ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Friday, November 27, 2009

ಮಾನಸ ಸರೋವರ ಯಾತ್ರೆ-೨೦


ರಾತ್ರಿ ೧೦ ಘಂಟೆ,ನಾವು ಡೇರೆಯಲ್ಲಿ ಮಲಗಲು ತಯಾರಾದೆವು. ಎಷ್ಟು ಸಲ ಕಣ್ಣು ಮುಚ್ಚಿಕೊಂಡರೂ ನಿದ್ದೆ ನಮ್ಮ ಬಳಿ ಸುಳಿಯಲಿಲ್ಲ.ಒಂದು ಬದಿ ಮೈ ಕೊರೆಯುವ ಚಳಿ , ಮತ್ತೊಂದೆಡೆ ನಮ್ಮ ಸಹ ಚಾರಣಿಗನನ್ನು ಕಳೆದುಕೊಂಡ ದುಖ:ನಮ್ಮ ಜೀವ ಹಿಂಡುತ್ತಿದೆ. ಛಳಿ ಹೆಚ್ಚಾಗಿದೆ.ಎಷ್ಟು ಹೊದ್ದುಕೊಂಡರೂ ಸಾಲದೆನಿಸಿ ಕಷ್ಟವಾಗುತ್ತಿದೆ.ರಾತ್ರಿಯೆಲ್ಲಾ ಕಳೆಯುವುದು ಹೇಗೆಂದು ಭಯವಾಗುತ್ತಿದೆ.ಮಧ್ಯ ರಾತ್ರಿ ೧.ಘಂಟೆಯವರೆಗೂ  ನಿದ್ದೆ ಬರಲಿಲ್ಲ. ಮತ್ತೆ ನಿದ್ದೆ ಎಷ್ಟು ಹೊತ್ತಿಗೆ ಬಂತೋ ತಿಳಿಯದು.ಆ ನಿದ್ದೆ ಆ ರಾತ್ರಿಯ ಚಳಿಯಿಂದ ತಪ್ಪಿಸಿಕೊಳ್ಳುವ ಸದಾವಕಾಶವನ್ನು ಪರಶಿವನು ಆ ರೀತಿ ನಮಗೆ ಪ್ರಸಾದಿಸಿದನೆಂಬ ಅನುಭೂತಿ ಉಂಟಾಯಿತು.ಮುಂಜಾನೆ ೪.೦೦ ಘಂಟೆಯ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು.ಡೇರೆಯಿಂದ ಹೊರಗೆ ಬಂದೆ.ನಿಂತು ಸುತ್ತಲೂ ನೋಡಿದಾಗ zeero ವೋಲ್ಟ್ ಬಲ್ಬ್ ಉರಿದಂತೆ ಕಾಣುತ್ತಿದೆ.ಅಷ್ಟು ಮಂದವಾದ ಬೆಳಕು.ಆ ರಾತ್ರಿಯಲ್ಲೂ ಕೈಲಾಸ ಪರ್ವತವು ತನ್ನ ದಿವ್ಯ ಕಾಂತಿಯನ್ನು ಪಸರಿಸುತ್ತಲೇ ಇದೆ.ಮಂಜುಗಡ್ಡೆಯಿಂದ ಆವೃತವಾದ ಕೈಲಾಸ ಪರ್ವತವು ಬೃಹದಾಕಾರದ ಶಿವಲಿಂಗದಂತೆ ಶೋಭಿಸುತ್ತಿದೆ.ಮತ್ತೊಮ್ಮೆ ಇಂತಹ ಅವಕಾಶವನ್ನು ನೋಡಲು ಈ ಜೀವನದಲ್ಲಿ ನನಗೆ ದೊರೆಯುವುದು ಅಸಾಧ್ಯವೆಂದು ನನಗನಿಸಿತು.   ಈ ಜೀವನದಲ್ಲಿ ನನಗೆ ಇದು ಕೊನೆಯಾಗಿರಬಹುದು.ಆ ಮುಂಜಾನೆ ಮಳೆಹನಿಗಳ ರೂಪದಲ್ಲಿ ಮಂಜಿನ ತುಣುಕುಗಳೊಡನೆ ಅಮೃತಸಿಂಚನವಾಯಿತು. ನನ್ನ ಆನಂದಕ್ಕೆ ಎಲ್ಲೆಯೇ ಇಲ್ಲದಂತಾಯಿತು.ವಿಪರೀತ ಛಳಿಯಾಗಿದ್ದರಿಂದ ತಲೆಗೆ ಧರಿಸಿದ ಟೋಪಿ,ಕೋಟುಗಳನ್ನು ಒಂದು ನಿಮಿಷಕ್ಕಾದರೂ ತೆಗೆಯಬೇಕೆಂದು ಅನಿಸಿತು. ಈ ಅಮೃತ ಸಿಂಚನ ನನಗಾಗಿಯೇ ಈ ಪರಮೇಶ್ವರನಿಂದ ಸೃಷ್ಟಿ ಸಲ್ಪಟ್ಟಿದೆನಿಸಿ,ನಾನು ಧರಿಸಿದ ಕೋಟು .ಕ್ಯಾಪ್ ಗಳನ್ನು ತೆಗೆದು ಆ ಹನಿಗಳಲ್ಲಿ ನೆನೆಯುವ ಪ್ರಯತ್ನದಲ್ಲಿ ತೊಡಗಿದೆ.ಕೇವಲ ಐದು ನಿಮಿಷಗಳು ಮಾತ್ರ ಹನಿಗಳು ಬಿದ್ದು ನಿಂತು ಹೋದವು.!ಎಂತಹ ಅದೃಷ್ಟ ನನ್ನದು!ನಿಂತಿದ್ದ ಕಡೆಯಿಂದಲೇ ಕೈಲಾಸನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ.  ಇದು ಕೈಲಾಸನಾಥನ ಅನುಗ್ರಹ.ಎಷ್ಟೋ ಜನ್ಮದ ಪುಣ್ಯವೋ ಅಥವಾ ನನ್ನ ಹಿರಿಯರು ಮಾಡಿದ ಅನುಷ್ಠಾನದ ಫಲವೋ?ಈ ದೃಶ್ಯವನ್ನು  ಕಾಣಲು ನನ್ನನ್ನು ಈ ಭುವಿಗೆ ತಂದಿಳಿಸಿದ ನನ್ನ ಪಿತೃಗಳನ್ನು ಒಂದು ಕ್ಷಣ ಸ್ಮರಣೆ ಮಾಡಲು ಕೈಲಾಸನಾಥನು ನನಗೆ ಸುಬುದ್ಧಿಯನ್ನು ಅನುಗ್ರಹಿಸಿದನು. ನನಗೆ ಆ ಆಲೋಚನೆ ಬಂದ ಕೆಲವೇ ನಿಮಿಷಗಳಲ್ಲಿ ಹನಿಗಳು ಬೀಳುವುದು ನಿಂತಿತು.ಏನೊಂದು ಪವಾಡ!!!!!!!!! ನಾನು ಕಾಣುವುದು ಕನಸೋ ಎಂದು ಒಂದು ಕ್ಷಣ ನನ್ನ ತೊಡೆ ತಟ್ಟಿ ನೋಡಿದೆ. ಇಲ್ಲ!! ಎಚ್ಚರವಾಗಿದ್ದೇನೆ. 
         ನೋಡು ನೋಡುತ್ತಿದ್ದಂತೆಯೇ ಸೂರ್ಯೋದಯವಾಯಿತು.ಆ ಸೂರ್ಯೋದಯದ ಕಿರಣ ಕೈಲಾಸ ಪರ್ವತಕ್ಕೆ ಬಿದ್ದಾಗ, ಮಂಜು ಆವಿಯಾಗುವದು, ಇವೆಲ್ಲ ಏಕ ಕಾಲಕ್ಕೆ ನಡೆಯುವುದು ಕೈಲಾಸದಲ್ಲಿ ಬೆಂಕಿಯ ಜ್ವಾಲೆ ಎದ್ದಂತೆ ಕಾಣುತ್ತಿತ್ತು.  ಸುಮಾರು ಬೆಳಿಗ್ಗೆ  ೭.೦೦ ಘಂಟೆಯ ನಂತರ ನಮ್ಮ ಚಾರಣವನ್ನು ಮುಂದುವರಿಸಿದೆವು.ಸುಮಾರು ೨ ಕಿಲೋಮೀಟರ್ ಗಳಷ್ಟು ಚಾರಣ ಮಾಡಿದಾಗ ಒಂದು ಗುಹೆ ಸಿಕ್ಕಿತು.ಆ ಗುಹೆಯಲ್ಲಿ ಒಂದು ದೇವತೆಯ ವಿಗ್ರಹ ಕಂಡಿತು.ಇದೀಗ ನಾವು ಕೈಲಾಸ ಪರಿಕ್ರಮದ ಮಾರ್ಗವನ್ನು ಕಂಡು ಹಿಡಿದ ವ್ಯಕ್ತಿಯ ವಿಗ್ರಹವೂ ಅಲ್ಲಿದೆ.ಅಲ್ಲಿಂದ ಹೊರಬಂದರೆ ಮೂರು ಪರ್ವತಗಳು ಕಾಣಿಸುತ್ತವೆ.ಅಷ್ಟರವರೆಗೆ ನನ್ನ ಏಕೈಕ ಸಂಗಾತಿಯಾಗಿದ್ದ ನನ್ನ ಕ್ಯಾಮರಾ ಬ್ಯಾಟರೀ ಲೋ ಎಂದು ತೋರಿಸುತ್ತಿತ್ತು.ಆ ಪರ್ವತಗಳ ಫೋಟೋಗಳನ್ನು ತೆಗೆದ ಕೂಡಲೇ ನನ್ನ ಕ್ಯಾಮರಾ ಆಫ್ ಆಯಿತು.ನನ್ನ ನಿರಾಶೆ ಆಗ ಹೇಳ ತೀರದು.ಆ ಪರ್ವತಗಳು ಮಂಜುಶ್ರೀ,ಅವಲೋಕಿತೇಶ್ವರೀ,ವಜ್ರಪಾಣಿ. ಆ ಪರ್ವತಗಳ ದರ್ಶನ ತುಂಬಾ ವಿಶಿಷ್ಟ..ಎಂದು ಪಾಂಡೆ ಪರ್ವತಗಳ ಬಗ್ಗೆ ವಿವರಣೆ ನೀಡಿದರು. ಜ್ಞಾನ ,ದಯೆ, ಅಧಿಕಾರಗಳನ್ನು ಆ ಪರ್ವತಗಳು ಪ್ರಸಾದಿಸುತ್ತವೆಯಂತೆ.ಅವುಗಳಿಗೆ ನಮಸ್ಕರಿಸಿದೆ.ಅಲ್ಲಿದ್ದ ವ್ಯಕ್ತಿಯೊಬ್ಬ ,ನನ್ನನ್ನು ಇವರು ಇಂಡಿಯಾ ದವರೇ?ಎಂದು ನಮ್ಮ ಶೇರ್ಪಾನಲ್ಲಿ ವಿಚಾರಿಸಿದ. ಹೌದು ಎಂದ,ಅವರೂ ಪಶ್ಚಿಮ ಬಂಗಾಳದವರಾಗಿದ್ದರು.ಎಷ್ಟೋ ಪ್ರೇಮದಿಂದ ನಗು ನಗುತ್ತಾ ಅವರು ನನ್ನನ್ನು ಮಾತನಾಡಿಸಿದರು.ಅವರ ಭಾಷೆಯಲ್ಲಿ ನನಗೆ ಏನೂ ಅರ್ಥವಾಗಲಿಲ್ಲ. ಸುಮಾರು ೪ ಕಿ.ಮೀ.ಗಳಷ್ಟು ಚಾರಣ ಮಾಡಿದಾಗ ಒಂದು ಅದ್ಭುತ ಎದುರಾಯಿತು.!!!   ಚಿತ್ರ ವಿಚಿತ್ರ ಗಳಿಂದ ಕೂಡಿದ ಆ ಸ್ಥಳ."ಶಿವಸ್ಥಾಲ್"..ಸೂರ್ಯನ ಕಿರಣ ನಡು ನೆತ್ತಿಯ ಮೇಲೆ ಬಿದ್ದರೂ ಬಿಸಿಲಿನ ಪ್ರಖರ ಸ್ವಲ್ಪವೂ ಅರಿವಾಗುತ್ತಿರಲಿಲ್ಲ.ಇಲ್ಲಿ ಕೆಲವು  ಅಘೋರಿಗಳು ತಪಸ್ಸು ಮಾಡುತ್ತಿದ್ದರು.ಆ ಕ್ಷಣ ನನಗೆ ಹಿಮಾಲಯನ್ ಬ್ಲಂಡರ್ ಎನ್ನುವ ಲೇಖನ ಅಘೋರಿಗಳ ಬಗ್ಗೆ ಓದಿರುವುದು ನೆನಪಾಯಿತು.ಇಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕು ಎಂದು ಪಾಂಡೆ ಹೇಳಿದಾಗ ನನಗೆ ಮತ್ತಷ್ಟು ಭಯವಾಯಿತು.ಈ ಶಿವಸ್ಥಾಲ್ ನಲ್ಲಿ ಹಳೆಯ ಬಟ್ಟೆಗಳು,ತಲೆ ಕೂದಲುಗಳ ರಾಶಿ,ಪ್ರಾಣಿಗಳ ರುಂದಗಳು,ಹೀಗೆ ಅಸಹ್ಯವಾದ ವಸ್ತುಗಳನ್ನು ಕಂಡ ನಾನು ಅಲ್ಲಿಂದ ಆದಷ್ಟು ಬೇಗ ಓಡಬೇಕೆಂದು ನನ್ನ ಚಾರಣದ ವೇಗವನ್ನು ಹೆಚ್ಚಿಸಿದೆ.ಕೆಲವರು ತಮ್ಮ ರಕ್ತವನ್ನೂ ಇಲ್ಲಿ ಒಂದು ಹನಿ ಅರ್ಪಿಸಿದರೆ ಸ್ವರ್ಗ ಪ್ರಾಪ್ತಿ ಎಂದು ನಂಬುತ್ತಾರೆ.ಈ ಪ್ರದೇಶದಲ್ಲಿ ವೈರಾಗ್ಯ ಚೆನ್ನಾಗಿ ಮೈಗೂಡುತ್ತದೆ ಎಂದು ಟಿಬೆಟಿಯನ್ನರ ನಂಬಿಕೆ,ಅಂತೆಯೇ ಕೆಲವರು ಸತ್ತಂತೆ  ಮಲಗಿ ಏಳುತ್ತಾರೆ. ಅಲ್ಲಿ ಏನಾದರೊಂದನ್ನು ಸಮರ್ಪಿಸಿ ಹೋಗುವ ಪದ್ದತಿಯಂತೆ,ಹೀಗೆ ಪಾಂಡೆ  ಈ ಸ್ಥಳದ ಬಗ್ಗೆ ಮಾಹಿತಿ ನೀಡಿದರು.ಏನು ಬೇಕಾದರೂ ಆಗಲಿ ..ಮೊದಲು ಇಲ್ಲಿಂದ ನಡೆಯೋಣ ಎಂದು ನಾನು ಧರಿಸಿದ್ದ ಅಂಗಿಯೊಂದನ್ನು ಅಲ್ಲಿಗೆ ಸಮರ್ಪಿಸಿ ಮುಂದೆ ನಡೆದೆ.  ಎತ್ತರ ಹೆಚ್ಚುತ್ತಿದ್ದರಿಂದ ಅತೀ ಕಷ್ಟದಿಂದ ಹೆಜ್ಜೆ ಹಾಕಬೇಕಾಗುತ್ತಿತ್ತು.ಹತ್ತು ಹೆಜ್ಜೆ ನಡೆಯಲು ಹತ್ತು ನಿಮಿಷಗಳೇ ಬೇಕಾದಷ್ಟು ಕಷ್ಟದ ಪರಿಸ್ಥಿತಿ. ಅದರಲ್ಲೂ ಮಧ್ಯಾಹ್ನ ೩ ಘಂಟೆಯ ಸಮಯವಾದ್ದರಿಂದ ಬಾಯಿ ಒಣಗಿಹೋಯಿತು. ಡ್ರೈ ಫ್ರುಟ್ಸ್, ಚಾಕ್ಲೆಟ್ ಬಾಯಲ್ಲಿಟ್ಟುಕೊಂಡು ನಡೆಯಬೇಕಾಗುತ್ತಿತ್ತು.ಹಿಂದಿನ ರಾತ್ರಿ ಏನೂ ತಿಂದಿರಲಿಲ್ಲ.ಶರೀರ ಮತ್ತಷ್ಟು ಸುಸ್ತಾಗತೊಡಗಿತು. ಪಾಂಡೆಯವರು ನಮ್ಮನ್ನು ಅರ್ಧ ಘಂಟೆಗೊಮ್ಮೆ ಎಚ್ಚರಿಸಿ ಚಾರಣದಲ್ಲಿ ಬೇಕಾದ ಜಾಗ್ರತೆಗಳನ್ನು ಮನದಟ್ಟಾಗುವಂತೆ ಹೇಳುತ್ತಿದ್ದರು.ಹಿಂದಿನ ದಿನ ನಮ್ಮ ಚಾರಣಿಗರಲ್ಲೋಬ್ಬರಾದ  ಗುರುಮೂರ್ತಿಯವರು ಮೃತಪಟ್ಟಿದ್ದು ನನ್ನಲ್ಲಿ ಪೂರ್ತಿ ಭಯ ಮನೆ ಮಾಡಿತು.ಮತ್ತೆ ಓಂ ನಮಶಿವಾಯ ಜಪ ಮುಂದುವರಿಸಿದೆ.ನಾನು ನಮ್ಮ ಭಾರತಕ್ಕೆ ಪುನಃ ಕ್ಷೇಮವಾಗಿ ಮರಳಿ ನನ್ನ ಹೆತ್ತವರಿಗೆ ನಾನು ಕಾಣ ಬೇಕಾದರೆ ಅದಕ್ಕೆ ಕೈಲಾಸನಾಥನೇ ಕಾರಣ ಎಂದು ಬಲವಾಗಿ ನಂಬಿದೆ.ನನಗೆ ಆಗ ಉಳಿದದ್ದು ಅದೊಂದೇ ಆತ್ಮ ಸ್ಥೈರ್ಯ !!!!! ನನ್ನ ಪಕ್ಕದಲ್ಲೇ ಕೆಂಪು ವಸ್ತ್ರ ಧರಿಸಿ ಒಬ್ಬ ಟಿಬೆಟ್ ಲಾಮಾ ನನ್ನಿಂದ ವೇಗವಾಗಿ ನಡೆದ.ಈ ಹಿಂದೆ ನಮ್ಮ ಚಾರಣದಲ್ಲಿ ನಾನು ಅವನನ್ನು ನೋಡಿರಲಿಲ್ಲ.ಈಗ ಇದ್ದಕ್ಕಿದ್ದ ಹಾಗೆ ಅವನು ಎಲ್ಲಿಂದ ಬಂದ?ಎಂಬ ಸಂಶಯ, ಭಯ ,ಎಲ್ಲಾ ಒಟ್ಟಿಗೇ ಆಯಿತು.   ಇವನು ಅಘೋರಿಗಳ ಪೈಕಿ ಒಬ್ಬನಿರಬಹುದೇ?ಎಂಬ ಭಯ ನನ್ನನ್ನು ಕಾಡಿತು.ಅವನು ಮುಂದೆ ಹೋಗಿ ಹಿಂತಿರುಗಿ ನನ್ನನ್ನೇ ದಿಟ್ಟಿಸಿ ನೋಡಿದ!!!!!! ನನ್ನ ಎದೆ ಆಗ ನಿಮಿಷಕ್ಕೆ ೧೦೦ ಸಲ ಬಡಿಯಿತು.ಏನಾದರಾಗಲೀ ಎಂದು ಅವನಿಗೆ ಎರಡು ಕೈ ಮುಗಿದು ನಮಸ್ಕರಿಸಿದೆ.ಆತ ನನ್ನ ಹತ್ತಿರ ಬಂದ!!!!!!!! ಆತನ ಜೋಳಿಗೆಯಿಂದ ಒಂದು ಚಾಕ್ಲೆಟ್ ಹೊರತೆಗೆದ..ನನ್ನತ್ತ ಕೈ ಚಾಚಿದ.ನನ್ನ ಶೇರ್ಪಾ ಮುಂದೆ ಹೋಗಿದ್ದ.ನಾನು ಈಗ ಒಬ್ಬಂಟಿ.. ಏನು ಮಾಡುವುದು.ತೆಗೆದು ಕೊಳ್ಳದೇ ವಿಧಿಯಿಲ್ಲ!! ಒಂದೆಡೆ ನನ್ನಲ್ಲಿರುವ ಎಲ್ಲಾ ಆಹಾರ ಖಾಲಿಯಾಗಿದ್ದವು.ಧೈರ್ಯ ಮಾಡಿ ತೆಗೆದುಕೊಂಡೆ.  ನನಗೆ ಅದು ಚಾಕ್ಲೆಟ್ ಎನಿಸಲಿಲ್ಲ.ಇಂದಿನ ಯಾತ್ರೆಯನ್ನು ಮುಗಿಸಲು ಅತ್ಯಗತ್ಯವಾದ ಔಷಧಿಯೆಂದು ಭಾವಿಸಿದೆ..ನನ್ನ ಗುರುಗಳು ಆತನ ರೂಪದಲ್ಲಿ ಬಂದು ಕೊಟ್ಟರೆನ್ದನಿಸಿತು. ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಾ ಅವನೊಡನೆ ಮುಂದೆ ನಡೆದೆ..  ಮರಣಕ್ಕೆ ಹತ್ತಿರವಾದ ಪ್ರಯಾಣ.ಎಲ್ಲಾ ಆ ಈಶ್ವರನೇ ಭಾರ!!!!
                 ದೊಡ್ಡ ದೊಡ್ಡ ಕಲ್ಲುಗಳನ್ನೂ ಹಿಮದ ಬಂಡೆಗಳನ್ನೂ ದಾಟಿಕೊಂಡು ಸುಮಾರು ರಾತ್ರಿ ೭.೦೦ ಘಂಟೆಯ ಹೊತ್ತಿಗೆ  "ಡೋಲ್ಮಾಪಾಸ್"ಎನ್ನುವ ಪ್ರಮಾದಕರ ಪರ್ವತದ ಬಳಿಗೆ ತಲುಪಿದೆ.ಅಲ್ಲಿಂದ ಕೈಲಾಸ ಪರ್ವತದ ಉತ್ತರ ದಿಕ್ಕಿನ ಮುಖದ ದರ್ಶನ ಲಭಿಸಿತು..ಮೋಡಗಳು ಮಂಜಿನ ಹೊಗೆಯಿಂದಾಗಿ ಕ್ಷಣ ಕ್ಷಣಕ್ಕೂ ರೂಪ ಬದಲಾಯಿಸುತ್ತಿರುತ್ತದೆ.ತೀರಾ ಹತ್ತಿರದಲ್ಲೇ ಇರುವಂತೆ ಅನಿಸಿತು.ಮೇಲಕ್ಕೆ ಹತ್ತ ಬಹುದು ಎಂದು ಕೊಳ್ಳುತ್ತಾರೆ.ಆದರೆ ಯಾರಿಗೂ ಸಾಧ್ಯವಾಗದು..ನಾನು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಧ್ಯಾನ ಮಾಡಿದೆ.ಆಕ್ಸಿಜನ್ ಎಟುಕದೇ ಕಷ್ಟವಾಗುತ್ತಿದೆ,ನಮ್ಮ ಬೆನ್ನಲ್ಲಿ ಕಟ್ಟಿಕೊಂಡ ಆಕ್ಸಿಜನ್ ಸಿಲಿಂಡರ್ ಯಾವಾಗ ಮುಗಿಯುತ್ತದೆ ಎಂಬ ಭಯ!!!!!!!!ಆದರೂ ಪಟ್ಟು ಹಿಡಿದು ಕುಳಿತೆ...  ನನಗೆ ನೆನಪಿನಲ್ಲಿರುವ ಎಲ್ಲಾ ದೈವಿಕ ಶಕ್ತಿಗಳನ್ನು ಪ್ರಾರ್ಥಿಸಿದೆ. ಕಷ್ಟ ಬಂದಾಗ ಎಲ್ಲರೂ ನೆನಪಿಗೆ ಬರುತ್ತಾರೆ.ಎಲ್ಲೂ ಇಲ್ಲದ ನಂಬಿಕೆಗಳು,ವಿಶ್ವಾಸಗಳು ನಮ್ಮಲ್ಲಿ ಮನೆ ಮಾಡುತ್ತವೆ.ಎಲ್ಲದೂ ದೊಡ್ಡದೇ ಎನಿಸುತ್ತದೆ.ನನ್ನದೂ ಅಂತಹುದೇ ಪರಿಸ್ಥಿತಿ.ಈ ಡೋಲ್ಮಾ ಪಾಸ್ ದಾಟಿದರೆ ಸಾಕು,ಈ ದಿನದ ಯಾತ್ರೆಯಲ್ಲಿ ಅತೀ ಮುಖ್ಯವಾದ ತಿರು ಏರ್ಪಡುತ್ತದೆ. ಹಾಗೆಯೇ ಸುಮಾರು ೩ ಕಿಲೋ ಮೀಟರ್ ಗಳಷ್ಟು ನಡೆದು ಒಂದು ವಿಶಾಲವಾದ ಬಯಲಿನಲ್ಲಿ ಟೆಂಟ್ ಸಿದ್ಧಪಡಿಸಿ ಆ ರಾತ್ರಿ ಕಳೆಯುವ ಪ್ರಯತ್ನ ಮಾಡಿದೆವು.. 

1 comment:

  1. ಲೇಖನದ ಓಟ ಚೆನ್ನಾಗಿದೆ..
    ಮುಂದಿನದಕ್ಕೆ ಕಾತರ!!!

    ReplyDelete