ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, December 11, 2009

ಮಾನಸ ಸರೋವರ ಯಾತ್ರೆ -22












ಆ  ದಿನ ಬೆಳಿಗ್ಗೆ ಎದ್ದಾಗ ಸುಮಾರು ಆರುವರೆ ಗಂಟೆಯಾಗಿತ್ತು. ನಮ್ಮ ಡೇರೆಯಲ್ಲಿ   ಗೊರಕೆ ಹೊಡೆದು ಎದ್ದ ನನಗೆ ಹೊರಗಿನ ಚಳಿಯ ಊಹೆ ಇರಲಿಲ್ಲ. ರಾತ್ರಿ ಮಲಗಿದ್ದ ಡ್ರೆಸ್ಸ್ ಹಾಗೆ ಇತ್ತು. ಎರಡು ಟೀ ಶರ್ಟ್, ಮೇಲೊಂದು ಸ್ವೆಟರ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲು ಚೀಲ, ಕೈಗೆ ಕವಚ, ಇದೆಲ್ಲದರ ಮೇಲೆ ಬೆಚ್ಚಗಿರುವ ಸ್ಲೀಪಿಂಗ್ ಬ್ಯಾಗ್ ಜಿಪ್ ಎಳೆದುಕೊಂಡು ಕೇವಲ ಸ್ವಲ್ಪ ಮುಖ ಹೊರಗೆ ಕಾಣುವ ಹಾಗೆ ಮಲಗಿದ್ದ ಎಲ್ಲರಿಗೂ ನಿದ್ದೆ ಎನ್ನುವುದು ಮರದ ದಿಮ್ಮೆಯಂತೆ ಆಗಿತ್ತು. ಆರುವರೆಗೆ ಎದ್ದ ನಾವು,ಡೇರೆಯ  ಬಾಗಿಲು ತೆಗೆದರೆ ಸುಯ್ಯನೆ ಬಂತು ತಣ್ಣನೆಯ ಗಾಳಿ. ಹೊರೆಗೆ ಏನೂ ಕಾಣಿಸುತ್ತಿರಲಿಲ್ಲ, ಬಾಗಿಲ ಮೂಲಕ ಬಂದ ಗಾಳಿ ನಮ್ಮನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಈ ರೀತಿಯ ಪರಿಸ್ಥಿತಿಯಲ್ಲಿ, ನಡೆಯುವುದು  ಅಸಾಧ್ಯವಾದ ಮಾತು. ನಮ್ಮ ನೈಸರ್ಗಿಕ ಕರೆಗಳನ್ನು ಮುಗಿಸಿಕೊಂಡು ಬಂದು, ಹಲ್ಲು ಉಜ್ಜಿ, ಮುಖ ತೊಳೆದುಕೊಂಡು ಬಂದು ಮತ್ತೆ ಬೆಚ್ಚಗಿನ ನಮ್ಮ ಉಡುಪುಗಳನ್ನು ಧರಿಸಿಕೊಂಡೆವು. ಸುಮಾರು ಏಳುಗಂಟೆ ನಲವತ್ತೈದು ನಿಮಿಷಕ್ಕೆ ಎಲ್ಲರೂ ಒಂದೆಡೆ  ತಲುಪಿ, , ಬ್ರೆಡ್-ಜಾಮ್ ಮತ್ತು  ಹೊಟ್ಟೆಗೆ ಇಳಿಸಿದೆವು. ನಮ್ಮ ದೊಡ್ಡ ಲಗೇಜನ್ನು ನಮ್ಮ ನಮ್ಮ ಯಾಕ್ ಗಳ ಬೆನ್ನಿಗೆ ಕಟ್ಟಲು  ರವಾನಿಸಿ ಅಗತ್ಯವಿದ್ದ ಕಡಿಮೆ ವಸ್ತುಗಳನ್ನು ನಾವು ಹೊತ್ತುಕೊಂಡು, ನಮ್ಮ ನೆರವಿಗೆ ಬೇಕಾದ ಕೋಲುಗಳನ್ನು ಹಿಡಿದು ಹೊರಟಾಗ ಸಮಯ ಒಂಬತ್ತು ಗಂಟೆ. ಆ ನಿಧಾನವಾಗಿ ನಮ್ಮ ನಡಿಗೆ ಶುರುವಾಯಿತು, ಹಿಂದಿನ ದಿನ ನಿತ್ಯ ಮಂಜಿನ ಪರ್ವತಗಳನ್ನು  ದಾಟಿ ಬಂದ ನಮಗೆ ಅಷ್ಟೊಂದು ದಟ್ಟವಾದ ಮಂಜು  ಕಾಣಿಸುತ್ತಿರಲಿಲ್ಲ. ನಡೆಯುತ್ತಾ ನಡೆಯುತ್ತಾ ಮಂಜು  ಕಡಿಮೆಯಾದಂತೆ ಕಾಣಿಸಿತು. ಸುಮಾರು ಒಂದು ಗಂಟೆಯ ಚಾರಣದ  ನಂತರ ಬಿಸಿಲು ಕಾಣಿಸತೊಡಗಿತು. ಹಾಗೆ ಬಿಸಿಲು ಜಾಸ್ತಿಯಾಯಿತು. ಮೈಮೇಲೆ ತೊಟ್ಟಿದ್ದ ಅಧಿಕ ಬಟ್ಟೆಗಳು ಒಂದೊಂದಾಗೆ ಕಳಚಿ ಬ್ಯಾಗನ್ನು ಸೇರತೊಡಗಿದವು. ಕೇವಲ ಎರಡು ಗಂಟೆಗಳಲ್ಲಿ ಹತ್ತು ಡಿಗ್ರಿಯಿಂದ ಸುಮಾರು ಮುವತ್ತು ಡಿಗ್ರಿ ತಾಪಮಾನಕ್ಕೆ ತಲುಪಿದ್ದೆವು. ಇಲ್ಲಿಂದ ಶುರುವಾಯಿತು ತಾಪತ್ರಯ. ಕೆಲವರಿಗೆ ಈ ತಾಪಮಾನದ ಬದಲಾವಣೆ ಸಹಿಸಲು ಆಗಲಿಲ್ಲ. ನಮ್ಮ ಗುಂಪಿನಲ್ಲಿ ಬಹಳ ಚುರುಕಿದ್ದ ಕೇಶವಣ್ಣ  ನಡೆಯಲಾಗದೆ ತನ್ನ ವೇಗವನ್ನು ಕಡಿಮೆ ಮಾಡಿದರು . ಎಲ್ಲರಿಗಿಂತ ಮುಂದಿರುತ್ತಿದ್ದವರು , ನಿಧಾನವಾಗಿ ಕೊನೆಯ ಸ್ಥಾನಕ್ಕೆ ಬಂದರು .ಆಗ ಅವರ ಅವಸ್ಥೆಯನ್ನು ಗಮನಿಸಿ ಶೇರ್ಪಾ ಅವರನ್ನು ಹೆಗಲ ಮೇಲೆ ಹಾಕಿಕೊಂಡು ವೇಗವಾಗಿ ನಡೆದರು..  ಅವರ  ಜೊತೆಗೆ ನಾನೂ ನಡೆದೆ. . ನನಗೆ ಇಂತಹ ಪರಿಸ್ಥಿತಿ ಬರಬಾರದು ಎಂದು ದೇವರಲ್ಲಿ ಮೊರೆ ಇಟ್ಟೆ..  ಮಧ್ಯಾಹ್ನ ೧೨.೩೦ ಕ್ಕೆ  ಚಾರಣಿಗರು   ದೂರದಲ್ಲಿ ಕಾಣುತ್ತಿದ್ದ ಒಂದು ವಿಶಾಲವಾದ ಬಯಲಿನಲ್ಲಿ  ಕುಳಿತು ತಮ್ಮ ತಮ್ಮ ಊಟದ ಪ್ಯಾಕೆಟ್‌ಅನ್ನು ಬಿಚ್ಚಿ ತಿನ್ನುತ್ತಿದ್ದರು. ನಾವು ಅಲ್ಲಿಗೆ ಹೋಗುವುದರೊಳಗೆ ಎಲ್ಲರೂ ಅವರವರ ಊಟವನ್ನು ಮುಗಿಸಿ ವಿಶ್ರಮಿಸುತ್ತಿದರು. ಸುಮಾರು ನಾಲ್ಕು ಗಂಟೆಯ ಪ್ರಯಾಣದ ನಂತರ ನಮಗೆ ಸಿಕ್ಕ ವಿಶ್ರಾಂತಿ ಅದಾಗಿತ್ತು. ನಾವೆಲ್ಲಾ ಬ್ರೆಡ್, ಕೇಕ್, ಹಣ್ಣಿದ್ದ ನಮ್ಮ ಊಟವನ್ನು ತಿನ್ನುತ್ತಿದ್ದರೆ, ಸುಸ್ತಾಗಿದ್ದ ಆ ಕೇಶವಣ್ಣ  ಹಾಗೆಯೆ ನೆಲದ  ಮೇಲೆ ಮಲಗಿದ್ದರು . ನಮ್ಮೆಲ್ಲರ ಒತ್ತಾಯದ ಮೇರೆಗೆ ಅವರು  ತಿನ್ನಲು ಶುರುಮಾಡಿದರು . ನಿಧಾನವಾಗಿ ಬಂದ ನಾವಷ್ಟೆ ಅಲ್ಲಿ ಉಳಿದುಕೊಂಡೆವು, ಉಳಿದವರು ನಡೆಯಲು ಶುರುಮಾಡಿದರು. ಬಹಳ ಸುಸ್ತಾಗಿದ್ದ ಕೇಶವಣ್ಣ  ನೋಡು ನೋಡುತ್ತಲೆ ತಿಂದಿದ್ದ ಎಲ್ಲವನ್ನು ವಾಂತಿ ಮಾಡಿಕೊಂಡರು . ಎಷ್ಟು ಸುಸ್ತಾಗಿದ್ದರೆಂದರೆ , ವಾಂತಿಮಾಡಿಕೊಳ್ಳುವಾಗ ಬಗ್ಗಲೂ ಅವರ ಲ್ಲಿ ಶಕ್ತಿ ಇರಲಿಲ್ಲ. ನನಗೆ  ಹೊರಡಲು ಹೇಳಿ ಗೈಡ್ ಮತ್ತು ನಮ್ಮ ಇಬ್ಬರು ಸಹ ಚಾರಣಿಗರು  ಅಲ್ಲೆ ಉಳಿದುಕೊಂಡರು. ನಾನು  ಅವರ  ಬಗ್ಗೆ ಯೋಚನೆ ಮಾಡುತ್ತಾ ನಿಧಾನವಾಗಿ ನಡೆಯುತ್ತಿದ್ದೆವು. ಸಣ್ಣ ಸಣ್ಣ ಗುಡ್ಡಗಳನ್ನು  ಹತ್ತಿ ಇಳಿಯುತ್ತಿದ್ದೆವು.  ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಪ್ರತೀ ೧೦೦ ಮೀಟರಿಗೊಮ್ಮೆ  ನಾವು ಬಂದ ದಾರಿಯನ್ನು ನೋಡುತ್ತಿದ್ದೆವು. ಒಂದು ಕಡೆ ನಿಂತು ನೋಡುತ್ತಿದ್ದಾಗ ನಾಲ್ಕುಜನ ಬರುತ್ತಿರುವುದು ಕಾಣಿಸಿತು. ನಿಧಾನವಾಗಿಯಾದರೂ ಪರವಾಗಿಲ್ಲ, ಬರುತ್ತಿದ್ದಾರಲ್ಲ ಎನ್ನುವ ಸಮಾಧಾನದಿಂದ ನಾವು ಮುಂದುವರೆದೆವು..


 ಇನ್ನು ಸುಮಾರು 10 ಕಿಲೋ ಮೀಟರು ಗಳಷ್ಟು ಪ್ರಯಾಣ ಮಾಡಿದರೆ ನಮ್ಮ ಕೈಲಾಸ ಪರ್ವತದ ಪ್ರದಕ್ಷಿಣೆ ಮುಗಿಯುತ್ತದೆ. ಇಷ್ಟು ಬಂದವರಿಗೆ ಕೂಡಾ ನಮಗೆ ಇನ್ನುಳಿದ 10 ಕಿ.ಮೀ.ಚಾರಣ ಮಾಡುವುದು ತುಂಬಾ ಕಷ್ಟ... ಅಲ್ಲಿ ನಿಂತು ಕೆಲವು ಫೋಟೋ ಗಳನ್ನು ತೆಗೆಯುತ್ತಿದ್ದಾಗಲೇ ಶುರುವಾಯಿತು ಮಳೆ. ಮಳೆಗೆ ತಪ್ಪಿಸಿಕೊಳ್ಳಲು ಅಲ್ಲಿ ಎಲ್ಲೂ ಜಾಗವಿಲ್ಲ. ದೂರ ದೂರದವರೆಗೂ ಮರವಿಲ್ಲ, ಸೂರೆನ್ನುವ ಪದ ಕೂಡ ಹತ್ತಿರ ಸುಳಿಯುತ್ತಿರಲಿಲ್ಲ. ಇದ್ದ ಒಂದೇ ದಾರಿಯೆಂದರೆ  ನಾವು ಹಾಕಿದ ರೈನ್ ಕೋಟನ್ನು ಅಗಲವಾಗಿ ಬಿಡಿಸಿಕೊಂದೆವು..  ಆಕಾಶನೋಡುತ್ತಿದ್ದ ಬೆಟ್ಟ, ಈಗ ಪಾತಾಳ ನೋಡುತ್ತಿದೆ. ಮಳೆಗೆ ಕಲ್ಲುಗಳು ಜಾರುತ್ತಿವೆ ಇಂಥಹ ಪರಿಸ್ಥಿತಿಯಲ್ಲಿ ಜೋರಾಗಿ ಓಡುವುದು ಅಪಾಯವನ್ನು ಎಳೆದುಕೊಂಡಂತೆ. ಮಳೆಯಲ್ಲಿ ನೆನೆದರೆ ಒಂದು ತೊಂದರೆ ಬೇಗ ಓಡಿದರೆ ಇನ್ನೊಂದು ತೊಂದರೆ. ಬೇರೆ ದಾರಿ ಇಲ್ಲದೆ ಹರ ಸಾಹಸಮಾಡಿ ಬ್ಯಾಗಲ್ಲಿದ್ದ ಬ್ರೆಡ್ ಜ್ಯಾಮ್ ತಿಂದೆವು. . ಮಳೆ ಮತ್ತು ಚಳಿಗೆ ಕುಸಿದು ಹೋಗಿದ್ದ ಎಲ್ಲರೂ ನಡುಗುತ್ತಿದ್ದೆವು.  ಸಮಯ ಸಂಜೆ ೫.೦೦ ಘಂಟೆ.ಸುಮಾರು ಒಂದು ಘಂಟೆಯಷ್ಟು ವಿಶ್ರಾಂತಿಯ ಸಮಯ ...  ಚಳಿಗೆ ಎಲ್ಲರೂ ನಲುಗಿ ಹೋಗಿದ್ದರು. ಈ ಜಾಗಕ್ಕೆ ಬಂದ ದಿನ ನಾನು ಮುಖ ತೊಳೆಯಲು ಹೋಗಿ ನೀರು ಮುಟ್ಟಿದ್ದೆ.  ನೀರು ಹಾಕಿಕೊಂಡಾಗ ಅಂಥ ತೊಂದರೆ ಆಗಲಿಲ್ಲ, ಎರಡು ಮೂರು ಸಲು ನೀರು ಹಾಕಿಕೊಂಡೆ, ಮುಖ ಎನ್ನುವುದು ಹಾಗೆ ಮರಗಟ್ಟಿತ್ತು. ಕೈಗಳನ್ನು ಉಜ್ಜಿಕೊಂಡೆ ..  ಜೋರಾಗಿ ಉರಿಯತೊಡಗಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಉರಿಯುತ್ತಿದ್ದ ಕೈ, ಬ್ರೆಡ್ ತಿಂದು ಗ್ಲೌಸ್  ಹಾಕುವ   ತನಕ ಸುಮ್ಮನಾಗಲಿಲ್ಲ. ಇದನ್ನು ಅನುಭವಿಸಿದ್ದ ನಾನು ಮತ್ತೆಂದು ಚಳಿಯಲ್ಲಿ ತಣ್ಣೀರಿನ ಜೊತೆಗೆ ಸರಸವಾಡಲಿಲ್ಲ. ನಮ್ಮ ಪ್ರಯಾಣ ಮುಂದುವರಿಯಿತು. ಸುಮಾರು ೨ ಕಿ.ಮೀ ದೂರದಷ್ಟು ನಡೆದಾಗ ವಿಶಾಲವಾದ ಬಯಲಿನಲ್ಲಿ ನಡೆಯುವ ಭಾಗ್ಯ ನನ್ನ ಕಾಲಿಗೆ ಒದಗಿ ಬಂತು.ಇನ್ನು ಕೇವಲ ೫ ಕಿಮೀ ದೂರ ನಡೆದರೆ ನಮ್ಮ ಚಾರಣ ಮುಗಿಯುತ್ತದೆ ಎಂದು ಪಾಂಡೆ ಹೇಳಿದಾಗ ನಮ್ಮಲ್ಲಿ ಏನೋ ಸ್ವಲ್ಪ ಸಮಾಧಾನ.ನನ್ನ  ಟಾರ್ಚ್ ಲೈಟಿನಲ್ಲಿ ಬ್ಯಾಟರೀ ಖಾಲಿಯಾಗಿ ದಾರಿಯೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.ಒಬ್ಬರನ್ನೊಬ್ಬರು ಹೋದೆವು.   ನಮ್ಮ ನಡಿಗೆ ಬಹಳ ನಿಧಾನವಾಗಿದ್ದರಿಂದ ಅವರು ಬಂದಿದ್ದು ನಮಗೂ ಖುಷಿಯಾಯಿತು .  ದೂರದಲ್ಲಿ ಅಸ್ಪಷ್ಟವಾಗಿ ಸಾಲು ಸಾಲು ಬೆಳಕು ಕಾಣುತ್ತಿದ್ದವು ...ಹತ್ತಿರವಾಗುತ್ತಿದ್ದಂತೆಯೇ ಆ ಬೆಳಕು ಸ್ಪಷ್ಟವಾಯಿತು.ನಮ್ಮ ಕಾರುಗಳು ನಮ್ಮನ್ನು ಕರೆದುಕೊಂಡು ಹೋಗಲು ಕಾದಿದ್ದವು. ಡ್ರೈವರ್ ಗಳು  ನಮ್ಮನ್ನು ಕರೆದುಕೊಂಡು ಹೋಗಲು ಸುಮಾರು ೧.೫೦ ಕಿ.ಮೀ ಗಳಷ್ಟು ಮುಂದೆ ಬಂದರು. ನಮ್ಮ ಡ್ರೈವರ್ ತುತೋಯಿ ನಮ್ಮನ್ನು ಸ್ವಾಗತಿಸಿದ.ಎಲ್ಲರೂ ಸೇರಿ ಫೋಟೋ ತೆಗೆಸಿಕೊಂಡೆವು.ನಮ್ಮ ಡ್ರೈವರ್ ,ಶೇರ್ಪಾ ಹಾಗೂ ನನ್ನ ಜೊತೆ ಚಾರಣ ಮಾಡಿದ  ಉಷಾ,ಕೇಶವಣ್ಣ,ಕಿಶೋರ್ ಎಲ್ಲರೂ ಕಾರಿನತ್ತ  ನಡೆಯುತ್ತಾ ಹೋದೆವು. ಕಾರಿನಲ್ಲಿ   ದಾರ್ಚಿನ್ ನತ್ತ ಪ್ರಯಾಣ ಮಾಡಿದೆವು. ರೂಮಿಗೆ  ಬ೦ದವನೇ  ಕುಳಿತು ಎರಡು ಸ್ಪೂನ್‌ ನೀರು  ಕುಡಿದಿರಬೇಕು...... ತಲೆ ಧಿಮ್ಮೆ೦ದಿತು....... ಮೈ ತು೦ಬಾ ಬೆವರು! ತಲೆ  ಗಿರಗಿರ್ರನೇ ಸುತ್ತತೊಡಗಿತು. ವಾಂತಿ ಆಯಿತು. ಡಾಕ್ಟರ್ ಬಂದು ನನಗೆ ಔಷಧಿ  ಕೊಟ್ಟರು. ದೇಹ ನಿದ್ದೆ ಬಯಸುತ್ತಿದೆ, ಮನಸ್ಸು ಪೂರ್ತಿ ಕೈಲಾಸದಲ್ಲಿ ತೇಲಾಡುತ್ತಿದೆ  . ನಾನು ಊರಿಂದ  ಬಂದು ಇಂದಿಗೆ ೩೦ ದಿನಗಳಾದವು..ಈ ಮೂವತ್ತು  ದಿನಗಳ ಪ್ರತಿ ಘಳಿಗೆಯೂ ಅತ್ಯದ್ಭುತವಾಗಿ ಕಳೆಯಲ್ಪಟ್ಟಿವೆ.ನನ್ನ ಆನಂದಕ್ಕಿಂದು ಪಾರವೇ ಇಲ್ಲದಂತಾಗಿದೆ. ನನ್ನ ಈ ಸಂಭ್ರಮವನ್ನು.ಅಕ್ಷರಕ್ಕಿಳಿಸುವ ಒಂದು ಪುಟ್ಟ ಪ್ರಯತ್ನವಿದು.ಹಾಗೆ ನಿದ್ದೆಗೆ ಜಾರಿದೆ..









No comments:

Post a Comment