ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, September 11, 2009

ಮಾನಸ ಸರೋವರ ಯಾತ್ರೆ -೯


ಕನಸುಗಳನ್ನು ಬೆನ್ನಟ್ಟಿ ಹೋಗುವುದೇ ಜೀವನ…ಈ ರೀತಿ ಆಸೆಯಿಂದ ಅರಸಿಹೋದ ಕನಸೊಂದು ನನಸಾದಾಗ..ನನಸಾದ ಆ ಕ್ಷಣದ ನೆನಪು ಉಳಿಯುವುದು ಚಿರಕಾಲ.ಆ ದಿನ ೦೨-೦೭-೨೦೦೯ ಗುರುವಾರ. ನನ್ನ ಜೀವನದಲ್ಲಿ ಹಲವು ತಿರುವುಗಳಿಗೆ, ಸಂತೋಷಗಳಿಗೆ ಸಾಕ್ಷಿಯಾದ ದಿನ.ನಾನು ಎಂದೋ ಕಂಡ ಕನಸು ಬಯಸದೇ ಒದಗಿ ಬಂದ ದಿನ ... ಇಂದು ಮಾನಸ ಸರೋವರದ ದರ್ಶನ. ಬೆಳಿಗ್ಗೆ ೮.೦೦ ಘಂಟೆ. ಇಂದಿನ ಪ್ರಯಾಣವನ್ನು ನೆನೆಸಿಕೊಂಡು ತುಂಬಾ ಕಾತುರವಿದ್ದ ದಿನ.ನಿನ್ನೆ ಮಧ್ಯರಾತ್ರಿ ವರೆಗೆ ಇದ್ದ ಆಯಾಸ ಇಂದು ಕೊಂಚವೂ ಗೊತ್ತಾಗುತ್ತಿರಲಿಲ್ಲ. ಇದಕ್ಕೆ ಕಾರಣ ನನ್ನ ಮಾನಸಿಕ ಸ್ಥಿತಿ ಇರಬಹುದುದು.ಏನೇ ಇರಲಿ.ಬೆಳಿಗ್ಗಿನ ತಿಂಡಿ ಆಗಿ (ಎಂದಿನಂತೆಯೇ ಬ್ರೆಡ್ ಜ್ಯಾಮ್) ಕಾರಿನಲ್ಲಿ ಮಾನಸ ಸರೋವರಕ್ಕೆ ಪ್ರಯಾಣ.ಪರ್ಯಂಗ್ ನಿಂದ ಮಾನಸಕ್ಕೆ ಸುಮಾರು ೧೫೦ ಕಿಲೋ ಮೀಟರ್ ದೂರ ಅಂದಾಜು ೭ ಘಂಟೆಯ ಪ್ರಯಾಣ.ನಮ್ಮ ಪ್ರಯಾಣದ ದಿವಸಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಪ್ರಯಾಣ.ಬೆಳಿಗ್ಗೆ ೧೦.೩೦ ಕ್ಕೆ ಹೊರಟೆವು...
ಸುಮಾರು ಮಧಾಹ್ನ ೧.೩೦ಕ್ಕೆ ಕೈಯಲ್ಲಿದ್ದ ಒಂದೊಂದು ಆಪಲ್ ತಿಂದು ಊಟದ ಶಾಸ್ತ್ರ ಮುಗಿಸಿದೆವು.ಸಂಜೆ ೪.೦೦ ಘಂಟೆಗೆ ಡಾರ್ಚಿನ್ ಎಂಬ ಸಣ್ಣ ಹಳ್ಳಿಯನ್ನು ಸೇರಿದೆವು..ಇಲ್ಲಿ ಫೋನ್ ಸಂಪರ್ಕ ಇದೆ ಇನ್ನು ಮುಂದಕ್ಕೆ ಇಲ್ಲ ಎಂದು ಪಾಂಡೆ ತಿಳಿಸಿದರು.ಇಲ್ಲಿಂದ ಮಾನಸ ಸರೋವರ ೨೦ ಕಿಮೀ ದೂರದಲ್ಲಿದೆ. ನಾನು ಈ ದಿನ ನಮ್ಮ ಮನೆಗೆ ಮತ್ತು ನನ್ನ ತಮ್ಮ ಎಲ್ಯದ್ಕ ಮಹೇಶನಿಗೆ ಫೋನ್ ಮಾಡಿ ಪ್ರಯಾಣದ ಮುಂದಿನ ವಿವರಗಳನ್ನು ತಿಳಿಸಿದೆ ಮತ್ತೆ ನಮಗೆ ಫೋನ್ ಸಂಪರ್ಕ ಆಗಬೇಕಾದರೆ ೨೦ ದಿನಗಳ ನಂತರವೇ.
ನಮ್ಮ ಭಾರತೀಯ ಕಾಲಮಾನ ಪ್ರಕಾರ ಸಂಜೆ ಸುಮಾರು ೬ ಘಂಟೆ . ಸೂರ್ಯಾಸ್ತದ ಸಮಯ ..ಇಲ್ಲಿನ ಸಮಯ ೯.೩೦ ಆಗಿತ್ತು.. ನಾನು ಮಾನಸ ಸರೋವರದ ತಟದಲ್ಲಿ .... ಸಮುದ್ರದ ಬದಿಗೆ ಬಂದ ಅನುಭವ.ಮೈ ಕೊರೆಯುವ ಚಳಿ ಆಗಸದಲ್ಲಿ ಮೋಡ.ಒಂದೆಡೆ ಸೂರ್ಯಾಸ್ತ. ನಾನು ಆ ಕ್ಷಣ ವಾಸ್ತವ ಲೋಕವನ್ನೇ ಮರೆತಿದ್ದೆ.. ಪೂರ್ವ ಭಾಗದಲ್ಲಿ ಮೋಡಗಳು ಹಿಮಾಲಯವನ್ನು ಮುತ್ತಿಕ್ಕುತ್ತಾ ಇದೆ.ಪಶ್ಚಿಮದಲ್ಲಿ ಸೂರ್ಯನು ಅಸ್ತಮಿಸುವ ಸಮಯ.. ಒಂದೇ ಎರಡೇ.ನಾನು ಎಲ್ಲದಕ್ಕೂ ಬೆರಗಾಗಿ ನಿಂತಲ್ಲಿಯೇ ಒಂದು ಸುತ್ತು ತಿರುಗಿದೆ ..ಎಂಥಹ ಪ್ರಾಕೃತಿಕ ವರ್ಣನೆ ???ಅದ್ಭುತ ...ನಾನು ನಾನೆಂಬುದು ಇನ್ನು ಇಲ್ಲ ಎಂಬಂತೆ ಭಾಸವಾಯಿತು.ಎಲ್ಲವೂ ನಿನ್ನೊಳಗೆ ...ಕವಿಗಳ ಲೇಖನಿಯು ತಾನಾಗಿಯೇ ಬರೆಯಬಹುದು ಈ ಸಮಯದಲ್ಲಿ ...
ಈಗಲೋ ಆಗಲೋ ಹನಿಯಾಗುವಂತೆ ಆ ಮೋಡ ನೆಲ ನೋಡುತ್ತಿದೆ.. ಮಾನಸ ಸರೋವರಕ್ಕೆ ಹೋಗಿಬ೦ದವರಿಗೆಲ್ಲಾ ಗೊತ್ತು, ಈ ಪ್ರಯಾಣ ಎಷ್ಟು ಕಷ್ಟಕರವಾದದ್ದು ಅ೦ತ. ಆದರೂ, ಸರೋವರ ನೋಡಿದಾಗ ಎಲ್ಲಾ ಮರೆತುಹೋಯಿತು.ನನ್ನ ದೊಡ್ಡದೊಂದು ಆಸೆ ನೆರವೇರಿತು. ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ.. ಮಾನಸ ಸರೋವರ, ಕೈಲಾಸ ಪರ್ವತಗಳು ಇಲ್ಲಿಂದ ಏಕಕಾಲದಲ್ಲಿ ಕಾಣಿಸುತ್ತವೆ. ಮಾನಸ ಸರೋವರ ವೀಕ್ಷಕರಿಗೆ ಈ ಹಂತದಲ್ಲಿ ಶಿವದರ್ಶನದ ಅಪೂರ್ವಾನುಭವ. ಆಗ ಮಾನಸ ಸರೋವರ ವೀಕ್ಷಿಸಿದ ಧನ್ಯತೆ ಸಿಗುವುದು...ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.. ಅಷ್ಟರಲ್ಲಿ ನೋಡುನೋಡುತ್ತಿದ್ದಂತೆಯೇ ಕತ್ತಲಾಯಿತು. ಮಂಜು ಮುಸುಕಿದ್ದ ರಾತ್ರಿ ಕುರುಡಾಗಿತ್ತು. ಕೆಲವೇ ಅಡಿಗಳ ದೂರದಲ್ಲಿರುವ ವಸ್ತುಗಳೂ ಕಾಣುತ್ತಿರಲಿಲ್ಲ. ..
ನಾವು ಬರುವಾಗ ಸಮಯ ತುಂಬಾ ಮೀರಿದ್ದರಿಂದ ಇಷ್ಟೇ ನೋಡಲಾಯಿತು.. ನಾವು ಇಲ್ಲಿ ರುದ್ರ ಪಾರಾಯಣದ ನಿಮಿತ್ತ ೪ ದಿವಸಗಳ ಕಾಲ ತಂಗಲಿದ್ದೇವೆ. ಆದರಿಂದ ನಿಧಾನವಾಗಿ ಮಾನಸದ ವರ್ಣನೆಯನ್ನು ಸವಿಯೋಣವೆಂದು ನಮಗಾಗಿ ಡಾರ್ಚಿನ್ ನಲ್ಲಿ ಕಾದಿರಿಸಿದ ವಸತಿಗೃಹಕ್ಕೆ ಕಾರಿನಲ್ಲಿ ಹೊರಟೆ. ಕೊರೆಯುವ ಆ ಚಳಿಯಲ್ಲಿ ಸವಿ ಪಯಣದ ಆಯಾಸವನ್ನು ಪರಿಹರಿಸಿ ಗಾಢ ನಿದ್ದೆಗೆ ನಾಂದಿ ಹಾಡಿತು.

No comments:

Post a Comment