ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Sunday, October 25, 2009

ಮಾನಸ ಸರೋವರ ಯಾತ್ರೆ-೧೬


ಕೇವಲ ೨ ಘಂಟೆಯ ನಿದ್ರೆಯಿಂದ ಎಚ್ಚರಗೊಂಡಾಗ ಸಮಯ ಬೆಳಿಗ್ಗೆ ೭ ಘಂಟೆ.ಬ್ರೆಷ್ ಮಾಡಿ ನೀರು ಕುಡಿದೆ,ಎರಡು ಬ್ರೆಡ್ ತಿಂದೆ.ಶಾರೀರಿಕವಾಗಿ ನಾನು ಬಳಲಿ ಹೋಗಿದ್ದೆ.ಕಾಲು ಮುಂದಿಡಲು ಶರೀರದ ಎಲ್ಲಾ ಅಂಗಗಳ ಶಕ್ತಿಯನ್ನು ಒಟ್ಟು ಗೂಡಿಸಬೇಕಾದಷ್ಟು ಕಷ್ಟದ ಪರಿಸ್ಥಿತಿ.ಈ ಅನುಭವ ನಾವು ಎಂದೂ ಕೇಳಿರಲಿಲ್ಲ ಮತ್ತು ಸ್ವತ: ಅನುಭವಿಸಿರಲಿಲ್ಲ.. ಸಂದರ್ಭೋಚಿತವಾಗಿ ಕೇಳಿ, ಓದಿದ ಅನುಭವವೂ ಇಲ್ಲ.ಈ ತರಹದ ಸಾಹಸ ಮಾಡುತ್ತಿರುವದು ಇದೇ ಮೊದಲ ಅನುಭವ.ನಮ್ಮೆಲ್ಲರಿಗೂ ಈ ಜಾಗವನ್ನು ಬಿಟ್ಟು ಹೇಗೋ ಜೀವವನ್ನು ಉಳಿಸಿಕೊಂಡು ಮುಂದೆ ಯಾವಾಗಲೋ ಒಂದು ದಿನ ಇನ್ನಷ್ಟು ವ್ಯವಸ್ಥೆಗಳೊಂದಿಗೆ ಸಿದ್ಧ ಮಾಡಿಕೊಂಡು ಬಂದರಾಯಿತು ಎಂಬಷ್ಟು ಮನಸ್ಥಿತಿ ನಮಗಾಯಿತು.ಈ ರೀತಿ ನಮ್ಮ ಪ್ರತಿಯೊಬ್ಬ ಯಾತ್ರಿಕನೂ ನಾನು ನೆನೆಸಿದಂತೆ ಹೇಳಿದಾಗ ನನಗೂ ಯಾತ್ರೆ (ಪರಿಕ್ರಮ)ಮಾಡುವದಕ್ಕೆ ಮನಸ್ಸು ಹಿಂಜರಿಯಿತು.ಈ ಪರಿಸ್ಥಿತಿ ಮರೆಯಾಗದ ಅನುಭವ.ಎಲ್ಲಾ ನನ್ನ ಮನಸ್ಸಿನ ಒಳಗೆ ಸಂಭಾಷಣೆ ಮಾತ್ರ.!
ಬಾಯಿಬಿಟ್ಟು ಮಾತಾಡಲೂ ಶಕ್ತಿಯಿಲ್ಲ.ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಎದ್ದು ಹತ್ತು ಹೆಜ್ಜೆ ಹಾಕೋಣವೆಂದರೆ ಆಗಲಿಲ್ಲ.ಕಾಲುಗಳಲ್ಲಿ ಶಕ್ತಿ ಉಡುಗಿಹೋಗಿ ಹೆಜ್ಜೆ ಇಟ್ಟರೆ ಕುಡಿದವನಂತೆ ತೂರಾಡುವ ಪರಿಸ್ಥಿತಿ ನನ್ನದು. ಆಗ ಪಾಂಡೆಯವರು ಬಂದು ಒಂದು ಮೀಟಿಂಗ್ ಮಾಡೋಣ ಎಂದು ಹೇಳಿದರು.ನಾವೆಲ್ಲಾ ನಮ್ಮ ಡೇರೆಯಲ್ಲಿ ಕಾಲು ನೀಡಿ ಕುಳಿತೆವು.ನಾವೆಲ್ಲಾ ಇನ್ನು ಮುಂದೆ ಬಹಳ ಎಚ್ಚರಿಕೆಯ ಚಾರಣ ಮಾಡಬೇಕಾಗಿದೆ.ಅದಕ್ಕಾಗಿ ಎಚ್ಚರಿಕೆಯ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳೋಣ ಎಂದು ಹೇಳಿದರು.ಇದನ್ನು ನೀವು ತಪ್ಪದೆ ಅನುಸರಿಸಬೇಕು ಎಂದರು.ಅದನ್ನು ಒಂದೊಂದಾಗಿ ವಿವರಿಸಿದರು. 


೧. ಈ ಬೆಟ್ಟಗಳಲ್ಲಿ ನಡೆಯುತ್ತಿರುವಾಗ ಯಾವಗಲೂ ನಾವು ಬೆಟ್ಟದ ಅಂಚಿನಲ್ಲಿಯೇ ನಡೆಯುತ್ತಿರಬೇಕು.ಹಿಂದಿನಿಂದ ಕುದುರೆ ,ಯಾಕ್ ಏನಾದರೂ ಬಂದರೆ ನಾವು ಬೆಟ್ಟದ ಅಂಚಿಗೇ ಇದ್ದು ಅವುಗಳಿಗೆ ದಾರಿ ಬಿಡಬೇಕು. 
೨. ಈ ಚಾರಣದಲ್ಲಿ ಖಾಲೀ ಹೊಟ್ಟೆಯಲ್ಲಿ ನಡೆಯಬಾರದು.ಅದರಿಂದ ಹಸಿವು ಹೆಚ್ಚಿ ನಿಶ್ಶಕ್ತಿಯಿಂದ ತಲೆಸುತ್ತಿ ಬೀಳುವ ಅಪಾಯವಿದೆ. 
೩. ತಿನ್ನುವ ಪದಾರ್ಥಗಳು ,ಕುಡಿಯುವ ನೀರು,ಔಷಧಗಳು,ರೈನ್ ಕೋಟು,ಕ್ಯಾಮರಾ,ಮೊದಲಾದವುಗಳು ಬೇಗ ಕೈಗೆಟಕುವಂತೆ ಚೀಲದಲ್ಲಿಟ್ಟು ಅದನ್ನು ಹೆಗಲಿಗೆ ಹಾಕಿಕೊಂಡಿರಬೇಕು. 
೪. ಒಬ್ಬೊಬ್ಬರೇ ಹೋಗಕೂಡದು.ಗುಂಪು ಗುಂಪುಗಳಾಗಿ ನಡೆಯುತ್ತಿರಬೇಕು.ದಣಿವು ತೋರದಿರಲು ಮತ್ತು ಭಕ್ತಿಭಾವ ಸ್ಥಿರಗೊಳಿಸುವದಕ್ಕೂ ಬಗೆ ಬಗೆಯ ದೈವ ನಿನಾದಗಳನ್ನು ಮಾಡುತ್ತಿರುವದು ಸೂಕ್ತ. 
೫. ಚಾರಣದಲ್ಲಿ ಆಯಾಸ, ಆಲಸ್ಯಗಳು ಉಂಟಾಗುತ್ತವೆ,ತುಂಬಾ ಎತ್ತರವಾದ ಪ್ರದೇಶಗಳಲ್ಲಿ ಆಮ್ಲಜನಕ ಕಡಿಮೆಯಾಗಿರುತ್ತದೆಯಾಗಿರುವುದರಿಂದ ತಲೆಸುತ್ತುವಿಕೆ,ಉಸಿರಾಟದ ತೊಂದರೆ.ಸಹನೆ, ಸಮಾಧಾನಗಳು ಕಡಿಮೆಯಾಗುವಿಕೆ ಇತ್ಯಾದಿ ಕಂಡುಬರುವುದು ಸಹಜ.ಅದಕ್ಕಾಗಿ ಜಾಗ್ರತೆ ವಹಿಸಬೇಕು.ಮುಂದಿರುವ ದಾರಿ,ಎತ್ತರವಾದ ಪರ್ವತಗಳು ಇವುಗಳನ್ನು ನೋಡಿ,'ಅಯ್ಯೋ ! ಇಷ್ಟು ದೂರವೇ?ಅಷ್ಟೊಂದು ಎತ್ತರ ಹತ್ತಬೇಕೆ?" ಎಂದುಕೊಂಡರೆ,ಪುಕ್ಕಲುತನ ಏರ್ಪಟ್ಟು ಹೆಜ್ಜೆ ಮುಂದಿಡಲು ಸಾಧ್ಯವಾಗುವುದಿಲ್ಲ.ಹಾಗಾಗಿ ಹೀಗೆ ಹೆಚ್ಚಾಗಿ ಊಹಿಸಿಕೊಳ್ಳಬಾರದು.
೬. ಯಾವಾಗಲಾದರೂ ದಾರಿ ತಿಳಿಯದೆ ಹೋದರೆ, ಮನುಷ್ಯರು ಇರುವುದಿಲ್ಲವಾದ್ದರಿಂದ ಕುದುರೆ ಲದ್ದಿಗಳನ್ನು ನೋಡಿಕೊಳ್ಳುತ್ತಾ ಸಾಗಬೇಕು.
೭. ಸಾಧ್ಯವಾದಷ್ಟೂ ಕಡಿಮೆ ಆಹಾರ ತಿನ್ನಬೇಕು.೨ ಅಥವಾ ೩ ಘಂಟೆಗೊಂದು ಸಲ ತಿನ್ನುವುದು ಉತ್ತಮ.ಹೆಚ್ಚು ನೀರು ಕುಡಿಯುವುದು ಒಳ್ಳೆಯದು.ಕನಿಷ್ಠ ಪಕ್ಷ ದಿನಕ್ಕೆ ೪ ಲೀಟರ್ ನೀರು ಕುಡಿಯುವುದು ಒಳ್ಳೆಯದು.
ಹೀಗೆ ಎಚ್ಚರಿಕೆ ವಹಿಸುತ್ತಾ ಮುಂದೆ ಸಾಗಬೇಕು...


ವಾತಾವರಣ ಬೇಗ ಬೇಗ ಬದಲಾಗುತ್ತಿರುತ್ತದೆ.ಆಗಲೇ ಬಿಸಿಲು ಬರುತ್ತದೆ. ಕೂಡಲೇ ಮಳೆ ಬರುತ್ತದೆ.ಇವುಗಳ ವ್ಯತ್ಯಾಸ ನಮಗೆ ತಿಳಿಯುವುದಿಲ್ಲ. ಈ ಪ್ರಕೃತಿಯನ್ನು ನೋಡುವಾಗ ಒಂದು ಶ್ಲೋಕ ನೆನಪಾಯಿತು.


ಅಶ್ವಪ್ಲುತಂ ವಾಸವಗರ್ಜಿತಂ ಚ
ಸ್ತ್ರೀಣಾ೦ ಚ ಚಿತ್ತಂ ಪುರೀಶಂಚ ಭಾಗ್ಯಂ !  
ಅವರ್ಷನಂಚಾಪ್ಯತಿ ವರ್ಷನಂ ಚ  
ದೇವೋ ನ ಜಾನಾತಿ ಕುತೋ ಮನುಷ್ಯ:?  
ಕಾಳಿದಾಸನ ರಚನೆಯಾಗಿರುವ ಈ ಶ್ಲೋಕದ ತಾತ್ಪರ್ಯವೇನೆಂದರೆ ,ಕುದುರೆ ನೆಗೆತ,ಮೇಘದ ಘರ್ಜನೆ,ಸ್ತ್ರೀಯ ಮನಸ್ಸು, ಗಂಡಸರ ಭಾಗ್ಯ, ಮಳೆ ಬರುವುದು / ಬರದಿರುವುದು, ಇವುಗಳನ್ನು ತಿಳಿದುಕೊಳ್ಳುವುದು ದೇವತೆಯರಿಗೇ ಅಸಾಧ್ಯವೆಂದರೆ, ಇನ್ನು ಮನುಷ್ಯರ  ಪಾಡೇನು? ಹೀಗೇ ಚಿಂತಿಸುತ್ತಾ ಕುಳಿತಿರುವಾಗ ಸೂರ್ಯ ನೆತ್ತಿಯಮೇಲೆ ಕಾಣಿಸುತ್ತಿದ್ದ. ರೈನ್ ಕೋಟು ಆಮ್ಲಜನಕದ ಸಿಲಿಂಡರನ್ನು ನಮ್ಮ ಹೆಗಲಿಗೆ ಏರಿಸಿಕೊಂಡು ನಮ್ಮ ನಮ್ಮ ಶೇರ್ಪಾ,ಯಾಕ್,ಕುದುರೆಗಳೊಂದಿಗೆ ನಮ್ಮನ್ನು ಪ್ರತ್ಯೇಕ ಪ್ರತ್ಯೇಕವಾದ ಗುಂಪುಗಳನ್ನು ಪಾಂಡೆಯವರು ಮಾಡಿ ನಮಗೆ ಮತ್ತೊಮ್ಮೆ ಎಚ್ಚರಿಕೆಯನ್ನು ಕೊಟ್ಟರು.
ನಿಧಾನಕ್ಕೆ ಚಾರಣವನ್ನು ಪ್ರಾರಂಭಿಸಿದೆವು...

No comments:

Post a Comment