ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Sunday, December 6, 2009

ಮಾನಸ ಸರೋವರ ಯಾತ್ರೆ-೨೧

ಎಂಟು ಮಂದಿ ಮಲಗಬಹುದಾದ ಡೇರೆಯೊಳಗೆ ನಾವು ನಾಲ್ವರೇ ಆರಾಮವಾಗಿ ಬಿದ್ದುಕೊಂಡೆವು.
ನನಗಂತೂ ಎಲ್ಲೇ ಮಲಗಿದರೂ, ಎಷ್ಟೇ ಗಲಾಟೆಯಿದ್ದರೂ ನಿದ್ದೆ ಬೀಳುತ್ತದೆ. ಹೀಗಿರುವಾಗ ರಭಸವಾದ ಗಾಳಿ ಬೀಸಿ ರಾತ್ರಿ ಸುಮಾರು ೧೨ ಗಂಟೆಗೆ ಡೇರೆಯ ಹುಕ್-ಗಳು ಹಾರಿಹೋಗಿದ್ದವು. ಉಳಿದ ಮೂವರು ಅದನ್ನು ಸರಿಪಡಿಸಿ ಮಲಗಿದ್ದರು. ನನಗದು ಗೊತ್ತೇ ಆಗಲಿಲ್ಲ. ಆ ಪರಿಯ ಸುಖ ನಿದ್ರೆಯಲ್ಲಿದ್ದೆ ನಾನು. ಆದರೆ ಬೆಳಗ್ಗಿನ ಜಾವ ೩ ಗಂಟೆಗೆ ತಲೆಗೆ ಏನೋ ತಾಗುತ್ತಿರುವಂತೆ ಭಾಸವಾದಾಗ ಎಚ್ಚರವಾಯಿತು. ಗಾಳಿಯ ರಭಸಕ್ಕೆ ಡೇರೆಯ ಅಧಾರಕ್ಕಿರುವ ಸಣ್ಣ ರಾಡುಗಳು ಸಂಪೂರ್ಣವಾಗಿ ಬಗ್ಗಿ ತಲೆಗೆ ತಾಗುತ್ತಿದ್ದವು. ಆದರೂ ಹಾಗೇ ಮಲಗಿಕೊಂಡೆ. ನಮ್ಮ ಶೇರ್ಪಾ  ಮತ್ತೆ ಹೊರನಡೆದು ಎಲ್ಲವನ್ನು ಸರಿಪಡಿಸಿ ಬಂದರು.ಡೇರಾಪುಕ್ ನಲ್ಲಿ  
 ನಾವು ಇದೇ ಡೇರೆಯೊಳಗೆ ೧೦ ಜನರು ಮಲಗಿದ್ದರೆ ಇಲ್ಲಿ ನಾಲ್ಕೇ ಮಂದಿ! ಪ್ರಕೃತಿಯ ಮಡಿಲಲ್ಲಿ  ರಾತ್ರಿಯನ್ನು ಮನಸಾರೆ ಆನಂದಿಸಿದೆವು..
ಮರುದಿನ ಬೆಳಗ್ಗೆ ಗೌರೀ ಕುಂಡದತ್ತ ನಮ್ಮ ಚಾರಣ..







ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು, ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ... ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಹಿಮ ಕರಗಬಹುದು. ಆದರೆ ಇದು ಬೀಳುವುದು ಗೊತ್ತಾಗುವುದಿಲ್ಲ. ನಮ್ಮಷ್ಟಕ್ಕೇ ನಾವು ಮೇಲೆ ಹತ್ತುತ್ತಿರುವಾಗ ಒಮ್ಮೆಲೆ ಅಪ್ಪಳಿಸಿದರೆ ಏನೂ ಮಾಡುವಂತಿಲ್ಲ. ಹಗ್ಗ ಹಿಡಿದು ಧೈರ್ಯದಿಂದ ಇದ್ದರೆ ಹೇಗೋ ಬಚಾವ್ ಆಗಬಹುದು.. ಹಿಮ ಬಿರುಗಾಳಿಗೂ ಅಷ್ಟೇ. ಅದರ ವೇಗಕ್ಕೆ ಆನೆ ಸಿಕ್ಕರೂ ಅದನ್ನು ಎತ್ತಿಕೊಂಡು ಸಾವಿರಾರು ಅಡಿಯ ಕೆಳಗಿನ ನೀರ್ಗಲ್ಲಿನ ಮೇಲೆ ಒಗೆದು ಬಿಡುತ್ತದೆ. ಬದುಕುವ ಮಾತು ಇನ್ನೆಲ್ಲಿಂದ ಬಂತು? ಎಂಥ ಗಟ್ಟಿಗನಿದ್ದರೂ, ಒಂದೇ ಸಮನೆ ಪರ್ವತ ಹತ್ತಿ ಬರುತ್ತೇನೆಂಬ ಹುಮ್ಮಸ್ಸಿದ್ದರೂ ಪ್ರಯೋಜನವಾಗದು.

ಅದಕ್ಕೇ  ನಾವು ನಿಸರ್ಗವನ್ನು ಧಿಕ್ಕರಿಸಲು ಹೋಗುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮ ದೇಹ ಪ್ರಕೃತಿ ಹೊಂದಿಕೊಳ್ಳದಿದ್ದರೆ ಏನೂ ಸಾಧ್ಯವಾಗದು. ಆದ್ದರಿಂದಲೇ ದಿನಗಳ ಲೆಕ್ಕ ಹಾಕುತ್ತಾ ಹತ್ತಲು ಬಾರದು. ಪ್ರಕೃತಿಯೇ ಒಪ್ಪಿಗೆ ನೀಡುವವರೆಗೆ ಕಾಯಬೇಕು... ಕ್ರಾಂಪೋನ್ ಪಾಯಿಂಟ್ ಎಂಬುದೊಂದಿದೆ. ಅಲ್ಲಿಂದ ನಾವು ವಿಶೇಷವಾದ ಪಾದರಕ್ಷೆ (ಕ್ರಾಂಪೋನ್ ಬೂಟ್) ಧರಿಸಬೇಕು. ಬೂಟ್‌ಗೆ ಮೊಳೆಗಳಂಥ ಸಾಧನ ಅಳವಡಿಸಲಾಗಿರುತ್ತದೆ. ಅದರಿಂದ ಹಿಮವನ್ನು ಒದೆಯುತ್ತಾ ಹೆಜ್ಜೆ ಇಡಬೇಕು. ಹಿಮ ಕಂದಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಕ್ರಮ. ಕೆಲವೊಮ್ಮೆ ಭೂಮಿಯ ಶಾಖ ಮತ್ತು ಗಾಳಿಯ ಒತ್ತಡದಿಂದ ಉಂಟಾಗುವ ಬಿರುಕುಗಳು ಕಂದಕಗಳಾಗಿ ಮಾರ್ಪಡುತ್ತವೆ.
ಅದರ ಮೇಲೆ ಸುರಿಯುವ ಮಂಜು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ. 5 ಅಡಿಯಿಂದ 2 ಸಾವಿರದಡಿಯವರೆಗೂ ಆಳವಿರಬಹುದು. ನಾವು ಕ್ರಾಂಪೋನ್ಸ್‌ಗಳಿಂದ ಒದ್ದು ನೋಡದಿದ್ದರೆ ಗೊತ್ತಾಗದೇ ಈ ಕಂದಕಕ್ಕೆ ಬೀಳಬಹುದು. ನಾವು ಒದ್ದಾಗ ಅದರ ಶಬ್ದ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ಟೊಳ್ಳಾದ ಜಾಗವಿದ್ದರೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ. ಹಿಮ ಕಂದಕಕ್ಕೆ ಬಿದ್ದರೆ ಶವ ಸಿಗುವುದೂ ಖಚಿತವಿಲ್ಲ. ಈ ಸೂಕ್ಷ್ಮತೆ ಅರಿವಿರದಿದ್ದರೆ ಕಷ್ಟ.


ಈ ಮಧ್ಯೆ ಆ ಚಳಿಯಲ್ಲಿ ಶೇರ್ಪಾ ದಂಪತಿಗಳು ಅವರ ಎಳೆ ಮಗುವಿನ ಆರೈಕೆ ಮಾಡುವುದು ನೋಡಿದಾಗ ಎಂತವರಿಗೂ ಹೃದಯ ಕರಗಬಹುದು.ಆ ಮಗುವಿಗೆ ಆಗಾಗ ಮೈ ಹುಷಾರಿಲ್ಲದಾಗ ನಮ್ಮ ಶೇರ್ಪಾ ಹೋಗಿ ಉಪಚರಿಸುತ್ತಿದ್ದ.ಆ ಮಗುವಿಗೆ ನಿದ್ರೆ ಹತ್ತಿದ ಮೇಲೆ ಸಂತೃಪ್ತಿ ಭಾವನೆಯೊಂದಿಗೆ ಬಂದು ನಮ್ಮ ತಂಡವನ್ನು ಸೇರುತ್ತಿದ್ದ. ಇಂತಹ ಕಠಿಣ ಚಾರಣದ ಸಮಯದಲ್ಲಿಯೂ ಅವರ ಮಾತೃ ವಾತ್ಸಲ್ಯ ಕಂಡು ನಾನೂ ಒಂದು ಕ್ಷಣ ಮಗುವಾಗಬೇಕು ಎನ್ನಿಸಿತು..
ನಾನು ಗೌರೀ ಕುಂಡಕ್ಕೆ ಬರುವುದಕ್ಕೂ ಈ ದೃಶ್ಯಕ್ಕೂ ಎಲ್ಲಿಯ ಅನುಬಂಧ? ನನ್ನ ನೆನಪು  ಒಂದು ಕ್ಷಣ ತಾಯಿ ಮಡಿಲಿಗೆ ಹೋಯಿತು.ನನ್ನ ಅಮ್ಮನೂ ನನ್ನನ್ನು ಹೀಗೇ ಎತ್ತಿರಬಹುದೇ?ತಾಯಿ ಬಗ್ಗೆ  ವರ್ಣನೆ ಅಪರಿಮಿತ.  ಭಾರತದ ವೈಶಿಷ್ಟ್ಯವೆಂದರೆ ನದಿ, ಬೆಟ್ಟ, ಪರ್ವತ, ನಿಸರ್ಗವನ್ನೂ ಮಾತೆಯೆಂದೇ ಆರಾಧಿಸಲಾಗುತ್ತದೆ. ಮನುಕುಲದ ಅಭ್ಯುದಯಕ್ಕೆ, ವಿಕಾಸಕ್ಕೆ ಕಾರಣೀಭೂತಳಾದ ಈ ತಾಯಿಯನ್ನು ನೆನೆಯಲು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ...

13,100 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಒಂದಕ್ಕೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಹಿಮಗೋಡೆ (ಐಸ್‌ವಾಲ್) ದಾಟಬೇಕು. ಬಹಳ ಎಚ್ಚರಿಕೆಯಿಂದ ಈ ಗೋಡೆಯನ್ನು ದಾಟಿ ಆ ಬದಿಗೆ ಹೋದರೆ ನಾರ್ತ್‌ಕೋಲ್. ಇದಕ್ಕೆ 8 ಗಂಟೆ ತಗುಲಿತು. ಜೋರಾದ ಗಾಳಿ ಬೀಸುತ್ತಿತ್ತು. ಒಂದು ಕಡೆ ಟೆಂಟ್ ಕಟ್ಟಿದಾಗ ಗಾಳಿ ನುಂಗಿ ಹಾಕಿತು. ಸ್ವಲ್ಪ ಹೊತ್ತು ಸುಮ್ಮನಾಗಿ ಬೇರೆ ಜಾಗ ಹುಡುಕಿ ಶಿಬಿರ ನಿರ್ಮಿಸಿ ಅಲ್ಲಿಯೇ ಉಳಿದು ಹೋಗೋಣ ಎಂದು ಪಾಂಡೆ ಹೇಳಿದರು.. ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.


ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಸೇಷನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಜಾಗ್ರತೆಯಾಗಿ   ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ. ಆಗ ಕಂಡಿತು ಗೌರೀ ಕುಂಡ... ಅದು ಸ್ಪಟಿಕದಂಥ ಶುಭ್ರ ನೀರು.. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ  ಕೊಳವಿದೆ. ಪಾರ್ವತೀ ದೇವಿಯ ಸ್ನಾನದ ಕೊಳ ಎಂದು ಪುರಾಣದ ಉಲ್ಲೇಖ.ಹಿಂದೂ ಭಕ್ತಾದಿಗಳು ಇಲ್ಲಿ ಪೂಜೆ ಮಾಡುತ್ತಾರೆ. ನಾನು ಈ ನೀರಿನಲ್ಲಿ ಕೈ ಇಡುತ್ತಿದಂತೆಯೇ  ಬೆರಳುಗಳೆಲ್ಲ ಮರಗಟ್ಟಿ ಹೋದವು.ಆದರೂ ಸ್ವಲ್ಪ ನೀರು ತೆಗೆದುಕೊಂಡು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡೆ.ದೂರದಿಂದ ಈ ಕೊಳವನ್ನು ನೋಡಿದಾಗ ಹಸಿರು ಬಣ್ಣದಿಂದ ವಿಚಿತ್ರವಾಗಿ ಕಾಣಿಸುತ್ತದೆ. ಹತ್ತಿರಕ್ಕೆ ಹೋಗಿ ನೋಡಿದರೆ ,ನೀರು ಮಾಮೂಲು ಆಗಿಯೇ ಇರುತ್ತದೆ.ಪಾರ್ವತೀ ದೇವಿ ಶಿವನನ್ನು ವಿವಾಹ ಮಾಡಿಕೊಳ್ಳಬೇಕೆಂದು ಈ ಸರೋವರದಲ್ಲಿ ತಪಸ್ಸು ಮಾಡಿದಳೆಂದೂ, ಪ್ರತೀ ದಿನವೂ ಈ ಕೊಳದಲ್ಲಿ ತನ್ನ ಕೋರಿಕೆಯನ್ನು  ನೆರವೆರಿಸಿಕೊಂಡಳು ಎಂದು ಪಾಂಡೆ ಈ ಗೌರೀ ಕುಂಡದ ಬಗ್ಗೆ ಮಾಹಿತಿ ನೀಡಿದರು..ಮನಸ್ಸಿನಲ್ಲಿ ಪಾರ್ವತೀ ದೇವಿಯನ್ನು ಪ್ರಾರ್ಥನೆ ಮಾಡಿದೆ.ಗೌರೀ ಕುಂಡದಿಂದ ತುಂಬಾ ಎತ್ತರಕ್ಕೆ ಹತ್ತಿ ಸುಮಾರು ೪ ಕಿಲೋಮೀಟರು ಗಳಷ್ಟು ದೂರ ಬಂದೆವು..










ನನ್ನ ಬ್ಯಾಗ್,ಊರುಗೋಲು,ಇವನ್ನೆಲ್ಲ ಎತ್ತಿಕೊಂಡು ನಡೆಯುವಾಗ ಮುಂಚೆ ಇದ್ದದಕ್ಕಿಂತ ಹತ್ತು ಪಟ್ಟು ಭಾರ ಜಾಸ್ತಿಯಾದಂತೆ ಅನಿಸಿತು. ಸಂಜೆ ೬.೦೦  ಘಂಟೆಯಾಯಿತು.ಈ ಜಾಗ ನನಗೆ ಒಂದು ದೇವ ಭೂಮಿ ಎಂದನಿಸಿತು, ನನ್ನ ಊಹೆಯಂತೆ ಕಂಡುದೆಲ್ಲಾ ವಾಸ್ತವವಾಗಿ ನಡೆಯಿತೆನ್ನಲು ಗೌರೀ ಕುಂಡದಿಂದ ೮೦೦ ಅಡಿಯಷ್ಟು ಎತ್ತರಕ್ಕೆ ಹತ್ತಿ ಬಂದಿರುವುದೇ ಆಧಾರ!!!!!!ನನ್ನ ಜನ್ಮ ಧನ್ಯವಾಯಿತು ಎಂಬ ವಿಶ್ವಾಸ ಬಂತು.. ಈ ರೀತಿಯ ಅನುಭವವನ್ನು ಕೊಟ್ಟಿದ್ದು ನನ್ನ ಹಿರಿಯರ ಹಾಗೂ ನನ್ನ ಗುರುಗಳ ಆಶೀರ್ವಾದ ಫಲವೇ?????ಹೀಗೆ ಭಾವನಾ ಲೋಕದಲ್ಲಿ ವಿಹರಿಸುತ್ತಾ ಮುಂದೆ ನಡೆಯುತ್ತಿದ್ದಾಗ   ಹಿಮದ ಗಾಳಿ ನಮ್ಮನ್ನು ನಮ್ಮ ಟೆಂಟ್  ನಲ್ಲಿ ಸ್ವಾಗತ ಮಾಡುತ್ತಿತ್ತು...

2 comments:

  1. ella photos laikiddu... more dan dat... idara odidavakke olle knowledge... i liked it..

    ReplyDelete