ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Sunday, September 20, 2009

ಮಾನಸ ಸರೋವರ ಯಾತ್ರೆ - ೧೦

ಮಾನಸ ಸರೋವರ ! ಇದೊಂದು ವಿಶೇಷವಾದ ಸರೋವರ .....

ಒಮ್ಮೆ ಕೈಲಾಸ ಪರ್ವತ ಸ್ಥಾವರದಲ್ಲಿ ವಿಹರಿಸುತ್ತಿದ್ದ ಚತುರ್ಮುಖ ಬ್ರಹ್ಮನಿಗೆ ಈ ಪ್ರದೆಶದಲ್ಲಿ ಒಂದು ಸರೋವರವಿದ್ದರೆ ಚೆನ್ನಗಿರುತ್ತದೆ ಎಂದನಿಸಿತ್ತಂತೆ! ತಕ್ಷಣವೇ ಏರ್ಪಟ್ಟಿದ್ದು ಈ ಮಾನಸ ಸರೋವರ ! ಬ್ರಹ್ಮನ ಮನಸ್ಸಿನ ಶಕ್ತಿಯಿಂದುಂಟಾದ ಈ ಸರೋವರಕ್ಕೆ ’ಮಾನಸ’ ಎಂಬ ಹೆಸರಾಯಿತು. ಇದರಲ್ಲಿ ರಾಜ ಹಂಸಗಳು ವಿಹರಿಸುತ್ತಿವೆಯೆಂದೂ, ದೇವತೆಗಳು ಈ ಸರೋವರ ದಲ್ಲಿ ಸ್ನಾನ ಮಾಡುತ್ತಾರೆಂದೂ, ದೇವಕನ್ಯೆಯರು - ದೇವಲೋಕವಾಸಿಗಳೂ ಈ ಬ್ರಹ್ಮಸೃಷ್ಠಿ ಸರಸ್ಸಿಗೆ ಬರುತ್ತಾರೆಂದೂ ನಂಬಿಕೆ. ಅನ್ತಹ ದಿವ್ಯವಾದ ಸರೊವರದ ದರ್ಶನ ಪ್ರತಿಯೊಬ್ಬ ಹಿಂದುವಿಗೂ, ಪ್ರತಿಯೊಬ್ಬ ಸನಾತನಿಗೂ ಅತ್ಯಂತ ಪುಣ್ಯಪ್ರದವಾಗಿದೆ. ಇಲ್ಲಿಯ ದರ್ಶನ, ತೀರ್ಥ ಸ್ನಾನ, ಅನುಷ್ಠಾನ ಜನ್ಮ ಜನ್ಮಾಂತರದ ಕರ್ಮಗಳನ್ನು ತೊಡೆದು ಹಾಕಲು ಕಾರಣವಾಗುತ್ತದೆ. ಬ್ರಹ್ಮಸಂಕಲ್ಪ ಮಾನಸ ಸರೋವರಸ್ನಾನ ಕರ್ಮರಾಹಿತ್ಯಕ್ಕೂ ದಿವ್ಯ ಆತ್ಮಜ್ನಾನಕ್ಕೂ ಮಾರ್ಗ! ಈ ಸರೊವರ ಒಂದು ಶಕ್ತಿ ಪೀಠ. ಇದರಲ್ಲಿ ಸ್ನಾನ ಮಾಡುವುದು ಪಾಪಹಾರಕ, ಮೋಕ್ಷದಾಯಕ! ಅದು ಪ್ರಶಾಂತತೆಯ ನಿಲಯ. ಜಪ ಧ್ಯಾನಾದಿಗಳು ಇಲ್ಲಿ ಚೆನ್ನಾಗಿ ಸಿದ್ಧಿಸುತ್ತದೆಯಂತೆ. ಆತ್ಮಾನುಸಂಧಾನದ ದೃಷ್ಠಿಕೋನದಿಂದ ನೋಡಿದರೆ ಸ್ವರ್ಗದಲ್ಲಿನ ಒಂದು ಭಾಗವನ್ನು ಭೂಮಿಯ ಮೇಲೆ ತಂದು ಇಡಲಾಗಿದೆ ಎಂದು ನಮಗೆ ಭಾಸವಾಗುತ್ತದೆ. ಈ ಸರೋವರದ ದರ್ಶನ, ಸ್ನಾನ ಅನೇಕ ತೀರ್ಥಗಳಲ್ಲಿ ಪವಿತ್ರವಾಗಿದೆ. ಸಾಧು ಸಂತರಿಗೆ ಇದು ಸಿದ್ಧಿಯ ತಾಣವಾಗಿದೆ. ಈ ಸರೊವರಕ್ಕೆ ಪ್ರದಕ್ಷಿಣೆ ಬರುವುದು ಬಹಳ ವಿಶೇಷವಾದುದು.

ಈ ದಿವಸದಿಂದ ಅಲಗಪ್ಪನ್ ಚೆಟ್ಟಿಯಾರ್ ಅವರ ವೈದಿಕ ಕಾರ್ಯಕ್ರಮ ,ರುದ್ರ ಪಾರಯಣ ,ರುದ್ರ ಹವನ ಪ್ರಾರಂಭವಾಗುತ್ತದೆ. ಅದಕ್ಕಾಗಿ ಬೆಳಗ್ಗೆ ೩.೩೦ಕ್ಕೆ ಎದ್ದು ತೀರ್ಥ ಸ್ನಾನ ಮಾಡಲು ಹೊರಟೆವು. ಕೊರೆಯುವ ಚಳಿ ಬೇರೆ! ನಡೆಯುವಾಗ ಕಲ್ಲುಗಳು ಸೂಜಿಯಂತೆ ಚುಚ್ಚುತ್ತಿದ್ದವು. ಆದರೂ ಹಠದಿಂದ ಕಾಲು ಎಳೆದುಕೊಂಡು ಸುಮಾರು ೧ ಕಿಲೋಮೀಟರ್ ಗಳಷ್ಟು ಹೋದಾಗ ಸರೊವರದ ಬಳಿ ತಲುಪಿದೆವು. ಮೈಯನ್ನೇ ಎತ್ತಿಕೊಂಡು ಹೊಗುವಂತ ಚಳಿ ಗಾಳಿ. ಇನ್ನೂ ಸೂರೊದಯವಾಗಲು ಅರ್ಧಗಂಟೆಯಷ್ಟು ಸಮಯ ಬಾಕಿಯಿದೆ. ಈಗ ಸ್ನಾನ. ಅನಿವಾರ್ಯವಾಗಿ ನಾನು ಅಂಗಿ ತೆಗೆಯಬೇಕಾದ ಸಂದರ್ಭ. ಹಿಂದೆಂದೂ ಅನುಭವಿಸದ ಚಳಿ. ಸರೋವರದ ಬಳಿ ಬೀಸುವ ಗಾಳಿ,, ನೀರಿನ ತೆರೆ ಓಂಕಾರವನ್ನೇ ಉಚ್ಚರಿಸಿದಂತೆ ಭಾಸವಾಯಿತು. ನನ್ನ ಜೀವನವೆಲ್ಲಾ ಸಿನೆಮಾ ರೀಲುಗಳಂತೆ ಕಾಣಿಸುತ್ತದೆ. ನನ್ನ ಹುಟ್ಟು, ಬಾಲ್ಯ, ನಾನು ಮಾಡಿದ ತಪ್ಪುಗಳು, ನಾನು ಅನುಭವಿಸಿದ ತಪ್ಪುಗಳು ನೆನಪಾದವು. ತೀರ್ಥಸ್ನಾನದ ಸಂಕಲ್ಪವನ್ನು ಮಾಡಿದೆವು. ನನ್ನಲ್ಲಿ ಯಾವ ಸಂಕಲ್ಪವೂ ಇರಲಿಲ್ಲ. ಶಬ್ದಗಳೆಲ್ಲವೂ ಸ್ತಬ್ದವಾಯಿತು. ಉತ್ತರಭಾಗಕ್ಕೆ ಮುಖಮಾಡಿದಾಗ ಕೈಲಾಸಪರ್ವತ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಎದೆಗೆ ಕೈ ಮುಚ್ಚಿಕೊಂಡು ಸರೋವರದ ಬಳಿ ಬಂದೆ. ಬಂದ ತೆರೆ ನನ್ನ ಪಾದ ಪ್ರಕ್ಷಾಳನೆ ಮಾಡಿತು. ಶರೀರವೇ ನಡುಗಿದ ಅನುಭವ. ಕೈ ಮುಗಿದು ಪ್ರಾರ್ಥನೆ ಮಾಡಿದೆ. ಅಲ್ಲಿ ಮನದಾಳದಲ್ಲಿ ನಾಚಿಕೆಪಟ್ಟುಕೊಳ್ಳದೆ, ನಾನು ಮಾಡಿದ ತಪ್ಪುಗಳನ್ನೆಲ್ಲಾ ಒಂದು ಕ್ಷಣ ಸ್ಮರಣೆ ಮಾಡಿದೆ. ಮಾಡಿದ ತಪ್ಪುಗಳಿಗೆ ಮನಸಾರೆ ಪಶ್ಚಾತ್ತಾಪ ಪಟ್ಟುಕೊಂಡರೆ ಆ ಪಾಪದಿಂದ ವಿಮುಕ್ತರಾಗುತ್ತೇವೆಂದು ನನ್ನ ಹಿರಿಯರು ಹೇಳಿದ ನೆನಪಾಯಿತು. ನನ್ನ ತಮ್ಮ ಎಳ್ಯಡ್ಕ ಮಹೇಶನೂ ನನಗೆ ಸೂಚನೆಯನ್ನು ಕೊಟ್ಟಿದ್ದ, ’ಅಲ್ಲಿ ಸ್ನಾನ ಮಾಡುವಾಗ ಪಿತೃಗಳ ಸ್ಮರಣೆ ಮಾಡು’ ಎಂದು. ನನ್ನ ಎಲ್ಲಾ ಪಿತ್ರೃಗಳನ್ನು ಸ್ಮರಣೆ ಮಾಡಿದೆ. ಅಂತೆಯೇ, ನನಗಿರುವ ವ್ಯಾಮೋಹಗಳು, ಆವೇಶಗಳು, ಕೋರಿಕೆಗಳು, ನನ್ನಿಂದಾದ ತಪ್ಪುಗಳು ಎಲ್ಲವನ್ನೂ ಏಕಧಾರೆಯಾಗಿ ಹೇಳಿ ಮುಗಿಸಿ ನನ್ನನ್ನು ನಾನೇ ಖಾಲಿ ಮಾಡಿಕೊಂಡೆ! ಇನ್ನು ಹೇಳಿಕೊಳ್ಳಲಾಗಲೀ, ಅಂದುಕೊಳ್ಳುವುದಕ್ಕಾಗಲೀ, ದು:ಖ ಪಡುವುದಕ್ಕಾಗಲೀ, ನನ್ನೊಳಗೆ ಯಾವ ಭಾವನೆಯೂ ಇಲ್ಲವೆನ್ನುವ ಸ್ಥಿತಿ ಅರ್ಥವಾಗುತ್ತಿದೆ. ಮಾನಸದ ನೀರಿಗೆ ಬಲಗಾಲನ್ನು ಇಟ್ಟೆ. ಕ್ಷಣ ಮಾತ್ರದಲ್ಲಿ ನೀರಿಗೆ ಹಾರಿದೆ. ಜೀವನದ ಅತ್ಯಂತ ಪುಣ್ಯಘಟ್ಟದಲ್ಲಿದ್ದೆ. ಆತ್ಮಸಂತೃಪ್ತನಾಗುತ್ತಿದ್ದೆ. ಏಳು ಸಲ ಮುಳುಗಿ ಏಳಬೇಕೆಂದು ಆಸೆ ಇತ್ತು. ಆಗಲಿಲ್ಲ. ಐದು ಸಲ ಮುಳುಗಿದೆ. ಶ್ವಾಸ ನಿಂತು ಹೊದ ಅನುಭವ ಆಯಿತು. ಜಗತ್ತೆಲ್ಲವೂ ಆನಂದ ನಿಮೀಲಿತವಾಗುತ್ತಿತ್ತು.
ನನ್ನ ಅನುಭವಕ್ಕೆ ನಾನು ಬರುವಾಗ ಶೆರ್ಪಾಗಳು ನನ್ನನ್ನು ಮಾನಸದ ತಟದ ಹೊಯಿಗೆಯ ಮೆಲೆ ಮಲಗಿಸಿ ಇಡೀ ದೇಹವನ್ನು ಉಜ್ಜುತ್ತಿದ್ದರು. ಕೊರೆಯುವ ಚಳಿಯಲ್ಲೂ ಭೌತಿಕ ಶರೀರ ಸ್ವಲ್ಪವೇ ಬಿಸಿ ಆದ ಅನುಭವ!
ಸುಮಾರು ಬೆಳಿಗ್ಗೆ ೮.೩೦ ರ ಸಮಯ.ಮಾನಸದ ತಟದಲ್ಲಿ ನಾವೆಲ್ಲರೂ ತರ್ಪಣಗಳನ್ನೂ ಮಾಡಿದೆವು.ಅಲ್ಲಿಯೇ ಒಂದೆಡೆ ಬಿಸಿಲಿಗೆ ಮೈಯೊಡ್ಡಿ ಮರಳಿನಲ್ಲಿ ಕುಳಿತೆವು... ನಮ್ಮ ಆಚಾರ್ಯರಾದ ಕೇಶವ ದೀಕ್ಷಿತರು ತಮಿಳಿನಲ್ಲಿ ಮಾನಸದ ಐತಿಹ್ಯವನ್ನು ತಿಳಿಸಿದರು ...ಈ ಮಾನಸದ ಹಿರಿಮೆ ಎಷ್ಟು ಹೇಳಿದರೂ ಇನ್ನೂ ಮಿಕ್ಕಿರುತ್ತದೆ.ಇಲ್ಲಿ ಮಾಡುವ ಸ್ನಾನ,ಅನುಶ್ಥಾನ, ಮಾನಸ ಪರಿಕ್ರಮಣೆ,ದೊಡ್ಡ ಸಾಧನೆಯಾಗಿ ಪರಿಣಮಿಸಿ ಸತ್ಫಲಗಳನ್ನು ಕೊಡುತ್ತವೆ. ಈ ಸರೋವರ ಒಂದು ಶಕ್ತಿಪೀಠ! ದಕ್ಷ ಯಜ್ಞ ಸಮಯದಲ್ಲಿ ತನ್ನ ತಂದೆ ಮಾಡಿದ ಅವಮಾನವನ್ನು ಸಹಿಸಲಾರದೆ ಪಾರ್ವತೀದೇವಿ ಪ್ರಾಣತ್ಯಾಗ ಮಾಡುತ್ತಾಳೆ.ಆಕೆಯ ವಿಯೋಗವನ್ನು ತಡೆಯಲಾರದೆ ಪರಮಶಿವನು ಆಕೆಯ ಕಳಬೇರವನ್ನು ತನ್ನ ಬಳಿ ಇಟ್ಟುಕೊಂಡು ಮೋಹದಿಂದ ವಿಲಪಿಸುತ್ತಿರುತ್ತಾನೆ. ಆ ಕಾರಣವಾಗಿ ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಉಂಟಾದಾಗ ಮಹಾವಿಷ್ಣುವು ಪರಮಶಿವನನ್ನು ಯಥಾಸ್ಥಿತಿಗೆ ತರಲು ಒಂದು ಉಪಾಯ ಹೂಡಿ ಆ ಕಳಬೇರವನ್ನು ಮಾಯವಾಗುವಂತೆ ಮಾಡಲು,ತನ್ನ ಸುದರ್ಶನ ಚಕ್ರದಿಂದ ಅದನ್ನು ತುಂಡು ತುಂಡಾಗುವಂತೆ ಮಾಡುತ್ತಾನೆ.ಸುದರ್ಶನ ಚಕ್ರದ ಶಕ್ತಿಯಿಂದ ಛಿದ್ರವಾದ ಪಾರ್ವತೀದೇವಿಯ ಕಳಬೇರದ ಭಾಗಗಳು ಒಂದೊಂದೂ ಒಂದೊಂದು ಕಡೆ ಬೀಳುತ್ತವೆ.ಹಾಗೆ ಈ ಕಳಬೇರದ ಭಾಗಗಳು ಬಿದ್ದ ಪ್ರದೇಶಗಳೆಲ್ಲವೂ ಶಕ್ತಿಪೀಠಗಳಾಗಿ ಪರಿಣಮಿಸಿವೆ..ಹೀಗೆ ಪ್ರಸಿದ್ಧಿಗೆ ಬಂದ ೫೧ ಶಕ್ತಿಪೀಠಗಳಲ್ಲಿ ಮಾನಸ ಸರೋವರವೂ ಒಂದು ..ಇಲ್ಲಿ ಸತೀದೇವಿಯ ಬಲಗೈ ಬಿತ್ತಂತೆ. ಈ ಪೀಠಕ್ಕೆ ಆಗ ದೇವೀ ಸಾನಿಧ್ಯ ಐಕ್ಯವಾಯಿತು. ಇಲ್ಲಿ ನೆಲಿಸಿರುವ ಶಕ್ತಿಸ್ವರೂಪದ ಹೆಸರು "ದಾಕ್ಷಾಯಣಿ"..ಪ್ರತಿಯೊಂದು ಶಕ್ತಿಪೀಠದಲ್ಲಿಯೂ ಶಕ್ತಿಸೇವೆ ಮಾಡುವ ಭೈರವ ಇರುತ್ತಾನೆ. ಇಲ್ಲಿರುವ ಭೈರವನ ಹೆಸರು "ಹರ"..ಇಲ್ಲಿ ನಿರ್ದಿಷ್ಟವಾದ ಪೀಠ ಎಂದು ಯಾವದೂ ಕಾಣಿಸುವುದಿಲ್ಲ.ಮಾನಸ ಸರೋವರವೇ ಒಂದು ಶಕ್ತಿಪೀಠ.ಅಂತೆಯೇ ಇಲ್ಲಿಗೆ ಬಂದವರಿಗೆ ವಿಶ್ವ ಶಕ್ತಿ (ಕಾಸ್ಮಿಕ್ ಎನರ್ಜಿ) ಯ ಅನುಭವವಾಗುತ್ತದೆ. ಇಲ್ಲಿ ಅನಂತವಾದ ಆಧ್ಯಾತ್ಮಿಕ ತರಂಗಗಳು ಅನುಭವಕ್ಕೆ ಬರುತ್ತವೆ.ಅದನ್ನು ವಿವರಿಸಲು ಅಸಾಧ್ಯ... ಅನುಭವಜನ್ಯ... ಸತ್ಯ. ಒಟ್ಟಿನಲ್ಲಿ ಹೇಳುವುದಾದರೆ ಈ ಪ್ರದೇಶದಲ್ಲಿ ಸಂಚರಿಸಿದವರಿಗೆ ಔನ್ನತ್ಯ,ಉತ್ತಮತೆ ಎರಡೂ ಲಭಿಸುತ್ತವೆ ಎಂದು ನಾನು ಹೇಳಬಲ್ಲೆ. ಪ್ರತೀ ದಿನವೂ ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಸೂಕ್ಷ್ಮ ಶರೀರದಲ್ಲಿ ಬಂದು ಸ್ನಾನ ಮಾಡಿ ಹೋಗುತ್ತಾರೆ ಎಂದು ಅರ್ವಾಚೀನ ಪರಂಪರೆಯ ನಂಬಿಕೆ.ಅಂತಹ ಪರಂಪರೆ ನಮ್ಮಲ್ಲಿ ಈಗಲೂ ಅನೂಚಾನವಾಗಿ ಆಚರಣೆ ಇರುವುದರಿಂದ ಈ ನೀರಿನಲ್ಲಿ ಸ್ನಾನ ಮಾಡಿದವರಿಗೆ ದಿವ್ಯತೆ ಲಭಿಸುತ್ತದೆ.ಇಂತಹ ದಿವ್ಯವಾದ ಮಾನಸಿಕ ತೃಪ್ತಿ ನನಗೆ ಈ ವರೆಗೆ ಲಭಿಸಿಲ್ಲ ..ಖಂಡಿತಾ ಸಚ್ಚಿದಾಂದ ಸ್ಥಿತಿಯನ್ನು ಅನುಭವಿಸಬಹುದು ಎಂದು ನಾನು ಹೇಳಬಲ್ಲೆ.ಇದನ್ನು ಅನುಭವಿಸಿದವರಿಗೆ ಇದಕ್ಕಿಂತಲೂ ಮಿಗಿಲಾದ ಸ್ವರ್ಗ ಭೂಮಿಯ ಮೇಲೆ ಇಲ್ಲ ಎಂದನಿಸಬಹುದು. ಈ ಮಾನಸ ಸರೋವರ ಯಾತ್ರೆ ನೆಹರೂರವರಿಗೆ ತೀರದ ಬಯಕೆಯಾಗಿಯೇ ಉಳಿದು ಹೋಯಿತಂತೆ ..ಅವರ ಸರ್ಕಾರದ ಕಾಲದಲ್ಲಿ ನಮ್ಮ ಭಾರತ ಮಾತೆಯಿಂದ ಬೇರ್ಪಡಿಸಿದ ಆ ಮನುಷ್ಯನಿಗೆ ಹೇಗೆ ಈ ಯೋಗ ಲಭ್ಯವಾಗಬಹುದು?

No comments:

Post a Comment