ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Wednesday, December 30, 2009

ಮಾನಸ ಸರೋವರ ಯಾತ್ರೆ-೨೩

 
 
ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮಚಿಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ...ಇಂದು ಜೀವನದ ಧನ್ಯತೆ ಏನೆಂದು ಅರಿವಾಗುತ್ತಿದೆ..ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ ನಾಚಿಕೆ ದಿನೇ ದಿನೇ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ೨೨ ದಿನಗಳ ಅಲೆದಾಟ ಅವಿಸ್ಮರಣೀಯ....ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಅನೇಕ ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿರುತ್ತಾನೆ. ಮಗು ನಡೆಯೋದಕ್ಕೆ ಶುರು ಮಾಡ್ಬೇಕು ಅಂತಂದ್ರೆ, ತಾನೇ ಬೋರಲು ಬಿದ್ದೋ, ಅಂಬೆಗಾಲಿಟ್ಟೋ, ಮುಂದೆ ಎದ್ದು ನಿಂತು, ನಂತರ ಒಂದೊಂದೇ ಹೆಜ್ಜೆ ಇಟ್ಟು, ಎದ್ದು-ಬಿದ್ದು, ಗೋಡೆ ಹಿಡಿದು, ಇಲ್ಲಾ ಅಪ್ಪ ಅಮ್ಮನ ಕೈಬೆರಳನ್ನು ಹಿಡಿದೋ ನೆಡೆದು ಮುಂದೊಂದು ದಿನ ತನ್ನ ಕಾಲ ಮೇಲೆ ತಾನೇ ನೆಡೆಯುವಂತಾಗುತ್ತಾನೆ/ಳೆ. ಹಾಗೆಯೇ ಸೃಜನಶೀಲತೆ(ಕ್ರಿಯೇಟಿವಿಟಿ) ಕೂಡ. ಎಲ್ಲರಲ್ಲೂ ಒಂದಲ್ಲಾ ಒಂದು ತೆರನಾದ ಸೃಜನಶೀಲತೆ ಹುಟ್ಟಿನಿಂದಲೋ, ಬೆಳೆಯುತ್ತಾ ಹೋದಂತೆ ಮೈಗೂಡಿಸಿಕೊಂಡಂತೆಯೂ ಇರುತ್ತದೆ. ತನ್ನ ಸಾಮರ್ಥ್ಯವನ್ನು ಅರಿತು, ತಾನೇನು ಹೊಸತನ್ನು ಮಾಡಬಲ್ಲೆನು ಎಂದು ಗುರುತಿಸಿಕೊಳ್ಳುವವರೆಗೂ, ಆತ್ಮವಿಶ್ವಾಸದಿಂದ ಮುನ್ನೆಡೆದು ಏನನ್ನಾದರೂ ಮಾಡಿ ಸಾಧಿಸುವವರೆಗೂ ಮನುಷ್ಯನಿಗೆ ಅದರ ಅರಿವು ಇರುವುದೇ ಇಲ್ಲ....ಪ್ರಕೃತಿ ಮಾತೆಯೆಂಬ ಶಾಲೆಯಲ್ಲಿ ನಾವು ನಿರಂತರವೂ ವಿದ್ಯಾರ್ಥಿಗಳೇ..ಅನಂತವಾದ ಈ ಸೃಷ್ಟಿಯಲ್ಲಿ ಕೇವಲ ಕೆಲವೊಂದು ವಿಸ್ಮಯವನ್ನು ಪ್ರಕೃತಿಯಿಂದ ವಿಜ್ಞಾನ ಲೋಕಕ್ಕೆ ಸಂಬಂಧ ಪಡಿಸಿದಾಗ ನಮ್ಮ ಈ ಜಗತ್ತು ಎಂಥಹ ಅದ್ಭುತ !!!!!!!!!!ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?ನಾವು ಆ ಸೂರ್ಯೋದಯದಲ್ಲಿ ದಾರ್ಚಿನ್ ನಿಂದ ಸುಮಾರು ೫ ಕಿಲೋ ಮೀಟರುಗಳಷ್ಟು ದೂರದ "ಅಷ್ಟಪಾದ " ಎನ್ನುವ ಒಂದು ಔಷಧೀ ಸಸ್ಯತೋಟಕ್ಕೆ ಚಾರಣ ಮಾಡಲು ಮುಂದಾದೆವು.ಅದು ಕೈಲಾಸ ಪರ್ವತದ ದಕ್ಷಿಣ ಭಾಗ..ಸುಮಾರು ಎರಡು ಗುಡ್ಡ ಹತ್ತಿದರೆ ಆ ಸ್ಥಳ ಸಿಗುತ್ತದೆ ಎಂದು ಪಾಂಡೆ ಹೇಳಿದರು. ಹಾಗೆ ಪಾಂಡೆಯವರ ಜೊತೆಗೆ ಹೆಜ್ಜೆ ಹಾಕಿದೆವು.ದಾರಿಯಲ್ಲಿ ನಮ್ಮಷ್ಟಕ್ಕೆ ಖುಷಿಯಿಂದ ತಮಾಷೆ ಮಾತುಗಳನ್ನಾಡುತ್ತಾ, ಕೈಲಾಸ ಪರ್ವತವನ್ನು ಹತ್ತಿರ,ಇನ್ನೂ ಹತ್ತಿರ,ಎಂದು ಹೇಳುತ್ತಾ ಆ ಔಷಧೀ ವನ ತಲುಪಿದ್ದು ತಿಳಿಯಲೇ ಇಲ್ಲ.ಆ ಪ್ರದೇಶಕ್ಕೆ ಕಾಲಿಟ್ಟೊಡನೆ ಆ ಪ್ರದೇಶವು ಸುಗಂಧಭರಿತವಾಗಿ ನಮ್ಮನ್ನು ಸ್ವಾಗತಿಸಿತು.ಎಲ್ಲರೂ ಆ ವನಗಳ ಮಧ್ಯೆ ಕುಳಿತೆವು.ಸುಮಾರು ೫೦ ಕಿ.ಮೀ.ಗಳಷ್ಟು ವಿಸ್ತೀರ್ಣವಿದೆ ಆ ಪ್ರದೇಶ. ಪುಷ್ಪಗಳಿಂದ ಅಲಂಕೃತವಾದ ಅಲ್ಲಿನ ಸಸ್ಯಗಳು ಎಲ್ಲವೂ ಒಂದು ಅಡಿಗಿಂತ ಹೆಚ್ಚು ಎತ್ತರವಿರಲಿಲ್ಲ.ಆ ಹಸಿರಿನ ಮೇಲೆ ಮೈ ಚಾಚಿ ,ಮೌನವಾಗಿ ಕುಳಿತಾಗ ಕೈಲಾಸ ಪರ್ವತವು ಸೂರ್ಯನ ಶಾಖದಿಂದ ವಿವಿಧ ರೂಪವನ್ನು ಪ್ರದರ್ಶಿಸುವುದು ತುಂಬಾ ವಿಸ್ಮಯವಾಗಿ ಕಂಡಿತು.ಅಲ್ಲಿಯೇ ಕುಳಿತು ಒಂದು ಘಂಟೆಯಷ್ಟು ಕಾಲ ಧ್ಯಾನ ಮಾಡಿದೆ.ತುಂಬಾ ಸಂತೃಪ್ತಿ ಭಾವನೆ ದೊರೆಯಿತು..ಅಂತಹ ಭಾವನೆಯನ್ನು ಕರುಣಿಸಿದ ಹಿಮಾಲಯಗಳ ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.ನನ್ನ ಜೊತೆಗೆ ಬಂದಿದ್ದ ಕೆಲವು ಮಹಿಳಾ ಚಾರಣಿಗರು ಹೂವುಗಳನ್ನು ಹಾಗೂ ಅದರ ಬೀಜಗಳನ್ನು ಸಂಗ್ರಹಿಸಿದರು..ನನಗೆ ಅವುಗಳನ್ನು ಕೊಯ್ಯಲು ಮನಸ್ಸಾಗಲಿಲ್ಲ.ಅವುಗಳನ್ನು ಸ್ಪರ್ಶಿಸುತ್ತಾ ಅವುಗಳೊಡನೆ ಮಾತನಾಡಿದಂತೆ ಸಂತೋಷವನ್ನು ಅನುಭವಿಸಿದೆ.ಸ್ವಲ್ಪ ಹೊತ್ತಿನ ಆನಂದಕ್ಕಾಗಿ ಅವುಗಳನ್ನು ಕೀಳುವುದು ಅಸಮಂಜಸವೆಂದೂ, ಅನಗತ್ಯವೆಂದೂ ಕಂಡಿತು.ಅವುಗಳ ಮೂಲಕ ವಿಶ್ವಶಕ್ತಿ ಹೇರಳವಾಗಿ ದೊರೆಯಬಹುದು ಅಲ್ವೇ? ನಾನು ಒಂಟಿಯಾಗಿ ಅಲ್ಲಿ  ತಿರುಗುತ್ತಿದ್ದೆ..ಆಗ ನಮ್ಮ ಶೇರ್ಪಾ ನನ್ನನ್ನು ಕರೆದು ಇಲ್ಲಿ ಬನ್ನಿ ಎಂದನು.ಅಲ್ಲಿ ಒಂದು ಗಿದದಲ್ಲಿರುವ ಹೂವನ್ನು ಅದರ ವಾಸನೆ ನೋಡುವಂತೆ ಹೇಳಿದನು.ಹಾಗೆಯೇ ಮಾಡಿದೆ.ಆ ನಂತರ ಶ್ವಾಸ ಎಳೆಯುವಂತೆ ಹೇಳಿದನು.ಬಹಳ ದೀರ್ಘವಾಗಿ ಉಚ್ವ್ಹಾಸ ನಡೆಯಿತು.ಅದಕ್ಕೆ ಮುಂಚೆ ಯಾವಾಗಲೂ ಅಂತಹ ಅನುಭವ ಆಗಿರಲಿಲ್ಲ.ಹಾಗೆ ಎರಡು ಮೂರು ಬಾರಿ ಮಾಡಿದಾಗ ಹೊಟ್ಟೆ ಒಳಗೆ ಏನೋ ಖಾಲಿ ಆದಂತೆ ಆಯಿತು.ಹೊಸ ಶಕ್ತಿ ಧಾರೆಯೊಂದು ನನ್ನಲ್ಲಿ ಪ್ರವೇಶಿಸಿದಂತೆ ಅನಿಸಿತು.ಆಗ ನಮ್ಮ ಶೇರ್ಪಾ ಈ ಔಷಧೀ ವನದ ಬಗ್ಗೆ ಹೇಳಿದರು.ಇಲ್ಲಿ ಈಗ ನಿಮಗೆ ತೋರಿಸಿದಂತಹ ಇನ್ನೂ ಅನೇಕ ಅದ್ಭುತ ಔಷಧೀ ಸಸ್ಯಗಳಿವೆ.ಇದರ ಮಾಹಿತಿ ತಿಳಿದು ಉಪಯೋಗಿಸಿದರೆ ದೇಹ ಶುದ್ಧಿ,ಚಿತ್ತ ಶುದ್ದಿ ಸಹಜವಾಗಿ ಲಭಿಸುತ್ತದೆ. ವಿದೇಶದಿಂದ ಅನೇಕ ಸಸ್ಯ ಶಾಸ್ತ್ರಜ್ಞರು,ಔಷಧೀಯ ಸಸ್ಯಗಳಿಗಾಗಿಯೂ ,ಇಲ್ಲಿನ ವಿಶಿಷ್ಟ ಹೂಗಳಿಗಾಗಿಯೂ,ಎಲೆಗಳಿಗೆ ಲಕ್ಷಾಂತರ ರೂ.ಖರ್ಚು ಮಾಡಿಕೊಂಡು ಇಲ್ಲಿಗೆ ಬರುತ್ತಾರೆ..ಇಂತಹ ಅದ್ಭುತ ಪ್ರಕೃತಿ ತಾಣಕ್ಕೆ ನಮಿಸಿ ಅಲ್ಲಿಂದ ನಮ್ಮ ರೂಮಿಗೆ ಹೊರಡಲು ತಯಾರಾದೆವು.ಸಮಯ ಮಧ್ಯಾಹ್ನ ೩.೦೦ ಘಂಟೆ.ನಮ್ಮಲ್ಲಿದ್ದ ಬಿಸ್ಕೆಟ್ ಗಳನ್ನೂ ತಿಂದು ನೀರು ಕುಡಿದೆವು.ಎಲ್ಲರಿಗೂ ಬಹಳ ಹಸಿವಾನದಂತೆ ಕಾಣುತ್ತಿತ್ತು.ಎಲ್ಲರ ಕೈಯಲ್ಲಿದ್ದ ಬಿಸ್ಕೆಟ್ ಗಳು ಖಾಲಿಯಾಗಿದ್ದವು.ಎಲ್ಲರ ಮುಖದಲ್ಲಿ ಹಸಿವು ನೀಗಿದ ತೃಪ್ತಿಯಿತ್ತು. ಕೆಲವು ಫೋಟೋಗಳನ್ನು ತೆಗೆದೆವು..ಅಲ್ಲಿನ ಪ್ರಕೃತಿಗೆ ವಿದಾಯ ಹೇಳಿ ಹೊರಡಲು ತಯಾರಾದೆವು.ನನಗೆ ಒಂದು ಕ್ಷಣ ಹೀಗನ್ನಿಸಿತು."ನಾನು ಹಿಂತಿರುಗಿ ಹೋಗದೆ ಈ ಪ್ರದೇಶಗಲ್ಲಿ ಉಳಿದುಬಿಟ್ಟರೆ ಏನಾಗುತ್ತೆ?"ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಂಡೆ.ಈ ಪ್ರಶ್ನೆ ನನ್ನನ್ನು ಬೆನ್ನಟ್ಟಿ ಕಾಡತೊಡಗಿತು.ಎಲ್ಲರೂ ಮುಂದೆ ನಡೆಯುತ್ತಿದ್ದರು.ಅವರಿಂದ ಅರ್ಧ ಕಿ.ಮೀ ಗಳಷ್ಟು ದೂರ ನಾನು ನಡೆಯುತ್ತಲಿದ್ದೆ.ಮತ್ತೆ ನಾನು ಒಂಟಿಯಾದೆ..ನನಗೆ ಹಾಗೆ ನಡೆಯುವುದೇ ಆನಂದವಾಗಿತ್ತು.ಆ ನಡಿಗೆಯಲ್ಲಿ ನನ್ನ ಜೀವನದ ಪರಿಶೀಲನೆ ,ಆತ್ಮ ಅವಗಾಹನೆಯಾಯಿತೋ ಎಂದನಿಸಿತು.,ಮತ್ತೆ ನಾನು ನನ್ನೂರಿಗೆ ಮರಳಬೇಕೆ? ಅಥವಾ ಹೋಗದಿದ್ದರೆ ನನ್ನ ಹೆತ್ತವರಿಗೆ ನಾನು ಕಾಣೆಯಾದ ವಿಷಯ ಹೇಗೆ ತಿಳಿಸುವುದು?ಎಂದೆಲ್ಲ ಗೊಂದಲವಾಯಿತು.ನಡೆಯುತ್ತಿರುವಂತೆ ನಾನು ಹೀಗೆ ಯೋಚನೆ ಮಾಡುತ್ತಿದ್ದೆ.ಹಿಮಾಲಯಗಳಲ್ಲಿ ವಿರಕ್ತಿ,ವೈರಾಗ್ಯ,ಬೇಗ ಸಿದ್ಧಿಸುತ್ತವೆ ಎಂಬ ಮಾತು ಕಥೆಗಳಲ್ಲಿ ಓದಿದ ನೆನಪು ನಿಜವೆನಿಸಿತು.ಯಾಕೆ ನನ್ನಲ್ಲಿ ಈ ಬದಲಾವಣೆ ಬಂತು? ನಮ್ಮ ತಂಡ ಕಣ್ಣಿಗೆ ಕಾಣದಷ್ಟು ದೂರ ಆಯಿತು.ಒಂದೆಡೆ ಭಯ, ಆತಂಕ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಕುಳಿತೆ.ಸಮಯ ಸಂಜೆ ೫.೩೦ ಆಗಿತ್ತು.ಒಂದೆಡೆ ಚಳಿ ಗಾಳಿ.ಮತ್ತೊಂದೆಡೆ ನನ್ನ ಬಗ್ಗೆ ನನಗೆ ಸ್ಥಿಮಿತವಿಲ್ಲ..ಸಂಜೆ ಆಹ್ಲಾದಕರವಾಗಿತ್ತು.ಗಿಡಗಳ ಪೊದರುಗಳಲ್ಲಿ ಪಕ್ಷಿಗಳು ರಹಸ್ಯಗಳೇನನ್ನೋ ಹೇಳಿ ಕೊಡುವಂತಿತ್ತು...ಗಿಡಗಳು  ಗಾಳಿ ಬೀಸುವಾಗ ಅವುಗಳು ಅಲ್ಲಡುತ್ತಿರುವಾಗ ನಿನ್ನ ಮಾತನ್ನು ನಾವೂ ಕೇಳಿಸಿ ಕೊಳ್ಳುತ್ತಿದ್ದೇವೆ ಎನ್ನುತ್ತಾ ತಲೆದೂಗುತ್ತಿರುವಂತೆ ಅಲ್ಲಾಡುತ್ತಿದ್ದವು. ನಡೆಯುತ್ತಿದ್ದ ಕಾಲುಗಳೊಂದಿಗೆಸಂಬಂಧವೇ ಇಲ್ಲದಂತೆ ಮನಸ್ಸು ತನ್ನ ಕೆಲಸದಲ್ಲಿ ತೊಡಗಿತ್ತು. ಹೋಗದೆ ನನ್ನನ್ನು ಕುರಿತಾದ ಸಮಾಚಾರವನ್ನು ನನ್ನ ಮನೆಯವರಿಗೆ ತಿಳಿಸುವುದು ಹೇಗೆ?ಎಂಬ ಅನೇಕ ರೀತಿಯಲ್ಲಿ ಮನಸ್ಸು ಗೊಂದಲವಾಯಿತು.ಯಾವ ಪದ್ಧತಿಯಲ್ಲಿ ಕಳುಹಿಸಿದರೆ ,ಅವರಿಗೆ ನನ್ನ ಬಗ್ಗೆ ಯೋಚನೆ ಇಲ್ಲದೆ ನನ್ನನ್ನು ಮರೆತು ಹೋಗುತ್ತಾರೆ.?ಎಂಬ ಪ್ರಶ್ನೆಗೆ ಉತ್ತರ ಸಿಗದಾಗ ಇಲ್ಲಿಂದ ಹೊರಡುವುದೇ ಉತ್ತಮ ಎಂದು ಕಂಡಿತು.ಈ ಯೋಚನೆ ಬಹಳ ಚೆನ್ನಾಗಿ ಇದ್ದಂತೆ ಅನಿಸಿತು.ಹಾಗೆಯೇ ಮಾಡುತ್ತೇನೆ ಎಂದು ಸಂತೋಷವಾಗಿ ದೃಢವಾಗಿ ನಿಶ್ಚೈಸಿದೆ.ನನ್ನ ಸಂತೋಷ ನಡಿಗೆಯ ವೇಗವನ್ನು ಹೆಚ್ಚಿಸಿತು.ಬೆನ್ನ ಮೇಲಿದ್ದ ಬ್ಯಾಗಿನ ಭಾರ ಹಗುರವಾದಂತಹ ಫೀಲಿಂಗ್. ನನ್ನ ಸಹ ಚಾರಣಿಗರು ದಾರ್ಚಿನ್ ನಲ್ಲಿರುವ ರೂಮಿಗೆ ತಲುಪಿ ಅರ್ಧ ಘಂಟೆಯಲ್ಲಿ ನಾನೂ ತಲುಪಿದೆ. ಹಾಗಾಗಿ ಯಾರಿಗೂ ಸಂಶಯ ಬಂದಿರಲಿಲ್ಲ.ರಾತ್ರಿ ೮.೩೦ ಆಯಿತು.ಊಟ ಮುಗಿಸಿದೆವು.ಮಲಗಿದಾಗ ನಾನು ಮತ್ತೊಮ್ಮೆ ಈ ದಿವಸದ ಅನುಭವಗಲ್ಲು ಮೆಲುಕು ಹಾಕಿದೆ. ನನಗೆ ಸಂತೋಷದ ಅಥವಾ ನೆಮ್ಮದಿಯ ವಿಷಯ ಅಂದರೆ ಇಂದಿನಿಂದ ನನ್ನ ಬಳಿ ತ್ರಿಪ್ತಿಕರ ಉತ್ತರ ಇದೆ.ಈ ಉತ್ತರ ಕಂಡುಕೊಳ್ಳಲು ಪಟ್ಟ ಶ್ರಮವನ್ನು ನೆನೆಸಿಕೊಂಡಾಗ ನಿದ್ರಾ ದೇವತೆ ಪ್ರೇಮದಿಂದ ನನ್ನನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಳು...

1 comment:

  1. ಗುರುಗಳೇ,
    ಪ್ರತೀ ಸರ್ತಿಯ ಹಾಂಗೇ ಈ ಸರ್ತಿದೇ ಬರದ್ದು ಲಾಯಿಕ ಆಯಿದು.... ಮುಂದುವರೆಸಿ...ಹಾಂಗೇ, ಬಂದ commentಗೊಕ್ಕೂ ಉತ್ತರ ಬರದರೆ ಬರವವಕ್ಕೂ ಖುಷಿ...

    ನಿಂಗಳ,
    ಮಂಗ್ಳೂರ ಮಾಣಿ.

    ReplyDelete