ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Thursday, September 3, 2009

ಮಾನಸ ಸರೋವರ ಯಾತ್ರೆ -೮ .


ನನ್ನ ಕನಸಿನ ಪಯಣ......ನಾನು 'ಕ೦ಡದ್ದು' ತಾವಾಗೇ ಮೂಡಿದ 'ಕನಸು'ಗಳನ್ನು! ನಾನಾಗೇ ಕ೦ಡುಕೊ೦ಡ ಕನಸುಗಳೊ೦ದಿಗೆ ನಿದ್ದೆಗೆ ಜಾರುವ ನಾನು ಕೆಲವೊಮ್ಮೆ ತಾವಾಗೇ ಮೂಡುವ, 'ನನ್ನ'ನ್ನೇ ಗೌಣವಾಗಿಸಿ ತನ್ನದೇ ರೀತಿಯಲ್ಲಿ ನಿರ್ದೇಶಿತವಾಗುತ್ತಿರುವ 'ಕನಸು'ಗಳನ್ನು ಹೊತ್ತು ಮೇಲೇಳುತ್ತೇನೆ... ನಿನ್ನೆ ನಾ ಕಂಡ ಪ್ರಕೃತಿ ಮಾತೆಯ ಸೌಂದರ್ಯ.. ಮನಸ್ಸು ಮಾತ್ರ ಅಲ್ಲೇ ಇದೆ....ನಾನು ಹಾಸಿಗೆಯಲ್ಲಿ.. ಮುಂಜಾನೆಯಲ್ಲಿ ಬೆಳಕನ್ನು ಚೆಲ್ಲಿ ಬಂದ ಸೂರ್ಯ ನಮಗಾಗಿ ಬೆಚ್ಚನೆಯ ಕಿರಣ ಕಣ್ಗಳಿಗೆ ಸೋಕಿ ತಂತು ಖುಷಿಯ ಹಿತವಾಗಿ ಮೋಡವೆಲ್ಲ ಸರಿದು ಕಿರುನಗೆಯ ಬೀರಿದವು ...ಸಮಯ ಬೆಳಿಗ್ಗೆ ೮.೦೦ ಘಂಟೆ.ಮುಂದಿನ ಪಯಣ ಪರ್ಯಂಗ್ ಎಂಬ ನಗರಕ್ಕೆ.ನಾವಿರುವ "ಸಗಾ " ಎಂಬ ನಗರದಿಂದ ೩೫೦ ಕಿಲೋಮೀಟರ್ ದೂರ. ಬೆಳಗ್ಗಿನ ಊಟ ಉಪಾಹಾರ ೧೦ ಘಂಟೆಗೆ ಮುಗಿಸಿಕೊಂಡು ನಾವು ಹೊರಟೆವು..ಹೊರಡುವಾಗ ನಾ ಕಂಡ ಪ್ರಕ್ರತಿಯ ತಾಣಕ್ಕೆ ನಮಿಸುತ್ತಾ ಇನ್ನೊಮ್ಮೆ ನಮ್ಮ ಸಂಪರ್ಕ ಯಾವಾಗಲೋ ಎಂದು ಬೇಸರದ ಮನಸ್ಸಿನಿಂದ ಹೊರಟೆ.. . .. ಬೋಳುಗುಡ್ಡೆ ಎತ್ತಲೂ ಕಾಣುತ್ತಿದ್ದವು.ಅದುವರೆಗೆ ಕಾಣುತ್ತಿದ್ದ ಸಣ್ಣ ಸಣ್ಣ ಜಲಾಶಯಗಳು ಪ್ರಕೃತಿ ಸೌಂದರ್ಯಗಳು ಯಾವದೂ ಕಾಣಸಿಗಲಿಲ್ಲ.ಮರುಭೂಮಿಯಂತೆ ಕಂಡು ಬರುತ್ತಿತ್ತು..ದಾರಿ ಮಧ್ಯೆ ಕೆಲವು ಕಡೆ ಮರಳಿನಿಂದ ನಮ್ಮ ಕಾರಿನ ಟಯರು ಹೂತು ಹೋಗುತ್ತಿತ್ತು.ನಂತರ ಡ್ರೈವರ್ ಫೋರ್ವ್ಹೀಲ್ ಹಾಕಿ ಎಬ್ಬಿಸಿ ಕಾರನ್ನು ಚಾಲನೆ ಮಾಡುತ್ತಿದ್ದ.ಆಗ ನಾವು ಅವನಿಗೆ "ಭೇಷ್ " ಎಂದು ಬೆನ್ನು ತಟ್ಟುತ್ತಿದ್ದಾಗ ಅವನಿಗೆ ಖುಷಿಯಾಗುತ್ತಿತ್ತು..ಏಕೆಂದರೆ ನಮಗೆ ಟಿಬೆಟ್ ಭಾಷೆ ಬರುತ್ತಿರಲಿಲ್ಲ.ಕೇವಲ ಕೈ ಸನ್ನೆ ಮಾತ್ರ ನಮ್ಮ ಮತ್ತು ಅವನ ನಡುವಿನ ಭಾಷೆಯಾಗಿತ್ತು.. ಈ ಪ್ರಯಾಣ ಮಾತ್ರ ನಮಗೆ ತುಂಬಾ ಬೋರ್ ಹಿಡಿಸಿತ್ತು.ಕಾರಣ ಪ್ರಯಾಣದ ದೂರ ನಾವು ಈ ವರೆಗೆ ಒಂದೊಂದು ದಿನ ಕ್ರಮಿಸಿದ್ದರಿಂದ ಹೆಚ್ಚಿತ್ತು.. ಆದರೂ ನಾವು ಪರಸ್ಪರ ಜೋಕ್ ಮಾಡಿಕೊಂಡು ಕಾಲ ಕಳೆದೆವು.ಕೆಲವು ಕಡೆ ದಾರಿ ಹೇಗಿತ್ತೆಂದರೆ ಕಲ್ಲುಗುಡ್ಡಗಳ ಮೇಲೆ ಕಾರು ಹೋಗುತ್ತಿದ್ದಾಗ ನಮ್ಮ ಸೊಂಟಕ್ಕೆ ಒಂದೊಂದು ಬದಿಯಿಂದಲೂ ಹೊಡೆದ ಹಾಗೆ ಆಗುತ್ತಿತ್ತು.ಆಗ ನಮ್ಮ ಊರಿನ ಡಾಮರು ರಸ್ತೆ ನೆನಪಾಯಿತು. ಅಂಥಹ ರಸ್ತೆಯಲ್ಲಿ ಕಾರು ಚಾಲನೆ ಮಾಡುವುದು ಸಾಹಸವೇ ಸರಿ.. ಸುಮಾರು ಮಧ್ಯಾಹ್ನ ೨.೩೦ ರ ಸಮಯ. ದಾರಿ ಮಧ್ಯೆ ಕಾರನ್ನು ನಿಲ್ಲಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಕ್ಕೊಂಡೆವು ...ಕೈಯಲ್ಲಿದ್ದ ಒಂದೊಂದು ಆಪಲ್ ಹಣ್ಣನ್ನು ತಿಂದೆವು.. ಸುಮಾರು ಒಂದು ಘಂಟೆಯಷ್ಟು ಸಮಯ ಅಲ್ಲೇ ಹರಟೆ ಹೊಡೆದೆವು.ಎಲ್ಲಾ ೩೨ ಮಂದಿ ಚಾರಣಿಗರು ಮತ್ತು ಚೆಟ್ಟಿಯಾರ್ ಮನೆ ಮಂದಿ ಕೂತು ನಮ್ಮ ಊರಿನ ಬಗ್ಗೆ ಪರಸ್ಪರ ಚರ್ಚೆ ಮಾಡಿದೆವು.ಇಷ್ಟರವರೆಗೆ ನಮಗೆ ಕೂತು ಮಾತಾಡಲೂ ಸಮಯವಿರಲಿಲ್ಲ ...ಯಾಕೆಂದರೆ ಪ್ರಕೃತಿ ಮಾತೆಯು ನಮ್ಮನ್ನು ಅಷ್ಟು ಬ್ಯುಸ್ಸಿ ಇರುವಂತೆ ಮಾಡಿದ್ದಳು..ಬಹುಶ;ಈಗ ನೀವೆಲ್ಲ ಮಾತಾಡಿ ..ಮತ್ತೆ ನನ್ನ ವರ್ಣನೆಯನ್ನ ತೋರಿಸುವೆ ಎಂಬಂತೆ ಎಲ್ಲಾ ಸೌಂದರ್ಯಗಳನ್ನು ತನ್ನೊಡಲಿಗೆ ಸೆಳೆದುಕೊಂದಿದ್ದಳು.. ಯಾಕೆಂದರೆ ಇಂದಿಗೂ ಇರುವ ವರ್ಣನೆಯನ್ನು ನಿನ್ನೆಯೇ ತೋರಿಸಿ ಇಂದಿಗೆ ಏನೂ ಇಲ್ಲವೆಂಬಂತೆ ನಿರಾಸೆ ಹುಟ್ಟಿಸಿದ್ದಳು..ನಾವೆಲ್ಲಾ ಪ್ರಯಾಣ ಮುಂದುವರಿಸಿದೆವು.ಪ್ರಯಾಣ ಮಾಡುವಾಗ ನಿದ್ದೆ ತೂಗುತ್ತಿದ್ದರೂ ಕಡಿದಾದ ದಾರಿಯಿಂದಾಗಿ ನಿದ್ರಾ ದೇವಿ ನಮ್ಮ ಬಳಿ ಬರಲು ಹೆದರುತ್ತಿದ್ದಳು.ಈ ಮಧ್ಯೆ ನಮ್ಮಸಹ ಚಾರಣಿಗರಾದ ನಂದಕಿಶೋರ ಅವರಿಗೆ ಈ ಕಡು ದಾರಿಯ ಮೇಲೆ ಪ್ರಯಾಣ ಮಾಡಿ ವಾಂತಿ, ಸುಸ್ತು ಎಲ್ಲಾ ಆಯಿತು..ನಮ್ಮಲ್ಲಿ ಇರುವ ಲಿಂಬೆ ಹುಳಿ ನೀಡಿದಾಗ ವಾಂತಿ ಕಡಿಮೆ ಆಯಿತು.ಸಮಯ ರಾತ್ರಿ ೮ .೩೦ ಒಂದು ಕಡೆ ವಿಶಾಲವಾದ ಸ್ಥಳದಲ್ಲಿ ಕಾರು ನಿಲ್ಲಿಸಿ ಎಲ್ಲರೂ ಸೇರಿ ದೇವೀ ಕವಚವನ್ನು ಪಠಣ ಮಾಡಿದೆವು . ಇಲ್ಲಿ ನಮ್ಮ ಭಾರತದ ಸಮಯ ಪ್ರಕಾರ ಸಂಜೆ.೬.೩೦.. ಸೂರ್ಯಾಸ್ತದ ಸಮಯ.. ಎತ್ತ ನೋಡಿದರೂ ಮರುಭೂಮಿಯಂತೆ ಕಾಣುವ ಗುಡ್ಡಗಳು.ಸೂರ್ಯನ ಅಸ್ತಮಾನವನ್ನು ನೋಡೋಣವೆಂದರೆ ಎಲ್ಲಿಯೂ ಕಾಣದಂತೆ ಮೋಡಗಳು ಮತ್ತು ಗುಡ್ಡಗಳು..ಅಲ್ಲಿ ಲಿಂಬೆಹುಳಿ ಜ್ಯೂಸ್ ಮಾಡಿ ಕುಡಿದಾಗ ಶರೀರದ ಆಯಾಸ ಕಡಿಮೆ ಆಯಿತು. ಅಲ್ಲಿಂದ ಹೊರಟು ಪರ್ಯಂಗ್ ತಲುಪುವಾಗ ರಾತ್ರಿ ೧೧.೩೦ ...ನಂತರ ವಿಶಾಲವಾದ ಬಯಲಿನಲ್ಲಿ ನಮ್ಮ ನಮ್ಮ ಗ್ರೂಪಿಗೆ ಸಾಮ್ರಾಟ್ ಟ್ರಾವೆಲ್ಸ್ ನವರು ನಮಗೆ ಪ್ರತ್ಯೇಕ ಡೇರೆ ಹಾಕಿ ಕೊಟ್ಟರು.ಅಲ್ಲಿ ಕ್ಯಾಂಡಲ್ ಬೆಳಕಿನಲ್ಲಿ ನಾವು ತಂದ ಬ್ರೆಡ್ ಜ್ಯಾಮ್ ತಿಂದು ನೀರು ಕುಡಿದು ನಮ್ಮ ಬ್ಯಾಗನ್ನೇ ತಲೆದಿಂಬು ಮಾಡಿಕೊಂಡು ಮಲಗಿದೆವು.ಸಮಯ ರಾತ್ರಿ ೧.೩೦ ನಿದ್ರೆ ಬರುತ್ತಿರಲಿಲ್ಲ...ನಮ್ಮ ಟೆಂಟ್ ಹಾರಿ ಹೋಗುವ ಹಾಗೆ ಗಾಳಿ ಬೀಸುತ್ತಿತ್ತು. ಮೈ ನಡುಗುವ ಚಳಿ.... ,.ಬಿಸಿರಕ್ತದ ಹುಮ್ಮಸ್ಸಿನಲ್ಲಿ ಹೊರಟ ನಾವು ದಾರಿಯಲ್ಲಿ ಪಟ್ಟ ಪಾಡುಗಳೆಷ್ಟೋ ! ನಾವು ಯಾವ ಬಟ್ಟೆಗಳನ್ನೇ ಧರಿಸಿದರೂ ಆ ಚಳಿ ನಮ್ಮ ಪ್ರತಿಯೊಂದು ಅಂಗವನ್ನೂ ಗಡಗಡನೆ ನಡುಗಿಸಿಬಿಡುತ್ತಿತ್ತು. ಸಣ್ಣಗೆ ಮಳೆ ಬೀಳಲು ಪ್ರಾರಂಭವಾಯಿತು. ಹೊರಗಡೆ ನಾಯಿ ಬೊಗಳುತ್ತಿತ್ತು,ಯಾಕ್ ಗಳು ಪರಸ್ಪರ ಜಗಳವಾದುತ್ತಿದ್ದವು. ಅಂತೂ ಇಂತೂ ಮುಂಜಾನೆ ೪ ಘಂಟೆಯವರೆಗೆ ನಮಗೆ ಯಾರಿಗೂ ನಿದ್ರೆ ಬರಲಿಲ್ಲ.. ಉಸಿರಾಡಿದರೆ ಆವಿ ಬರುವಷ್ಟು, ಕೈ ಕಾಲುಗಳು ಮರಗಟ್ಟಿ ಥರಗುಟ್ಟುವಂತಾ ಚಳಿಯಿತ್ತು... ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೋಲಕ ಮನಸ್ಸನ್ನು ಬೆಚ್ಚಗಾಗಿಸಲು .... ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು....ಶಬ್ದಗಳು ಹಾಗೆಯೇ ಕೊಂಚ ಕಡಿಮೆ ಆಯಿತು. ನಿಧಾನವಾಗಿ ಕಣ್ಣು ಮುಚ್ಚಿದೆ .. .ಮತ್ತೆ ಎಷ್ಟು ಹೊತ್ತಿಗೆ ನಿದ್ರೆ ಬಂತೋ ಗೊತ್ತಿಲ್ಲ .. ಸಾಲುಗಟ್ಟಿ ಕುಳಿತಿವೆ ಕನಸುಗಳು ಮನದ ಬಾಲ್ಕನಿಯಲ್ಲಿ ನನಸಾಗಿ ಹಾರುವ ಹಸಿ ನಿರೀಕ್ಷೆಯಲ್ಲಿ ಇರುಳಿನ ತುಂಬ ಇಣುಕುತ್ತಿವೆ…

1 comment:

  1. ಅಬ್ಬಾ,
    ನಿಂಗೋ ಭಯಂಕರ ಗುರುಗಳೇ.....

    ಆನು ಹೋಗಿದ್ದರೆ ಐಸ್ ಗಟ್ಟಿ ಆವುತಿದ್ದೆ. ಬೆಂಗಳೂರಿನ ೧೫'' ತಡವಲೇ ಕಷ್ಟ ಆಯಿದು ಇನ್ನು ಅಲ್ಲಿ ಹೋದರೆ?

    ನಿಂಗಳ,
    ಮಂಗ್ಳೂರ್ ಮಾಣಿ.

    ReplyDelete