ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Thursday, October 8, 2009

ಮಾನಸ ಸರೋವರ ಯಾತ್ರೆ-೧೩


ಈ ಸಂಚಿಕೆಯಲ್ಲಿ ನನಗೆ ದೊರೆತ ಮಾಹಿತಿ ಪ್ರಕಾರ ಮಾನಸ ಸರೋವರವನ್ನು ವಿವರಿಸುತ್ತಿದ್ದೇನೆ.
ಅಂದು ಬೆಳಿಗ್ಗೆ ಐದಕ್ಕೆ ಸರಿಯಾಗಿ! ಆನಂದದಿಂದ ಸುಂದರ ಸವಿಗನಸುಗಳ ರಥವನ್ನೇರಿ ಸಾಗುತ್ತಿರುವ ಸಮಯದಲ್ಲಿ… ಇನ್ನೂ ಬೆಚ್ಚಗೆ ಹೊದ್ದು ಮಲಗೋಣ ಎಂದೆನಿಸುವ ಕ್ಷಣದಲ್ಲಿ ಈ ಪಾಂಡೆಯ ಕರೆಗೆ ಓಗೊಟ್ಟು ತಾಳಲಾರದೆ ಬಂಧಿಸಿದ ಕಣ್ಣುಗಳ ತೆರೆದು ಕೈಲಾಸ ಪರ್ವತಕ್ಕೆ ನಮಸ್ಕರಿಸಿ ಮುಖಕ್ಕೆ ನೀರೆರೆಚಿದರೆ ಅಬ್ಬಾ!!! ಮೈ ಕೊರೆಯುವ ತಣ್ಣನೆಯ ನೀರು ಸಹಾ ಒಂದು ಕ್ಷಣ ನನ್ನ ಆಜನ್ಮ ಶತ್ರುವೇನೋ ಎಂದೆನಿಸಿ ಬಿಡುವ ಹಾಗೆ ಮಾಡುತ್ತದೆ. ಇವೆಲ್ಲ ಮುಗಿಸಿ ನಮ್ಮ ರೂಮಿನ ಹೊರಗೆ ಬಂದು ನೋಡಿದಾಗ ಅಲ್ಲಿ ಹಾರಾಡುತ್ತಿರುವ ಬಣ್ಣ ಬಣ್ಣದ ಚಿಟ್ಟೆಗಳು ಮುಂಜಾನೆಯ ಸೂರ್ಯನ ಬಿಸಿಲಿನಲ್ಲಿ ನಾ ಮುಂದು, ತಾ ಮುಂದು ಎಂದು ಸ್ಪರ್ಧೆಗೆ ನಿಲ್ಲುತ್ತವೆ. ಅವುಗಳು ಎಷ್ಟೇ ಏನೇ ಮಾಡಿದರೂ ನಾನು ಮೊದಲು ತೆಗೆದುಕೊಳ್ಳುವುದು ನನ್ನ ಪ್ರೀತಿಯ ಚಹಾ ...
ಆ ದಿನದ ದಿನಚರಿಯಲ್ಲಿ ಏನೇ ಕೆಲಸಗಳಿದ್ದರೂ ಚಹಾ ಕುಡಿಯದೆ ಬೇರೆ ಕೆಲಸಗಳಿಗೆ ಮುನ್ನುಡಿಯಿಡಲು ಸಾಧ್ಯವೇ ಇಲ್ಲ ಎಂಬುವಷ್ಟು ನನಗೆ ಚಹಾ ಮೋಡಿ ಮಾಡಿ ಬಿಟ್ಟಿದೆ. ಆ ಚಹದೊಳಗೆ ನನ್ನ ದೃಷ್ಟಿ ಬೆರೆಸಿದರೆ ಸಾಕು ಅದರಲ್ಲಿ ನೂರೆಂಟು ಕಣ್ಣುಗಳು ರೂಪಗೊಂಡು ಕಕ್ಕಾಬಿಕ್ಕಿಯಾಗಿ ನನ್ನೆಡೆಗೆ ನೋಡಲು ಶುರುವಾಗುತ್ತದೆ, ನಾನು ಅದನ್ನು ನೋಡನೋಡುತ್ತಿದ್ದಂತೆಯೇ ಆ ಕಣ್ಣುಗಳು ಮಾಯವಾಗುತ್ತಿರುತ್ತದೆ.

ಬೆಳಿಗ್ಗೆ ಎದ್ದು ನನ್ನ ನಿತ್ಯ ವಿಧಿಗಳನ್ನು ಮುಗಿಸಿ ಮಾನಸದ ಸೌಂದರ್ಯ ಆಸ್ವಾದಿಸಲು ತಟಕ್ಕೆ ಬಂದೆ.
ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ.
ಪ್ರತಿವರ್ಷ ಸಹಸ್ರಾರು ಯಾತ್ರಾರ್ಥಿಗಳು ಶಿವತಾಣವಾದ ಕೈಲಾಸ ಪರ್ವತವನ್ನೇರುತ್ತಾರೆ. ಇವರಲ್ಲಿ ಬಹುಪಾಲು ಮಾನಸ ಸರೋವರ ವೀಕ್ಷಕರೇ ಇರುತ್ತಾರೆ. ಹಿಮಾಚ್ಛಾದಿತ , ಅಚ್ಛಬಿಳಿಪಿನ ಶ್ವೇತಾಂಬರದ ಹಿನ್ನೆಲೆ, ಬೆಳ್ಳಿ ಬೆಟ್ಟವೇ ಕರಗಿ ಜಲರಾಶಿಯಾದಂತೆ ತೋರುವ ಮಾನಸ ಸರೋವರ ನಿಸರ್ಗರಮಣೀಯ ತಾಣ. ಮಾನಸ ಸರೋವರ ಪರಿಕ್ರಮದಲ್ಲಿ ಭಕ್ತಿ ಭಾವದಂತೆಯೇ, ನಿಸರ್ಗಸೌಂದರ್ಯ ವೀಕ್ಷಣೆಯ ವಿಶೇಷಾನುಭವ ಒಂದೆಡೆಯಾದರೆ, ಭಯ ಹುಟ್ಟಿಸುವ ಪ್ರಪಾತಗಳು, ಹಿಮರಾಶಿಗಳ ರುದ್ರಭಯಂಕರ ನೋಟಗಳೂ ಎದೆ ನಡುಗಿಸುತ್ತವೆ. ಆದರೂ ಶಿವಕೃಪೆಗೆ ಪಾತ್ರರಾಗಲು, ಅಭೌಮ ಪ್ರಕೃತಿ ಸೌಂದರ್ಯ ವೀಕ್ಷಿಸಲು ಹೇರಳ ಅವಕಾಶವಿರುವುದರಿಂದ ಯಾತ್ರಾರ್ಥಿಗಳು ಜೀವನಕಾಲದ ಸಾಧನೆಯಾಗಿ ಹಿಮರಾಶಿಗಳ ನೆರಳಲ್ಲಿ ಭಕ್ತಿಯ ನೆಲೆಯರಸಿ ಸಾಗುವುದು ಪ್ರತೀ ವರ್ಷದ ಪ್ರವಾಸಿ ಹಂಗಾಮಿನಲ್ಲಿ ಸಾಮಾನ್ಯ ದೃಶ್ಯವಾಗಿಬಿಟ್ಟಿದೆ.

ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳೆರಡು ಒಂದಕ್ಕೊಂದು ಹೊಂದಿಕೊಂಡೇ ಇವೆ. ಸ್ಪಟಿಕದಷ್ಟೆ ಶುಭ್ರವಾಗಿರುವ ಮಾನಸ ಸರೋವರ ಹಿಂದೂಗಳ ಪಾಲಿಗೆ ಜೀವನದಲ್ಲಿ ಒಮ್ಮೆಯಾದರೂ ಮಿಂದು ಪಾವನರಾಗಬೇಕೆಂದು ಬಯಸುವ ಸ್ಥಳ.
ಮಹಾರಾಜ ಮಾಂಧಾತನು ಇಲ್ಲಿ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡ ಕಾರಣ ಈ ಸರೋವರಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿರುವ ಹೇಳಿಕೆಗಳು ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿವೆ.
ಬೌದ್ಧ ಧರ್ಮದ ಪ್ರಕಾರ ಸರೋವರದ ಮಧ್ಯದಲ್ಲಿ ಒಂದು ದಿವ್ಯ ಔಷಧಿಯ ಮರವಿದೆ ಎಂದೂ, ಆ ಮರದ ಹಣ್ಣುಗಳನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆಗೆ ಬಳಸಿದರೆ ಗುಣವಾಗುತ್ತಾರೆ ಎಂಬ ನಂಬಿಕೆ ಇದೆ.
ಸಮುದ್ರ ಮಟ್ಟದಿಂದ ಸುಮಾರು 22,028 ಅಡಿ ಎತ್ತರದಲ್ಲಿ ಇರುವುದರಿಂದ ಆಮ್ಲಜನಕದ ಕೊರತೆಯ ಕಾರಣ ಉಸಿರಾಟ, ತಲೆ ಸುತ್ತುವುದು, ನಿಶ್ಯಕ್ತಿ ಕಾಡುವ ಸಾಧ್ಯತೆ ಇದೆ. ಅಲ್ಲದೆ ಸಮುದ್ರದಿಂದ ಎತ್ತರ ಪ್ರದೇಶಕ್ಕೆ ತೆರಳಿದ ಸಮಯದಲ್ಲಿ ವಾತಾವರಣಕ್ಕೆ ದೇಹ ಹೊಂದಿಕೊಳ್ಳುವುದು ಕಷ್ಟವಾಗಬಹುದು. ಮಾನಸ ಸರೋವರ ಮತ್ತು ಕೈಲಾಸ ಪರ್ವತಗಳು ಚೀನಾದ ವ್ಯಾಪ್ತಿಯಲ್ಲಿ ಇರುವುದರಿಂದ ಕೈಲಾಸ ಪರ್ವತ ದರ್ಶನಕ್ಕೆ ಭಾರತೀಯ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವಾಲಯವು ಪ್ರತಿ ವರ್ಷ ಪ್ರವಾಸವನ್ನು ಆಯೋಜಿಸುತ್ತದೆ. ಸುಮಾರು 28 ದಿನಗಳ ಚಾರಣವಾಗಿರುವುದರಿಂದ ದೈಹಿಕವಾಗಿ ಸಮರ್ಥರಾಗಿರುವವರು ಮಾತ್ರ ಕೈಲಾಸ ದರ್ಶನ ಮಾಡಬಹುದು. ವಿಮಾನ ಮೂಲಕ ಪ್ರಯಾಣ ಮಾಡುವುದಾದರೆ ಕಠ್ಮಂಡುವರೆಗೆ ಮಾತ್ರ ಸಾಧ್ಯ, ಅಲ್ಲಿಂದ ಸರೋವರದ ವರೆಗೆ ರಸ್ತೆ ಮೂಲಕ ಪಯಣಿಸಬೇಕು...

No comments:

Post a Comment