ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Saturday, February 6, 2010

ಮಾನಸ ಸರೋವರ ಯಾತ್ರೆ -೨೫

ಸದಾ ಗಿಜಿಗುಡುತ್ತಿರುವ  ರಸ್ತೆಯ  ಮೇಲೆ ಒಂದಲ್ಲ ಒಂದು ವಾಹನ ಹೋಗುತ್ತಲೇ  ಇರುತ್ತದೆ , ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್‌ಶೀಲ್ಡ್ ಮೂಲಕ ಮುಂದೆ ಹೋಗುವ  ವಾಹನವನ್ನು  ಹಿಂಬಾಲಿಸಿಕೊಂಡು ಹೋಗುವುದು  ಸುಲಭ ಅನ್ನಿಸುತ್ತದೆ . ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತದೆ . ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ಟುತ್ತಲೇ ಇರುತ್ತವೆ  , ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವಕ್ಕೆ  ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತದೆ .

ಹೀಗೆ ಪ್ರಯಾಣದ ಹಳೆಯ,ಹೊಸ ಮುಖಗಳು ಮನಸ್ಸಿಗೆ ಬಂದದ್ದು ಸಗಾದಿಂದ  ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತ್ತಾ  ಇರುತ್ತದೆ  ಅನ್ನುವುದು ನನ್ನ ಭಾವನೆ. ಆದರಿಂದಲೇ  ಪ್ರಯಾಣ ಅನ್ನುವುದು  ನಮ್ಮೊಳಗಿರುವ  ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸುವುದಕ್ಕೆ ನಾವು ಕಲ್ಪಿಸಿಕೊಡುವ  ಒಂದು ಅವಕಾಶ ಆಗುತ್ತದೆ . ನಾವು ಕ್ರಮಿಸುವ  ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ದುವುದು , ನಮ್ಮ ಜೊತೆ ಯಾರು ಯಾರು ಇದ್ದಾರೆ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನುವುದು   ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ  ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗುವುದರಲ್ಲಿ  ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸುವುದಕ್ಕೆ  ಬೇಕಾದಷ್ಟು ಆಸ್ಪದ ಸಿಕ್ಕಿ  ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರುತ್ತೇನೆ  ಅನ್ನುವುದು  ನಿಜ.

ಆಗ ಸಂಜೆ ೫.೦೦ ಘಂಟೆಯ ಸಮಯ.  ಬಾನಂಗಳದಲ್ಲಿ ಸೂರ್ಯನು ಪಡುವಣದತ್ತ ಜಾರುತ್ತಿದ್ದನು.. ನೈಜತೆ ಎಷ್ಟೊ೦ದು ರೋಮಾ೦ಚಕಾರಿಯಾದ ವಿಷಯಗಳನ್ನು ನಮಗೆ ನೀಡಬಲ್ಲುದೆ೦ದರೆ ಕಲ್ಪನೆಯು ಅದಕ್ಕಿ೦ತ ಹೆಚ್ಚಿನದೇನೂ ಹೇಳಲಾರದು  


ಉದಯಾಸ್ತಮಾನಗಳ ನಡುವಿನ ಬೆಳಕಿನಾಟ ನಮ್ಮನ್ನು ರೋಮಾ೦ಚನಗೊಳಿಸುತ್ತದೆಯಾದರೂ, ಬೆಳಕಿನ ಬಗ್ಗೆ ಅರಿಯುವ ಕುತೂಹಲ, ಕ್ರಮಬದ್ಧವಾದ ಅಧ್ಯಯನದೆಡೆಗೆ ನಮ್ಮನ್ನು ಒಯ್ಯುವುದು ಬಹಳ ವಿರಳ. ಪಟ್ಟಕ ಒ೦ದನ್ನು ಸೂರ್ಯರಶ್ಮಿಗೆ ಒಡ್ಡಿದಾಗ ಮೂಡುವ ಏಳು ಬಣ್ಣಗಳಿಗೂ, ಕಾಮನ ಬಿಲ್ಲಿನ ಏಳು ಬಣ್ಣಗಳಿಗೂ ಸಾಮ್ಯತೆ ಇದೆಯೆ ಎ೦ಬುದನ್ನು ನಾವು ಯೋಚಿಸತೊಡಗಿದರೆ ವಿಜ್ಞಾನದ ಹಲವಾರು ರಹಸ್ಯಗಳು ನಮ್ಮ ಮು೦ದೆ ತೆರೆದುಕೊಳ್ಳಬಹುದು... ಆಗ  ಕಾಮನಬಿಲ್ಲಿನ ಏಳು ಬಣ್ಣಗಳು ನನಗೆ ಸ್ಪಷ್ಟವಾಗಿ ಕಾಣಿಸತೊಡಗಿದಾಗ ಮನಸ್ಸಿಗೆ ಆದ ಸಂತೋಷ ಅಷ್ಟಿಷ್ಟಲ್ಲ....  ಅಲ್ಲಿಯೇ ಕೂತುಬಿಡೋಣ ಅನ್ನುವಷ್ಟು ಸುಂದರ ರೀತಿಯಲ್ಲಿ ಕಾಮನಬಿಲ್ಲು ಗೋಚರಿಸತೊಡಗಿತು..ನಾವು ಕಾರಿನಿಂದ ಇಳಿದು ಮಂಜಿನಲ್ಲಿ ಸ್ವಲ್ಪ ನಡೆದೆವು. ಗುಡ್ಡದ ಒಂದು ತುದಿಯಲ್ಲಿ ಕಾಮನ ಬಿಲ್ಲು ಗೋಚರಿಸತೊಡಗಿತು.. ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಬಿಳುಪಾದ ಮಂಜಿನ ರಾಶಿ, , ಮೌನದಿಂದ ತುಟಿಬಿಗಿದುಕೊಂಡ ನೀರವ ಬೀದಿಗಳನ್ನು ನೋಡುತ್ತಾ ನಿಂತಾಗ, ಯಾವುದೋ ಅಲೌಕಿಕ ಶಕ್ತಿಯಾಂದು ಈಗಲೋ, ಇನ್ನೊಂದು ಕ್ಷಣಕ್ಕೋ ಈ ಭೂಮಿಯನ್ನು ಪ್ರವೇಶಿಸಿ ಬಿಡುವುದೇನೋ ಎಂಬ ಅನುಭವವಾಗುವುದು ಮಾತ್ರ ನಿಜ! ಈ ಅನಿಸಿಕೆ -  ಬೆಳ್ಳಿ ಬೆಟ್ಟದ ನಡುವೆ, ಬೆಣ್ಣೆ ಮುದ್ದೆಯಂತಹ ಮೋಡಗಳ ನಡುವೆ ಸಂಚರಿಸುವ ಸುಖಜೀವಿಗಳು ಎಂಬ ಕಥೆಗಳನ್ನು ಕೇಳಿ ಬೆಳೆದ ನನ್ನ  ಮನಸ್ಸಿನ ಭ್ರಮೆಯಿದ್ದರೂ ಇರಬಹುದೇನೋ? ಎಂದನಿಸಿತು...                                                                       

ಆ ಕ್ಷಣ ಕತ್ತಲೆಯಾಗತೊಡಗಿತು..ನನ್ನ ಮನಸ್ಸಿನ  ಶೂನ್ಯ ಭಾವಗಳಿಗೆ  ರೆಕ್ಕೆ ಪುಕ್ಕವನ್ನಿರಿಸಿ ಸಂತಸದ ಹಕ್ಕಿಯಾಗಿಸಿ ನನ್ನನ್ನು  ಒಂಟಿ ಮಾಡಿ ಕಾಮನಬಿಲ್ಲು ಮರೆಯಾಯಿತು.. ನಾವು ಕಾರಿನಲ್ಲಿ   ನೈಲಂನತ್ತ ಪ್ರಯಾಣ ಮಾಡುತ್ತಿದ್ದೆವು. ಸುಮಾರು ೧೫ ಕಿಲೋಮೀಟರ್ ಗಳಷ್ಟು ಪ್ರಯಾಣಿಸಿದಾಗ ನಮ್ಮ ಕಾರಿನ ಟಯರ್ ಪಂಕ್ಚರ್ ಆಯಿತು..ದಾರಿ ಮಧ್ಯದಲ್ಲಿ ನಮ್ಮ ಕಾರ್ ಮರಳಿನ ಮಧ್ಯದಲ್ಲಿ ಹೂತು ನಿಂತುಬಿಟ್ಟಿತ್ತು. ಎಷ್ಟು ಹೂತು ಬಿಟ್ಟಿತ್ತೆಂದರೆ ಟಯರಿನ ಮುಕ್ಕಾಲು ಪಾಲು ಮರಳಿನಲ್ಲಿ ಹೂತುಹೋಗಿತ್ತು..ಆಗ ಸುಮಾರು ರಾತ್ರಿ ೮.೩೦ ಘಂಟೆಯಾಗಿರಬಹುದು. ಹಿಮಮಿಶ್ರಿತ ಗಾಳಿ ಬಿರುಸಿನಿಂದ ಬೀಸುತ್ತಿತ್ತು.ಕಾರಿನಿಂದ ಹೊರಗೆ ಇಳಿಯುವ ಅವಕಾಶವೇ ಇರಲಿಲ್ಲ..ನಮ್ಮ ಸಹ ಚಾರಣಿಗರ ಕಾರುಗಳು ಸುಮಾರು ಮುಂದಕ್ಕೆ ಹೋಗಿದ್ದವು.ನಮ್ಮ ಡ್ರೈವರ್ ತುತೋಯಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದ....ಕಾರಿನ ಗಾಜು ಸರಿಸಿ ನೋಡಿದರೆ ದೃಷ್ಟಿ ಹೋದಷ್ಟು ದೂರ ಕಗ್ಗತ್ತಲು.ನೀಲಿ ಆಕಾಶದಲ್ಲಿ ಹೊಳೆಯುವ ನಕ್ಷತ್ರ ಪುಂಜ. ಆ ಬೆಳಕೇ ನಮಗೆ ದಾರಿದೀಪ.ಚಳಿ,ಹಸಿವು,ಬಾಯಾರಿಕೆ  ಎಲ್ಲಾ ಒಟ್ಟೊಟ್ಟಿಗೆ ಆಯಿತು. ಚಳಿಯಿಂದ ನೀರನ್ನು ಕುಡಿಯಲು ಸಾಧ್ಯವಾಗಿಲ್ಲ.ಆದರೂ ನಮ್ಮ ಬ್ಯಾಗಲ್ಲಿದ್ದ ಅಲ್ಪ ಸ್ವಲ್ಪ ಡ್ರೈ ಫ್ರುಟ್ಸ್ ಗಳನ್ನೂ ತಿಂದೆವು..ಕಾರಿನಿಂದ ಹೊರಗೆ ಇಳಿದೆವು..ಒಂದು ತರಹದ ಭಯದ ವಾತಾವರಣ ನಿರ್ಮಾಣವಾಯಿತು..ನಮ್ಮ ಡ್ರೈವರ್ ಗಾಡಿಯನ್ನು  ನ್ಯೂಟ್ರಾಲ್  ಮಾಡಿ ನಮ್ಮ ಸಹಾಯ ಕೇಳಿದನು..ಆಗ ನಾವು  ಅಲ್ಲಿಂದ ಹೂತು ಹೋಗಿದ್ದ ಕಾರನ್ನು ತಳ್ಳಿ ಎಬ್ಬಿಸಿ  ಸುಮಾರು ೧೦ ಮೀಟರ್ಗಳಷ್ಟು ದೂರದಲ್ಲಿ ಯೋಗ್ಯವಾದ ಸ್ಥಳದಲ್ಲಿ ನಿಲ್ಲಿಸಿದೆವು..ವಾಹನದ ಮುಂದೆ ಬ್ರೇಕ್ ಲೈಟ್  ಹಾಕಿ ಡ್ರೈವರ್ನೊಡನೆ   ಹರಟೆ ಹೊಡೆಯುತ್ತಾ ನಮ್ಮ ಮೆಕ್ಯಾನಿಕ್ ಗಾಗಿ ಕಾಯುತ್ತಾ ಕುಳಿತೆವು..ಆದರೆ ಅವರು ಎಷ್ಟೊತ್ತಿಗೆ ಬರುತ್ತಾರೆಂಬ ಅರಿವು ನಮಗಿಲ್ಲ..ಎಷ್ಟು ದೂರದ ಪ್ರಯಾಣ ಇನ್ನು ನೈಲಮ್ ಗೆ ಇದೆ ಎಂದು ಗೊತ್ತಿಲ್ಲ.ನಿದ್ರೆ ಬರುತ್ತಿಲ್ಲ,ನಾವು ನಾಲ್ಕೂ ಜನ ಶಾಲುಗಳನ್ನು ಹೊದ್ದುಕೊಂಡು ಅಲ್ಲಿಯೇ ಮರಳಿನ ದಾರಿಯಲ್ಲಿ ಕೂತೆವು.ಮಾತನಾಡಲು ಅಥವಾ ಹಾಸ್ಯ ಚಟಾಕಿಗಳನ್ನು ಹಾರಿಸಲು ಯಾರಿಗೂ ಆಸಕ್ತಿಯಿರಲಿಲ್ಲ ...ಅಷ್ಟರಲ್ಲಿ ಹಿಮದ ಮಳೆ ಬೀಳಲು ಪ್ರಾರಂಭವಾಯಿತು...                              
              ಸಮಯ  ರಾತ್ರಿ.೧೦.೪೫ ...ಅಷ್ಟರಲ್ಲಿ ವಾಹನದ ದೀಪ ಕಾಣಿಸುತ್ತದೆ. ಆಗ ತಕ್ಷಣ ನಮ್ಮ ಡ್ರೈವರ್ ಕಾರಿನ ಲೈಟನ್ನು ಪ್ರಖರವಾಗಿ ಪ್ರಜ್ವಲಿಸುತ್ತಾನೆ. ಆ ಮೂಲಕ ಎದುರು ಬರುವ ವಾಹನಕ್ಕೆ ನಮ್ಮ ಉಪಸ್ಥಿತಿ ಗೋಚರಿಸುತ್ತದೆ..ನಂತರ ಟಯರ್ ಪಂಚ್ ಕೂಡಿಸಿ ಆದಾಗ ನಮ್ಮ ಕಾರ್ ಸ್ಟಾರ್ಟ್ ಚಳಿಯಿಂದ ಆಗಲೇ ಇಲ್ಲ.ಆಗ ನಮ್ಮ ಕಾರಿನಿಂದ ಆ ಕಾರಿಗೆ ಹಗ್ಗವನ್ನು ಕಟ್ಟಿ ನಮ್ಮನ್ನು ಆ ಕಾರಿನಲ್ಲಿ ಕುಳ್ಳಿಸಿ ಕರೆದುಕೊಂಡು ಹೋದರು..ಮುಂದಿನ ವಾಹನದಲ್ಲಿ ನಾವು ಪ್ರಯಾಣ ಮಾಡುತ್ತೇವೆ.ನಾವು ಈ ಹಿಂದೆ ಬಂದಿದ್ದ ಕಾರನ್ನು  ಈ ಕಾರಿನ ಮೂಲಕ ವೇಗವಾಗಿ ಎಳೆಯಲಾಗುತ್ತದೆ.ಅರಿಯದ ಸ್ಥಳದಲ್ಲಿ ಹೊಸ ಅನುಭವ.ಕೊರೆಯುವ ಚಳಿ,ಕಗ್ಗತ್ತಲೆಯ ವಾತಾವರಣ ಮುಂದೆ ಏನಾಗಬಹುದು?ಎಂಬ ಭಯದಲ್ಲಿ ನಾವು ಪ್ರಯಾಣ ಮಾಡುತ್ತಿದ್ದೇವೆ. ಹಾಗೇ ಸುಮಾರು ೧೫ ಕಿ.ಮೀ ಪ್ರಯಾಣ ಮಾಡಿದಾಗ ಅಲ್ಲಿ ನಮಗಾಗಿ ನಮ್ಮ ಸಹ ಚಾರಣಿಗರು ಕಾಯುತ್ತಿದ್ದರು.ಅವರು ತಡವಾದ ಕಾರಣವನ್ನು ನಮ್ಮಲ್ಲಿ ವಿಚಾರಿಸುತ್ತಾರೆ.ಎಲ್ಲಾ ವಿಷಯವನ್ನು ವಿಷದವಾಗಿ ತಿಳಿಸುತ್ತೇವೆ.
                                    ಆಗ ಸುಮಾರು ಮಧ್ಯರಾತ್ರಿ ೧.೦೦ ಘಂಟೆಯ ಸಮಯ. ಬೇರೆ ವಾಹನದ ಚಾಲಕರು ಸೇರಿ ನಮ್ಮ ಕಾರನೂ ರಿಪೇರಿ ಮಾಡಿದರು. ಮತ್ತೆ ಸುಮಾರು ೩೫ ಕಿ.ಮೀ ಗಳಷ್ಟು ದೂರದ ಪ್ರಯಾಣದಲ್ಲಿ ನಾವು ನೈಲಂ ತಲುಪುತ್ತೇವೆ.ಮಧ್ಯ ರಾತ್ರಿ ನಮಗೆ  ಅಲ್ಲಿ  ಉಪಹಾರಕ್ಕಾಗಿ ಬೇಯಿಸಿದ ಜೋಳವನ್ನು ನಮ್ಮ ಶೆರ್ಪಾಗಳು  ಇಟ್ಟಿದ್ದರು. ನಮ್ಮ ಹಸಿವು ನೀಗಿಸಿ ನಮಗಾಗಿ ಕಾದಿರಿಸಿದ ರೂಮಿನತ್ತ ಹೆಜ್ಜೆ ಹಾಕಿದೆವು..


2 comments:

 1. ಗುರುಗಳೇ,
  ಬರದ್ದು ಲಾಯಿಕ ಆಯಿದು. ತುಂಬಾ ದಿನಂದ ಕಾಡುಗೊಂಡು ಇತ್ತಿದ್ದೆ.

  ನಿಂಗಳ,
  ಮಂಗ್ಳುರ್ ಮಾಣಿ.

  ReplyDelete
 2. 3rd photo is awesome..!!
  Raaghu

  ReplyDelete