ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, November 27, 2009

ಮಾನಸ ಸರೋವರ ಯಾತ್ರೆ-೨೦


ರಾತ್ರಿ ೧೦ ಘಂಟೆ,ನಾವು ಡೇರೆಯಲ್ಲಿ ಮಲಗಲು ತಯಾರಾದೆವು. ಎಷ್ಟು ಸಲ ಕಣ್ಣು ಮುಚ್ಚಿಕೊಂಡರೂ ನಿದ್ದೆ ನಮ್ಮ ಬಳಿ ಸುಳಿಯಲಿಲ್ಲ.ಒಂದು ಬದಿ ಮೈ ಕೊರೆಯುವ ಚಳಿ , ಮತ್ತೊಂದೆಡೆ ನಮ್ಮ ಸಹ ಚಾರಣಿಗನನ್ನು ಕಳೆದುಕೊಂಡ ದುಖ:ನಮ್ಮ ಜೀವ ಹಿಂಡುತ್ತಿದೆ. ಛಳಿ ಹೆಚ್ಚಾಗಿದೆ.ಎಷ್ಟು ಹೊದ್ದುಕೊಂಡರೂ ಸಾಲದೆನಿಸಿ ಕಷ್ಟವಾಗುತ್ತಿದೆ.ರಾತ್ರಿಯೆಲ್ಲಾ ಕಳೆಯುವುದು ಹೇಗೆಂದು ಭಯವಾಗುತ್ತಿದೆ.ಮಧ್ಯ ರಾತ್ರಿ ೧.ಘಂಟೆಯವರೆಗೂ  ನಿದ್ದೆ ಬರಲಿಲ್ಲ. ಮತ್ತೆ ನಿದ್ದೆ ಎಷ್ಟು ಹೊತ್ತಿಗೆ ಬಂತೋ ತಿಳಿಯದು.ಆ ನಿದ್ದೆ ಆ ರಾತ್ರಿಯ ಚಳಿಯಿಂದ ತಪ್ಪಿಸಿಕೊಳ್ಳುವ ಸದಾವಕಾಶವನ್ನು ಪರಶಿವನು ಆ ರೀತಿ ನಮಗೆ ಪ್ರಸಾದಿಸಿದನೆಂಬ ಅನುಭೂತಿ ಉಂಟಾಯಿತು.ಮುಂಜಾನೆ ೪.೦೦ ಘಂಟೆಯ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು.ಡೇರೆಯಿಂದ ಹೊರಗೆ ಬಂದೆ.ನಿಂತು ಸುತ್ತಲೂ ನೋಡಿದಾಗ zeero ವೋಲ್ಟ್ ಬಲ್ಬ್ ಉರಿದಂತೆ ಕಾಣುತ್ತಿದೆ.ಅಷ್ಟು ಮಂದವಾದ ಬೆಳಕು.ಆ ರಾತ್ರಿಯಲ್ಲೂ ಕೈಲಾಸ ಪರ್ವತವು ತನ್ನ ದಿವ್ಯ ಕಾಂತಿಯನ್ನು ಪಸರಿಸುತ್ತಲೇ ಇದೆ.ಮಂಜುಗಡ್ಡೆಯಿಂದ ಆವೃತವಾದ ಕೈಲಾಸ ಪರ್ವತವು ಬೃಹದಾಕಾರದ ಶಿವಲಿಂಗದಂತೆ ಶೋಭಿಸುತ್ತಿದೆ.ಮತ್ತೊಮ್ಮೆ ಇಂತಹ ಅವಕಾಶವನ್ನು ನೋಡಲು ಈ ಜೀವನದಲ್ಲಿ ನನಗೆ ದೊರೆಯುವುದು ಅಸಾಧ್ಯವೆಂದು ನನಗನಿಸಿತು.   ಈ ಜೀವನದಲ್ಲಿ ನನಗೆ ಇದು ಕೊನೆಯಾಗಿರಬಹುದು.ಆ ಮುಂಜಾನೆ ಮಳೆಹನಿಗಳ ರೂಪದಲ್ಲಿ ಮಂಜಿನ ತುಣುಕುಗಳೊಡನೆ ಅಮೃತಸಿಂಚನವಾಯಿತು. ನನ್ನ ಆನಂದಕ್ಕೆ ಎಲ್ಲೆಯೇ ಇಲ್ಲದಂತಾಯಿತು.ವಿಪರೀತ ಛಳಿಯಾಗಿದ್ದರಿಂದ ತಲೆಗೆ ಧರಿಸಿದ ಟೋಪಿ,ಕೋಟುಗಳನ್ನು ಒಂದು ನಿಮಿಷಕ್ಕಾದರೂ ತೆಗೆಯಬೇಕೆಂದು ಅನಿಸಿತು. ಈ ಅಮೃತ ಸಿಂಚನ ನನಗಾಗಿಯೇ ಈ ಪರಮೇಶ್ವರನಿಂದ ಸೃಷ್ಟಿ ಸಲ್ಪಟ್ಟಿದೆನಿಸಿ,ನಾನು ಧರಿಸಿದ ಕೋಟು .ಕ್ಯಾಪ್ ಗಳನ್ನು ತೆಗೆದು ಆ ಹನಿಗಳಲ್ಲಿ ನೆನೆಯುವ ಪ್ರಯತ್ನದಲ್ಲಿ ತೊಡಗಿದೆ.ಕೇವಲ ಐದು ನಿಮಿಷಗಳು ಮಾತ್ರ ಹನಿಗಳು ಬಿದ್ದು ನಿಂತು ಹೋದವು.!ಎಂತಹ ಅದೃಷ್ಟ ನನ್ನದು!ನಿಂತಿದ್ದ ಕಡೆಯಿಂದಲೇ ಕೈಲಾಸನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ.  ಇದು ಕೈಲಾಸನಾಥನ ಅನುಗ್ರಹ.ಎಷ್ಟೋ ಜನ್ಮದ ಪುಣ್ಯವೋ ಅಥವಾ ನನ್ನ ಹಿರಿಯರು ಮಾಡಿದ ಅನುಷ್ಠಾನದ ಫಲವೋ?ಈ ದೃಶ್ಯವನ್ನು  ಕಾಣಲು ನನ್ನನ್ನು ಈ ಭುವಿಗೆ ತಂದಿಳಿಸಿದ ನನ್ನ ಪಿತೃಗಳನ್ನು ಒಂದು ಕ್ಷಣ ಸ್ಮರಣೆ ಮಾಡಲು ಕೈಲಾಸನಾಥನು ನನಗೆ ಸುಬುದ್ಧಿಯನ್ನು ಅನುಗ್ರಹಿಸಿದನು. ನನಗೆ ಆ ಆಲೋಚನೆ ಬಂದ ಕೆಲವೇ ನಿಮಿಷಗಳಲ್ಲಿ ಹನಿಗಳು ಬೀಳುವುದು ನಿಂತಿತು.ಏನೊಂದು ಪವಾಡ!!!!!!!!! ನಾನು ಕಾಣುವುದು ಕನಸೋ ಎಂದು ಒಂದು ಕ್ಷಣ ನನ್ನ ತೊಡೆ ತಟ್ಟಿ ನೋಡಿದೆ. ಇಲ್ಲ!! ಎಚ್ಚರವಾಗಿದ್ದೇನೆ. 
         ನೋಡು ನೋಡುತ್ತಿದ್ದಂತೆಯೇ ಸೂರ್ಯೋದಯವಾಯಿತು.ಆ ಸೂರ್ಯೋದಯದ ಕಿರಣ ಕೈಲಾಸ ಪರ್ವತಕ್ಕೆ ಬಿದ್ದಾಗ, ಮಂಜು ಆವಿಯಾಗುವದು, ಇವೆಲ್ಲ ಏಕ ಕಾಲಕ್ಕೆ ನಡೆಯುವುದು ಕೈಲಾಸದಲ್ಲಿ ಬೆಂಕಿಯ ಜ್ವಾಲೆ ಎದ್ದಂತೆ ಕಾಣುತ್ತಿತ್ತು.  ಸುಮಾರು ಬೆಳಿಗ್ಗೆ  ೭.೦೦ ಘಂಟೆಯ ನಂತರ ನಮ್ಮ ಚಾರಣವನ್ನು ಮುಂದುವರಿಸಿದೆವು.ಸುಮಾರು ೨ ಕಿಲೋಮೀಟರ್ ಗಳಷ್ಟು ಚಾರಣ ಮಾಡಿದಾಗ ಒಂದು ಗುಹೆ ಸಿಕ್ಕಿತು.ಆ ಗುಹೆಯಲ್ಲಿ ಒಂದು ದೇವತೆಯ ವಿಗ್ರಹ ಕಂಡಿತು.ಇದೀಗ ನಾವು ಕೈಲಾಸ ಪರಿಕ್ರಮದ ಮಾರ್ಗವನ್ನು ಕಂಡು ಹಿಡಿದ ವ್ಯಕ್ತಿಯ ವಿಗ್ರಹವೂ ಅಲ್ಲಿದೆ.ಅಲ್ಲಿಂದ ಹೊರಬಂದರೆ ಮೂರು ಪರ್ವತಗಳು ಕಾಣಿಸುತ್ತವೆ.ಅಷ್ಟರವರೆಗೆ ನನ್ನ ಏಕೈಕ ಸಂಗಾತಿಯಾಗಿದ್ದ ನನ್ನ ಕ್ಯಾಮರಾ ಬ್ಯಾಟರೀ ಲೋ ಎಂದು ತೋರಿಸುತ್ತಿತ್ತು.ಆ ಪರ್ವತಗಳ ಫೋಟೋಗಳನ್ನು ತೆಗೆದ ಕೂಡಲೇ ನನ್ನ ಕ್ಯಾಮರಾ ಆಫ್ ಆಯಿತು.ನನ್ನ ನಿರಾಶೆ ಆಗ ಹೇಳ ತೀರದು.ಆ ಪರ್ವತಗಳು ಮಂಜುಶ್ರೀ,ಅವಲೋಕಿತೇಶ್ವರೀ,ವಜ್ರಪಾಣಿ. ಆ ಪರ್ವತಗಳ ದರ್ಶನ ತುಂಬಾ ವಿಶಿಷ್ಟ..ಎಂದು ಪಾಂಡೆ ಪರ್ವತಗಳ ಬಗ್ಗೆ ವಿವರಣೆ ನೀಡಿದರು. ಜ್ಞಾನ ,ದಯೆ, ಅಧಿಕಾರಗಳನ್ನು ಆ ಪರ್ವತಗಳು ಪ್ರಸಾದಿಸುತ್ತವೆಯಂತೆ.ಅವುಗಳಿಗೆ ನಮಸ್ಕರಿಸಿದೆ.ಅಲ್ಲಿದ್ದ ವ್ಯಕ್ತಿಯೊಬ್ಬ ,ನನ್ನನ್ನು ಇವರು ಇಂಡಿಯಾ ದವರೇ?ಎಂದು ನಮ್ಮ ಶೇರ್ಪಾನಲ್ಲಿ ವಿಚಾರಿಸಿದ. ಹೌದು ಎಂದ,ಅವರೂ ಪಶ್ಚಿಮ ಬಂಗಾಳದವರಾಗಿದ್ದರು.ಎಷ್ಟೋ ಪ್ರೇಮದಿಂದ ನಗು ನಗುತ್ತಾ ಅವರು ನನ್ನನ್ನು ಮಾತನಾಡಿಸಿದರು.ಅವರ ಭಾಷೆಯಲ್ಲಿ ನನಗೆ ಏನೂ ಅರ್ಥವಾಗಲಿಲ್ಲ. ಸುಮಾರು ೪ ಕಿ.ಮೀ.ಗಳಷ್ಟು ಚಾರಣ ಮಾಡಿದಾಗ ಒಂದು ಅದ್ಭುತ ಎದುರಾಯಿತು.!!!   ಚಿತ್ರ ವಿಚಿತ್ರ ಗಳಿಂದ ಕೂಡಿದ ಆ ಸ್ಥಳ."ಶಿವಸ್ಥಾಲ್"..ಸೂರ್ಯನ ಕಿರಣ ನಡು ನೆತ್ತಿಯ ಮೇಲೆ ಬಿದ್ದರೂ ಬಿಸಿಲಿನ ಪ್ರಖರ ಸ್ವಲ್ಪವೂ ಅರಿವಾಗುತ್ತಿರಲಿಲ್ಲ.ಇಲ್ಲಿ ಕೆಲವು  ಅಘೋರಿಗಳು ತಪಸ್ಸು ಮಾಡುತ್ತಿದ್ದರು.ಆ ಕ್ಷಣ ನನಗೆ ಹಿಮಾಲಯನ್ ಬ್ಲಂಡರ್ ಎನ್ನುವ ಲೇಖನ ಅಘೋರಿಗಳ ಬಗ್ಗೆ ಓದಿರುವುದು ನೆನಪಾಯಿತು.ಇಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕು ಎಂದು ಪಾಂಡೆ ಹೇಳಿದಾಗ ನನಗೆ ಮತ್ತಷ್ಟು ಭಯವಾಯಿತು.ಈ ಶಿವಸ್ಥಾಲ್ ನಲ್ಲಿ ಹಳೆಯ ಬಟ್ಟೆಗಳು,ತಲೆ ಕೂದಲುಗಳ ರಾಶಿ,ಪ್ರಾಣಿಗಳ ರುಂದಗಳು,ಹೀಗೆ ಅಸಹ್ಯವಾದ ವಸ್ತುಗಳನ್ನು ಕಂಡ ನಾನು ಅಲ್ಲಿಂದ ಆದಷ್ಟು ಬೇಗ ಓಡಬೇಕೆಂದು ನನ್ನ ಚಾರಣದ ವೇಗವನ್ನು ಹೆಚ್ಚಿಸಿದೆ.ಕೆಲವರು ತಮ್ಮ ರಕ್ತವನ್ನೂ ಇಲ್ಲಿ ಒಂದು ಹನಿ ಅರ್ಪಿಸಿದರೆ ಸ್ವರ್ಗ ಪ್ರಾಪ್ತಿ ಎಂದು ನಂಬುತ್ತಾರೆ.ಈ ಪ್ರದೇಶದಲ್ಲಿ ವೈರಾಗ್ಯ ಚೆನ್ನಾಗಿ ಮೈಗೂಡುತ್ತದೆ ಎಂದು ಟಿಬೆಟಿಯನ್ನರ ನಂಬಿಕೆ,ಅಂತೆಯೇ ಕೆಲವರು ಸತ್ತಂತೆ  ಮಲಗಿ ಏಳುತ್ತಾರೆ. ಅಲ್ಲಿ ಏನಾದರೊಂದನ್ನು ಸಮರ್ಪಿಸಿ ಹೋಗುವ ಪದ್ದತಿಯಂತೆ,ಹೀಗೆ ಪಾಂಡೆ  ಈ ಸ್ಥಳದ ಬಗ್ಗೆ ಮಾಹಿತಿ ನೀಡಿದರು.ಏನು ಬೇಕಾದರೂ ಆಗಲಿ ..ಮೊದಲು ಇಲ್ಲಿಂದ ನಡೆಯೋಣ ಎಂದು ನಾನು ಧರಿಸಿದ್ದ ಅಂಗಿಯೊಂದನ್ನು ಅಲ್ಲಿಗೆ ಸಮರ್ಪಿಸಿ ಮುಂದೆ ನಡೆದೆ.  ಎತ್ತರ ಹೆಚ್ಚುತ್ತಿದ್ದರಿಂದ ಅತೀ ಕಷ್ಟದಿಂದ ಹೆಜ್ಜೆ ಹಾಕಬೇಕಾಗುತ್ತಿತ್ತು.ಹತ್ತು ಹೆಜ್ಜೆ ನಡೆಯಲು ಹತ್ತು ನಿಮಿಷಗಳೇ ಬೇಕಾದಷ್ಟು ಕಷ್ಟದ ಪರಿಸ್ಥಿತಿ. ಅದರಲ್ಲೂ ಮಧ್ಯಾಹ್ನ ೩ ಘಂಟೆಯ ಸಮಯವಾದ್ದರಿಂದ ಬಾಯಿ ಒಣಗಿಹೋಯಿತು. ಡ್ರೈ ಫ್ರುಟ್ಸ್, ಚಾಕ್ಲೆಟ್ ಬಾಯಲ್ಲಿಟ್ಟುಕೊಂಡು ನಡೆಯಬೇಕಾಗುತ್ತಿತ್ತು.ಹಿಂದಿನ ರಾತ್ರಿ ಏನೂ ತಿಂದಿರಲಿಲ್ಲ.ಶರೀರ ಮತ್ತಷ್ಟು ಸುಸ್ತಾಗತೊಡಗಿತು. ಪಾಂಡೆಯವರು ನಮ್ಮನ್ನು ಅರ್ಧ ಘಂಟೆಗೊಮ್ಮೆ ಎಚ್ಚರಿಸಿ ಚಾರಣದಲ್ಲಿ ಬೇಕಾದ ಜಾಗ್ರತೆಗಳನ್ನು ಮನದಟ್ಟಾಗುವಂತೆ ಹೇಳುತ್ತಿದ್ದರು.ಹಿಂದಿನ ದಿನ ನಮ್ಮ ಚಾರಣಿಗರಲ್ಲೋಬ್ಬರಾದ  ಗುರುಮೂರ್ತಿಯವರು ಮೃತಪಟ್ಟಿದ್ದು ನನ್ನಲ್ಲಿ ಪೂರ್ತಿ ಭಯ ಮನೆ ಮಾಡಿತು.ಮತ್ತೆ ಓಂ ನಮಶಿವಾಯ ಜಪ ಮುಂದುವರಿಸಿದೆ.ನಾನು ನಮ್ಮ ಭಾರತಕ್ಕೆ ಪುನಃ ಕ್ಷೇಮವಾಗಿ ಮರಳಿ ನನ್ನ ಹೆತ್ತವರಿಗೆ ನಾನು ಕಾಣ ಬೇಕಾದರೆ ಅದಕ್ಕೆ ಕೈಲಾಸನಾಥನೇ ಕಾರಣ ಎಂದು ಬಲವಾಗಿ ನಂಬಿದೆ.ನನಗೆ ಆಗ ಉಳಿದದ್ದು ಅದೊಂದೇ ಆತ್ಮ ಸ್ಥೈರ್ಯ !!!!! ನನ್ನ ಪಕ್ಕದಲ್ಲೇ ಕೆಂಪು ವಸ್ತ್ರ ಧರಿಸಿ ಒಬ್ಬ ಟಿಬೆಟ್ ಲಾಮಾ ನನ್ನಿಂದ ವೇಗವಾಗಿ ನಡೆದ.ಈ ಹಿಂದೆ ನಮ್ಮ ಚಾರಣದಲ್ಲಿ ನಾನು ಅವನನ್ನು ನೋಡಿರಲಿಲ್ಲ.ಈಗ ಇದ್ದಕ್ಕಿದ್ದ ಹಾಗೆ ಅವನು ಎಲ್ಲಿಂದ ಬಂದ?ಎಂಬ ಸಂಶಯ, ಭಯ ,ಎಲ್ಲಾ ಒಟ್ಟಿಗೇ ಆಯಿತು.   ಇವನು ಅಘೋರಿಗಳ ಪೈಕಿ ಒಬ್ಬನಿರಬಹುದೇ?ಎಂಬ ಭಯ ನನ್ನನ್ನು ಕಾಡಿತು.ಅವನು ಮುಂದೆ ಹೋಗಿ ಹಿಂತಿರುಗಿ ನನ್ನನ್ನೇ ದಿಟ್ಟಿಸಿ ನೋಡಿದ!!!!!! ನನ್ನ ಎದೆ ಆಗ ನಿಮಿಷಕ್ಕೆ ೧೦೦ ಸಲ ಬಡಿಯಿತು.ಏನಾದರಾಗಲೀ ಎಂದು ಅವನಿಗೆ ಎರಡು ಕೈ ಮುಗಿದು ನಮಸ್ಕರಿಸಿದೆ.ಆತ ನನ್ನ ಹತ್ತಿರ ಬಂದ!!!!!!!! ಆತನ ಜೋಳಿಗೆಯಿಂದ ಒಂದು ಚಾಕ್ಲೆಟ್ ಹೊರತೆಗೆದ..ನನ್ನತ್ತ ಕೈ ಚಾಚಿದ.ನನ್ನ ಶೇರ್ಪಾ ಮುಂದೆ ಹೋಗಿದ್ದ.ನಾನು ಈಗ ಒಬ್ಬಂಟಿ.. ಏನು ಮಾಡುವುದು.ತೆಗೆದು ಕೊಳ್ಳದೇ ವಿಧಿಯಿಲ್ಲ!! ಒಂದೆಡೆ ನನ್ನಲ್ಲಿರುವ ಎಲ್ಲಾ ಆಹಾರ ಖಾಲಿಯಾಗಿದ್ದವು.ಧೈರ್ಯ ಮಾಡಿ ತೆಗೆದುಕೊಂಡೆ.  ನನಗೆ ಅದು ಚಾಕ್ಲೆಟ್ ಎನಿಸಲಿಲ್ಲ.ಇಂದಿನ ಯಾತ್ರೆಯನ್ನು ಮುಗಿಸಲು ಅತ್ಯಗತ್ಯವಾದ ಔಷಧಿಯೆಂದು ಭಾವಿಸಿದೆ..ನನ್ನ ಗುರುಗಳು ಆತನ ರೂಪದಲ್ಲಿ ಬಂದು ಕೊಟ್ಟರೆನ್ದನಿಸಿತು. ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಾ ಅವನೊಡನೆ ಮುಂದೆ ನಡೆದೆ..  ಮರಣಕ್ಕೆ ಹತ್ತಿರವಾದ ಪ್ರಯಾಣ.ಎಲ್ಲಾ ಆ ಈಶ್ವರನೇ ಭಾರ!!!!
                 ದೊಡ್ಡ ದೊಡ್ಡ ಕಲ್ಲುಗಳನ್ನೂ ಹಿಮದ ಬಂಡೆಗಳನ್ನೂ ದಾಟಿಕೊಂಡು ಸುಮಾರು ರಾತ್ರಿ ೭.೦೦ ಘಂಟೆಯ ಹೊತ್ತಿಗೆ  "ಡೋಲ್ಮಾಪಾಸ್"ಎನ್ನುವ ಪ್ರಮಾದಕರ ಪರ್ವತದ ಬಳಿಗೆ ತಲುಪಿದೆ.ಅಲ್ಲಿಂದ ಕೈಲಾಸ ಪರ್ವತದ ಉತ್ತರ ದಿಕ್ಕಿನ ಮುಖದ ದರ್ಶನ ಲಭಿಸಿತು..ಮೋಡಗಳು ಮಂಜಿನ ಹೊಗೆಯಿಂದಾಗಿ ಕ್ಷಣ ಕ್ಷಣಕ್ಕೂ ರೂಪ ಬದಲಾಯಿಸುತ್ತಿರುತ್ತದೆ.ತೀರಾ ಹತ್ತಿರದಲ್ಲೇ ಇರುವಂತೆ ಅನಿಸಿತು.ಮೇಲಕ್ಕೆ ಹತ್ತ ಬಹುದು ಎಂದು ಕೊಳ್ಳುತ್ತಾರೆ.ಆದರೆ ಯಾರಿಗೂ ಸಾಧ್ಯವಾಗದು..ನಾನು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಧ್ಯಾನ ಮಾಡಿದೆ.ಆಕ್ಸಿಜನ್ ಎಟುಕದೇ ಕಷ್ಟವಾಗುತ್ತಿದೆ,ನಮ್ಮ ಬೆನ್ನಲ್ಲಿ ಕಟ್ಟಿಕೊಂಡ ಆಕ್ಸಿಜನ್ ಸಿಲಿಂಡರ್ ಯಾವಾಗ ಮುಗಿಯುತ್ತದೆ ಎಂಬ ಭಯ!!!!!!!!ಆದರೂ ಪಟ್ಟು ಹಿಡಿದು ಕುಳಿತೆ...  ನನಗೆ ನೆನಪಿನಲ್ಲಿರುವ ಎಲ್ಲಾ ದೈವಿಕ ಶಕ್ತಿಗಳನ್ನು ಪ್ರಾರ್ಥಿಸಿದೆ. ಕಷ್ಟ ಬಂದಾಗ ಎಲ್ಲರೂ ನೆನಪಿಗೆ ಬರುತ್ತಾರೆ.ಎಲ್ಲೂ ಇಲ್ಲದ ನಂಬಿಕೆಗಳು,ವಿಶ್ವಾಸಗಳು ನಮ್ಮಲ್ಲಿ ಮನೆ ಮಾಡುತ್ತವೆ.ಎಲ್ಲದೂ ದೊಡ್ಡದೇ ಎನಿಸುತ್ತದೆ.ನನ್ನದೂ ಅಂತಹುದೇ ಪರಿಸ್ಥಿತಿ.ಈ ಡೋಲ್ಮಾ ಪಾಸ್ ದಾಟಿದರೆ ಸಾಕು,ಈ ದಿನದ ಯಾತ್ರೆಯಲ್ಲಿ ಅತೀ ಮುಖ್ಯವಾದ ತಿರು ಏರ್ಪಡುತ್ತದೆ. ಹಾಗೆಯೇ ಸುಮಾರು ೩ ಕಿಲೋ ಮೀಟರ್ ಗಳಷ್ಟು ನಡೆದು ಒಂದು ವಿಶಾಲವಾದ ಬಯಲಿನಲ್ಲಿ ಟೆಂಟ್ ಸಿದ್ಧಪಡಿಸಿ ಆ ರಾತ್ರಿ ಕಳೆಯುವ ಪ್ರಯತ್ನ ಮಾಡಿದೆವು.. 

Wednesday, November 18, 2009

ಮಾನಸ ಸರೋವರ ಯಾತ್ರೆ -೧೯




ಈ ಜೀವನವೇ ಅಷ್ಟೇ...... ಕಾಲ ಯಾರಿಗೂ ಕಾಯುವುದಿಲ್ಲ.. ನಮಗೂ ಸಹ... ಇದೆಲ್ಲರ ಮಧ್ಯದಲ್ಲಿ ದ್ವೇಷದ ಜೀವನ ಎಕೆ..? ಯಾರೇ ಬಂದರೂ ಸರಿ, ಅವರು ನಮ್ಮ ಮಿತ್ರರೇ ಅಗಿರಬಹುದು, ಇಲ್ಲಾ ಅಪರಿಚಿತರೇ ಅಗಿರಬಹುದು... ನಮ್ಮ ಧ್ಯೇಯ ಆದಷ್ಟು ನಗುವ ಹಂಚುವುದು.....ಕೊನೆಯಲ್ಲಿ ಅದು ಸಹ ಒಂದು ಸುಮಧುರ ನೆನಪಾಗಿ ಈ ಜಗವ ಬಿಟ್ಟು ಹೋದ ಮೇಲೂ ನಿಮ್ಮ ಪ್ರೀತಿ-ಪಾತ್ರರ ಮನದಲ್ಲಿ ಇದ್ದು ಅವರ ಜೀವನವನ್ನು ಒಂದು ಒಳ್ಳೆಯ ಆದರ್ಶವಾಗಿ ಮುಂದುವರಿಸುವುದು. ಅಲ್ವಾ??


ನಾವು ಜೀವನದ ಈ "ನಾಲ್ಕು ದಿನಗಳ" ಪಯಣವನ್ನ ಪ್ರತಿದಿನ ಉಲ್ಲಾಸದಿಂದ ಸಾಗಿಸಲೇ ಬೇಕು... ಕೆಲವೊಮ್ಮೆ ಎಂಥಾ
ಕಷ್ಟಗಳು ಬಂದರೂ ಸಹ... ಏಕೆಂದರೆ ಜೀವನ ಮರಳಿನ ಹಾಗೇ, ಕೈಯಿಂದ ಜಾರುತ್ತಲೇ ಹೋಗುತ್ತದೆ... ಪ್ರತಿ ಕ್ಷಣವು....! ನಾವು ಅದನ್ನು ಅರಿಯಲು ಹೋದರೆ ಕೊನೆಗೆ ನಾವು ಕಳೆದ ಕ್ಷಣಕ್ಕೆ ಕೊರಗ ಬೇಕು ಅಷ್ಟೆ.. ಇದ್ದ ಜೀವನವನ್ನೇ ಸುಂದರವಾಗಿ ಕಳೆದರೆ ಅದು ಮುಂದೊಂದು ದಿನ ಸುಂದರ ನೆನಪಾಗಿ ಬರುತ್ತೆ ತಾನೇ... ?? ನೆನಪು ಬರುತ್ತದೆ, ಹಾಗೇ ಹೋಗುತ್ತದೆ ಸಹ... ಆದರೂ ಕೆಲವೊಂದು ಸಲ ಆ ನೆನಪೇ ನಮ್ಮ ಜೀವನವನ್ನ ಸುಂದರಗೊಳಿಸೋದು ಅಲ್ಲವೇ? ಅವುಗಳ ಮರೆತರೆ.... ಎಂದಾದರೂ ಸಾಧ್ಯವೇ? .. ಈ ಲೋಕದಲ್ಲಿ ಕೆಲವು ಮಿತ್ರರು ಮತ್ತು ಕೆಲವು ಆಪ್ತರು ನಮ್ಮ ಪ್ರಾತಃ ಸ್ಮರಣೀಯರೇ ಅಗಿರುತ್ತಾರೆ. ಅವರಿಂದಲ್ಲವೇ ನಮ್ಮ ಬಾಳು ಇಷ್ಟು ಬೆಳೆದದ್ದು ಮತ್ತು ನಾವು ಸಮೃದ್ಧಿ ಹೊಂದದ್ದು... ಮರೆಯದೆ ಹೊಂದಿಸಿಕೊಂಡು ಹೋಗಬೇಕಾದ ಬಂಧದ ನೆನಪಿನ ಸಾಲುಗಳು ಅವು...ನಾನು ಯಾಕೆ ಈ ಪದಗಳನ್ನು ಹೇಳುತ್ತೆನೆಂದರೆ ನಮ್ಮ ಚಾರಣಿಗರ ಪೈಕಿ ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ... ಆ ವ್ಯಕ್ತಿ ಗುರುಮೂರ್ತಿ(ಹೆಸರು ಬದಲಿಸಲಾಗಿದೆ)..ಊರು ಕೊಯಂಬತ್ತೂರು . ಅಷ್ಟೇ ನನಗೆ ಗೊತ್ತು ಆ ವ್ಯಕ್ತಿಯ ಬಗ್ಗೆ .... ನಮ್ಮ ಮಾತುಗಳು ಮುಗಿದಿದ್ದವು. ಮನಸ್ಸು ಸಂತಸಗೊಂಡಿತು...ಆದರೂ ಹೃದಯಕ್ಕೆ ನಮ್ಮಿಂದ ಅದೇನೋ ಬೇಕಿತ್ತು ಆ ದಿನ.. ಮಾತಿನಲ್ಲಿಯೇ ಕಳೆದು ಹೋಗಿತ್ತು ಅದೇಷ್ಟೋ ಕ್ಷಣ.... ಸಮಯ ಅಂದಾಜು ಬೆಳಿಗ್ಗೆ ೧೦.೩೦ ... ನಾವು ದೆರಾಪುಕ್ ನಿಂದ ಕೈಲಾಸದ ಪಶ್ಚಿಮ ಭಾಗವಾದ ಗೌರೀ ಕುಂಡದತ್ತ ಹೆಜ್ಜೆ ಹಾಕುತ್ತಿದ್ದೆವು. ಕೆಲವರು ದೇರಾಪುಕ್ ನಿಂದ ಸುಮಾರು ೨ ಕಿಲೋ ಮೀಟರು ದೂರದಲ್ಲಿ ನೇರವಾಗಿ ಕೈಲಾಸದಿಂದಲೇ ಹರಿದು ಬರುತ್ತಿರುವ ಮಂಜಿನ ಹೊಳೆಯಲ್ಲಿ ಅಲ್ಲಿರುವ ಶಿವಲಿಂಗ ಸ್ವರೂಪದಂತೆ ಇರುವ ಕಲ್ಲಿಗೆ ಪೂಜೆ ಮಾಡುತ್ತಾ ಇದ್ದರು. ನಾನು ಅವುಗಳನ್ನೆಲ್ಲ ಗಮನಿಸುತ್ತ ನನ್ನಷ್ಟಕ್ಕೆ ನಮ್ಮ ಗುಂಪಿನವರೊಡನೆ ಸೇರಿ ಮುಂದೆ ನಡೆದೆ.. ಸುಮಾರು ೩೫ ಜನರ ತಂಡ ನಮ್ಮದಾಗಿದ್ದರಿಂದ ಬೇರೆ ಬೇರೆ ಗುಂಪುಗಳಲ್ಲಿ ನಾವು ಚಾರಣ ಮಾಡುತ್ತಿದ್ದೆವು. ನಮ್ಮ ತಂಡ ಸುಮಾರು ಎಲ್ಲರಿಗಿಂತ ಮುಂದೆ ಇತ್ತು. ಅದೊಂದು ತಬ್ಬಲಿ ದಿನ . ಕರುಳು ಕೊರೆಯುವ ಚಳಿ... ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು...ನಮ್ಮ ಶೇರ್ಪಾ ನ ಕಾಡ್ ಲೆಸ್ ರಿಂಗಣಿಸಿತು..ಅತ್ತ ಕರೆಯಿಂದ ಶೆರ್ಪಾನ ಉತ್ತರ.ಭಾಷೆ ಬರದ ನಮ್ಮಿಂದ ಶೆರ್ಪಾನಲ್ಲಿ ಮೌನದ ಮೂಲಕ ಪ್ರಶ್ನೆ.ಏನಾಯಿತು?ಎಂದು ಕೇಳಿದೆವು.. ನೀವು ಇಲ್ಲೇ ನಿಲ್ಲಿ..ಎಂದು ನಮ್ಮನ್ನು ಕುದುರೆಗಳಿಂದ ಕೆಳಗಿಳಿಸಿ ನಮ್ಮಲ್ಲಿನ ಒಂದು ಕುದುರೆಯನ್ನು ಆತ ಕೇಳಿ ವೇಗವಾಗಿ ದೇರಪುಕ್ ನತ್ತ ಹೋದ. ಏನೂ ತಿಳಿಯದ ನಮಗೆ ಭಯವಾಯಿತು.
ಸುಮಾರು ಒಂದು ಘಂಟೆಯಷ್ಟು ಕಾಲ ನಮ್ಮ ತಂಡ ಶೇರ್ಪಾನಿಗೆ ಕಾಡು ಕುಳಿತೆವು. ಸಮಯ ಮಧ್ಯಾಹ್ನ ೩.೦೦ ಘಂಟೆ,ಒಂದೆಡೆ ಹೊಟ್ಟೆ ಹಸಿಯುತ್ತಿತ್ತು. ಆ ಕ್ಷಣ ಹೆಲಿಕಾಪ್ಟರ್ ಶಬ್ದ ಕೇಳಿಸಿತು.ಮಂಜಿನಲ್ಲಿ ಅದರ ಶಬ್ದ ಕೇಳಿಸುವುದಲ್ಲದೆ ಹೆಲಿಕಾಪ್ಟರ್ ಕಾಣಿಸಲಿಲ್ಲ.ಅಂತೂ ನಮ್ಮ ಹತ್ತಿರವೇ ಹೋದದ್ದು ಸ್ಪಷ್ಟ..ಆಗ ನಮ್ಮ ಭಯ ಮತ್ತಷ್ಟು ಹೆಚ್ಚಿತು.ಸುಮಾರು ೪.೦೦ ಘಂಟೆಯಾಗುವಾಗ ಶೇರ್ಪಾ ಬಂದ.ಅವನ ಮನಸಿನಲ್ಲಿ ಏನೋ ಭಯ,ದುಖ ಕಂಡಿತು.ಆಗ ನಮ್ಮ ಪಂದೆಯವರೂ ಜೊತೆಗೆ ಇದ್ದರು.ಅವರಲ್ಲಿ ಏನಾಯಿತು? ಎಂದು ಕೇಳಿದೆವು. ಆಗ ನಿಮ್ಮ ತಂಡದ ಗುರುಮೂರ್ತಿ ಎಂಬವರು ಆಮ್ಲಜನಕದ ಕೊರತೆಯಿಂದ ನಿಮೆಲ್ಲರನ್ನು ಬಿಟ್ಟು ಹೋಗಿದ್ದಾರೆ.ಎಂದರು.ಆಗ ನಮ್ಮ ಜಂಘಾ ಬಲವೇ ಉಡುಗಿ ಹೋಯಿತು.ಇನ್ನು ನಮ್ಮ ಪರಿಸ್ಥಿತಿ ಏನೋ?ಮನೆಯಲ್ಲಿ ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ವ್ಯಕ್ತಿಗಳನ್ನು ಕೈಲಾಸನಾಥನೆ ನಮ್ಮನ್ನು ರಕ್ಷಿಸಬೇಕು ಎಂದು ಪ್ರಾರ್ಥನೆ ಮಾಡಿದೆವು. ನಮ್ಮ ಬಳಿ ಇರುವ ಆಮ್ಲಜನಕದ ಸಿಲಿಂಡರ್ ನ ವೇಗವನ್ನು ಕಡಿಮೆ ಮಾಡಿಕೊಂಡೆವು.ಅದುವರೆಗೆ ೮.೦೫ ವೇಗದಲ್ಲಿ ಉಸಿರಾದುತ್ತಿದ್ದೆವು.ಈಗ ೬.೦೦ ಗೆ ಮಾಡಿಕೊಂಡೆವು. ಅಷ್ಟೊತ್ತಿಗೆ ಗುರುಮೂರ್ತಿ ಜೊತೆಗೆ ಇರುವ ತಂಡ ನಮ್ಮ ತಂಡದ ಜೊತೆ ಸೇರಿದರು.ನಾವು ಅವರಲ್ಲಿ ನಡೆದ ವಿಷಯವನ್ನು ಕೇಳಿದೆವು.ಆಗ ದೆರಪುಕ್ ನಲ್ಲಿ ನಾವು ನೋಡಿದ ಮಂಜಿನ ಹೊಳೆಯಲ್ಲಿ ಶಿವಲಿಂಗ ಸ್ವರೂಪದ ಕಲ್ಲಿಗೆ ಪೂಜೆ ಮಾಡಿ ಆ ತೀರ್ಥವನ್ನು ಅವರು (ಗುರುಮೂರ್ತಿ)ಸ್ನಾನ ಮಾಡಿದರಂತೆ.ಆಗ ಮೈ ತಣ್ಣಗಾಗಿ ರಕ್ತ ಹೆಪ್ಪುಗಟ್ಟಿತು. ಆಗ ಅವರಲ್ಲಿದ್ದ ಆಮ್ಲಜನಕದ ಸಿಲಿಂಡರ್ ಖಾಲಿಯಾಗಿತ್ತು.ಆಗ ಅವರ ಗುಂಪಿನವರ ಸಿಲಿಂಡರ್ ಮೂಲಕ ಆಮ್ಲಜನಕವನ್ನು ವರ್ಗಾಯಿಸುವಷ್ಟು ಸಮಯ ಅವರ ದೇಹ ಆ ಪರಿಸ್ಥಿತಿಯನ್ನು ತಾಳಿಕೊಳ್ಳಲಿಲ್ಲ..ಆ ಕೂಡಲೇ ನಮ್ಮ ಶೇರ್ಪಾ ತಂಡದವರು ಚೀನಾ ಮಿಲಿಟರೀ ಪಡೆಯನ್ನು ಸಂಪರ್ಕಿಸಿ ತಕ್ಷಣ ಆಮ್ಲಜನಕದ ಹೆಲಿಕಾಪ್ಟರ್ ಬರುವಂತೆ ಕರೆ ಮಾಡಿದರು.ಹೆಲಿಕಾಪ್ಟರ್ ಬರುವಷ್ಟರಲ್ಲಿ ಗುರುಮೂರ್ತಿ ಮೈ ತಣ್ಣಗಾಗಿಗೆದೆ.ಉಸಿರಾಟದ ಶಬ್ದ ಕೇಳಿಸುತ್ತಾ ಇಲ್ಲ ಎಂದು ಹೇಳಿದಾಗ ನಾವು ಇನ್ನು ಜೀವ ಸಹಿತ ನಮ್ಮೂರು ಮುಟ್ಟುವುದು ಸಂಶಯ ಎಂದನಿಸಿತು.ಮನಸ್ಸಿನಲ್ಲಿಯೇ ಗುರುಮೂರ್ತಿ ಆರೋಗ್ಯ ಬೇಗನೆ ಸುಧಾರಿಸಲಿ ಎಂದು ಪ್ರಾರ್ಥಿಸಿ  ಮುಂದೆ ನಡೆದೆವು.ಅಲ್ಲಿಂದ ಮುಂದೆ ನನ್ನ ಪ್ರತೀ ಹೆಜ್ಜೆಯೂ ಓಂ ನಮಶಿವಾಯ ದಿಂದ ಕೂಡಿತ್ತು.ಜೀವ ಸಹಿತ ನನ್ನ ಮನೆಯವರನ್ನು ಕಾಣಬೇಕು ಎನ್ನುವ ಆತುರ ಜಾಸ್ತಿಯಾಯಿತು.ಸತ್ತರೂ ಚಿಂತಿಲ್ಲ ..ಮನೆಯವರಿಗೆ ತಿಳಿಯಬೇಕು.ನಮ್ಮಿಂದ ಹಿಂದೆ ಇಡೀ ಜೀವನವನ್ನೇ ಮಾನಸ ಮತ್ತು ಕೈಲಾಸವನ್ನು ಭಾರತಕ್ಕೆ ಸೇರಿಸಲು ಪ್ರಾಣತ್ಯಾಗ ಮಾಡಿದ ಯೋಧರಿಗೆ ಹೋಲಿಸಿದರೆ ನಮ್ಮ ಪ್ರಾಣ ಏನೂ ದೊಡ್ಡದಲ್ಲ ಎಂದನಿಸಿತು. ಅಂಥಹ ಯೋಧರಿಗೆ ನಮ್ಮ ನಮನವನ್ನು ಸಲ್ಲಿಸಿ ಅಲ್ಲಿಂದ ಮುಂದಕ್ಕೆ ನಡೆದೆವು.

Wednesday, November 4, 2009

ಮಾನಸ ಸರೋವರ ಯಾತ್ರೆ-೧೮










ಬೆಳಿಗ್ಗೆ ೮ ಘಂಟೆಯ ಸಮಯ.ಸ್ನಾನ ಇಲ್ಲದೆ ೧೦ ದಿನಗಳಾಗಿದ್ದವು.ಕೇವಲ ಬ್ರೆಷ್ ಮಾಡಿ ಕೈಯಲ್ಲಿದ್ದ ಬಿಸ್ಕೆಟ್ ,ಒಣ ದ್ರಾಕ್ಷಿ ,ಗೋಡಂಬಿ,ಬಾದಾಮಿ,ಬ್ರೆಡ್ ಜ್ಯಾಮ್ ನಮ್ಮ ನಿತ್ಯದ ಆಹಾರಗಳಾಗಿದ್ದವು. ನಮ್ಮ ಪ್ರಯಾಣ ಮುಂದುವರೆಯಿತು. ಎಲ್ಲರೂ ನಿಧಾನವಾಗಿ ತಮ್ಮ ತಮ್ಮ ಬ್ಯಾಗನ್ನು ಕೊಡವಿಕೊಂಡು ಹೆಗಲಿಗೆ ಏರಿಸಿಕೊಂಡು ನಡೆಯಲು ಶುರುಮಾಡಿದರು. ಈಗ ನಮ್ಮ ಮುಂದಿದ್ದ ದಾರಿ ಮಾತ್ರ ನಮ್ಮ ಊಹೆಗೂ ಮೀರಿತ್ತು ಅಥವಾ ಊಹಿಸಲೇ ಸಾಧ್ಯವಿಲ್ಲದಂತಿತ್ತು. ನೇರವಾಗಿ ಹತ್ತಲಾಗದ ಬೆಟ್ಟವನ್ನು ಜಿಗ್-ಜಾಗ್ ಮಾದರಿಯಲ್ಲಿ ಹತ್ತಲು ಶುರುಮಾಡಿದೆವು. ಎರಡು ಹೆಜ್ಜೆ ಇಟ್ಟು ಹತ್ತಬಹುದಾದ ಮಾರ್ಗವನ್ನು ಸುಮಾರು ಹನ್ನೆರಡು ಹೆಜ್ಜೆ ಇಟ್ಟು ಹತ್ತುತ್ತಿದ್ದೆವು. ಬೂದಿಯಂತಹ ಮಣ್ಣಿನಿಂದ ಕೂಡಿದ ಈ ದಾರಿಯನ್ನು ನೇರವಾಗಿ ಹತ್ತುವುದು ಅಸಾಧ್ಯದ ಕಾರ್ಯವಾಗಿತ್ತು. ಕೇವಲ ನೂರು ಮೀಟರ್‌ನಷ್ಟು ಬೆಟ್ಟವನ್ನು ಹತ್ತಲು ಸುಮಾರು ಒಂದು ಗಂಟೆ ತೆಗೆದುಕೊಂಡೆವು. ಒಂದೊಂದು ಹೆಜ್ಜೆ ಇಡಬೇಕಾದರೂ ಯಾಕಾದರೂ ಈ ಪರ್ವತ ಹತ್ತಲು ಬಂದೆವೊ ಎಂದು ನಮ್ಮನ್ನು ನಾವೇ ಬೈದುಕೊಳ್ಳುತ್ತಿದ್ದೆವು. ಒಬ್ಬರ ಹಿಂದೆ ಒಬ್ಬರು ಬರುತ್ತಿದ್ದ ನಾವು, ಒಬ್ಬರನ್ನೊಬ್ಬರು ಕಾಣದಷ್ಟು ಅಂತರವನ್ನು ಬೆಳೆಸಿಕೊಂಡಿದ್ದೆವು. ನಮ್ಮಲ್ಲಿ ಗೈಡ್ ಗಳು ಕಡಿಮೆ ಇದ್ದರು, ಕೆಲ ಗೈಡ್‌ಗಳು ಸುಸ್ತಾದವರನ್ನು ಹಿಂದಕ್ಕೆ ಬಿಡಲು ಹೋಗಿದ್ದರು, ಹಾಗಾಗಿ ನಾನು ಒಬ್ಬ ಚೈನೀಸ್ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಬೇರೆ ಯಾರೊ ಗೈಡ್‌ನನ್ನು ಹಿಂಬಾಲಿಸುತ್ತಾ ಹೊರಟೆ. ಎಲ್ಲೆಲ್ಲಿ ಆ ಚೈನೀಸ್ ಹುಡುಗಿ ಸುಸ್ತಾಗಿ ಕೂರುತ್ತಿದ್ದಳೊ ನಾನು ಅಲ್ಲೆ ಕೂರುತ್ತಿದ್ದೆ. ನಾಲ್ಕೈದು ಕಡೆ ಅವಳು ವಾಂತಿ ಮಾಡುತ್ತಿದ್ದಾಗ ನಾನು ದೂರದಲ್ಲೆ ಕುಳಿತು ಅವಳು ಹೊರಟ ತಕ್ಷಣ ವೇಗವಾಗಿ ಹೋಗಿ ಅವರನ್ನು ಕೂಡಿಕೊಳ್ಳುತ್ತಿದ್ದೆ. ಆಮ್ಲಜನಕ ಬಹಳ ಕಡಿಮೆ ಇದ್ದಕಾರಣ ಉಸಿರಾಟದ ತೊಂದರೆ ಬಹಳವಾಗಿತ್ತು. ಏನೂ ಕೆಲಸ ಮಾಡದೆ ಸುಸ್ತಾಗುವ ಅಂತಹ ಜಾಗದಲ್ಲಿ ಪರ್ವತ ಹತ್ತುವಂತಹ ಕಠಿಣ ಕಾರ್ಯ ಬಹಳ ಆಯಾಸದಾಯಕ. ನನ್ನ ಹಿಂದೆ ನಮ್ಮ ಗುಂಪಿನ ಇನ್ನೊಬ್ಬ ಹುಡುಗ ಬಂದ. ನಾನು ಅವನನ್ನು ನೋಡಿ ಸ್ವಲ್ಪ ನಿಧಾನವಾಗಿ ಚಲಿಸತೊಡಗಿದೆ. ಸ್ವಲ್ಪೆ ದೂರದಲ್ಲಿ ಹತ್ತಿಯ ಹಾಸಿಗೆಯಂತೆ ಕಾಣಿಸತೊಡಗಿತು. ಅದು ಮಂಜುಗಡ್ಡೆಯಿರಬೇಕು ಎಂದು ಅನ್ನಿಸಿದರೂ ಅಂತಹ ಖುಷಿ ಅನ್ನಿಸಲಿಲ್ಲ. ಈ ಪರ್ವತ ಹತ್ತುವ ಮೊದಲು, ಕೆಳಗಿನಿಂದ ಮಂಜುಗಡ್ಡೆಯನ್ನು ನೋಡುತ್ತಿದ್ದ ನಾನು, ಮೊದಲ ಬಾರಿ ಮಂಜುಗಡ್ಡೆಯ ಮೇಲೆ ಹೋದಮೇಲೆ ಹತ್ತಿ ಕುಣಿಯುತ್ತೇನೆ, ಅದನ್ನು ಉಂಡೆ ಮಾಡಿ ಬೇರೆಯವರಿಗೆ ಹೊಡೆಯುತ್ತೇನೆ ಎಂದು ಊಹಿಸಿಕೊಂಡಿದ್ದೆ. ಆದರೆ ಈಗ ನನ್ನ ಕಾಲಿನ ಪಕ್ಕದಲ್ಲೆ ಮಂಜಿನ ಹಾಸಿಗೆ ಬಿದ್ದಿದ್ದೆ, ಅದನ್ನು ಮುಟ್ಟುವ ಆಸೆ ಕೂಡಾ ನನ್ನಲ್ಲಿ ಉಳಿದಿರಲಿಲ್ಲ. ಹಿಂದೆ ಬರುತ್ತಿದ್ದ ನನ್ನ ಸ್ನೇಹಿತನಿಗೆ ಹೇಳಿದೆ. ಅದಕ್ಕೆ ಅವನು ಅದನ್ನು ನೋಡುವ ಆಸಕ್ತಿ ನನ್ನಲ್ಲಿ ಉಳಿದಿಲ್ಲ, ಬೇಕಿದ್ದರೆ ನೀನೆ ಮುಟ್ಟಿ ನೋಡು ಎಂದು ಹೇಳಿ ನನ್ನ ಹತ್ತಿರ ಬಂದು ನಿಂತುಕೊಂಡ. ನಮಗೆ ಎಷ್ಟು ಸುಸ್ತಾಗಿತ್ತೆಂದರೆ, ಮಂಜನ್ನು ಮುಟ್ಟಲು ಎರಡು ಹೆಜ್ಜೆ ಮುಂದೆ ಹೋಗಬೇಕಿತ್ತು, ಹೋದರೆ ಮತ್ತೆ ಎರಡು ಹೆಜ್ಜೆ ಹಿಂದೆ ಬರಬೇಕು ಎಲ್ಲಾ ಸೇರಿ ನಾಲ್ಕು ಹೆಜ್ಜೆ. ಮಂಜನ್ನು ಮುಟ್ಟುವ ಖುಷಿಗಿಂತ ನಾಲ್ಕು ಹೆಜ್ಜೆ ಉಳಿಸಿದ ಖುಷಿ ಜಾಸ್ತಿ ಎನಿಸಿ ಸುಮ್ಮನೆ ಮುಂದುವರೆದೆವು. ಅಂತು ನಮ್ಮ ಜಿಗ್-ಜಾಗ್ ಮಾದರಿಯ ಪ್ರಯಾಣ ಮುಗಿಯಿತು ಮತ್ತು ಮುಂದೆ ಕಲ್ಲು ಬಂಡೆಗಳು ಶುರುವಾದವು.
ನಮ್ಮ ಕೈಲಿದ್ದ ಕೋಲುಗಳನ್ನು ಮಡಿಚಿ ಬಂಡೆಗಳನ್ನು ಹಿಡಿದು ಹತ್ತಲು ಶುರುಮಾಡಿದೆವು. ಹಿಂತಿರುಗಿ ನೋಡಿದರೆ ನಮ್ಮ ಸಹ ಚಾರಣಿಗರು ಬಹಳ ದೂರದಲ್ಲಿ ಬರುತ್ತಿದ್ದರು. ಕೂತರೆ ಅಲ್ಲಿಯ ಚಳಿಗೆ ಮತ್ತು ಕಡಿಮೆ ಆಮ್ಲಜನಕಕ್ಕೆ ಇನ್ನೂ ಸುಸ್ತಾಗುತ್ತಿದ್ದೆವು, ಹಾಗಾಗಿ ಪ್ರಯಾಣವನ್ನು ಮುಂದುವರೆಸಿದೆವು. ಕೆಲವು ಬಂಡೆಗಳನ್ನು ಹತ್ತುವಾಗ ತೆವಳಿ ಹತ್ತುತ್ತಿದ್ದರೆ ಮತ್ತೆ ಕೆಲವು ಕಡೆ ಪೂರ್ತಿಯಾಗಿ ಮಲಗಿ ಹತ್ತಬೇಕಾಗಿತ್ತು. ಎಲ್ಲಿಗೆ ಹೋಗುತ್ತಿದ್ದೇವೆ, ನಮ್ಮ ದಾರಿ ಸರಿ ಇದೆಯಾ ಎನ್ನುವುದೆ ನಮಗೆ ತಿಳಿಯದಂತಾಗಿತ್ತು. ನನ್ನ ಸ್ನೇಹಿತ ಸ್ವಲ್ಪ ಹಿಂದೆ ಉಳಿದುಕೊಂಡ ಅವನಿಗಾಗಿ ಕಾದ ನನಗೆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ಕೂಡ ಕಾಣಿಸದಾದರು, ಆದರೂ ಅಲ್ಲಿ ದಾರಿಯಂತೆ ಕಾಣಿಸುತ್ತಿದ್ದ ಮಾರ್ಗದಲ್ಲಿ ನಡೆಯುತ್ತಾ ಹೋದೆ. ಎಲ್ಲೊ ಒಂದುಕಡೆ ಅವರುಗಳು ಹೋಗುತ್ತಿದ್ದುದು ಕಾಣಿಸಿತು. ವೇಗವಾಗಿ ಹೋದರೆ ಮತ್ತೆ ಅವರು ಕಾಣಿಸುತ್ತಿರಲಿಲ್ಲ. ಸ್ವಲ್ಪ ಸುಧಾರಿಸಿಕೊಳ್ಳಲು ಒಂದು ಬಂಡೆಗೆ ಬೆನ್ನು ತಾಗಿಸಿ ಕುಳಿತರೆ ಕೈ ಮತ್ತು ಕಾಲುಗಳು ಉರಿಯತೊಡಗಿದವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಪಾದಗಳು ಬೆಂಕಿಯಲ್ಲಿಟ್ಟಂತೆ ಉರಿಯುತ್ತಿವೆ. ಕೂತರೆ ಕೆಲಸ ಕೆಡುತ್ತದೆ ಎಂದು ಮತ್ತೆ ನಡೆಯಲು ಶುರುಮಾಡಿದೆ. ಒಂದು ಕವಲುದಾರಿಯಲ್ಲಿ ತಪ್ಪು ದಾರಿ ಹಿಡಿದು ಹೊರಟೆ. ಹೋಗುತ್ತಾ ಹೋಗುತ್ತ ಕಣಿವೆಯ ತುದಿ ಮುಟ್ಟಿದೆ. ಅಲ್ಲಿ ಮುಂದೆ ನನಗೆ ಮಾರ್ಗವೆ ಇಲ್ಲ ಇನ್ನು ಮುಂದೆ ಹೋದರೆ ಕಣಿವೆಗೆ ಬೀಳುತ್ತೇನೆ, ಮೇಲೆ ಹತ್ತಲು ದಾರಿ ಎನ್ನುವುದೆ ಇಲ್ಲ. ಹಿಂದೆ ಹೋಗಲು ಮತ್ತೆ ದಾರಿ ಸರಿಯಾಗಿ ನೆನಪಾಗುತ್ತಿಲ್ಲ. ಹೆದರಿ ಸುತ್ತಲೂ ನೋಡಿತ್ತಿದ್ದೆ, ಅಲ್ಲೆ ಒಂದು ಬಂಡೆಯ ಮೇಲೆ ಇಬ್ಬರು ನಿಂತಿದ್ದರು. ಒಬ್ಬ ಶೇರ್ಪಾ ತಲೆಯ ಮೇಲಿದ್ದ ಟಾರ್ಚ್ ಆ ಹಗಲಿನಲ್ಲಿ ಮಂಜಿನ ನಡುವೆ ಅಪಾಯದ ಸೂಚನೆಯಂತೆ ಮಿಣುಕಿಸಿದ. ಅಲ್ಲಿಂದ ಜೋರಾಗಿ ಕೂಗಿ ಕೇಳಿದೆ, ಅಲ್ಲಿಗೆ ಬರಲು ದಾರಿಯಾವುದು? ಅದಕ್ಕೆ ಉತ್ತರಿಸುತ್ತ ಅವನು ಹೇಳಿದ, ಹಾಗೆ ಬಂಡೆಯನ್ನು ಹಿಡಿದು ಮೇಲಕ್ಕೆ ಬಾ, ಯಾವುದೆ ಕಾರಣಕ್ಕು ಬಲಗಡೆಗೆ ಹೋಗಬೇಡ. ಅವನು ಹೇಳಿದ್ದು ಏಕೆ ಎಂದು ನಾನು ಮೇಲೆ ಹೋದ ಮೇಲೆ ಬೆಳಕಿನಲ್ಲಿ ನೋಡಿ ತಿಳಿಯಿತು. ಅದೊಂದು ದೊಡ್ಡ ಪ್ರಪಾತ, ಅದರ ತುಂಬ ಮಂಜುಗಡ್ಡೆ ತುಂಬಿದೆ. ಅದರ ಆಳ ಗೊತ್ತಿಲ್ಲ, ಹತ್ತಲು ಕಲ್ಲು ಬಂಡೆಯಿಲ್ಲ. ಸತ್ತು ಬದುಕಿದೆ ಎಂದು ಮನಸ್ಸಿನಲ್ಲೆ ಅಂದುಕೊಂಡೆ. ನನಗೆ ಸೂಚನೆ ಕೊಟ್ಟು ಕರೆಸಿಕೊಂಡ ಆ ಜಾಗದ ಹೆಸರು ದೇರಪುಕ್ . ಅದನ್ನು ಕೂಡ ಈ ಪರ್ವತದ ಒಂದು ಉನ್ನತ ತುದಿ ಎಂದು ಹೇಳುತ್ತಾರೆ. ಅಲ್ಲಿಂದ ಕೇವಲ ಮೂರು ನೂರು ಮೀಟರ್ ನಂತರ ಸಿಗುವುದೆ ಉಹುರು ತುದಿ, ಕೈಲಾಸದ ಅತೀ ಎತ್ತರವಾದ ಜಾಗ.
ನಾನು ದೇರಾಪುಕ್ ತಲುಪಿದ ತಕ್ಷಣ ಅಲ್ಲಿದ್ದ ಆ ಚೈನೀಸ್ ಹುಡುಗಿ ಮತ್ತು ಅವಳ ಗೈಡ್ ತಮ್ಮ ಪ್ರಯಾಣ ಮುಂದುವರೆಸಿದರು. ನನ್ನ ಪೈಕಿಯವರು ಯಾರಾದರೂ ಬರಲಿ ಎಂದು ನಾನು ಅಲ್ಲೆ ಕುಳಿತೆ. ಕುಳಿತ ಎರಡೆ ನಿಮಿಷದಲ್ಲಿ ಮತ್ತೆ ಕೈ ಕಾಲುಗಳು ಉರಿಯಲಾರಂಬಿಸಿದವು. ಏನೂ ಮಾಡಲಾಗದ ಸ್ಥಿತಿ ನನ್ನದಾಗಿತ್ತು. ಅಲ್ಲಿ ಕಾಯುತ್ತಿದ್ದ ನನಗೆ ಇನ್ನೊಬ್ಬ ವ್ಯಕ್ತಿಯನ್ನು ನೋಡುವ ತನಕ ಬದುಕುತ್ತೇನೆ ಎನ್ನುವ ಭರವಸೆ ಇಲ್ಲದಾಗಿತ್ತು. ಅವನನ್ನು ನೋಡಿ ನನ್ನ ಕಷ್ಟ ಹೇಳಿಕೊಂಡರೆ ಅವನು ನನಗಿಂತ ಕಷ್ಟದ ಸ್ಥಿತಿಯಲ್ಲಿದ್ದ! ಹೀಗೆ ಕೂತರೆ ನಾವು ಮಂಜುಗಡ್ಡೆಯಂತೆ ಕಲ್ಲಾಗುತ್ತೇವೆ, ನಮ್ಮ ಪ್ರಯಾಣ ಮುಂದುವರೆಸೋಣ ಎಂದು ತೀರ್ಮಾನಿಸಿ ನಾನು ಮತ್ತೆ ನನ್ನ ಶೇರ್ಪಾ ಹೊರಟೆವು. ಇಲ್ಲಿಂದ ಮುಂದಿನ ಮಾರ್ಗ ಅಷ್ಟೊಂದು ಸುಲಭವಾಗಿರಲಿಲ್ಲ. ಒಂದು ಕಡೆ ಕಂದರ ಮತ್ತೊಂದು ಕಡೆ ಬಂಡೆ. ಕಾಲ ಕೆಳಗೆ ಮಂಜು ಗಡ್ಡೆ. ಸ್ವಲ್ಪ ಏಮಾರಿದರೂ ಜಾರಿ ಮಂಜಿನ ಕಂದರಕ್ಕೆ ಹೋಗುವ ಅವಕಾಶ ಜಾಸ್ತಿ. ಹಾಗೆ ನಡೆಯುತ್ತಾ ಸುಮಾರು ದೂರ ಹೋಗಿದ್ದೆವು, ಯಾರೋ ಕೂಗಿದ ಹಾಗಾಯಿತು. ತಿರುಗಿ ನೋಡಿದರೆ ನಮ್ಮ ಗುಂಪಿನವರಲ್ಲಿ ಒಬ್ಬರು . ನಮ್ಮನ್ನು ಇಲ್ಲೆ ಇರುವಂತೆ ತಿಳಿಸಿದ್ದಾರೆ, ಮುಂದೆ ಹೋಗಬಾರದಂತೆ ಎಂದು ವಾಪಸ್ ಕರೆದ. ನಾವು ದೇರಾಪುಕ್ ಗೆ ವಾಪಸ್ ಬಂದೆವು. ಕೊರೆಯುವ ಚಳಿಯಲ್ಲಿ ಕೈ ಮತ್ತು ಕಾಲಿನ ಪಾದ ಉರಿಯುತ್ತಿತ್ತು. ನನ್ನ ಕಷ್ಟ ಹೇಳಿಕೊಂಡರೂ ಅದರ ಬಗ್ಗೆ ಕನಿಕರಿಸುವವರು ಯಾರೂ ಇರಲಿಲ್ಲ. ಏಕೆಂದರೆ ಉಳಿದವರ ಪಾಡು ನನಗಿಂತ ಬೇರೆ ಏನಿರಲಿಲ್ಲ. ನನ್ನ ಕೈ ಉರಿಯುತ್ತಿದ್ದ ಕಾರಣ ಎರಡು ಕೈಯನ್ನು ಉಜ್ಜಿಕೊಳ್ಳೊಣ ಎಂದು ಹಾಕಿದ್ದ ಗ್ಲೌಸ್ ತೆಗೆಯುತ್ತಿದ್ದೆ, ಅಲ್ಲೆ ದೂರದಲ್ಲಿ ನಿಂತಿದ್ದ ಇನ್ನೊಬ್ಬ ಕಿರುಚಿದ, ಯಾವುದೇ ಕಾರಣಕ್ಕು ಗ್ಲೌಸ್ ತೆಗೆಯಬೇಡ, ರಕ್ತ ಹೆಪ್ಪು ಗಟ್ಟಿ ಅಥವ ಚರ್ಮ ಕಿತ್ತು ಬಂದರೆ ಏನು ಮಾಡುತ್ತೀಯ ಎಂದು ಹೆದರಿಸಿದ. ಸತ್ಯ ಅಸತ್ಯದ ವಿಚಾರಕ್ಕೆ ಹೋಗದೆ ಸುಮ್ಮನೆ ನನ್ನ ಕಷ್ಟವನ್ನು ಸಹಿಸಿಕೊಂಡೆ. ಯಾಕಾದರೂ ಈ ಪರ್ವತ ಹತ್ತಲು ಬಂದೆನೊ ಎಂದು ಮನಸ್ಸಿನಲ್ಲಿಯೆ ಗೊಣಗುತ್ತಿದ್ದೆ. ನಮ್ಮ ಊರಿನವರು ಸುಮಾರು ೧೦ ಜನ ಒಂದು ಕಡೆ ಸೇರಿದೆವು.ಸುಮಾರು ಜನ ಬಂದು ನಮ್ಮನ್ನು ಸೇರಿದರು. ಕೆಲವರು ಚಳಿಯಿಂದಾಗುವ ತೊಂದರೆಗೆ ಅಳುತ್ತಿದ್ದರೆ ಕೆಲವರು ನಡೆಯಲಾಗದು ಎಂದು ಕುಳಿತಲ್ಲಿಂದ ಮೇಲೇಳಲೆ ಇಲ್ಲ. ಅಂತು ನಮ್ಮ ಮುಖ್ಯ ಗೈಡ್ ಪಾಂಡೆಯವರು ನಮ್ಮನ್ನೆಲ್ಲ ಮುಂದುವರೆಯುವಂತೆ ಸೂಚಿಸಿದರು . ಅಲ್ಲಿಂದ ಸುಮಾರು ಎರಡು ನೂರು ಮೀಟರ್ ದೂರದ ದಾರಿಯನ್ನು ಕ್ರಮಿಸಲು ಎರಡು ಗಂಟೆಗಳು ಬೇಕಾಗುತ್ತದೆ ಎಂದು ತಿಳಿಸಿದರು. ಮಂಜುಗಡ್ಡೆಯ ಕಿರಿದಾದ ದಾರಿಯಲ್ಲಿ ನಮ್ಮ ಪ್ರಯಾಣ ಶುರುವಾಯಿತು. ನಡೆಯುತ್ತಾ ನಡೆಯುತ್ತ ಬೆಳಕು ಕಡಿಮೆಯಾಯಿತು.ಆಗ ನಮ್ಮ ಭಾರತೀಯ ಕಾಲಮಾನ ಪ್ರಕಾರ ನನ್ನ ಕೈ ಗಡಿಯಾರ ಸಂಜೆ ೪.೦೦ ಘಂಟೆ ತೋರಿಸುತ್ತಿತ್ತು ., ಸುತ್ತಲೂ ಏನಿದೆ ಎಂದು ಕಾಣಿಸುತ್ತಿತ್ತು. ಸ್ವರ್ಗ ಎಂದರೆ ಹೀಗೆ ಇರುತ್ತದೆ ಎಂದು ಆಗ ತಿಳಿಯಿತು. ಸುತ್ತಲೂ ಅಸ್ಪಷ್ಟವಾದ ಬೆಳಕು, ಬಣ್ಣ ಎನ್ನುವುದಿದ್ದರೆ ಅದು ಬಿಳಿ ಮಾತ್ರ. ಆಗಸಕ್ಕು, ಭೂಮಿಗೂ, ಮಂಜುಗೆಡ್ಡೆಗೂ ಏನೂ ವ್ಯತ್ಯಾಸವೆ ಇಲ್ಲ ಯಾವುದು ಆಗಸ, ಯಾವುದು ಭೂಮಿ ಎಂದು ತಿಳಿಯಲಾಗದ ಅನುಭವ. ಸುತ್ತಲೂ ಮಂಜುಗಡ್ಡೆ, ದೂರ ದೂರದವರೆಗೂ ತನ್ನದೇ ಆದ ಸೌಂದರ್ಯವನ್ನು ಮಂಜುಗಡ್ಡೆ ತೋರಿಸುತ್ತಿತ್ತು. ನಮ್ಮಲ್ಲಿದ್ದ ಎಲ್ಲಾ ಶ್ರಮ ಕಾಣೆಯಾಯಿತು. ನಾನು ಮತ್ತು ಇನ್ನೊಬ್ಬ ಸ್ನೇಹಿತ ನಡೆಯುತ್ತ ಮುಂದುವರಿದೆವು, ಹಿಂದೆ ಯಾರು ಬರುತ್ತಿದ್ದಾರೆ ಎಂದು ಯೋಚಿಸುವುದಕ್ಕೂ ಆಗದಷ್ಟು ಸಂತೋಷ ನಮ್ಮಲ್ಲಿತ್ತು ಬಹಳ ದೂರ ಬಂದ ಮೇಲೆ ನೋಡಿದರೆ ಅಲ್ಲಿದ್ದವರು ನಾವಿಬ್ಬರೆ. ಆಮೇಲೆ ತಿಳಿಯಿತು ಬಹಳಷ್ಟು ಜನ ಸುಸ್ತಾಗಿ ವಾಪಸ್ ಹೋದರು ಮತ್ತೆ ಕೆಲವರು ನಡೆಯಲಾಗದೆ ಅಲ್ಲೆ ಬಿದ್ದು, ಅವರನ್ನು ಉಳಿದವರು ಎತ್ತಿಕೊಂಡು ಹೋದರು ಎಂದು. ನಾವು ಇಬ್ಬರು ಮಾತ್ರ ನಿಧಾನವಾಗಿ ನಡೆಯುತ್ತಾ ಅಲ್ಲಲ್ಲಿ ಮಂಜಿನ ಗೆಡ್ಡೆಯನ್ನು ಕಡಿದು ತಿನ್ನುತ್ತಾ ಹೋಗುತ್ತಿದ್ದಾಗ ದೂರದಲ್ಲಿ ಬಣ್ಣ ಬಣ್ಣದ ಬಟ್ಟೆ ಕಟ್ಟಿದ್ದ ಕೆಲವು ಕಟ್ಟಿಗೆಗಳು ಕಾಣಿಸಿದವು. ಅದೆ ನಾವು ತಲುಪಬೇಕಾದ ಈ ದಿವಸದ ತುದಿ ಎಂದು ತಿಳಿಯಿತು. ಬಹಳ ಸುಸ್ತಾಗಿದ್ದ ನಮಗೆ ಓಡಿ ಹೋಗುವಷ್ಟು ಶಕ್ತಿ ಇರಲಿಲ್ಲ. ನಿಧಾನವಾಗಿಯೆ ಹೋಗಿ ಅದನ್ನು ಮುಟ್ಟಿದೆವು, ಅಪ್ಪಿದೆವು ... ನಾವು ಸ್ವರ್ಗದಲ್ಲೆ ಇದ್ದೆವು. ದೂರ ದೂರದವರೆಗೂ ಕಾಣಿಸುತ್ತಿದ್ದ ಮಂಜಿನ ಬೆಟ್ಟಗಳು, ಅಲ್ಲಲ್ಲಿ ಮಂಜಿನ ಕಲಾಕೃತಿಗಳು, ಮಂಜಿನಿಂದ ನಿರ್ಮಿತವಾಗಿರುವ ಬಹಳಷ್ಟು ವಿಸ್ಮಯಗಳನ್ನು ನೋಡಿ ಆನಂದಿಸಿದೆವು...
ಜೀವನದ ಅತೀ ತ್ರಾಸದಾಯಕ ಪ್ರಯಾಣ ಮತ್ತು ಅತೀ ಆನಂದದಾಯಕ ಕ್ಷಣ ಎನ್ನಬಹುದಾದ ಒಂದು ವಿಚಿತ್ರ ಅನುಭವ ಈ ಕೈಲಾಸ ಪರ್ವತ ಪ್ರದಕ್ಷಿಣೆ . ಪರ್ವತಾರೋಹಣ ಎನ್ನುವ ಹುಚ್ಚು ಇರುವ ಯಾರಿಗಾದರೂ ಇದು ಸ್ವರ್ಗ. ಜೀವನದಲ್ಲಿ ಒಮ್ಮೆ ಬದುಕಿದ್ದಾಗಲೆ ಸಿಗುವ ಸ್ವರ್ಗ ಸುಖ.
.