ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Wednesday, October 14, 2009

ಮಾನಸ ಸರೋವರ ಯಾತ್ರೆ -೧೪ಮನಸ್ಸಲ್ಲಿ ಆ ಸೂರ್ಯ ದೇವನಿಗೆ ನೂರಾರು ಪ್ರಶ್ನೆಗಳ ಸುರಿಮಳೆ ಹಾಕುತ್ತಿದ್ದೆ….. ನುಡಿಯಲು ಒಂದು ಮಾತು ಸಹಾ ಹೊರಬರಲಿಲ್ಲ..ಬರಿ ಮೌನ ಎಲ್ಲೆಲ್ಲು ಮೌನ ಅಷ್ಟೇ ….!! ಇಂದು ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮಾನಸದ ತಟಕ್ಕೆ ಬಂದೆ.. ನಮ್ಮೊಡನೆ ಆಚಾರ್ಯರಾದ ಕೇಶವ ದೀಕ್ಷಿತರೂ ಇದ್ದರು. ಅಂದು ಹುಣ್ಣಿಮೆ, ನಾವೆಲ್ಲರೂ ಮಾನಸದ ತಟದಲ್ಲಿ ಆಚಾರ್ಯಯರ ನಿರ್ದೇಶಾನುಸಾರ ತರ್ಪಣಗಳನ್ನು ನೀಡಿದೆವು.ಪ್ರತಿಯೊಬ್ಬರೂ ಮಾನಸದ ಜಲವನ್ನು ಮತ್ತು ಅಲ್ಲಿಂದಲೇ ಒಂದು ಕಲ್ಲನ್ನು ನಾವು ನಾವು ತಂದಿದ್ದ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ತುಂಬಿಕೊಂಡು ಅಲ್ಲೇ ಹತ್ತಿರವಿರುವ ಒಂದು ಮಂಟಪಕ್ಕೆ ಬಂದು ಶ್ರೀಯುತ ಅಳಗಪ್ಪನ್ ಚೆಟ್ಟಿಯಾರ್ ಅವರ ಸಂಕಲ್ಪದಂತೆ ಶತ ರುದ್ರಾಭಿಷೇಕ ಮತ್ತು ರುದ್ರ ಹವನವನ್ನು ನಾವು ಮಾಡಿದೆವು. ಕೈಲಾಸನಾಥನ ಸಂಕಲ್ಪವನ್ನು ಮಾನಸ ಸರೋವರದಿಂದ ತಂದಿದ್ದ ಕಲ್ಲಿಗೆ ಪೂಜೆಯನ್ನು ಮಾಡಿದೆವು.ತದನಂತರ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಗಾದೆಯಂತೆ ಪೂಜೆಯ ನಂತರ ಮಾನಸಕ್ಕೆ ಅಭಿಷೇಕ ಜಲವನ್ನು ಸಮರ್ಪಿಸಿದೆವು.ಅಲ್ಲಿ ಚೆಟ್ಟಿಯಾರ್ ಅವರು ನಮ್ಮನ್ನು ಬಿಟ್ಟು ಏಕಾಂತವಾಗಿ ಪ್ರಾರ್ಥನೆಯನ್ನು ಮಾಡಿದರು. ನನಗೆ ಬಹಳ ಆಶ್ಚರ್ಯ! ಇಂತಹ ಶ್ರೀಮಂತ ವ್ಯಕ್ತಿ ಆಧ್ಯಾತ್ಮಿಕ ವಿಷಯದಲ್ಲೋ ಇದ್ದಾರೆ ಎಂದು ನಂಬಿಕೆ ಬಂದದ್ದೇ ಆ ಕ್ಷಣ,! ಕೇವಲ ಒಂದು ದಿವಸದ ತನ್ನ ವೈಯುಕ್ತಿಕ ಕಾರ್ಯಕ್ರಮಕ್ಕೋಸ್ಕರ ನಮ್ಮನ್ನು ಇಂತಹ ದಿವ್ಯ ತಾಣಕ್ಕೆ ಕರೆದುಕೊಂಡು ಬಂದು ನಮಗೂ ಆ ದಿವ್ಯ ದರ್ಶನ ಮಾಡಿಸಿದ ಆ ಪುಣ್ಯಾತ್ಮ ಅಳಗಪ್ಪನ್!! ಇವತ್ತು ರಾತ್ರಿಯಿಂದ ಕೈಲಾಸ ಪರ್ವತದ ಪ್ರದಕ್ಷಿಣೆ ಪ್ರಾರಂಭ , ಅದಕ್ಕಾಗಿ ಬೇಕಾದ ಆಹಾರ ಸಾಮಾಗ್ರಿಗಳನ್ನು ನಮ್ಮ ಬ್ಯಾಗಿನಲ್ಲಿ ತುಂಬಿಸಿ ತಯಾರಾದೆವು.ಅಲ್ಲಿಯ ಕಾಲಮಾನ ಪ್ರಕಾರ ಸಂಜೆ ೫.೩೦ ರ.. ನಾವೆಲ್ಲಾ ಆ ಹುಣ್ಣಿಮೆ ಚಂದ್ರನನ್ನು ನೋಡಲು ಮಾನಸದ ತಟಕ್ಕೆ ಬಂದೆವು.
ಪ್ರತಿದಿನ ಸೂರ್ಯ ಬಾನಿನಿಂದ ಜಾರಿ ಮುಳುಗು ಹಾಕುವ ಸಮಯ, ಬೆಳಕನ್ನು ಕತ್ತಲು ನುಂಗಿ ಹಾಕುವ ಸಮಯ. ಬಾನಿನಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ನನ್ನ ಕಲ್ಪನೆಗಳು, ಪ್ರಶ್ನೆಗಳು ಚುಕ್ಕಿಗಳಾಗಿ ಮನಸ್ಸನ್ನು ಆವರಿಸಿ ಬಿಟ್ಟಿರುತ್ತದೆ. ಚಂದಿರನ ಆ ಮಂದವಾದ ಬೆಳ್ಳಿ ಬೆಳಕು ನನ್ನನ್ನು ನಿಧಾನವಾಗಿ ಅವನತ್ತ ಸೆಳೆಯುತ್ತದೆ. ನನಗೆ ನಾನೇ ತಿಳಿಯದಂತೆ ಚಂದಿರನ ಜೊತೆ ನನ್ನ ಮನಸು ಹರಟ ತೊಡಗುತ್ತದೆ.ಅಲ್ಲಿ ನನ್ನ ಮುಂದಿರುವ ದಿನಗಳು ಮೆಲ್ಲಮೆಲ್ಲನೆ ರೂಪ ಪಡೆಯುತ್ತದೆ. ಬೆಳದಿಂಗಳ ಲೋಕ ಕವನಗಳಾಗಿ ಮಾನಸದ ತುಂಬೆಲ್ಲಾ ಓಡಾಡುತ್ತದೆ. ಬರೆಯಲು ಕುಳಿತರೆ ಬಲೆ ಇಲ್ಲದೆ ಮೀನನ್ನು ಹಿಡಿಯಲು ಹೊರಟಂತೆ, ನುಣುಚಿ ಹೋಗಿ ನನ್ನನ್ನು ಆಟವಾಡಿಸುತ್ತದೆ. ಸುಸ್ತಾಗಿ ಛೆ! ಅಂದುಕೊಂಡು ಕೃತಕ ಬೆಳಕಿನಡಿಗೆ ಪುಸ್ತಕಗಳಿಗಾಗಿ, ಹರಟೆ ಹೊಡೆಯಲು ಹೊಟ್ಟೆ ತುಂಬಿಸಲು ಹೋಗಿ ಬಿಡುತ್ತೇನೆ.ಸಂಜೆ ಬಾನಿನಲ್ಲಿ ನಕ್ಷತ್ರಗಳು ಸದ್ದಿಲ್ಲದೆ ನನ್ನ ಮನಸಿನಲ್ಲಿ ಕುಳಿತಿರುತ್ತದೆ. ಮತ್ತೆ ಚಂದಿರನ ಜೊತೆ ಮಾತಿಗೆ ಕುಳಿತರೆ ಹೊತ್ತು ಹೋದ್ದದ್ದು ತಿಳಿಯುವುದಿಲ್ಲ. ಬೆಳಕು ಹರಿಯುವ ವರೆಗೂ ನಿದ್ದೆ ಹತ್ತುವುದೇ ಇಲ್ಲ. ಮತ್ತೆ ಸಂಜೆಗಾಗಿ ಮನಸು ಕಾಯುತ್ತಿರುತ್ತದೆ ... ಆ ಸಂಜೆಯ ತಂಪಿನಲ್ಲಿ ಪಡುವಣದಿ ಮುಳುಗುತ್ತಿದ್ದ ನೇಸರನನ್ನು ನೋಡುತ್ತಿದ್ದಂತೆ ಮನಸ್ಸೇಕೋ ಖುಷಿ, ಖುಷಿ. ಅದೇ ಖುಷಿ ನೀಡುವ ಚಳಿ ಗಾಳಿ.. ನನ್ನೊಳಗೆ ಇದೀಗ ಕಲ್ಪನೆಗಳಿಲ್ಲ,ಯಾವ ಭಾವಗಳೂ ಇಲ್ಲ. ಸೂರ್ಯನ ಅಸ್ತವಾಯಿತು.ಎಂದೋ ಬದುಕಿನಲ್ಲಿ ನಾನು ನಿರೀಕ್ಷೆ ಮಾಡಿದ ಸುಂದರ ಸಮಯ...ಈ ದಿವಸ ನನ್ನ ಕಣ್ಣ ಮುಂದೆ.. ಅದೂ ಎಂದಿನಂತೆಯೇ ಬೆಳಗು. ಗಡಗುಡುವ ಗುಡುಗಿಲ್ಲ. ಭಾವನಾತ್ಮಕ ಬೆಡಗಿನ ಬೆಳಗು. ಚುಮು ಚುಮು ಚಳಿ. ಮನ ತುಂಬಿದ ಸಿಂಗಾರ. ಮೈ ತುಂಬ ಬಂಗಾರ. ಬನದ ಹೂಗಳೆಲ್ಲ ಮುಡಿಯನೇರಿ ನಗುತ್ತಲಿವೆ. ನಾ ನಕ್ಕಿದ್ದನ್ನೇ ಸೆರೆಹಿಡಿಯುತ್ತಿದ್ದ ಕ್ಯಾಮೆರಾ. ಕೈ ತೋರಿ, ಕೈ ಹಿಡಿದು ಮನವನಾವರಿಸಿಕೊಂಡು ನನ್ನೊಳಗೇ ಬೆಳೆದ ಸುಧಿಯೆಂಬ ಚಂದಮಾಮನು ಅಂದು ನನ್ನ ಕೈಹಿಡಿದು ಬಾಳನ್ನು ಬೆಳದಿಂಗಳಾಗಿಸಿದ... ಅಂಥ ಬೆಳದಿಂಗಳದು. ಇನ್ನೇನು ಬೇಕಿತ್ತು ಈ ಬದುಕಿಗೆ? ಉತ್ತರದಲ್ಲಿ ಕೈಲಾಸನಾಥನು ಆ ಬೆಳದಿಂಗಳ ಬೆಳಕಿನಲ್ಲಿ ನಮ್ಮನ್ನು ಕೈಬೀಸಿ ಕರೆಯುತ್ತಿದ್ದಾನೆ.. ಪಾಂಡೆಯವರು ನಮ್ಮನ್ನು ಕರೆದರು. ಹೋಗಬೇಕೆಂದುಕೊಂಡೆ. ಹೇಗೆ ಹೋಗಲಿ! ಚಂದಮಾಮನು ತನ್ನ ಮೊಗ್ಗನ್ನು ನನ್ನ ಮಡಿಲೊಳಗಿಟ್ಟು ಬೆಳದಿಂಗಳ ಅರಳಿಸುವ ಭಾರವ ನನ್ನೆದೆಯೊಳಗೆ ಬಿತ್ತಿ ನಡೆದಿದ್ದ...ಹೀಗೆ ಭಾವನಾಲೋಕದಲ್ಲಿ ವಿಹರಿಸುತ್ತಿದ್ದ ನನಗೆ ಸಮಯ ರಾತ್ರಿ ಘಂಟೆ ೮.೦೦ ಆದದ್ದೇ ತಿಳಿಯಲಿಲ್ಲ.
ನಾವು ರಾತ್ರಿ ೮.೩೦ಕ್ಕೆ ಊಟದ ಶಾಸ್ತ್ರ ಮುಗಿಸಿದೆವು. ಎಲ್ಲರೂ ಬ್ಯಾಗನ್ನು ನಮ್ಮ ನಮ್ಮ ಶೆರ್ಪಗಳ ಜೊತೆ ನೀಡಿ ನಮಗಾಗಿ ಕಾದಿರಿಸಿದ್ದ ಯಾಕ್ ಮತ್ತು ಕುದುರೆಗಳ ಜೊತೆ ಬೆಳದಿಂಗಳಲ್ಲಿ ಹೆಜ್ಜೆ ಹಾಕಿದೆವು.ಸುಮಾರು ೩೫ ಮಂದಿ ಈ ಚಾರಣದಲ್ಲಿ ಇದ್ದೆವು. ಮಾತು, ನೋಟ, ಸ್ಪರ್ಶಗಳು ಕಂಗಾಲಾಗಿ ನಿಂತ ನಂತರದ ಮೌನಶ್ರೇಣಿಯ ಚಾರಣ ಪಯಣ ನಮ್ಮದಿತ್ತು. ಅಲ್ಲಿ ಗದ್ದಲವಿರಲಿಲ್ಲ, . ಪ್ರಕೃತಿಯ ಚೆಲುವು ಬಗೆಬಗೆಯ ರೂಪಿನಲ್ಲಿ ಮೈದಳೆದ ಆ ಹಾದಿಯಲ್ಲಿ ನಮ್ಮ ಚಾರಣ
ಅಶಕ್ತರಾದವರು ದಾರ್ಚಿನ್ ನ ನಮ್ಮ ವಸತಿಗೃಹದಲ್ಲಿಯೇ ತಂಗಿದರು.ಸುಮಾರು ರಾತ್ರಿ ೧೦.ಘಂಟೆಯ ಸಮಯ ..
ಸಮತಟ್ಟಾದ ನೆಲವಾಗಿದ್ದರೆ ಏನೂ ತೊಂದರೆ ಇಲ್ಲ, ಆದರೆ ಚಾರಣ ಮಾಡುವುದು ಇದೆಯಲ್ಲಾ ಅದರಂತಹ ನರಕಯಾತನೆ ಇನ್ನೊಂದಿಲ್ಲ. ಮೊದಲ ಎರಡು ಕಿಲೋಮೀಟರ್ ಏನೂ ಅನ್ನಿಸಲಿಲ್ಲ, ಏಕೆಂದರೆ ಅದು ಪೂರ್ತಿಯಾಗಿ ಏರಿಕೆ ಇರಲಿಲ್ಲ. ಅಲ್ಲಲ್ಲಿ ಸಮತಟ್ಟಾದ ಭೂಮಿಯೂ ಇತ್ತು. ರಾತ್ರಿ ಹನ್ನೊಂದು ಗಂಟೆಗೆ ಹತ್ತಲು ಶುರುಮಾಡಿದ ಯಾತ್ರೆ ಮಾತ್ರ ಮರೆಯಲಾಗುವುದಿಲ್ಲ. ಒಂದು ಮೀಟರ್ ಮೇಲೆ ಹೋಗಲು ಸುಮಾರು ನಾಲ್ಕು ಮೀಟರ್‌ನಷ್ಟು ನೆಡೆಯಬೇಕಿತ್ತು. ಜಿಗ್-ಜಾಗ್ ಮಾದರಿಯಲ್ಲಿ ನಾವು ನೆಡೆಯುತ್ತಿದ್ದೆವು. ನೇರವಾಗಿ ನೇಡೆಯುವುದು ಅಸಾಧ್ಯವಾಗಿತ್ತು, ನಾವು ಹೆಜ್ಜೆ ಇಟ್ಟರೆ ಕಾಲುಗಳು ಹಾಗೆ ಕೆಳಕ್ಕೆ ಬರುತ್ತಿದ್ದವು, ಪರ್ವತದ ಆ ಮಣ್ಣು ನಮ್ಮನ್ನು ಹತ್ತಲು ಬಿಡುತ್ತಿರಲಿಲ್ಲ. ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ, ಪರ್ವತವನ್ನು ಹತ್ತಲು ಬಂದಿದ್ದಕ್ಕೆ ನಮ್ಮನ್ನು ನಾವೆ ಶಪಿಸಿಕೊಳ್ಳುತ್ತಾ ನೆಡೆಯುತ್ತಿದೆವು. ಸುಮಾರು ನಾಲ್ಕು ತಾಸುಗಳ ನಂತರ ಒಂದು ಗುಹೆ ಸಿಕ್ಕಿತು. ಅಲ್ಲಿ ಕೇವಲ ಹತ್ತುನಿಮಿಷ ಕುಳಿತುಕೊಳ್ಳಲು ಅವಕಾಶ. ಮಲಗಿಕೊಂಡರೆ ಆಮ್ಲಜನಕ ಕಡಿಮೆಯಾಗಿ ನಮಗೆ ಗೊತ್ತಾಗದೆ ನಮ್ಮ ಪ್ರಾಣ ಹಾರಿಹೋಗುತ್ತದೆ ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದರಿಂದ ಯಾರೂ ಮಲಗಲು ಹೋಗಲಿಲ್ಲ. ಅಲ್ಪ ವಿರಾಮದ ನಂತರ ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು.
ಎಲ್ಲರ ಕಾಲು ಪದ ಹೇಳುತ್ತಿದ್ದವು, ಯಾರಿಗೂ ಪರ್ವತ ಏರುವ ಆಸಕ್ತಿ ಇಲ್ಲದಾಗಿತ್ತು. ಆದರೂ ಇಷ್ಟು ಕಷ್ಟ ಪಟ್ಟಿರುವ ನಾವು ಇನ್ನು ಸ್ವಲ್ಪ ದೂರ ಎನ್ನುವ ಪಾಂಡೆಯವರ ಮಾತು ಎಲ್ಲರನ್ನು ಹತ್ತಲು ಪ್ರೋತ್ಸಾಹಿಸುತ್ತಿತ್ತು. ಅಲ್ಲಲ್ಲಿ ಕೆಲವರು ವಾಂತಿ ಮಾಡಿಕೊಳ್ಳುವುದು, ಕೈ ಕಾಲು ಹಿಚುಕಿಕೊಳ್ಳುವುದು, ಅಳುವ ಮುಖ ಮಾಡಿ ಕುಳಿತುಕೊಂಡಿರುವುದು ಸಾಮಾನ್ಯದೃಶ್ಯವಾಗಿತ್ತು. ಯಾರಿಗೂ ಇನ್ನೊಬ್ಬರ ಮೇಲೆ ಕರುಣೆ ಅನ್ನುವುದು ಬರುತ್ತಿರಲಿಲ್ಲ. ನಿಂತಲ್ಲೆ ಕೈ ಎತ್ತಿ, ಇಲ್ಲೆ ಇದೆ ಬನ್ನಿ ಎಂದು ನಮ್ಮ ಶೇರ್ಪಾ ಪ್ರತಿ 10 ನಿಮಿಷಕ್ಕೆ ಒಮ್ಮೆ ಹೇಳುತ್ತಿದ್ದ. ನಾವು ಎಲ್ಲಿದ್ದೇವೆ? ಇನ್ನು ಎಷ್ಟು ದೂರ ಇದೆ? ಎನ್ನುವುದು ತಿಳಿದಿರಲಿಲ್ಲ. ರಾತ್ರಿಯ ಕತ್ತಲಲ್ಲಿ ಚಂದ್ರನ ಬೆಳಕಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ತೇಪೆ ಕಾಣಿಸುತ್ತಿತ್ತು. ಮೊದಲು ಮಂಜನ್ನು ನೈಸರ್ಗಿಕವಾಗಿ ನಾನು ನೋಡಿರಲಿಲ್ಲ. ಯಾವಾಗ ಮಂಜು ಸಿಗುತ್ತದೊ ಅದರ ಮೇಲೆ ಹತ್ತು ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಆಟವಾಡುತ್ತೇನೆ, ಅದರ ಮೇಲೆ ಮಲಗಿ ಉರುಳಾಡುತ್ತೇನೆ ಎಂದು ಏನೇನೊ ಊಹೆಗಳನ್ನು ಮಾಡಿಕೊಂಡಿದ್ದೆ. ಬೆಳಗಿನ ಜಾವ ಸುಮಾರು ೩.೦೦ ಗಂಟೆಯ ಸಮಯ, ಹತ್ತುವಾಗ ಒಂದು ಕಡೆ ಹತ್ತಿಯನ್ನು ಹಾಸಿದ ಹಾಗೆ ಕಾಣಿಸುತ್ತಿತ್ತು. ನನ್ನ ಹಿಂದೆ ಬರುತ್ತಿದ್ದವನು ನಿಧಾನವಾಗಿ ಉಸಿರು ಎಳೆದುಕೊಳ್ಳುತ್ತಾ ಅಲ್ಲಿ ಐಸ್ ಬಿದ್ದೆದೆ ಅಂದ, ನನಗೆ ಸರಿಯಾಗಿ ಕೇಳಿಸಲಿಲ್ಲ. ನಾನು ಹತ್ತಿರ ಹೋದಮೇಲೆ ತಿಳಿಯಿತು ಅದು ಮಂಜುಗಡ್ಡೆಯ ಹಾಸಿಗೆ ಎಂದು. ಹಿಂದೆ ತಿರುಗಿ ನಿಧಾನವಾಗಿ ಹೇಳಿದೆ ನೋಡು ಇಲ್ಲಿ ಮಂಜು ಬಿದ್ದಿದೆ, ನಿನಗೆ ಆಸೆ ಇದ್ದರೆ ಮುಟ್ಟಿ ನೋಡು, ನನಗಂತೂ ಅದರನ್ನು ಮುಟ್ಟುವ ಆಸಕ್ತಿಯೂ ಇಲ್ಲ, ಕೂತರೆ ಏಳುವ ಶಕ್ತಿಯೂ ಇಲ್ಲ ಎಂದು ಹೇಳಿ ನನ್ನ ಆಮೆ ವೇಗದ ಪ್ರಯಾಣವನ್ನು ಮುಂದುವರೆಸಿದೆ. ನಮ್ಮ ಜೊತೆಗಾರರು ಬಹಳ ಜನ ಹಿಂದುಳಿದ ಕಾರಣ ನಾನು ಬೇರೊಬ್ಬ ಗೈಡನ್ನು ಹಿಂಬಾಲಿಸಿ ಹೊರಟೆ. ಒಬ್ಬಳು ಚೈನಿ ಹುಡುಗಿಯನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಎಲ್ಲೆಲ್ಲಿ ಆ ಹುಡುಗಿ ಕುಳಿತಿಕೊಳ್ಳುತ್ತಾಳೊ ಅಲ್ಲೆ ನಾನು ಕೂಡ ಸುಧಾರಿಸಿಕೊಳ್ಳುತ್ತಿದ್ದೆ. ಕೆಲವು ಕಡೆ ಅವಳು ವಾಂತಿಮಾಡಿಕೊಂಡಳು. ಆದರೂ ಅವಳು ತನ್ನ ಪ್ರಯಾಣವನ್ನು ನಿಲ್ಲಿಸದೆ ಮುಂದುವರೆಸುತ್ತಿದ್ದಳು. ಈ ರೀತಿಯ ಪರ್ವತ ಹತ್ತುವಾಗ ಸುಧಾರಿಸಿಕೊಳ್ಳಲು ಕೂತರೆ ಇನ್ನೂ ಜಾಸ್ತಿ ಸುಸ್ತಾಗುತ್ತದೆ. ಆಮ್ಲಜನಕ ಕಡಿಮೆ, ಚಳಿ ಜಾಸ್ತಿ ಇದೆ, ಕೊರೆಯುವ ಚಳಿಯಲ್ಲೂ ಕೈ ಕಾಲು ಉರಿಯುತ್ತಿತ್ತು. ಹಾಗಾಗಿ ಸುಧಾರಿಸಿಕೊಳ್ಳದೆ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು.

ಸುಮಾರು ಬೆಳಗ್ಗೆ ೪.೩೦ ರ ಹೊತ್ತಿಗೆ ನಾವು ದಕ್ಷಿಣಪಥ ಎನ್ನುವ ಭಾಗಕ್ಕೆ ಅಂದರೆ ಕೈಲಾಸ ಪರ್ವತದ ದಕ್ಷಿಣ ಭಾಗಕ್ಕೆ ತಲುಪಿದೆವು.ಅಲ್ಲಿ ನಮ್ಮಿಂದ ಮುಂಚೆ ನಮ್ಮ ಯಾಕ್ ಮತ್ತು ಕುದುರೆಗಳು ತಲುಪಿದ್ದವು..ಶೇರ್ಪಾಗಳು ನಮಗಾಗಿ ಡೇರೆಯನ್ನು ಸಿದ್ದಪಡಿಸಿದ್ದರು. ಅಲ್ಲಿ ನಾವು ಹೋಗಿ ಬ್ಯಾಗನ್ನು ನಮ್ಮ ತಲೆಯಡಿಗೆ ಇಟ್ಟು ಮಲಗಿದೆವು.. ಮನಸ್ಸು ಹಳೆಯ ನೆನಪುಗಳ ಹಾದಿ ಹಿಡಿಯಿತು. ಬಾಲ್ಯಕ್ಕೋಡಿತು..ಮನೆಯ ನೆನಪಾಯಿತು.. ಆಯಾಸದಿಂದ ದೇಹವಿಡೀ ಬಳಲಿದ ಕಾರಣ ನಿದ್ದೆ ಬಂದದ್ದೆ ತಿಳಿಯಲಿಲ್ಲ .........

No comments:

Post a Comment