಂಜಾನೆಯ ಮಂಜು. ಸುಮಾರು ೩ ಕಿಮೀ ನಡೆದೆವು.,ಧ್ರೊಗೋಗಾಂಪಾ ತಲುಪಿದೆವು.ಬೆಳಿಗ್ಗೆ ೧೧.೦೦ ಘಂಟೆ.. ೪೫ ನಿಮಿಷ ಹಾಗೇ ಮಾತನಾಡದೇ ಪ್ರಕೃತಿಯ ಪವಿತ್ರತೆಯನ್ನು ಆರಾಧಿಸುತ್ತ ಕುಳಿತ ನಮಗೆ ಪಾಂಡೆ 'ಕೂ' ಹಾಕಿ ಬೆಳಗ್ಗಿನ ಉಪಹಾರಕ್ಕಾಗಿ ಕೈ ಬೀಸಿ ಕರೆದಾಗಲೇ ಎಚ್ಚರವಾದದ್ದು. ಚಳಿ ಜೊತೆಗೆ ದಾರಿ ಕಾಣದಷ್ಟು ಗಾಢವಾದ ಮಂಜು ಕಣ್ಣಿಗೆ ಮನಸ್ಸಿಗೆ ಹಬ್ಬ ತಂದಿತ್ತು... ಇಲ್ಲಿಂದ ಸುಮಾರು ೧೧.೩೦ಕ್ಕೆ ಹೊರಟು ವಿಶಾಲವಾದ ಬಯಲಿನಲ್ಲಿ ನಡೆದು ಕೊನೆಗೆ ಒಂದು ಸಣ್ಣ ಗೊಂಪಾ ಸಿಕ್ಕಿತು. "ಗೊಸೋಲ್ ಗೊಂಪಾ"..ಒಂದು ಕುಸಿದು ಹೋದ ಕಟ್ಟಡ. ಇಲ್ಲಿಂದ ನಮ್ಮ ಪರಿಕ್ರಮ ಪೂರ್ತಿಯಾಗಲು ಇನ್ನು ೫ ಕಿಲೋ ಮೀಟರ್ ದೂರ ಇದೆ ..
ಮಾನಸದ ತಟಕ್ಕೆ ಬಂದೆ ,,ಇನ್ನು ಕೆಲವೇ ದೂರಗಳಲ್ಲಿ ನಮ್ಮ ಪರಿಕ್ರಮ ಪೂರ್ತಿಯಾಗುತ್ತದೆ...ಪ್ರದಕ್ಷಿಣೆ ಪೂರ್ತಿಯಾದ ನಂತರ ನನಗೆ ಮಾನಸದಲ್ಲಿ ಸ್ನಾನ ಮಾಡಬೇಕು ಎಂದನಿಸಿತು. ಪರಿಕ್ರಮ ಪೂರ್ತಿಯಾದ ತೃಪ್ತಿಯಲ್ಲಿ ಚಳಿ,ಆಯಾಸ ಒಂದೂ ನನಗೆ ಗೊತ್ತಾಗಲಿಲ್ಲ ..ಇಲ್ಲಿ ನನಗೆ ಹಂಸಗಳು ಕಾಣಲಿಲ್ಲವಾದರೂ ದೊಡ್ಡ ಗಾತ್ರದ ಬಾತುಗಳೂ ಕೊಕ್ಕರೆಗಳೂ ಕಾಣಿಸಿದವು.ಸಂಜೆ ಸುಮಾರು ೪ ಘಂಟೆಯ ಸಮಯ .........ನಾನು ಮಾನಸದ ನೀರಿನಲ್ಲಿ ಸುಮಾರು ೧೦ ರಿಂದ ೧೫ ಮೀಟರುಗಳಷ್ಟು ದೂರ ನಡೆದೆ. ಸುಮಾರು ದೂರ ಆಳವೇ ಗೊತ್ತಾಗಲಿಲ್ಲ. ನಂತರ ಒಂದು ಕಡೆ ಸ್ವಲ್ಪ ಎದೆಯ ಮಟ್ಟಕ್ಕೆ ನೀರಿರುವಲ್ಲಿ ನಿಂತಿಕೊಂಡು ಕೈಲಾಸ ಪರ್ವತಕ್ಕೆ ನಮಸ್ಕರಿಸಿ ಮುಳುಗಿದೆ.ಒಂದು ಸಲ ಮುಳುಗಿದೆ.ಛಳಿಯಿಂದ ದೇಹದ ಭಾರ ಮಾನಸದಲ್ಲಿ ಅರಿವಿಗೆ ಬರಲಿಲ್ಲ.ಮತ್ತೆರಡು ಸಲ ಮುಳುಗಿದೆ.ಮತ್ತೆ ಮುಳುಗಲು ಸಾಧ್ಯವಾಗಲಿಲ್ಲ.ಅಷ್ಟಕ್ಕೇ ನಾನು ಸೋತು ಹೋದೆ. ಸ್ನಾನದ ನಂತರ ಸಂಧ್ಯಾ ಸಮಯದ ಕಾರಣ ಮಾನಸದ ತಟದಲ್ಲಿಯೇ ಸಂಧ್ಯಾವಂದನೆ ಮಾಡೋಣ ಎಂದು ತೀರ್ಮಾನಿಸಿದೆವು.ಒಂದು ಕಡೆ ನಾವೆಲ್ಲಾ ಸಾಲಾಗಿ ಕುಳಿತೆವು.ಎಲ್ಲರ ಮನಸೂ ಬಹುಶ;ಏಕಾಗ್ರತೆ ಹೊಂದಿರಬೇಕು.ಯಾಕೆಂದರೆ ಸಂಧ್ಯೆಗೆ ಕುಳಿತ ೫ ನಿಮಿಷದಲ್ಲಿಯೇ ಯಾವ ಶಬ್ದವೂ ಕೇಳುತ್ತಿರಲಿಲ್ಲ .ಕೇವಲ ಮಾನಸದ ನೀರಿನ ಅಲೆಗಳು "ಓಂ" ಕಾರವನ್ನು ನಾದಿಸಿದವು. ನನ್ನ ಯೋಚನೆಗಳೇ ಹಾಗೆ ರೂಪು ತಲೆದಿರಬಹುದೆನ್ದುಕೊಂಡು ಧ್ಯಾನವನ್ನು ಹಾಗೆಯೇ ಮುಂದುವರಿಸಿದೆ.ಸ್ವಲ್ಪ ಹೊತ್ತಿಗೆ ನನ್ನಲ್ಲಿನ ಉಚ್ವಾಸ ನಿಶ್ವಾಸಗಳು ಮತ್ತು ಮಾನಸದ ಅಲೆಗಳ ನಾದವೂ ಒಂದಾಯಿತು.ಸ್ವಲ್ಪ ಸಮಯಕ್ಕೆ ನನಗೆ "ಓಂ"ಕಾರದ ಒಂದು ನಾದ ಬಲವಾಗಿ ಕೇಳಿಸಿತು..ಕಣ್ಣು ತೆರೆದು ನೋಡಿದಾಗ ಸೂರ್ಯ ಮಂಜಿನೆಡೆಯಲ್ಲಿ ಅಸ್ತಮಿಸುತ್ತಿದ್ದ. ಆ ಮಂಜು ಮತ್ತು ಸೂರ್ಯನ ಬೆಳಕು ಮಾನಸದ ತಟದಲ್ಲಿ ಗಾಳಿ ಬೀಸುವಾಗ "ಓಂ"ಕಾರದಂತೆ ಕಂಡಿತು.ಇದು ನನ್ನ ಸ್ವಪ್ನವೇ ಎಂದು ಒಂದು ಕ್ಷಣ ಆಲೋಚಿಸಿ ನನ್ನ ತೊಡೆಗೆ ನಾನೇ ಬಡಿದುಕೊಂಡೆ. ಇಲ್ಲ. ಎಚ್ಚರದಲ್ಲಿದ್ದೇನೆ...ಕೇವಲ ಸುಮಾರು ೧೫ ಸೆಕೆಂಡುಗಳ ಈ ಅನುಭವ ನನ್ನನ್ನೇ ದಂಗಾಗಿಸಿತು.ನನ್ನನ್ನು ನಾನೇ ಪರಿಶೀಲಿಸಿಕೊಂಡೆ.ಏನೋ ಒಂದು ಚೈತನ್ಯ!ಏನೋ ಒಂದು ಹೊಸತನ!ಆಗ ತಾನೇ ತಾಯಿ ಗರ್ಭದಿಂದ ಹೊರಬಿದ್ದ ಶಿಶುತ್ವ!ನನಗೇ ಅರ್ಥವಾಗದ ಆಲೋಚನೆಗಳು,ಭಾವನೆಗಳು,ನನ್ನಲ್ಲಿ ಕಣ್ಣೀರ ಧಾರೆಯಾಯಿತು.ನನ್ನನ್ನು ನಾನೇ ಮರೆತೆ.ಅಷ್ಟು ಅನೂಹ್ಯವಾಯ್ತು ಆ ಸಮಯ.ಇದಕ್ಕೆ ಆನಂದ ,ಸಂತೋಷ ಎಂದು ಹೇಳಬಹುದೇ? ಇದು ಕೇವಲ ಅನುಭವಿಸಬಹುದು ಅಷ್ಟೇ ಹೊರತು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ... ಮನಸ್ಸು ಜಾಗೃತವಾಯಿತು..ನಮ್ಮ ಪರಿಕ್ರಮ ನಿಜಾವಾಗಿ ಆನಂದ,ತೃಪ್ತಿಯಾಯಿತು.ಬದುಕು ಸಾರ್ಥಕ ಎಂದನಿಸಿತು. ಈ ಅನುಭವ ವರ್ಣನೆ ಮಾಡಲು ನನಗೆ ಶಬ್ದಗಳೇ ಇಲ್ಲ... ನಮ್ಮೊಡನೆ ಇದ್ದ ಕೆಲವು ಮಂದಿ ನಮ್ಮನ್ನು ಬಿಟ್ಟು ಹೋಗಿದ್ದರು. ನಾವು ನಮ್ಮ ಊರಿನ ಕೆಲವೇ ಮಂದಿ ಅಲ್ಲಿದ್ದೆವು. ಇಂತಹ ದಿವ್ಯ ಅನುಭವವನ್ನು ಕರುಣಿಸಿದ ಮಾನಸದಲ್ಲಿರುವ ಸಮಸ್ತ ಅತೀಂದ್ರಿಯ ಶಕ್ತಿಗಳಿಗೂ ಕೈಲಾಸವಾಸಿಯಾದ ಪರಮೇಶ್ವರನಿಗೂ ನಮಸ್ಕರಿಸಿ ನಮ್ಮ ರೂಮಿಗೆ (ದಾರ್ಚಿನ್) ಹೆಜ್ಜೆ ಹಾಕಿದೆವು.